‘ಋಣಮುಕ್ತ ಕಾಯ್ದೆ’ಗೆ ರಾಷ್ಟ್ರಪತಿ ಶೀಘ್ರ ಅನುಮೋದನೆ: ಮುಖ್ಯಮಂತ್ರಿ ಕುಮಾರಸ್ವಾಮಿ ವಿಶ್ವಾಸ

Update: 2018-10-05 12:46 GMT

ಹೊಸದಿಲ್ಲಿ, ಅ. 5: ‘ಇನ್ನು ಎಂಟು-ಹತ್ತು ದಿನಗಳಲ್ಲಿ ರಾಜ್ಯ ಸರಕಾರದ ‘ಋಣಮುಕ್ತ ಕಾಯ್ದೆ’ಗೆ ರಾಷ್ಟ್ರಪತಿ ಅನುಮೋದನೆ ನೀಡುವ ಸಾಧ್ಯತೆಗಳಿದ್ದು, ಖಾಸಗಿ ಲೇವಾದೇವಿಗಾರರಿಂದ ಸಾಲ ಪಡೆದಿರುವ ರೈತರು ಆತಂಕಪಡುವ ಅಗತ್ಯವಿಲ್ಲ’ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅಭಯ ನೀಡಿದ್ದಾರೆ.

ಶುಕ್ರವಾರ ದಿಲ್ಲಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಋಣಮುಕ್ತ ಕಾಯ್ದೆ ವಿಚಾರ ಸಂಬಂಧ ಕೇಂದ್ರ ಗೃಹ ಸಚಿವರೊಂದಿಗೆ ಚರ್ಚಿಸಿದ್ದು, ಈ ಬಗ್ಗೆ ಕಾನೂನು ಇಲಾಖೆ ಸ್ಪಷ್ಟನೆ ಕೋರಿದ್ದು, ಇದೀಗ ಅದನ್ನು ನೀಡಲಾಗಿದೆ ಎಂದರು.

ತಾನು ಈ ಹಿಂದೆ ರಾಷ್ಟ್ರಪತಿಗಳ ಜೊತೆ ಚರ್ಚೆ ಮಾಡಿದ್ದು, ದೇವೇಗೌಡರು ರಾಷ್ಟ್ರಪತಿಗಳನ್ನು ಭೇಟಿ ಮಾಡಲಿದ್ದಾರೆ. ಇದರಿಂದಾಗಿ ರೈತರು ಖಾಸಗಿ ಸಾಲ ಪಡೆದು ಆತ್ಮಹತ್ಯೆ ಮಾಡಿಕೊಳ್ಳುವುದು ನಿಲ್ಲುತ್ತದೆ. ರೈತರ ಸಂರಕ್ಷಣೆಗೆ ಸಾಲಮನ್ನಾ ಸೇರಿ ಹಲವು ಯೋಜನೆ ಜಾರಿಗೆ ತಂದಿದೆ. ಯಾವುದೇ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ಕುಟುಂಬಗಳನ್ನು ಬೀದಿಪಾಲು ಮಾಡಬೇಡಿ ಎಂದು ಮನವಿ ಮಾಡಿದರು.

ಅರ್ಜಿ ಸಲ್ಲಿಸಿ: ರೈತರ ಕೃಷಿ ಸಾಲಮನ್ನಾ ಯೋಜನೆಗೆ ಮಾಹಿತಿ ಒದಗಿಸಲು ಯಾವುದೇ ಕಾಲಮಿತಿ ವಿಧಿಸಿಲ್ಲ. ಇದೀಗ ಕೇವಲ ಅರ್ಜಿಗಳನ್ನು ಮಾತ್ರ ಕೊಡಲಾಗುತ್ತಿದೆ. ಇದರ ಬಗ್ಗೆ ಯಾರು ಆತಂಕ ಪಡುವ ಅವಶ್ಯಕತೆ ಇಲ್ಲ. ರೈತರು ಅರ್ಜಿ ಪಡೆದು ವಿಳಂಬ ಮಾಡದೆ ಮಾಹಿತಿಯನ್ನು ನಾಡಕಚೇರಿಗೆ ನೀಡಬಹುದು ಎಂದು ಕುಮಾರಸ್ವಾಮಿ ಸಲಹೆ ಮಾಡಿದರು.

ರೈತರು ಆರಾಮಾಗಿ ಸರಿಯಾದ ಮಾಹಿತಿಯನ್ನು ನೀಡಬೇಕು. ಏಕೆಂದರೆ ರೈತರ ಖಾತೆಗಳಿಗೆ ನೇರವಾಗಿ ಸಾಲಮನ್ನಾ ಸೌಲಭ್ಯ ಸಿಗಬೇಕು. ಇದರಲ್ಲಿ ಯಾವುದೇ ದಲ್ಲಾಳಿಗಳಿಗೆ ಲಾಭ ಆಗಬಾರದೆನ್ನುವ ಉದ್ದೇಶ ನಮ್ಮದು. ಹೀಗಾಗಿ ಯಾವುದೇ ಸುಳ್ಳು ಸುದ್ದಿಗೆ ಕಿವಿಕೊಡಬೇಡಿ ಎಂದು ರೈತರಲ್ಲಿ ಮನವಿ ಮಾಡಿದರು.

‘ಸಚಿವ ಸಂಪುಟ ವಿಸ್ತರಣೆ ಮಾಡಬೇಕಾಗಿದ್ದು, ಇದಕ್ಕೆ ಕಾಂಗ್ರೆಸ್ಸಿನಿಂದ ತೀರ್ಮಾನ ಬರಬೇಕಾಗಿದೆ. ಈಗಾಗಲೇ ಕಾಂಗ್ರೆಸ್ ಹೈಕಮಾಂಡ್ ಭೇಟಿಗೆ ಸಮಯ ಕೇಳಿದ್ದೇನೆ. ಭೇಟಿಗೆ ಅವಕಾಶ ಸಿಕ್ಕರೆ ಇದರ ಬಗ್ಗೆ ಚರ್ಚೆ ಮಾಡುತ್ತೇನೆ’

-ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News