ಪಾರಿಕ್ಕರ್ ಸರಕಾರ ಜನರ ನಿರೀಕ್ಷೆಗಳನ್ನು ಹುಸಿಯಾಗಿಸಿದೆ ಎಂದ ಉಪ ಸ್ಪೀಕರ್, ಬಿಜೆಪಿ ಶಾಸಕ ಲೋಬೋ

Update: 2018-10-05 12:05 GMT

ಪಣಜಿ,ಅ.05 :  ಗೋವಾದ ಮನೋಹರ್ ಪಾರಿಕ್ಕರ್ ಸರಕಾರವು ಜನರಿಗೆ ನೀಡಿರುವ ಆಶ್ವಾಸನೆಗಳನ್ನು ಈಡೇರಿಸಲು ವಿಫಲವಾಗಿದೆ, ಎಂದು ರಾಜ್ಯ ವಿಧಾನಸಭೆಯ ಉಪ ಸ್ಪೀಕರ್ ಹಾಗೂ ಬಿಜೆಪಿ ಶಾಸಕ ಮೈಕಲ್ ಲೋಬೋ ಹೇಳಿದ್ದಾರೆ.

ತಾವು ಮುಖ್ಯಮಂತ್ರಿಗೆ ಬರೆದ ಪತ್ರದ ಮೂಲಕ ಸರಕಾರವನ್ನು ಟೀಕಿಸುತ್ತಿದ್ದೇನೆಂದು ತಿಳಿಯಬಾರದು ಬದಲಾಗಿ ರಾಜ್ಯವನ್ನು ಕಾಡುತ್ತಿರುವ ನಿರುದ್ಯೋಗ ಸಮಸ್ಯೆಯನ್ನು ತುರ್ತಾಗಿ ಪರಿಹರಿಸಬೇಕೆಂದು ಅವರಿಗೆ ಮನವಿ ಸಲ್ಲಿಸುವ ಯತ್ನ ಮಾಡಿದ್ದೇನೆ ಎಂದರು.

“ಸುಮಾರು 3,000 ಖಾಲಿ ಹುದ್ದೆಗಳ ನೇಮಕಾತಿಗಾಗಿ ಅವರ ಅನುಮತಿಗಾಗಿ ಕಳೆದ ಎರಡು ವರ್ಷಗಳಿಂದ ಕಾಯಲಾಗುತ್ತಿದೆ ಎಂದು ಮುಖ್ಯಮಂತ್ರಿಗೆ ಮನವರಿಕೆ ಮಾಡಲು ನಾನು ಯತ್ನಿಸಿದ್ದೇನೆ, ಗೋವಾದ ಜನರು ತುಂಬ ಆಕ್ರೋಶದಿಂದಿದ್ದಾರೆ,'' ಎಂದು ಲೋಬೋ ಹೇಳಿದ್ದಾರೆ.

ತಮ್ಮ 2017 ಬಜೆಟ್ ಭಾಷಣದಲ್ಲಿ ಪಾರಿಕ್ಕರ್ ಅವರು ರಾಜ್ಯದಲ್ಲಿ ಸಾರ್ವಜನಿಕ ಹಾಗೂ ಖಾಸಗಿ ರಂಗಗಳಲ್ಲಿ ಯುವಜನತೆಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ಒದಗಿಸುವ ಆಶ್ವಾಸನೆ ನೀಡಿದ್ದರು ಎಂದು ಅವರು  ನೆನಪಿಸಿಕೊಂಡಿದ್ದಾರೆ.

ಅನಾರೋಗ್ಯದಿಂದಿರುವ ಪಾರಿಕ್ಕರ್ ಅವರು ದಿಲ್ಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಸೆಪ್ಟೆಂಬರ್ 15ರಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಅನಾರೋಗ್ಯದ ಹೊರತಾಗಿಯೂ ಪಾರಿಕ್ಕರ್ ಅವರೇ ಗೋವಾ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆಂದು ಇತ್ತೀಚೆಗೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News