ಶ್ರೀ ಕಾಳಿಕಾ ದುರ್ಗಾಪರಮೇಶ್ವರಿ ದೇವಸ್ಥಾನದ ಹುಂಡಿಯನ್ನು ತೆರೆಯಲು ಹೈಕೋರ್ಟ್ ಅನುಮತಿ
ಬೆಂಗಳೂರು, ಅ.5: ವಿದ್ಯಾರಣ್ಯಪುರದ ಶ್ರೀ ಕಾಳಿಕಾ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಇರುವ 12 ಹುಂಡಿಗಳನ್ನು ತೆರೆಯಲು ಹೈಕೋರ್ಟ್ ಸರಕಾರದಿಂದ ನೇಮಕಗೊಂಡಿರುವ ಕಾರ್ಯಕಾರಿ ಅಧಿಕಾರಿಗೆ ಶುಕ್ರವಾರ ಅನುಮತಿ ನೀಡಿದೆ.
ದೇವಸ್ಥಾನವನ್ನು ಸರಕಾರದ ವಶಕ್ಕೆ ಪಡೆಯಲು ನಗರ ಜಿಲ್ಲಾಧಿಕಾರಿಗಳು ಹೊರಡಿಸಿದ್ದ ಆದೇಶ ರದ್ದುಕೋರಿ ದೇವಸ್ಥಾನ ಟ್ರಸ್ಟ್ ಸಂಸ್ಥಾಪಕ ಟ್ರಸ್ಟಿಗಳಾದ ರಾಧಮ್ಮ ಹಾಗೂ ವಸಂತಕುಮಾರ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರಿದ್ದ ನ್ಯಾಯಪೀಠ, ಅ.6ರಂದು ಹುಂಡಿ ತೆರೆಯಲು ಅನುಮತಿ ನೀಡಿತು. ಹುಂಡಿಯಲ್ಲಿರುವ ಹಣವನ್ನು ಭಾರತೀಯ ಸ್ಟೇಟ್ ಬ್ಯಾಂಕಿನ ವಿದ್ಯಾರಣ್ಯಪುರ ಶಾಖೆಯಲ್ಲಿ ಠೇವಣಿ ಇಡಬೇಕು ಎಂದು ಆದೇಶಿಸಿದೆ.
ದೇವಸ್ಥಾನದ ಹಣವನ್ನು ರಾಧಮ್ಮ ಹಾಗೂ ವಸಂತ್ ಕುಮಾರ್ ಅವರು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಕೆಯಾಗಿತ್ತು. ಆ ದೂರಿನ ವಿಚಾರಣೆ ನಡೆಸಿದ್ದ ಜಿಲ್ಲಾಧಿಕಾರಿಗಳು, ಟ್ರಸ್ಟಿಗಳು ದೇವಸ್ಥಾನದ ಹಣ ದುರ್ಬಳಕೆ ಮಾಡಿದ್ದಾರೆ. ಹಣಕ್ಕೆ ಯಾವುದೇ ಲೆಕ್ಕವಿಟ್ಟಿಲ್ಲ ಎಂದು ಅಭಿಪ್ರಾಯಪಟ್ಟು, ದೇವಸ್ಥಾನವನ್ನು ವಶಕ್ಕೆ ಪಡೆಯಬೇಕು ಎಂದು ಆ.10ರಂದು ಆದೇಶಿಸಿದ್ದರು.
ಈ ಆದೇಶವನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯು ಶುಕ್ರವಾರ ವಿಚಾರಣೆಗೆ ಬಂದಾಗ, ಕಾರ್ಯಕಾರಿ ಅಧಿಕಾರಿ ದಿನೇಶ್ ಅವರು ಮಧ್ಯಂತರ ಅರ್ಜಿ ಸಲ್ಲಿಸಿದರು. ದೇವಸ್ಥಾನದ ಆವರಣದಲ್ಲಿರುವ 12 ಹುಂಡಿಗಳು ತುಂಬಿವೆ. ಆದರೆ, ಅವುಗಳ ಕೀಲಿಕೈ ಅರ್ಜಿದಾರರ ಬಳಿ ಇದೆ. ಹೀಗಾಗಿ, ಕೀಲಿಗಳನ್ನು ನಮ್ಮ ವಶಕ್ಕೆ ನೀಡಲು ಅರ್ಜಿದಾರರಿಗೆ ನಿರ್ದೇಶಿಸಬೇಕು ಎಂದು ಕೋರಿದರು. ಈ ಕುರಿತು ವಾದ ಪ್ರತಿವಾದ ಆಲಿಸಿದ ನ್ಯಾಯಪೀಠ ಮೇಲಿನಂತೆ ಆದೇಶ ಮಾಡಿ ಮಧ್ಯಂತರ ಅರ್ಜಿ ಇತ್ಯರ್ಥಪಡಿಸಿತು.