ಸರಳತೆಯೇ ನಿಜಸೌಂದರ್ಯವೆಂಬ ಗಾಂಧಿಯ ಬದುಕು

Update: 2018-10-06 13:50 GMT

ಭಾಗ 2

ತ್ಯಾಗವೊಂದು ಸಾತ್ವಿಕ ಆನಂದ. ಬಲವಂತದಿಂದ ನಡೆಸಿದ ತ್ಯಾಗ ಸ್ಥಾಯೀ ಅಲ್ಲ. ತ್ಯಾಗದ ಅನಂತರ ಪಶ್ಚಾತ್ತಾಪ ಇರಬಾರದು. ತ್ಯಾಗವಿಲ್ಲದೆ ಮನುಷ್ಯನ ಬೆಳವಣಿಗೆಯಾಗದು. ಗಾಂಧಿ ಎಂದಿಗೂ ಆಡಂಬರಪ್ರಿಯರಾಗಿರಲಿಲ್ಲ. ಆಡಂಬರ ಬಡವರ ಶತ್ರು ಎಂದೇ ಗಾಂಧಿ ತಿಳಿದಿದ್ದರು. ಆಡಂಬರದಿಂದ ವ್ಯಕ್ತಿಯ ಬೆಲೆ ಹೆಚ್ಚುತ್ತದೆಂದು ಯಾರಾದರೂ ಹೇಳಿದಾಗ ಗಾಂಧಿ ದೊಡ್ಡದಾಗಿ ನಗುತ್ತಿದ್ದರು. ಬಾಹ್ಯಾಡಂಬರ ವ್ಯಕ್ತಿಯನ್ನು ಮಾರ್ಗ ತಪ್ಪಿಸುತ್ತದೆ. ಅವನ ಚಾರಿತ್ರದಲ್ಲಿ ದೋಷವುಂಟಾಗುತ್ತದೆ. ಮಹತ್ವ ಕುಗ್ಗುತ್ತದೆ. ಮನುಷ್ಯ ಅಗತ್ಯಕ್ಕಿಂತ ಹೆಚ್ಚು ವಸ್ತುಗಳನ್ನು ಸಂಗ್ರಹಿಸಿದರೆ ಅದು ಕದ್ದಂತೆ ಎಂದವರು ಗಾಂಧಿ.

ಇರುವುದನ್ನೆಲ್ಲ ಕಳಚಿಕೊಂಡು ಸರಳ ಬದುಕಿನ ಮೇರು ಸಾಧಕರಾಗಿ ಕಂಡ ಗಾಂಧಿ ಬಹುವರ್ಣರಂಜಿತ ವ್ಯಕ್ತಿಯೇನಲ್ಲ. ಆದರೂ ಗಾಂಧಿ ವಿಶ್ವಕ್ಕೇ ಬಹುಪರಿಚಿತ, ಅಪರೂಪದ ವ್ಯಕ್ತಿಯೆನಿಸಿದವರು. ನಿತ್ಯಬದುಕನ್ನು ಹೀಗೆಯೂ ಬಾಳಲು ಸಾಧ್ಯವೆಂದು ಗಾಂಧಿಯ ಸರಳ ಬದುಕು ಹೇಳುತ್ತದೆ. ಗಾಂಧಿಗೆ ಮಾತ್ರ ಸಾಧ್ಯವಾದ ಈ ಸರಳ ಬದುಕು ಜಗತ್ತಿನ ಅನೇಕ ದಾರ್ಶನಿಕ ರಲ್ಲಿ ಕಂಡುಬಂದರೂ ಗಾಂಧಿಯಲ್ಲಿರುವಷ್ಟು ಸರಳತೆಯಿಲ್ಲ. ತನ್ನ ಜೀವನ ಪ್ರಯೋಗಗಳೆಲ್ಲವೂ ಬಹಿರಂಗವಾಗಿಯೇ ನಡೆದಿದೆಯೆನ್ನುವ ಗಾಂಧಿ ಯಾವುದನ್ನೂ ರಹಸ್ಯವಾಗಿ ಇಟ್ಟುಕೊಳ್ಳಲಿಲ್ಲ. ಯಾರ ಬದುಕಿನಲ್ಲಿ ರಹಸ್ಯಗಳು ಇರುವುದಿಲ್ಲ ಹೇಳಿ? ಯಾವ ರಹಸ್ಯವೂ ಇಲ್ಲದೆ ಬದುಕಲು ಯಾರಿಗೂ ಸಾಧ್ಯವಿಲ್ಲವೇನೋ! ಹಾಗಾದರೆ ಆ ರಹಸ್ಯವಾದರೂ ಎಂಥದ್ದು? ನಿತ್ಯಬದುಕಿನ ಒಟ್ಟೂ ಗತಿಯೇ ಬಹಿರ್ಮುಖದಲ್ಲಿ ರಹಸ್ಯಮಯವಾದುದು. ಅಂದರೆ , ಜತನದಿಂದ ಕಾಪಾಡಿಕೊಳ್ಳಬೇಕಾದ ಈ ಬದುಕೆಂಬ ಆಸ್ತಿಯ ಒಟ್ಟೂ ಅಸ್ಮಿತೆ ರಹಸ್ಯವಾಗೇ ಇದ್ದರೂ ಅದರ ಮೇಲ್ಮೈಮಾತ್ರ ಬಹಿರಂಗವಾಗಿರುತ್ತದೆ. ಅದು ಸರಳವೂ ಸಂಕೀರ್ಣವೂ ಜಟಿಲವೂ ಆಗಿರುತ್ತದೆ ಕೂಡ. ಆದರೆ ಗಾಂಧಿಯಲ್ಲಿದು ಕೊನೆಯವರೆಗೂ ಸರಳವಾಗೇ ಇತ್ತು. ಅಷ್ಟೇ ಅಲ್ಲ , ಗಾಂಧಿಯನ್ನು ನೋಡಿದಾಗಲೂ ಹಾಗನಿಸುತ್ತದೆ. ಉಟ್ಟಪಂಚೆಯನ್ನು ಹೊರತುಪಡಿಸಿದರೆ ಗಾಂಧಿಯ ಮೈಮೇಲೆ ಉಡುಪಿನ ಹಂಗಿಲ್ಲ. ಕೇವಲ ರೇಖೆಗಳನ್ನು ಬಳಸಿ ಗಾಂಧಿಯನ್ನು ಚಿತ್ರಿಸಬಹುದಷ್ಟೇ. ಸುಲಭವಾಗಿ ಗಾಂಧಿಯ ಬದುಕನ್ನೂ ನಾವು ನಮ್ಮ ಬದುಕಿಗೆ ಅಳವಡಿಸಿಕೊಂಡು ಚಿತ್ರಿಸಿಕೊಳ್ಳಲು ಎಂಥವನಿಗೂ ಸಾಧ್ಯವೇ ಇಲ್ಲ! ಯಾರಾದರೂ ವಾಸ್ತವದ ಅಭಿವ್ಯಕ್ತಿಯಲ್ಲಿ ಸರಳ, ಸತ್ಯಸಂಧತೆಯನ್ನು ಪ್ರಚುರಪಡಿಸಿದರೆ ‘ನೀ ಏನು ಗಾಂಧಿಯೋ’ ಎಂಬಷ್ಟು ಗಾಂಧಿ ನಮ್ಮೆಲ್ಲರನ್ನೂ ಮೀರಿದ್ದಾರೆ. ಮಾತ್ರವಲ್ಲ, ‘ಇವನೊಬ್ಬ ಗಾಂಧಿ’ ಎಂದು ಅಣಕಿಸುವ ರೀತಿಯಲ್ಲೂ ಯುನಿವರ್ಸಲ್ ಮೆಚ್ಚಿದ ಮಹಾತ್ಮನ ಬದುಕನ್ನು ಅಪಹಾಸ್ಯಕ್ಕೊಳಪಡಿಸಲಾಗಿದೆ. ಇದು ದುರಂತ. ಈ ಅಪಹಾಸ್ಯದ ಹಿಂದೆ ಕಾಣುವುದೇನೆಂದರೆ, ಗಾಂಧಿಯನ್ನು ಅನುಸರಿಸಲಾಗಲೀ ಅನುಕರಿಸಲಾಗಲೀ ಯಾವ ನೆಲೆಯಲ್ಲೂ ಸಾಧ್ಯವಾಗದಿದ್ದ ಸಂದರ್ಭದಲ್ಲಿ ಅನ್ಯರಲ್ಲಿ ಹುಟ್ಟಿಸುವ ಹಿಂಸೆ ಮತ್ತು ಅಸಹನೆ.

 ಯಾರ ಬದುಕು ಕನಿಷ್ಠವೂ ಅಲ್ಲ, ಶ್ರೇಷ್ಠವೂ ಅಲ್ಲ. ಅಳವಡಿಸಿಕೊಂಡ ಮೌಲ್ಯಗಳನ್ನಾಧರಿಸಿ ಬದುಕು ಶ್ರೇಷ್ಠವೂ ಕನಿಷ್ಠವೂ ಆಗಿ ಪರಿಣಮಿಸುತ್ತದೆ. 1899ರಲ್ಲಿ ಭಾರತಕ್ಕೆ ಗಾಂಧಿ ವೈಭವಪೂರ್ಣ ಬೀಳ್ಕೊಡುಗೆಯೊಂದಿಗೆ ಹಿಂದಿರುಗಿದಾಗ ಅವರಲ್ಲಿ ವಜ್ರ, ಚಿನ್ನ, ಬೆಳ್ಳಿಯ ಉಡುಗೊರೆಗಳಿದ್ದವು. ತನ್ನ ಸಾರ್ವಜನಿಕ ಸೇವೆಗಾಗಿ ಅವು ಕೊಟ್ಟಿದ್ದೆಂದು ಗಾಂಧಿಗೆ ಅರಿವಿದ್ದರೂ ಗಾಂಧಿಗೆ ಅವುಗಳನ್ನು ಸ್ವೀಕರಿಸಲು ಮನಸ್ಸು ಒಪ್ಪಲಿಲ್ಲ. ಅವುಗಳನ್ನು ಸ್ವೀಕರಿಸಿದ ದಿನದ ರಾತ್ರೆ ಗಾಂಧಿಗೆ ನಿದ್ದೆಯೇ ಬರಲಿಲ್ಲವಾಗಿತ್ತು. ಯಾವ ಪ್ರತಿಫಲವೂ ಇಲ್ಲದೆ ಮಾಡಿದ ಸಾರ್ವಜನಿಕ ಸೇವೆಗೆ ಪ್ರತಿಯಾಗಿ ಕೊಟ್ಟ ಉಡುಗೊರೆಗಳನ್ನು ಸ್ವೀಕರಿಸಿದರೆ ಜನರ ಸೇವೆ ಮಾಡುತ್ತಿರುವೆನೆಂದು ಹೇಗೆ ತಾನು ಹೇಳಿಕೊಳ್ಳಲಿ ಎಂಬ ಪ್ರಶ್ನೆ ಅವರನ್ನು ಕಾಡುತ್ತಿತ್ತು. ಹಾಗಂತ ತ್ಯಜಿಸುವುದೂ ಅವರಿಗೆ ಕಷ್ಟವಾಗಿತ್ತು. ಒಂದು ವೇಳೆ ಇಟ್ಟುಕೊಂಡರೂ ಹೆಂಡತಿ , ಮಕ್ಕಳ ವಿಚಾರದಲ್ಲಿ ದ್ವಂದ್ವ ಯೋಚನೆಯಿತ್ತು. ಅವರನ್ನು ಸರಳ ಜೀವನಕ್ಕೆ ಸಿದ್ಧಗೊಳಿಸುತ್ತಿದ್ದ ಗಾಂಧಿಗೆ ಸೇವೆಯ ಪ್ರತಿಫಲ ಸೇವೆಯೇ ಎಂಬುದನ್ನು ನಿಜಾರ್ಥದಲ್ಲಿ ಸಾಬೀತು ಮಾಡಲು ಸಾಧ್ಯವಾಗುವುದಿಲ್ಲವೆಂಬ ಅಂಜಿಕೆಯೂ ಕಾಡತೊಡಗಿತು. ಅದಾಗಲೇ ಗಾಂಧಿಯ ಮನೆಯಲ್ಲಿ ಬೆಲೆಬಾಳುವ ಒಡವೆಗಳಾವುವೂ ಇರಲಿಲ್ಲ. ಜೀವನವನ್ನು ಬೇಗಬೇಗ ಸರಳ ಮಾಡಿಕೊಳ್ಳುವ ಸಿದ್ಧತೆಯಲ್ಲಿದ್ದಾಗ ಈ ಒಡವೆಗಳ ವಿಚಾರವಾಗಿ ಚರ್ಚೆ-ವಾದ-ವಿವಾದಗಳು ಎದ್ದವು. ಕಸ್ತೂರ್ಬಾ ಭವಿಷ್ಯದ ಬದುಕಿಗಾಗಿ ಅವುಗಳೆಲ್ಲವನ್ನೂ ಉಳಿಸಿಕೊಳ್ಳುವ ಮಾತುಗಳನ್ನು ಆಡಿದರು. ಪ್ರೀತಿಯಿಂದ ಕೊಟ್ಟ ಉಡುಗೊರೆಗಳನ್ನು ಹಿಂದಿರುಗಿಸಲು ಅವರೊಪ್ಪಲ್ಲಿಲ್ಲ. ಮಕ್ಕಳ ಮದುವೆ, ಸೊಸೆಯರ ವಿಚಾರವಾಗಿ ಅವುಗಳ ಅಗತ್ಯವನ್ನು ಒತ್ತಿಒತ್ತಿ ಹೇಳಿದರು. ಆರಂಭದಲ್ಲಿ ಹೆಂಡತಿಯ ಮಾತಿಗೆ ವಿಚಲಿತಗೊಂಡರೂ, ಅವರೇನೇ ಅಲವತ್ತುಕೊಂಡರೂ ಗಾಂಧಿ ಮಾತ್ರ ತನ್ನ ದೃಢಸಂಕಲ್ಪದಿಂದ ಸ್ವಲ್ಪವೂ ವಿಚಲಿತರಾಗಲಿಲ್ಲ. ನೀಡಲ್ಪಟ್ಟ ಉಡುಗೊರೆಗಳಲ್ಲಿ ಒಂದು ಬೆಲೆಬಾಳುವ ಹಾರವನ್ನು ಕುರಿತು, ಇದು ನನಗೆ ಕೊಟ್ಟಿದ್ದು, ಇದರ ಮೇಲೆ ನಿಮಗೆ ಅಧಿಕಾರವಿಲ್ಲವೆಂದು ಕಸ್ತೂರ್ಬಾ ಗಾಂಧಿಯಲ್ಲಿ ವಾದ ಮಾಡಿದರು. ಕಣ್ಣೀರಿಟ್ಟರು. ತನ್ನ ಸೇವೆಯನ್ನು ಸಮರ್ಥಿಸಿಕೊಂಡರು. ಅದನ್ನು ಕುರಿತು ಬಾ ಕೇಳಿದ, ಹೇಳಿದ ಯಾವ ಮಾತುಗಳಿಗೂ ಗಾಂಧಿಯಲ್ಲಿ ಉತ್ತರವಿರಲಿಲ್ಲ. ಅವರಿಗೆ ತನ್ನನ್ನು ಸಮರ್ಥಿಸಿಕೊಳ್ಳುವುದಕ್ಕೆ ಸಾಧ್ಯವೇ ಇರಲಿಲ್ಲ. ಬಾ ಅವರ ಮಾತುಗಳು ಅವರ ಮನಸ್ಸನ್ನು ಘಾಸಿಗೊಳಿಸಿದ್ದರೂ ತನ್ನ ಧ್ಯೇಯದಿಂದ ಗಾಂಧಿ ಕದಲದೆ ತಾನಂದುಕೊಂಡಿದ್ದನ್ನು ಸಾಧಿಸಿಯೇ ಬಿಟ್ಟರು. ಕೊನೆಗೆ ಹೇಗೋ ಬಾ ಅವರನ್ನೊಪ್ಪಿಸಿ ಎಲ್ಲ ಒಡವೆಗಳನ್ನೂ ಹಿಂದಿರುಗಿಸಿ ಒಂದು ಟ್ರಸ್ಟ್ ಮಾಡಿ, ದಕ್ಷಿಣ ಆಫ್ರಿಕಾದ ಭಾರತೀಯರ ಸೇವೆಗೆ ವಿನಿಯೋಗಿಸಬೇಕೆಂದು ಪತ್ರವನ್ನು ಬರೆದು ಕೊಟ್ಟರು. ಆಮೇಲೆ ಯಾವತ್ತೂ ಗಾಂಧಿ ವೈಯಕ್ತಿಕವಾಗಿ ಟ್ರಸ್ಟನ್ನು ಬಳಸಿಕೊಳ್ಳಲಿಲ್ಲ. ಸಾರ್ವಜನಿಕ ಕಾರ್ಯಗಳಿಗೆ ಹಣ ಬೇಕಾದಾಗಲೂ ಗಾಂಧಿ ಟ್ರಸ್ಟನ್ನು ಬಳಸದೆಯೇ ಹಣವನ್ನು ಹೊಂದಿಸುತ್ತಾ ಹೋದರು. ಸಾರ್ವಜನಿಕ ಸೇವೆಯಲ್ಲಿರುವ ವ್ಯಕ್ತಿ ಏನನ್ನೂ ಸ್ವೀಕರಿಸಬಾರದು, ಎಲ್ಲ ಬಗೆಯ ಐಹಿಕ ಬಂಧನಗಳಿಂದಲೂ ದೂರವಾಗಬೇಕು. ದುರಾಸೆಗೊಳಗಾಗದೇ ಸರಳಜೀವನವನ್ನು ಹೊಂದಬೇಕೆಂದು ಗಾಂಧಿ ಸರಳ ಜೀವನದ ಬಗ್ಗೆ ತನ್ನ ಆತ್ಮಕತೆಯಲ್ಲಿ ಬರೆದುಕೊಳ್ಳುತ್ತಾರೆ. ಇದನ್ನೋದುವಾಗ ಹಲವು ಪ್ರಶ್ನೆಗಳು ಕಾಡುತ್ತವೆ. ಒಂದು ಧ್ಯೇಯಕ್ಕಾಗಿ ಒಬ್ಬ ವ್ಯಕ್ತಿ ಹೀಗೆಲ್ಲ ಯೋಚಿಸುತ್ತಾ ಹಾಗೆಯೇ ವಾಸ್ತವದಲ್ಲಿ ಬದುಕಲು ಸಾಧ್ಯವೆಂದು ತೋರಿದ ಗಾಂಧಿಯ ಬದುಕನ್ನು ವರ್ತಮಾನದಲ್ಲಿ ಊಹಿಸಿಕೊಳ್ಳಲೂ ಸಾಧ್ಯವೇ ಇಲ್ಲ. ಯಾಕೆಂದರೆ ಗಾಂಧಿಗೆ ಸಾಧ್ಯವಾದ ಕಾಲದಲ್ಲಿ ನಾವಿಂದು ಇಲ್ಲ. ಗಾಂಧಿಯನ್ನು ಬಿಟ್ಟು ಬಹುದೂರ ಸಾಗಿಬಂದ ನಾವು ಸಾಗಿಬಂದ ದಿಕ್ಕಿನೆಡೆಗೇ ಹೋಗಿ ಗಾಂಧಿಯ ಬದುಕನ್ನು ಮತ್ತೆ ಅನುಸಂಧಿಸಲೂ ಸಾಧ್ಯವಿಲ್ಲ. ಆದರೂ ಆಧುನಿಕ ಐಷಾರಾಮೀ ಜೀವನದಲ್ಲಿ ಗಾಂಧಿಯ ಸರಳ ಬದುಕಿನ ಅನಿವಾರ್ಯತೆಯಿದೆ. ತೀರಾ ಅಗತ್ಯವಿದೆ. ಅಧುನಿಕತೆಯೆಂಬ ಮಾಯೆಯ ಮುಸುಕಿನಿಂದ ನಾವು ಹೊರಬರುವುದಷ್ಟೇ ಅಲ್ಲದೆ ನಮ್ಮ ಮುಂದಿನ ತಲೆಮಾರನ್ನು ಅದರಿಂದ ಮುಕ್ತಗೊಳಿಸಬೇಕಿದೆ.

ಗಾಂಧಿಯ ಹಲವು ರೂಪಕಗಳನ್ನು ಇಂದಿಗೂ ಗಾಂಧಿಗಿಂತಲೂ ಢಾಳಾಗಿ ಅಳವಡಿಸಿಕೊಳ್ಳಲು ಸಾಧ್ಯವಿದೆಯೆಂದು ನನಗನಿಸುತ್ತದೆ. ಅನೇಕ ರಾಜಕಾರಣಿಗಳು, ಸಾಹಿತಿಗಳು, ವಿದ್ವಾಂಸರು, ಸಮಾಜ ಸೇವಕರು, ಶಿಕ್ಷಕರು, ಹಿರಿಯರ ಸಾಮಾಜಿಕ ಮುಖಂಡರು, ಸರಕಾರಿ ಉದ್ಯೋಗಿಗಳು ಗಾಂಧಿಯ ಸರಳ ಬದುಕನ್ನು ಬಾಳಿಹೋಗಿದ್ದಾರೆ. ಈಗಲೂ ದೇಶದಲ್ಲಿ ಗಾಂಧಿಯಂತೆ ಸರಳ ಜೀವನವನ್ನು ಬದುಕುವ ಮಹನೀಯರು ದೊಡ್ಡಮಟ್ಟದಲ್ಲೇ ಇದ್ದಾರೆ. ಗಾಂಧಿಯಂತೆ ಸರಳ ಜೀವನ ನಮಗೆ ಮಾದರಿಯಾಗಬೇಕು. ಆದರೆ, ಪೂರ್ಣಪ್ರಮಾಣದಲ್ಲಿ ಗಾಂಧಿಯಂತೆ ಸರಳ ಬದುಕನ್ನು ಅನುಸರಿಸಲು ಯಾರಿಗೂ ಸಾಧ್ಯವಿಲ್ಲವೇನೋ! ಆದರೆ, ದೈನಂದಿನ ಬದುಕಿನ ಅಗತ್ಯಗಳಾದ ಆಹಾರ-ವಿಹಾರಗಳಲ್ಲಿ ಮಿತವ್ಯಯ, ಕಡಿಮೆ ಖರ್ಚಿನ ಜೀವನ ನಿರ್ವಹಣೆ, ಅನಗತ್ಯದ ದುಂದುವೆಚ್ಚದಲ್ಲಿ ಕಡಿವಾಣ, ಶುಚಿತ್ವ, ಪರಿಸರ ನೈರ್ಮಲ್ಯಕ್ಕೆ ಒತ್ತು, ಶ್ರಮ ಸಂಸ್ಕೃತಿ ಮತ್ತು ಗೌರವ, ನಿತ್ಯಬದುಕಿನ ಬದ್ಧತೆಗಳು, ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆ, ಸತ್ಯಸಂಧತೆ, ಪ್ರಾಮಾಣಿಕತೆ, ಉದ್ಯೋಗದಲ್ಲಿ, ಅಭಿವ್ಯಕ್ತಿಯಲ್ಲಿ ಪಾರದರ್ಶಕತೆಯನ್ನು ರೂಢಿಸಿಕೊಳ್ಳಲು ಸಾಧ್ಯವಿದೆ. ಯಂತ್ರನಾಗರಿಕತೆಗೆ ಸಂಪೂರ್ಣವಾಗಿ ಮಾರಿಕೊಳ್ಳದೆ ಬದುಕಬಹುದು. ಅದಕ್ಕೆ ಹೊರತಾಗಿಯೂ ಬದುಕನ್ನು ಸಾಗಿಸಬಹುದು. ತ್ಯಾಗವೊಂದು ಸಾತ್ವಿಕ ಆನಂದ. ಬಲವಂತದಿಂದ ನಡೆಸಿದ ತ್ಯಾಗ ಸ್ಥಾಯೀ ಅಲ್ಲ. ತ್ಯಾಗದ ಅನಂತರ ಪಶ್ಚಾತ್ತಾಪ ಇರಬಾರದು. ತ್ಯಾಗವಿಲ್ಲದೆ ಮನುಷ್ಯನ ಬೆಳವಣಿಗೆಯಾಗದು. ಗಾಂಧಿ ಎಂದಿಗೂ ಆಡಂಬರಪ್ರಿಯರಾಗಿರಲಿಲ್ಲ. ಆಡಂಬರ ಬಡವರ ಶತ್ರು ಎಂದೇ ಗಾಂಧಿ ತಿಳಿದಿದ್ದರು. ಆಡಂಬರದಿಂದ ವ್ಯಕ್ತಿಯ ಬೆಲೆ ಹೆಚ್ಚುತ್ತದೆಂದು ಯಾರಾದರೂ ಹೇಳಿದಾಗ ಗಾಂಧಿ ದೊಡ್ಡದಾಗಿ ನಗುತ್ತಿದ್ದರು. ಬಾಹ್ಯಾಂಡಬರ ವ್ಯಕ್ತಿಯನ್ನು ಮಾರ್ಗ ತಪ್ಪಿಸುತ್ತದೆ. ಅವನ ಚಾರಿತ್ರ್ಯದಲ್ಲಿ ದೋಷವುಂಟಾಗುತ್ತದೆ. ಮಹತ್ವ ಕುಗ್ಗುತ್ತದೆ. ಮನುಷ್ಯ ಅಗತ್ಯಕ್ಕಿಂತ ಹೆಚ್ಚು ವಸ್ತುಗಳನ್ನು ಸಂಗ್ರಹಿಸಿದರೆ ಅದು ಕದ್ದಂತೆ ಎಂದವರು ಗಾಂಧಿ. ಇಡೀ ವಿಶ್ವವೇ ತನ್ನ ಮನೆಯೆಂದು ತಿಳಿದ ಗಾಂಧಿ ವ್ಯರ್ಥಸಂಗ್ರಹಕ್ಕೆ ವಿರೋಧಿಯಾಗಿದ್ದರು. ಆದರೆ, ಪ್ರತಿಯೊಬ್ಬ ಭಾರತೀಯನಿಗೂ ಅವನಿಗೆ ಅಗತ್ಯವಾದ ವಸ್ತು ಸಿಕ್ಕಬೇಕೆಂಬುದು ಗಾಂಧಿಯ ಇಚ್ಛೆಯಾಗಿತ್ತು. ಆ ಇಚ್ಛೆಯಲ್ಲಿ ಸಾಮಾನ್ಯನೂ ಸರಳ ಬದುಕನ್ನು ಸಲೀಸಾಗಿ ಸಾಗಿಸಬೇಕೆಂಬ ಕಾಳಜಿಯಿತ್ತು.

Writer - ಟಿ. ದೇವಿದಾಸ್

contributor

Editor - ಟಿ. ದೇವಿದಾಸ್

contributor

Similar News