ಮಾನವ ಹಕ್ಕುಗಳನ್ನು ಕಸಿಯುವ ಹಕ್ಕು ಸಂಸತ್ತಿಗೂ ಇಲ್ಲ: ಪ್ರೊ.ರವಿವರ್ಮ ಕುಮಾರ್

Update: 2018-10-05 14:21 GMT

ಬೆಂಗಳೂರು, ಅ.5: ಮಾನವ ಹಕ್ಕುಗಳ ಪ್ರಭಾವ ನಮ್ಮ ಸಂವಿಧಾನದ ಮೇಲಿದೆ. ಸಂಸತ್ತಿಗೂ ಮಾನವ ಹಕ್ಕುಗಳನ್ನು ಕಸಿದುಕೊಳ್ಳುವ ಅವಕಾಶವಿಲ್ಲ ಎಂದು ಮಾಜಿ ಅಡ್ವೊಕೇಟ್ ಜನರಲ್ ಪ್ರೊ.ರವಿವರ್ಮಾಕುಮಾರ್ ಅಭಿಪ್ರಾಯಪಟ್ಟರು.

ಶುಕ್ರವಾರ ‘ಸಂವಾದ’ ಹಾಗೂ ಬದುಕು ಕಮ್ಯುನಿಟಿ ಕಾಲೇಜು ವತಿಯಿಂದ ನಗರದ ದಿ ಯುನೈಟೆಡ್ ಥಿಯಲಾಜಿಕಲ್ ಕಾಲೇಜಿನಲ್ಲಿ ಏರ್ಪಡಿಸಿದ್ದ ‘ಯುವಜನರ ಹಕ್ಕುಗಳು’ ಕುರಿತ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ಮಾನವ ಹಕ್ಕುಗಳ ಇತಿಹಾಸ ಮತ್ತು ಯುವಜನರ ಹಕ್ಕುಗಳ ಅಗತ್ಯ’ ಕುರಿತಂತೆ ಅವರು ಮಾತನಾಡಿದರು.

ಸಮಾಜದಲ್ಲಿ ವ್ಯಕ್ತಿಯ ಗೌರವದೊಂದಿಗೆ ಆತನ ಹಕ್ಕುಗಳು ಕೂಡ ಜಾತಿಗೆ ಅನುಗುಣವಾಗಿ ಏರಿಳಿಕೆಯ ಕ್ರಮದಲ್ಲಿರುತ್ತದೆ. ಹಿಟ್ಲರ್‌ನ ಕಾಲಘಟ್ಟದಲ್ಲಿ ವಿಜ್ಞಾನವೂ ಕೊಲ್ಲುವ ಆವಿಷ್ಕಾರದೊಂದಿಗೆ ಮಾನವ ಹಕ್ಕನ್ನು ಉಲ್ಲಂಘಿಸಿದೆ. ಇನ್ನೊಬ್ಬರ ಬದುಕನ್ನು ಕಸಿದುಕೊಳ್ಳದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಸಾಮಾಜಿಕ ನ್ಯಾಯವೂ ಹಕ್ಕಿನ ಭಾಗವಾಗಿದೆ. ಯುವಜನರು ತಮ್ಮ ಹಕ್ಕುಗಳೊಂದಿಗೆ ಇತರರ ಹಕ್ಕುಗಳನ್ನು ದೊರಕಿಸಿಕೊಡುವಲ್ಲಿ ಮುಂದಾಗಬೇಕು ಎಂದು ನುಡಿದರು.

‘ಮಕ್ಕಳಿಗೆ ವಿಶೇಷ ಹಕ್ಕುಗಳು ಏಕೆ ಬೇಕು?’ ವಿಷಯ ಕುರಿತು ಮಾತನಾಡಿದ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಮಾಜಿ ಅಧ್ಯಕ್ಷೆ ನೀನಾ ನಾಯಕ್, ನಮ್ಮಲ್ಲಿ ಅನೇಕ ಕಾಯ್ದೆ, ಕಾನೂನುಗಳಿದ್ದರೂ ಕಡತಗಳಿಗೆ ಮಾತ್ರ ಸೀಮಿತವಾಗಿವೆ. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳ ನಿಯಂತ್ರಣಕ್ಕಾಗಿರುವ ಪೋಕ್ಸೋ ಕಾಯ್ದೆ ಸೇರಿದಂತೆ ಹಲವಾರು ಕಾಯ್ದೆಗಳಿದ್ದರೂ ಪರಿಣಾಮಕಾರಿಯಾಗಿ ಬಳಕೆಯಾಗುತ್ತಿಲ್ಲ. ಇದರಿಂದ ಇರುವ ಹಕ್ಕುಗಳನ್ನು ಯುವಜನರಿಗೆ ಬಳಸಲಾಗುತ್ತಿಲ್ಲ ಎಂದು ತಿಳಿಸಿದರು.

ಮಕ್ಕಳ ಹಕ್ಕುಗಳು ಅಂಗನವಾಡಿ, ಶಾಲೆಗಳಲ್ಲೇ ಅತಿಯಾಗಿ ಉಲ್ಲಂಘನೆಯಾಗುತ್ತಿದೆ. ಸರಕಾರ ಗುಣಮಟ್ಟದ ಶಿಕ್ಷಣಕ್ಕಾಗಿ ಸಾವಿರಾರು ಕೋಟಿ ಖರ್ಚು ಮಾಡುತ್ತಿದ್ದರೂ ಶಿಕ್ಷಣ ವ್ಯವಸ್ಥೆ ಯಾವ ದಿಕ್ಕಿನಲ್ಲಿ ಸಾಗುತ್ತಿದೆ? ಹಕ್ಕುಗಳು ಉಲ್ಲಂಘನೆಯಾದಾಗ ಪ್ರಶ್ನಿಸುವುದು ಅತ್ಯಗತ್ಯ. ಪ್ರತಿಯೊಬ್ಬರಲ್ಲೂ ಪ್ರಶ್ನಾರ್ಹ ಮನೋಭಾವ ಇರಬೇಕು. ಅನ್ಯಾಯ, ದೌರ್ಜನ್ಯ ವಿರುದ್ಧ ಪ್ರಶ್ನಿಸಿದಾಗಲಷ್ಟೇ ವ್ಯವಸ್ಥೆ ಎಚ್ಚರಗೊಳ್ಳುತ್ತದೆ. ಸಾಮಾಜಿಕ ಬದಲಾವಣೆ ಸಾಧ್ಯವಾಗಬೇಕಾದರೆ ಯುವಜನರು ಜಾಗೃತರಾಗಬೇಕು ಎಂದು ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ ಸಂವಾದ ಸಂಸ್ಥೆಯ ನಿರ್ದೇಶಕಿ ಅನಿತಾ ರತ್ನಂ ಯುವಜನರ ಹಕ್ಕುಗಳಿಗೆ ಸಂಬಂಧಿಸಿದಂತೆ ವಿಷಯ ಮಂಡನೆ ಮಾಡಿದರು. ಹಾಗೂ ‘ಯುವಜನರ ಹಕ್ಕುಗಳು ಮತ್ತು ರಾಜ್ಯ’, ‘ಕುಟುಂಬ ಮತ್ತು ಸಮಾಜದಲ್ಲಿ ಯುಜನರ ಹಕ್ಕುಗಳು’ ವಿಷಯದ ಬಗ್ಗೆ ವಿಶೇಷ ಗೋಷ್ಠಿಗಳನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಬದುಕು ಕಾಲೇಜಿನ ಪ್ರಾಂಶುಪಾಲರಾದ ಮುರಳಿ ಮೋಹನ್ ಕಾಟಿ, ಸಂವಾದದ ದೇವರಾಜ್ ಪಾಟೀಲ್, ರಾಮಕ್ಕ, ಜನಾರ್ಧನ ಕೇಸರಗದ್ದೆ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ದೇಶದಲ್ಲಿ ಚಾಲ್ತಿಯಲ್ಲಿರುವ ಎಸ್ಸಿ-ಎಸ್ಟಿ ಕಮಿಷನ್‌ಗಳಿಗೂ ಸಮಾಜದಲ್ಲಿ ಆಳವಾಗಿ ಬೇರೂರಿರುವ ಅಸ್ಪಶ್ಯತೆ ಹೋಗಲಾಡಿಸಲು ಸಾಧ್ಯವಾಗಿಲ್ಲ. ಜಾತಿ ವ್ಯವಸ್ಥೆಯಲ್ಲಿ ಮಾನವ ಹಕ್ಕುಗಳ ದಮನವಾಗುತ್ತಿದೆ. ಹಾಗಾಗಿ ಯಾವುದೇ ಸಂವಿಧಾನಬದ್ಧ ಹಕ್ಕುಗಳನ್ನು ಸಂಪೂರ್ಣವಾಗಿ ಅರಿತುಕೊಂಡರೆ ಮಾತ್ರ ಅವುಗಳ ರಕ್ಷಣೆ ಸಾಧ್ಯ.

- ಪ್ರೊ.ರವಿವರ್ಮಾಕುಮಾರ್, ಮಾಜಿ ಅಡ್ವೊಕೇಟ್ ಜನರಲ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News