×
Ad

"ಫ್ಲೋರೋಸಿಸ್ ತಡೆಗೆ ಎಲ್ಲಾ ಇಲಾಖೆಗಳು ಕೈಜೋಡಿಸಬೇಕು"

Update: 2018-10-05 21:47 IST

ಬೆಂಗಳೂರು, ಅ.5: ದಂತ, ಮೂಳೆ ಹಾಗೂ ಸ್ನಾಯುಗಳಿಗೆ ಹಾನಿಯಾಗುವ ಫ್ಲೋರೋಸಿಸ್ ನಿಯಂತ್ರಣಕ್ಕೆ ಸಮಸ್ತ ಇಲಾಖೆಗಳು ಕೈಜೋಡಿಸಬೇಕೆಂದು ಬೆಂಗಳೂರು ನಗರ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಡಾ.ಸಿ. ಸಿದ್ದರಾಮಯ್ಯ ತಿಳಿಸಿದರು.

ಶುಕ್ರವಾರ ಬೆಂಗಳೂರು ನಗರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಳ್ಳಲಾದ ರಾಷ್ಟ್ರೀಯ ಫ್ಲೋರೋಸಿಸ್ ತಡೆ ಹಾಗೂ ನಿಯಂತ್ರಣ ಕಾರ್ಯಕ್ರಮದ ಅಂತರ ಇಲಾಖಾ ಸಮನ್ವಯ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

ಫ್ಲೋರೋಸಿಸ್ ಕಾಯಿಲೆ ಹೆಚ್ಚಾಗಿ ಬೆಟ್ಟಗುಡ್ಡಗಳ ಪ್ರದೇಶದಲ್ಲಿ ಕಾಣಿಸಿಕೊಳ್ಳುತ್ತದೆ. ತುಮಕೂರಿನ ಪಾವಗಡ, ಚಿಕ್ಕಬಳ್ಳಾಪುರದ ಬಾಗೇಪಲ್ಲಿಯಲ್ಲಿ ಇದರ ಪ್ರಕರಣಗಳು ಹೆಚ್ಚು. ಬಾಲ್ಯಾವಸ್ಥೆಯಲ್ಲಿಯೆ ಇದನ್ನು ತಡೆಗಟ್ಟುವುದು ಸೂಕ್ತ. ನಾವು ಶುದ್ಧ ಕುಡಿಯುವ ನೀರು ಮತ್ತು ಆಹಾರವನ್ನು ಸೇವಿಸುವುದು ಒಳ್ಳೆಯದು ಎಂದು ಅವರು ಹೇಳಿದರು.

ಜಿಲ್ಲಾ ಆರ್.ಸಿ.ಎಚ್. ಅಧಿಕಾರಿ ಮಹೇಶ್ ಕುಮಾರ್ ಮಾತನಾಡಿ, ಎಲ್ಲ ತಾಲೂಕು ಮಟ್ಟದ ಪ್ರದೇಶಗಳಲ್ಲಿ ಸಾರ್ವಜನಿಕರ ಅನುಕೂಲಕ್ಕೆ ಶುದ್ಧ ನೀರಿನ ಘಟಕ ಸ್ಥಾಪಿಸಬೇಕು. ವಿದ್ಯುನ್ಮಾನ ಹಾಗೂ ದೃಶ್ಯ ಮಾಧ್ಯಮಗಳು ಇದರ ದುಷ್ಪರಿಣಾಮಗಳ ಬಗ್ಗೆ ತಿಳುವಳಿಕೆ ಮೂಡಿಸಬೇಕು. ಮಳೆ ನೀರು ಸಂಗ್ರಹಣೆ, ಪ್ಲಾಸ್ಟಿಕ್ ನಿಷೇಧ ಆಗಬೇಕು. ಎಲ್ಲ ಇಲಾಖೆಗಳು ಒಗ್ಗೂಡಿ ಈ ಫ್ಲೋರೋಸಿಸ್ ನಿಯಂತ್ರಣ ಮಾಡಬೇಕೆಂದರು. ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕೃಷ್ಣಪ್ಪ, ಫ್ಲೋರೋಸಿಸ್ ಸಮನ್ವಯಾಧಿಕಾರಿ ರೂಪಾ ಶ್ರೀ ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News