ಅ.6: ದೇಶದ ಏಕತೆಗಾಗಿ ಯುವಜನತೆಯ ಸಾಮೂಹಿಕ ಸತ್ಯಾಗ್ರಹ
ಬೆಂಗಳೂರು, ಅ. 4: ಗಾಂಧೀಜಿಯವರ 150ನೆ ಜಯಂತಿ ಪ್ರಯುಕ್ತ ದೇಶದ ಏಕತೆಗಾಗಿ ಸಾವಿರಾರು ಯುವಕರು ಅ.6ರಂದು ಬೆಳಗ್ಗೆ 9ರಿಂದ ಸಂಜೆ 4 ಗಂಟೆವರೆಗೆ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಸಾಮೂಹಿಕ ಸತ್ಯಾಗ್ರಹ ನಡೆಸಲಿದ್ದಾರೆ ಎಂದು ರಂಗಕರ್ಮಿ ಪ್ರಸನ್ನ ತಿಳಿಸಿದರು.
ಗುರುವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗಾಂಧೀಜಿಯವರ ಕನಸಾದ ಧಾರ್ಮಿಕ ಸಹಿಷ್ಣುತೆ ಸಹಕಾರ ಗುಣ ಹಾಗೂ ಗ್ರಾಮಸ್ವರಾಜ್ಯಗಳ ಪರಿಕಲ್ಪನೆಗಳನ್ನು ಸತ್ಯಾಗ್ರಹ ನಿರತ ಯುವಜನತೆ ಮೈಗೂಡಿಸಿಕೊಳ್ಳುತ್ತ, ಈ ಆಶಯಗಳನ್ನು ಪ್ರತಿಧ್ವನಿಸುವ ಹಾಡುಗಳು, ನಾಟಕಗಳು, ಹಾಗೂ ಫ್ಯಾಷನ್ ಷೋ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಿದರು.
ಹಿಂಸೆ, ಆತಂಕವಾದ ಹಾಗೂ ಧಾರ್ಮಿಕ ಅಸಹಿಷ್ಣುತೆಯ ದಳ್ಳುರಿಗೆ ಸಿಲುಕಿರುವ ನಮ್ಮ ದೇಶವಾಸಿಗಳು ಅಂದು ಸಾವಿರಾರು ಸಂಖ್ಯೆಯಲ್ಲಿ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ನೆರೆದು ಉಪವಾಸನಿರತ ಯುವಜನತೆಯ ಆಶಯಗಳಿಗೆ ತಮ್ಮ ದನಿ ಸೇರಿಸಲಿದ್ದಾರೆ. ಸ್ವಾತಂತ್ರ ನಂತರದಲ್ಲಿ ಅಭಿವ್ಯಕ್ತವಾಗಲಿರುವ ಏಕತೆ ಅತಿದೊಡ್ಡ ಸತ್ಯಾಗ್ರಹ ಇದಾಗಿದ್ದು, ಪಕ್ಷಭೇದ, ಲಿಂಗಭೇದ ಮರೆತು ಭಾರತೀಯರೆಲ್ಲರೂ ಮಹಾನ್ ಯಜ್ಞದಲ್ಲಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.