ರೈತರ ದೆಹಲಿ ಪ್ರವೇಶ ತಡೆ ಖಂಡನೀಯ: ಕೋಡಿಹಳ್ಳಿ ಚಂದ್ರಶೇಖರ್
ಬೆಂಗಳೂರು, ಅ. 4: ಕೇಂದ್ರ ಸರಕಾರ ಹಾಗೂ ಉತ್ತರ ಪ್ರದೇಶ ಸರಕಾರವು ರೈತರ ದೆಹಲಿ ಪ್ರವೇಶಕ್ಕೆ ಪೊಲೀಸ್ ಶಕ್ತಿ ಬಳಸಿ ತಡೆಯಲು ಪ್ರಯತ್ನಿಸಿ, ಜಲಪಿರಂಗಿ ಹಾಗೂ ಅಶ್ರುವಾಯುಗಳ ಮೂಲಕ ದಾಳಿ ಮಾಡಿರುವುದನ್ನು ರೈತ ಹಾಗೂ ಹಸಿರು ಸೇನೆಯ ಕೋಡಿಹಳ್ಳಿ ಚಂದ್ರಶೇಖರ್ ಖಂಡಿಸಿದರು.
ಗುರುವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥರವರು ರೈತರು ದೆಹಲಿ ಸಮೀಪಿಸುವ ಮೊದಲು ಅವರೊಂದಿಗೆ ಸಮಾಲೋಚಿಸಿ ಸಮಸ್ಯೆಗೆ ಪ್ರಯತ್ನ ಹುಡುಕಬೇಕಿತ್ತು. ಹಾಗೂ ಡಾ.ಎಂ.ಎನ್.ಸ್ವಾಮಿನಾಥನ್ ವರದಿಯನ್ನು ಆಧರಿಸಿ ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಘೋಷಣೆ ಮಾಡಬೇಕೆಂದು ಒತ್ತಾಯಿಸಿದರು.
ಅದಾನಿ-ಅಂಬಾನಿಗಳನ್ನು ಒಳಗೊಂಡಂತೆ ಅನೇಕ ಬಂಡವಾಳ ಶಾಹಿಗಳಿಗೆ 6ಲಕ್ಷ ಕೋಟಿ ರೂ.ಗಳ ರಿಯಾಯ್ತಿ ನೀಡುವ ಮೂಲಕ ಕೇಂದ್ರ ಸರಕಾರ ಬಂಡವಾಳಶಾಹಿಗಳ ಪರವೆಂದು ಮತ್ತೆ ಸಾಬೀತು ಮಾಡಿದೆ. ದೇಶದ ಬಂಡವಾಳಶಾಹಿಗಳಿಗೆ ತೋರುವ ಔದಾರ್ಯ ಅನ್ನದಾತನಿಗೆ ತೋರುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.