ಉಪ ಚುನಾವಣೆ ಮೈತ್ರಿ ಬಗ್ಗೆ ಹೈಕಮಾಂಡ್ ಜೊತೆ ಚರ್ಚಿಸಿ ತೀರ್ಮಾನ: ಸಿದ್ದರಾಮಯ್ಯ
ಬೆಂಗಳೂರು, ಅ. 6: ಮೂರು ಲೋಕಸಭೆ ಮತ್ತು ಎರಡು ಕ್ಷೇತ್ರಗಳ ಉಪ ಚುನಾವಣಾ ಮೈತ್ರಿ ಬಗ್ಗೆ ಹೈಕಮಾಂಡ್ ಜತೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ ಎಂದಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಲ್ಲ ಕ್ಷೇತ್ರಗಳ ಚುನಾವಣೆಯನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ ಎಂದು ಹೇಳಿದ್ದಾರೆ.
ಶನಿವಾರ ಉಪ ಚುನಾವಣೆ ಘೋಷಣೆ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಜಮಖಂಡಿ ವಿಧಾನಸಭಾ ಕ್ಷೇತ್ರ ಮಾತ್ರವಲ್ಲ, ಎಲ್ಲ ಕ್ಷೇತ್ರಗಳ ಉಪಚುನಾವಣೆಯನ್ನ ಗಂಭೀರವಾಗಿ ತೆಗೆದುಕೊಳ್ಳುತ್ತೇವೆ. ಪಕ್ಷದ ಅಭ್ಯರ್ಥಿಗಳ ಬಗ್ಗೆ ಚರ್ಚಿಸಿ ಅಂತಿಮ ನಿರ್ಧಾರ ಮಾಡಲಾಗುವುದು ಎಂದರು.
ಲೋಕಸಭೆಗೆ ಮಾರ್ಚ್‌ನಲ್ಲಿ ಚುನಾವಣೆ ಘೋಷಣೆಯಾಗಲಿದ್ದು, ಮೂರು ಲೋಕಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ಅಗತ್ಯವಿರಲಿಲ್ಲ. ಆದರೆ, ಚುನಾವಣಾ ಆಯೋಗ ಉಪ ಚುನಾವಣೆಗೆ ದಿನಾಂಕ ಘೋಷಣೆ ಮಾಡಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಸಚಿವ ಸಂಪುಟ ವಿಸ್ತರಣೆ ತೀರ್ಮಾನ ಮಾಡಿದ್ದೆವು. ಆದರೆ, ಇದೀಗ ಉಪ ಚುನಾವಣೆ ಘೋಷಣೆಯಾಗಿದೆ. ಹೀಗಾಗಿ ಈ ಬಗ್ಗೆಯೂ ಹೈಕಮಾಂಡ್ ಜೊತೆ ಚರ್ಚಿಸಿ ಮುಂದಿನ ತೀರ್ಮಾನ ಮಾಡಲಾಗುವುದು ಎಂದು ಸಿದ್ದರಾಮಯ್ಯ ಇದೇ ವೇಳೆ ತಿಳಿಸಿದರು.