ಸರಕಾರಿ ಉದ್ಯೋಗ ನೀಡುವಂತೆ ಕ್ರೀಡಾಪಟು ಶಹಿರಾ ಮನವಿ
ಬೆಂಗಳೂರು, ಅ.5: ಸೈಕ್ಲಿಂಗ್ ಸ್ಪರ್ಧೆಯಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಅಪಾರವಾದ ಸಾಧನೆ ಮಾಡಿರುವ ಶಹಿರಾ ಪಿ.ಅತ್ತಾರ್ ತಮಗೆ ಸರಕಾರಿ ಉದ್ಯೋಗ ನೀಡಬೇಕು ಎಂದು ರಾಜ್ಯ ಸರಕಾರವನ್ನು ಒತ್ತಾಯಿಸಿದ್ದಾರೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅತಿ ಸಣ್ಣ ವಯಸ್ಸಿನಿಂದಲೇ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಿದ್ದ ನಾನು ಕ್ರೀಡೆಯಲ್ಲಿ ಅತಿಯಾದ ಆಸೆಯನ್ನಿಟ್ಟುಕೊಂಡಿದ್ದೆ. ಇದುವರೆಗೂ ರಾಷ್ಟ್ರಮಟ್ಟದಲ್ಲಿ 2 ಚಿನ್ನದ ಪದಕ, 4 ಬೆಳ್ಳಿ ಪದಕ ಹಾಗೂ 4 ಕಂಚಿನ ಪದಕಗಳು ಮತ್ತು ರಾಜ್ಯಮಟ್ಟದಲ್ಲಿ 24 ಚಿನ್ನದ ಪದಕ, 4 ಬೆಳ್ಳಿ ಪದಕ ಹಾಗೂ 7 ಕಂಚಿನ ಪದಕಗಳನ್ನು ಗಳಿಸಿರುವೆ.
2016ರಲ್ಲಿ ಬೆಳಗಾವಿಯಲ್ಲಿ ಕರ್ನಾಟಕ ಸೈಕ್ಲಿಂಗ್ ಅಸೋಸಿಯೇಷನ್‌ನಿಂದ ಹಮ್ಮಿಕೊಳ್ಳಲಾಗಿದ್ದ ಸ್ಪರ್ಧೆಯಲ್ಲಿ ಭಾಗವಹಿಸುವ ವೇಳೆ ಅಪಘಾತಕ್ಕಿಡಾಗಿ ಶಾಶ್ವತವಾಗಿ ಸ್ಪರ್ಧೆಯಿಂದ ದೂರ ಉಳಿಯುವಂತಾಯಿತು. ಇದೀಗ ಕುಟುಂಬ ನಿರ್ವಹಣೆ ಜವಾಬ್ದಾರಿ ನನ್ನ ಮೇಲೆ ಇದೆ ಎಂದರು.
ವಿಜಯಪುರದಲ್ಲಿರುವ ಸೈಕ್ಲಿಂಗ್ ಹಾಸ್ಟಲ್‌ನಲ್ಲಿ ಭದ್ರತಾ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಪಿಯುಸಿ ಮುಗಿದಿದ್ದು, ಸದ್ಯ ದೂರಶಿಕ್ಷಣದ ಮೂಲದ ಬಿಎ 2ನೇ ವರ್ಷದ ವ್ಯಾಸಂಗ ಮಾಡುತ್ತಿರುವೆ ಎಂದು ಹೇಳಿದರು.
ಸಚಿವ ಯು.ಟಿ.ಖಾದರ್ ಅವರನ್ನು ಭೇಟಿಯಾಗಿ ಪರಿಸ್ಥಿತಿ ವಿವರಿಸಿದ ನಂತರ ಅವರು ಜಲ ಮಂಡಳಿ ಮತ್ತು ಗೃಹ ಮಂಡಳಿಗಳಲ್ಲಿ ಉದ್ಯೋಗ ನೀಡುವಂತೆ ನನಗೆ ಪತ್ರ ನೀಡಿದ್ದಾರೆ. ಆದರೆ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಪ್ರತಿಕ್ರಿಯೆ ನೀಡದೇ ಅಲೆಸುತ್ತಿದ್ದಾರೆ. ಸರಕಾರ ನನ್ನ ಕ್ರೀಡಾ ಸಾಧನೆಯನ್ನು ಪರಿಗಣಿಸಿ ಉದ್ಯೋಗ ಒದಗಿಸಬೇಕು ಎಂದು ಮನವಿ ಮಾಡಿದರು.