ಹಳ್ಳಿಗಳ ನೈರ್ಮಲ್ಯ ಕಾಪಾಡಲು ಸಂಘಟಿತ ಪ್ರಯತ್ನ ಅಗತ್ಯ: ಸಚಿವ ಕೃಷ್ಣ ಭೈರೇಗೌಡ
ಬೆಂಗಳೂರು, ಅ. 5: ಗ್ರಾಮೀಣ ಭಾಗಗಳಲ್ಲಿ ಸ್ವಚ್ಛತೆಯನ್ನು ಸುಸ್ಥಿರವಾಗಿ ಕಾಪಾಡಲು ಸಂಘಟಿತ ಪ್ರಯತ್ನದಿಂದ ಮಾತ್ರ ಸಾಧ್ಯ. ಇದಕ್ಕಾಗಿ ಹಳ್ಳಿಗಳಲ್ಲಿ ಮೊಬೈಲ್ ಬಳಕೆದಾರರ ಒಂದು ವ್ಯವಸ್ಥಿತ ನೆಟ್‌ವರ್ಕ್ ರೂಪಿಸಬೇಕಾಗಿದೆ ಎಂದು ಗ್ರಾಮೀಣಾಭಿವೃದ್ದಿಮ ಸಚಿವ ಕೃಷ್ಣ ಭೈರೇಗೌಡ ಸಲಹೆ ಮಾಡಿದ್ದಾರೆ.
ಶುಕ್ರವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಯೂನಿಸೆಫ್ ಸಹಯೋಗದೊಂದಿಗೆ ಗ್ರಾಮೀಣಾಭಿವೃದ್ಧಿ ಇಲಾಖೆ ಆಯೋಜಿಸಲಾಗಿದ್ದ ‘ಬಯಲು ಬರ್ಹಿದೆಸೆ ಮುಕ್ತ- ಸುಸ್ಥಿರತೆ’ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಕರ್ನಾಟಕ ಮುಂದಿನ ಒಂದು ತಿಂಗಳಲ್ಲಿ ಸಂಪೂರ್ಣ ಬಯಲು ಬಹಿರ್ದೆಸೆ ಮುಕ್ತ ಗುರಿಯನ್ನು ಸಾಧಿಸಲಿದೆ ಎಂದರು.
ನಮ್ಮ ಗುರಿಗೆ ಅನುಗುಣವಾಗಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಶೌಚಾಲಯಗಳನ್ನು ನಿರ್ಮಾಣ ಮಾಡಲಾಗಿದೆ. ಆದರೆ, ಅದನ್ನು ಬಳಸುವುದು ಬಹಳ ಮುಖ್ಯ. ಜನತೆ ಶೌಚಾಲಯಗಳ ಬಳಕೆಯನ್ನು ಆರಂಭಿಸಿದಾಗ ಮಾತ್ರ ಯೋಜನೆ ಸಾರ್ಥಕ ಆಗುತ್ತದೆ. ಆ ದಿಸೆಯಲ್ಲಿ ಜನರ ಆಲೋಚನೆ ಮತ್ತು ಜೀವನ ಶೈಲಿ ಬದಲಾವಣೆ ಆಗಬೇಕಾಗಿದೆ. ಈ ಬದಲಾವಣೆ ತರಲು ಒಂದು ಜಾಗೃತಿ ಆಂದೋಲನವನ್ನು ಆಯೋಜಿಸುವುದು ಬಹಳ ಮುಖ್ಯ ಎಂದರು.
ಇಂದು ಗ್ರಾಮೀಣ ಪ್ರದೇಶಗಳಲ್ಲಿ ಮೊಬೈಲ್ ಬಳಕೆದಾರರ ಸಂಖ್ಯೆ ಗಮನಾರ್ಹ ಪ್ರಮಾಣದಲ್ಲಿ ಹೆಚ್ಚಾಗಿದೆ. ರಾಜ್ಯದ ಅಷ್ಟೂ ಗ್ರಾಮ ಪಂಚಾಯಿತ್ ಸದಸ್ಯರು ಹಾಗೂ ಅವರ ಸಂಪರ್ಕದಲ್ಲಿರುವ ಮೊಬೈಲ್ ಬಳಕೆದಾರರು ಈ ಸ್ವಚ್ಛತೆಯ ಅಭಿಯಾನದಲ್ಲಿ ಮೊಬೈಲ್ ಮಾಹಿತಿ ಮೂಲಕ ಪಾಲುಗೊಂಡರೆ ದೊಡ್ಡ ಪ್ರಮಾಣದಲ್ಲಿ ನಾವು ಜನರನ್ನು ತಲುಪಬಹುದಾಗಿದೆ. ಅದಕ್ಕೆ ವ್ಯವಸ್ಥಿತ ನೆಟ್‌ವರ್ಕ್ ರೂಪಿಸಬೇಕಾಗಿದೆ ಎಂದು ಅವರು ಹೇಳಿದರು.
ಸಮಾರಂಭದಲ್ಲಿ ಮಾತನಾಡಿದ ಯೂನಿಸೆಫ್ ಪ್ರತಿನಿಧಿ ಮಿಟಲ್ ರೂಸಾಡಿಯಾ, ಯೂನಿಸೆಫ್ ಕರ್ನಾಟಕ ಸರಕಾರದ ಬಯಲು ಬಹಿರ್ದೆಸೆ ಮುಕ್ತ ಕಾರ್ಯಕ್ರಮಕ್ಕೆ ಎಲ್ಲ ರೀತಿಯ ನೆರವನ್ನು ನೀಡಲು ಸಿದ್ಧವಿದೆ. ಶೌಚಾಲಯಗಳ ನಿರ್ಮಾಣದ ಜೊತೆಗೆ ಅವುಗಳ ನಿರ್ವಹಣೆಗೂ ಗಮನಹರಿಸಬೇಕು ಎಂದು ಸೂಚಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮೀಣಾಭಿವೃದ್ದಿ ಇಲಾಖೆ ಪ್ರಧಾನ ಕಾರ್ಯದರ್ಶಿ ಎಲ್. ಕೆ.ಅತೀಕ್, ಯೂನಿಸೆಫ್‌ನ ಪ್ರತಿನಿಧಿ ಸುಜೊಯ್ ಮುಜುಂದಾರ್, ಆಯುಕ್ತ ಡಾ.ಆರ್.ವಿಶಾಲ್ ಸೇರಿ ವಿವಿಧ ಜಿಲ್ಲೆಗಳ ಜಿ.ಪಂ. ಸಿಇಓಗಳು ಭಾಗವಹಿಸಿದ್ದರು.