ವಿಜ್ಞಾನದ ಆವಿಷ್ಕಾರದಿಂದ ಜೀವನ ಮಟ್ಟ ಸುಧಾರಣೆ: ಪ್ರೊ.ಎಸ್.ಸಡಗೊಪ್ಪನ್
ಬೆಂಗಳೂರು, ಅ.5: ವಿಜ್ಞಾನ ಕ್ಷೇತ್ರದಲ್ಲಿ ನಡೆಯುತ್ತಿರುವ ಅವಿಷ್ಕಾರಗಳು ಮನುಷ್ಯನ ಜೀವನಮಟ್ಟವನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರವಹಿಸಿವೆ ಎಂದು ಅಂತರ್‌ರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯ ನಿರ್ದೇಶಕ ಪ್ರೊ.ಎಸ್.ಸಡಗೊಪ್ಪನ್ ತಿಳಿಸಿದರು.
ಶುಕ್ರವಾರ ರಾಷ್ಟ್ರೀಯ ವಿಜ್ಞಾನ ವಸ್ತುಸಂಗ್ರಹಾಲಯಗಳ ಪರಿಷತ್ತು ವತಿಯಿಂದ ನಗರದ ಕಸ್ತೂರಬಾ ರಸ್ತೆಯ ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತು ಸಂಗ್ರಹಾಲಯ ಸಭಾಂಗಣದಲ್ಲಿ ಆಯೋಜಿಸಿದ್ದ, ರಾಷ್ಟ್ರೀಯ ವಿಜ್ಞಾನ ಗೋಷ್ಠಿ-2018 ಉದ್ಘಾಟಿಸಿ ಅವರು ಮಾತನಾಡಿದರು. ವಿಜ್ಞಾನ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಸಂಶೋಧನೆ, ಪ್ರಯತ್ನಗಳ ಅವಶ್ಯಕತೆಯಿದೆ. ವಿಜ್ಞಾನ ವಿದ್ಯಾರ್ಥಿಗಳು ಇದಕ್ಕೆ ಹೆಚ್ಚಿನ ಆಸಕ್ತಿ ತೋರಿಸಬೇಕು. ಆ ನಿಟ್ಟಿನಲ್ಲಿ ಇಂದು ನಡೆಯುತ್ತಿರುವ ರಾಷ್ಟ್ರೀಯ ವಿಜ್ಞಾನ ಗೋಷ್ಠಿ-2018 ವಿದ್ಯಾರ್ಥಿಗಳಿಗೆ ಮತ್ತಷ್ಟು ಆಸಕ್ತಿ, ಕುತೂಹಲ ಹಾಗೂ ಪ್ರೇರಣೆ ಒದಗಿಸಲಿದೆ ಎಂದು ಅವರು ಆಶಿಸಿದರು.
ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ರಾಷ್ಟ್ರೀಯ ವಿಜ್ಞಾನ ಗೋಷ್ಠಿ-2018 ನಡೆಯುತ್ತಿದೆ. ರಾಜ್ಯದಿಂದ ಪ್ರತಿನಿಧಿಸುವ ಒಬ್ಬ ವಿದ್ಯಾರ್ಥಿಯಂತೆ, ಈಶಾನ್ಯ ಭಾರತದ ರಾಜ್ಯಗಳು ಸೇರಿದಂತೆ ಒಟ್ಟು 32 ರಾಜ್ಯಗಳ ಪ್ರೌಢಶಾಲಾ ವಿದ್ಯಾರ್ಥಿಗಳು ಈ ಗೋಷ್ಠಿಯಲ್ಲಿ ಪಾಲ್ಗೊಂಡಿದ್ದಾರೆ. ಕೈಗಾರಿಕೆ, ದೇಶದ ಅಭಿವೃದ್ಧಿ ವಿಷಯ ಹಾಗೂ ವಿವಿಧ ಯೋಜನೆಗಳ ಕುರಿತು ಮಾತನಾಡುವ ಮೂಲಕ ಗಮನ ಸೆಳೆದರು.
ತಮಿಳುನಾಡಿನ ತಿರುನೆಲ್ವೇಲಿ ಖಾಸಗಿ ಶಾಲೆಯ ವಿದ್ಯಾರ್ಥಿನಿ ಎ.ದೀಪಿಕಾ, ಮಾತನಾಡಿ, ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಪ್ರಾರಂಭವಾದ ಕೈಗಾರಿಕಾ ಕ್ರಾಂತಿ ತರುವಾಯ ಯುರೋಪ್‌ನಾದ್ಯಂತ, ಉತ್ತರ ಅಮೆರಿಕ ಮತ್ತು ಅಂತಿಮವಾಗಿ ವಿಶ್ವದಲ್ಲಿ ಹರಡಿತು. ಕೈಗಾರಿಕಾ ಕ್ರಾಂತಿಯ ಪ್ರಾರಂಭವು ಮಾನವ ಇತಿಹಾಸದಲ್ಲಿ ಪ್ರಮುಖ ತಿರುವು ಎಂದು ಗುರುತಿಸಲಾಗಿದೆ. ಬಹುತೇಕ ಜನಜೀವನದ ಪ್ರತಿಯೊಂದು ಅಂಶದ ಮೇಲೆ ಅಂತಿಮವಾಗಿ ಕೆಲವು ರೀತಿಯಲ್ಲಿ ಪ್ರಭಾವ ಬೀರಿತು ಎಂದು ಅಭಿಪ್ರಾಯಪಟ್ಟರು.