ಡಿಸ್ಲೆಕ್ಸಿಯಾ ನಿರ್ಗಲಿಕೆ

Update: 2018-10-06 14:56 GMT

ಭಾರತದಲ್ಲಿರುವ ಬಹುದೊಡ್ಡ ಸಮಸ್ಯೆ ಎಂದರೆ ಅದು ಮಕ್ಕಳದಲ್ಲ. ಮಕ್ಕಳ ವಿಷಯದಲ್ಲಿ ಹಲವಾರು ಸಹಜವಾದಂತಹ, ನೈಸರ್ಗಿಕವಾದಂತಹ, ಜೈವಿಕವಾಗಿರುವಂತಹ, ಮಾನಸಿಕವಾಗಿರುವಂತಹ ಹಲವಾರು ಸಮಸ್ಯೆಗಳು ಇವೆ ಎಂಬುದೇ ತಿಳಿಯದೇ ಇರುವುದೇ ಸಮಸ್ಯೆ. ಹಲವಾರು ಮಕ್ಕಳು ಹೊರನೋಟಕ್ಕೆ ಸರಿಯಾಗಿ ಕಾಣಿಸುತ್ತಾರೆ. ಎಲ್ಲಾ ಮಕ್ಕಳಂತೆಯೇ ಅವರೂ ಸಹಜವಾಗಿ ತಿನ್ನುವುದು, ನಿದ್ರೆ, ಆಟೋಟಗಳಲ್ಲಿ ಸರಿಯಾಗಿಯೇ ಇರುತ್ತಾರೆ. ಆದರೆ, ಕೆಲವು ಸಮಸ್ಯೆಗಳು ನಿರ್ದಿಷ್ಟವಾಗಿ ಕೆಲವು ವಿಷಯಗಳಲ್ಲಿರುತ್ತವೆ. ಆ ನಿರ್ದಿಷ್ಟ ಸಮಸ್ಯೆಯನ್ನು ಕಂಡುಕೊಂಡು ಸರ್ಜಿಕಲ್ ಸ್ಟ್ರೈಕ್ ಮಾಡಬೇಕಾಗಿರುವುದು ಅಗತ್ಯ.

ಕಲಿಕಾ ನ್ಯೂನತೆಗಳು

ಭಾಗ 10

ಎಷ್ಟು ಹೇಳಿಕೊಟ್ಟರೂ...

ಶಾಲೆಯಲ್ಲಿ ಶಿಕ್ಷಕರು, ಮನೆಯಲ್ಲಿ ಪೋಷಕರು ಕೆಲವು ಮಕ್ಕಳನ್ನು ದೂರುತ್ತಿರುತ್ತಾರೆ ‘‘ಎಷ್ಟು ಹೇಳಿಕೊಟ್ಟರೂ ಕಲಿಯುವುದಿಲ್ಲ. ಏನು ಮಾಡಿದರೂ ತಲೆಗೆ ಹೋಗುವುದಿಲ್ಲ’’ ಎಂದು. ಇಂಥ ಸಮಯದಲ್ಲಿ ಕೆಲವು ವಿಷಯಗಳನ್ನು ಗಮನಿಸಬೇಕು.

1.ಮಗುವಿಗೆ ವಿಷಯವು ಆಸಕ್ತಿಯನ್ನೋ ಅಥವಾ ಕುತೂಹಲವನ್ನೋ ಹುಟ್ಟಿಸುತ್ತಿಲ್ಲ.

2.ಕಲಿಸುವ ವಿಧಾನದಲ್ಲಿ ತಪ್ಪಿರುವ ಸಾಧ್ಯತೆಗಳಿರುತ್ತವೆ.

3.ಮಗುವಿನ ವಯಸ್ಸಿಗೆ, ಅಂದರೆ ಅದರ ಮೆದುಳಿನ ಅಥವಾ ಗ್ರಹಿಕೆಯ ಸಾಮರ್ಥ್ಯಕ್ಕೆ ಮೀರಿರುವ ವಿಷಯ ಅದಾಗಿರುವ ಸಾಧ್ಯತೆ.

4.ಕೌಟುಂಬಿಕ ಮತ್ತು ಶಾಲೆಯ ಸಾಂಸ್ಥಿಕ ಪರಿಸರವೇ ಮಗುವಿನ ಕಲಿಕೆಗೆ ಪೂರಕವಾಗಿಲ್ಲದಿರಬಹುದು.

5.ಮಗುವಿಗೆ ಕಲಿಸುವವರ ಬಗ್ಗೆ ನಕಾರಾತ್ಮಕವಾದ ಭಾವನೆ ಇರಬಹುದು. ಹೀಗೆ ಪಟ್ಟಿ ಮಾಡುತ್ತಾ ಹೋದರೆ ಮಗುವು ಕಲಿಯದೇ ಇರುವುದಕ್ಕೆ ಎಷ್ಟೆಷ್ಟೋ ಕಾರಣಗಳಿರುತ್ತವೆ. ಆದರೆ ಯಾವುದೇ ಕಾರಣವಿದ್ದರೂ ಅದಕ್ಕೆ ಮಗುವಂತೂ ಕಾರಣವಲ್ಲ. ಎಂಬುದು ಸುಸ್ಪಷ್ಟ. ಮಗುವು ರೂಪುಗೊಳ್ಳುವ ಕೌಟುಂಬಿಕ ಪರಿಸರ ಅಥವಾ ಶಾಲೆಯ ಶಿಕ್ಷಣ ವ್ಯವಸ್ಥೆಯೇ ಅದರ ಜವಾಬ್ದಾರಿಯನ್ನು ಹೊತ್ತುಕೊಳ್ಳಬೇಕಾಗುತ್ತದೆ. ತಾವು ತಪ್ಪಿತಸ್ಥರು ಎಂಬುದನ್ನು ಒಪ್ಪಿಕೊಳ್ಳಲಾಗದೇ ಪೋಷಕರು ಶಾಲೆಯನ್ನು ದೂರುತ್ತಾರೆ. ಶಾಲೆ ಕೌಟುಂಬಿಕ ಪರಿಸರವನ್ನು ದೂರುತ್ತದೆ. ಪರಸ್ಪರ ಕೆಸರೆರಚಾಟದಲ್ಲಿ ಇಬ್ಬರೂ ತಮ್ಮ ತಪ್ಪುಗಳನ್ನು ಒಪ್ಪಿಕೊಳ್ಳುವುದಿಲ್ಲ. ಒಪ್ಪಿಕೊಳ್ಳದೇ ಹೋದ ಪಕ್ಷದಲ್ಲಿ ತಿದ್ದುಕೊಳ್ಳುವ ಮಾತೇ ಬರುವುದಿಲ್ಲ. ಅದೊಂದು ಕಡೆ ಇರಲಿ, ಶಿಕ್ಷಕರಾಗಲಿ, ಪೋಷಕರಾಗಲಿ ಮಗುವನ್ನು ಸೋಮಾರಿ ಎಂದೋ, ಚುರುಕಿಲ್ಲವೆಂದೋ, ಕಲಿಕೆಯಲ್ಲಿ ಆಸಕ್ತಿಯೇ ಇಲ್ಲವೆಂದೋ, ಬೇರೆಕಡೆಯೇ ಗಮನ ಎಂದೋ ಏನೇ ದೂರಿದರೂ ಅವುಗಳೆಲ್ಲವನ್ನೂ ನ್ಯೂನತೆಯೆಂದೇ ತಿಳಿಯೋಣ. ಆ ನ್ಯೂನತೆಯನ್ನು ಬಗೆಹರಿಸುವ ಬಗೆಯನ್ನು ಕಂಡುಕೊಳ್ಳೋಣ. ಯಾವುದೇ ಆರೋಗ್ಯ ಸಮಸ್ಯೆ ಅಥವಾ ನ್ಯೂನತೆಯನ್ನು ಹೊಂದಿರುವ ರೋಗಿಯನ್ನು ದೂಷಿಸುವುದು ವೈದ್ಯನ ಕೆಲಸವಲ್ಲ. ರೋಗವನ್ನು ಗುಣಪಡಿಸುವುದಷ್ಟೇ ಅವನ ಜವಾಬ್ದಾರಿಯಾಗಿರುತ್ತದೆ. ಹಲವಾರು ಕಲಿಕೆಯ ನ್ಯೂನತೆಗಳಲ್ಲಿ ಬಹಳ ಮುಖ್ಯವಾದುದು ಡಿಸ್ಲೆಕ್ಸಿಯಾ ಅಥವಾ ನಿರ್ಗಲಿಕೆ.

ಮೊದಲು ಡಿಸ್ಲೆಕ್ಸಿಯಾ ಅಥವಾ ನಿರ್ಗಲಿಕೆಯೆಂದರೇನೆಂದು ತಿಳಿದುಕೊಳ್ಳೋಣ.

ಕಲಿಯಲಾಗದ ಸಮಸ್ಯೆ

ಕೌಟುಂಬಿಕ ಪರಿಸರ, ಶಾಲೆಯ ಶಿಕ್ಷಣ ಪದ್ಧತಿ ಇವುಗಳೆಲ್ಲದರಿಂದ ಹೊರತಾಗಿ ಕೆಲವು ಮಕ್ಕಳಿಗೆ ಎಷ್ಟು ಹೇಳಿಕೊಟ್ಟರೂ, ಏನು ಹೇಳಿಕೊಟ್ಟರೂ ಕಲಿಯಲಾಗದು. ಅದಕ್ಕೆ ಕಾರಣವೇ ಡಿಸ್ಲೆಕ್ಸಿಯಾ ಅಥವಾ ನಿರ್ಗಲಿಕೆ. ಅದು ಮಗುವಿನ ಮೆದುಳಿನ ಮತ್ತು ನರಗಳ ಸಮಸ್ಯೆ. ಹತ್ತರಲ್ಲಿ ಒಂದು ಅಥವಾ ಎರಡು ಮಕ್ಕಳಿಗೆ ಈ ಸಮಸ್ಯೆ ಇರುತ್ತದೆ. ಇದು ಎಲ್ಲಾ ದೇಶದ, ಎಲ್ಲಾ ಸಂಸ್ಕೃತಿಯ, ಎಲ್ಲಾ ಧರ್ಮದ, ಎಲ್ಲಾ ವರ್ಗದ ಮತ್ತು ಎಲ್ಲಾ ಭಾಷಿಗರ ಮಕ್ಕಳಲ್ಲಿ ನಿಷ್ಪಕ್ಷಪಾತವಾಗಿ ಇರುತ್ತದೆ. ಕೆಲವು ಮಕ್ಕಳಲ್ಲಿ ಇದು ಅನುವಂಶೀಯವಾಗಿರುತ್ತದೆ. ಇದಕ್ಕೆ ನಿರ್ದಿಷ್ಟವಾಗಿ ಪರಿಹಾರ ಅಥವಾ ಚಿಕಿತ್ಸೆ ಅಂತೇನೂ ಇಲ್ಲ. ಆದರೆ ಅದನ್ನು ಮೀರಿ ಕಲಿಯುವುದಕ್ಕೆ ಅನೇಕ ಪ್ರಯೋಗಗಳಿವೆ ಮತ್ತು ಕಲಿಕಾ ಪದ್ಧತಿಗಳಿವೆ. ಒಟ್ಟಾರೆ ಇಷ್ಟು ಅರ್ಥ ಮಾಡಿಕೊಂಡರೆ ಸಾಕು. ಡಿಸ್ಲೆಕ್ಸಿಯಾ ಅಂದರೆ ಕಲಿಕೆಯು ಸರಾಗವಾಗಿರದೇ ಮೆದುಳಿನ ಅಥವಾ ನರಗಳ ಸಮಸ್ಯೆ ಕಾರಣವಾಗಿರುತ್ತದೆ. ಒಂದು ಮಗುವಿನಿಂದ ಮತ್ತೊಂದು ಮಗುವಿಗೆ ಇದು ಭಿನ್ನವಾಗಿರುತ್ತದೆ. ಇದು ಬರೀ ಓದುವ ಮತ್ತು ಬರೆಯುವ ಸಮಸ್ಯೆಗೆ ಸಂಬಂಧಿಸಿದ್ದಲ್ಲ. ಹಾಗೆಯೇ ಡಿಸ್ಲೆಕ್ಸಿಯಾ ಅಥವಾ ನಿರ್ಗಲಿಕೆ ಇರುವಂತಹ ಮಗುವಿನ ಬುದ್ಧಿಮತ್ತೆಯು ಕಡಿಮೆ ಇರುವುದೆಂದೂ ಅಲ್ಲ. ಪ್ರತಿಭಾಶೂನ್ಯರಲ್ಲ. ಅದಕ್ಕೆ ದಡ್ಡತನವೋ, ಮಂದಬುದ್ಧಿಯೋ ಇರುವುದು ಎಂತಲೂ ಅಲ್ಲ. ಇದು ಎಲ್ಲಾ ಮಗುವಿನ ರೀತಿಯಲ್ಲಿಯೇ ಇರುವುದು ಹಾಗೂ ಹಾಗೆಯೇ ಇದನ್ನು ಉಪಚರಿಸಬೇಕು. ಆದರೆ ಅದಕ್ಕೆ ಕಲಿಸಿಕೊಡುವ ವಿಧಾನದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕು. ಅದರ ಕಲಿಕೆಯ ಪ್ರಯೋಗಗಳ ಕಡೆಗೆ ಗಮನ ಕೊಡಬೇಕು. ಆದರೆ ನಿರ್ಗಲಿಕೆಯನ್ನು ಗುರುತಿಸದೇ ಹೋದ ಪಕ್ಷದಲ್ಲಿ ಮುಂದೆ ಅದರಿಂದ ಮಗುವು ಕೀಳರಿಮೆಗೆ ಜಾರಬಹುದು. ಶಿಕ್ಷಕರು ಮತ್ತು ಪೋಷಕರಿಂದ ಒತ್ತಡಗಳು ಹೆಚ್ಚಿ, ನಿರೀಕ್ಷೆಗಳನ್ನು ಮುಟ್ಟದೇ ಇರುವ ಕಾರಣದಿಂದ ಖಿನ್ನತೆಗೆ ಒಳಗಾಗಬಹುದು. ಮಗುವಿನ ವರ್ತನೆಗಳಲ್ಲಿಯೇ ಸಮಸ್ಯೆಗಳು ತಲೆದೋರಬಹುದು. ಮಕ್ಕಳು ಸಾಧಿಸಬೇಕಾಗಿರುವುದನ್ನು ಸಾಧಿಸದೇ ಮಂಕಾಗಬಹುದು. ಆತ್ಮವಿಶ್ವಾಸ ಕಳೆದುಕೊಳ್ಳಬಹುದು. ಆದರೆ ಮಗುವಿಗೆ ನೀಡುವ ಸರಿಯಾದ ಬೆಂಬಲ ಮತ್ತು ಸಹಕಾರದಿಂದ ನಿರ್ಗಲಿಕೆ ಇರುವಂತಹ ಮಕ್ಕಳು ಉನ್ನತ ವಿದ್ಯಾಭ್ಯಾಸಗಳನ್ನೂ ಕೂಡ ಮಾಡಬಹುದು. ಸಾಧಿಸಬಹುದು. ಅವರ ಪ್ರತಿಭೆ ಮತ್ತು ಸಾಮರ್ಥ್ಯಗಳನ್ನು ಸಮರ್ಪಕವಾಗಿ ಮತ್ತು ಸಾರ್ಥಕವಾಗುವಂತೆ ಬಳಸಿಕೊಳ್ಳಬಹುದು. ಆದರೆ ಮಗುವು ಕಲಿಕೆಯಲ್ಲಿ ಹಿಂದುಳಿದಿದೆ ಎಂದರೆ ಪ್ರಾರಂಭದಲ್ಲಿ ಇದನ್ನು ಗುರುತಿಸಬೇಕು. ಗುರುತಿಸಿದ ನಂತರ ಅವರ ಸಮಸ್ಯೆಯ ಸವಾಲನ್ನು ಎದುರಿಸುವಂತಹ ಪ್ರಯೋಗಗಳನ್ನು ಕಂಡುಕೊಳ್ಳಬೇಕು. ಶಾಲೆಯಲ್ಲಾಗಲಿ ಅಥವಾ ಮನೆಯಲ್ಲಾಗಲಿ, ಮಗುವು ದೀರ್ಘಕಾಲ ಕಲಿಕೆಯಲ್ಲಿ ಮುಂದುವರಿದಿಲ್ಲವೆಂದರೆ ಗಂಭೀರವಾಗಿ ಮಕ್ಕಳ ಗ್ರಹಿಕೆಗೆ ಸಂಬಂಧಪಟ್ಟಂತೆ ಕೆಲವು ಪರೀಕ್ಷೆಗಳನ್ನು ಮಾಡಿ, ವಿವಿಧ ವಿಷಯಗಳ ಬಗ್ಗೆ ಮಗುವಿನ ಗ್ರಹಿಕೆಯ ಸಾಮರ್ಥ್ಯಗಳನ್ನು ಗುರುತಿಸುವಂತಹ ಪರೀಕ್ಷೆಗಳನ್ನು ಮಾಡಿ ಮಗುವಿಗೆ ನಿರ್ಗಲಿಕೆ ಇದೆ ಎಂಬುದನ್ನು ಗುರುತಿಸಿಕೊಳ್ಳಬೇಕು. ಇಂತಹ ಪರೀಕ್ಷೆಗಳಿಂದ ಮಗುವಿನ ದೌರ್ಬಲ್ಯ ಮತ್ತು ಸಾಮರ್ಥ್ಯಗಳು ತಿಳುವಳಿಕೆಗೆ ಬರುತ್ತವೆ. ನಂತರ ಸಕಾರಾತ್ಮಕವಾಗಿ ಅವರಿಗೆ ಆತ್ಮಸ್ಥೈರ್ಯ ತುಂಬುವಂತಹ ಪ್ರಯೋಗಗಳನ್ನು ಮಾಡಬೇಕು. (ಪರೀಕ್ಷಿಸುವುದು ಹೇಗೆಂದು ಮತ್ತು ಪ್ರಯೋಗಗಳ ಬಗೆಗಳನ್ನು ಮುಂದೆ ತಿಳಿಸಲಾಗುವುದು.)

ನಮ್ಮ ಭಾರತದಲ್ಲಿರುವ ಬಹುದೊಡ್ಡ ಸಮಸ್ಯೆ ಎಂದರೆ ಅದು ಮಕ್ಕಳದಲ್ಲ. ಮಕ್ಕಳ ವಿಷಯದಲ್ಲಿ ಹಲವಾರು ಸಹಜವಾದಂತಹ, ನೈಸರ್ಗಿಕವಾದಂತಹ, ಜೈವಿಕವಾಗಿರುವಂತಹ, ಮಾನಸಿಕವಾಗಿರುವಂತಹ ಹಲವಾರು ಸಮಸ್ಯೆಗಳು ಇವೆ ಎಂಬುದೇ ತಿಳಿಯದೇ ಇರುವುದೇ ಸಮಸ್ಯೆ. ಹಲವಾರು ಮಕ್ಕಳು ಹೊರನೋಟಕ್ಕೆ ಸರಿಯಾಗಿ ಕಾಣಿಸುತ್ತಾರೆ. ಎಲ್ಲಾ ಮಕ್ಕಳಂತೆಯೇ ಅವರೂ ಸಹಜವಾಗಿ ತಿನ್ನುವುದು, ನಿದ್ರೆ, ಆಟೋಟಗಳಲ್ಲಿ ಸರಿಯಾಗಿಯೇ ಇರುತ್ತಾರೆ. ಆದರೆ, ಕೆಲವು ಸಮಸ್ಯೆಗಳು ನಿರ್ದಿಷ್ಟವಾಗಿ ಕೆಲವು ವಿಷಯಗಳಲ್ಲಿರುತ್ತವೆ. ಆ ನಿರ್ದಿಷ್ಟ ಸಮಸ್ಯೆಯನ್ನು ಕಂಡುಕೊಂಡು ಸರ್ಜಿಕಲ್ ಸ್ಟ್ರೈಕ್ ಮಾಡಬೇಕಾಗಿರುವುದು ಅಗತ್ಯ.

ಡಿಸ್ಲೆಕ್ಸಿಯಾ ಬಗ್ಗೆ ಸಂಕ್ಷಿಪ್ತವಾಗಿ ತಿಳಿದುಕೊಳ್ಳಲು ಇಷ್ಟಾದರೂ ಮಾಹಿತಿ ಅಗತ್ಯ. ಒಂದೊಂದು ಮಗುವಿಗೂ ಓದುವ, ಬರೆಯುವ ಮತ್ತು ಯಾವುದನ್ನಾದರೂ ಕಲಿಯುವುದರ ಬಗ್ಗೆ ಭಿನ್ನತೆಗಳಿರುತ್ತವೆ. ಗ್ರಹಿಕೆಯ ಸಾಮರ್ಥ್ಯದಲ್ಲಿ ವ್ಯತ್ಯಾಸವಿರುತ್ತದೆ. ಅದು ಕೆಲವೊಮ್ಮೆ ಮೆದುಳಿನ ಮತ್ತು ನರಗಳ ಸಣ್ಣಪುಟ್ಟ ಏರುಪೇರಿನಿಂದಾಗಿರುತ್ತದೆ.

ನಿರ್ಗಲಿಕೆಯ ಲಕ್ಷಣಗಳೇನು?

ನಿರ್ಗಲಿಕೆಯ ಸಮಸ್ಯೆಗಳೇನು? ಅವರು ಯಾವುದರಲ್ಲಿ ದುರ್ಬಲರಾಗಿರುತ್ತಾರೆ ಎಂಬುದನ್ನು ಗಮನಿಸೋಣ.

1.ಓದುವುದರಲ್ಲಿ, ಬರೆಯುವುದರಲ್ಲಿ, ನೋಟ್ಸ್ ತೆಗೆದುಕೊಳ್ಳುವುದರಲ್ಲಿ, ಅಕ್ಷರಗಳನ್ನು ಗುರುತಿಸುವುದರಲ್ಲಿ, ಸಂಖ್ಯೆಗಳ ವಿಷಯದಲ್ಲಿ ಕಷ್ಟಪಡಬಹುದು. ಅಥವಾ ಆಗದಿರಬಹುದು.

2.ಸಮಯಕ್ಕೆ ಸರಿಯಾಗಿ ಮಾಡದಿರುವುದು, ಪ್ರಾಜೆಕ್ಟ್‌ಗಳನ್ನು ಸರಿಯಾಗಿ ಮಾಡದಿರುವುದು, ಶಿಸ್ತುಬದ್ಧವಾಗಿ, ಕ್ರಮವಾಗಿ ಕೆಲಸಗಳನ್ನು ಮಾಡದಿರಬಹುದು.

3.ವ್ಯಾಕರಣದಲ್ಲಿ, ಕಾಗುಣಿತದಲ್ಲಿ ತಪ್ಪುಗಳಿರುವುದು.

4.ತತ್ಕಾಲದ ನೆನಪಿನ ಶಕ್ತಿ ಇಲ್ಲದಿರುವುದು. ನಿರ್ದಿಷ್ಟವಾಗಿ ನೀಡಿರುವ ಸಲಹೆ ಸೂಚನೆಗಳನ್ನು ಅನುಸರಿಸಲು ಆಗದಿರುವುದು. ನಿರ್ದೇಶನಗಳು ಅರ್ಥವಾಗದೇ ಇರುವುದು.

5.ಹಾಗೆಯೇ ಈ ಎಲ್ಲಾ ಲಕ್ಷಣಗಳೂ ಇರಬೇಕೆಂದಿಲ್ಲ. ಅಂತೆಯೇ ಇವುಗಳಲ್ಲಿ ಯಾವುದಾದರೂ ಇರಬಹುದು ಅಥವಾ ಎಲ್ಲವೂ ಇರಬಹುದು.

ಹಾಗೆಯೇ ಅವರಲ್ಲಿ ಸಕಾರಾತ್ಮಕ ಅಂಶಗಳೂ ಕೂಡ ಇರುವುದು. ಅವುಗಳೇನೆಂದರೆ,

1.ಸೃಜನಾತ್ಮಕವಾಗಿರುವಾಗಿ ಮತ್ತು ಪ್ರಯೋಗಶೀಲರಾಗಿರುವರು.

2.ಚಿತ್ರಣಗಳಲ್ಲಿ ಆಲೋಚಿಸುವವರು.

3.ಬಲವಾದಂತಹ ದೃಶ್ಯರೂಪದಲ್ಲಿ ವಿಚಾರಗಳನ್ನು ಮಾಡುವರು.

4.ಯೋಜನೆಗಳನ್ನೂ ಕೂಡಾ ಚಿತ್ರಿಸಿಕೊಳ್ಳಲು ಅವರಿಗೆ ಸಾಧ್ಯವಿರುತ್ತದೆ.

5.ಚೆನ್ನಾಗಿ ಮಾತಾಡುತ್ತಾರೆ. ಚಮತ್ಕಾರದ ಮಾತುಗಳನ್ನೂ ಕೂಡಾ ಆಡಬಲ್ಲರು. ಸಾಮಾಜಿಕವಾಗಿ ಬೆರೆಯಬಲ್ಲರು.

6.ಚೌಕಟ್ಟುಗಳಿಂದಾಚೆಗೆ, ಕ್ರಮಗಳಿಂದಾಚೆಗೆ ಆಲೋಚನೆಗಳನ್ನು ಮಾಡಬಲ್ಲರು. ಒಂದು ವಿಷಯವನ್ನು ಬಿಡಿಬಿಡಿಯಾಗಿ ನೋಡುವುದಕ್ಕಿಂತ ಇಡೀಯಾಗಿ ಗ್ರಹಿಸಬಲ್ಲರು. ಇವುಗಳನ್ನು ನೋಡಿದರೆ ನಿಮಗೇ ಅನ್ನಿಸಬಹುದು. ನಿರ್ಗಲಿಕೆಂುಲ್ಲಿ ನಕಾರಾತ್ಮಕವಾಗಿರುವುದಕ್ಕಿಂತ ಸಕಾರಾತ್ಮಕವಾಗಿರುವುದೇ ಬಹಳವಿದೆ ಎಂದು. ಒಂದು ಹಂತಕ್ಕೆ ಅದು ನಿಜವೂ ಕೂಡ. ಆದರೆ, ಅದನ್ನು ಗುರುತಿಸದೇ ಬರೆಯೋಲ್ಲ, ಓದಲ್ಲ, ಅಕ್ಷರ ಬರಲ್ಲ, ಕೂಡಕ್ಕೆ ಕಳೆಯೋಕೆ ಬರಲ್ಲ, ಹೇಳಿದ ಮಾತು ಅರ್ಥ ಮಾಡಿಕೊಳ್ಳಲ್ಲ. ನಿರ್ದೇಶನ ಮತ್ತು ಸೂಚನೆಗಳನ್ನು ಸರಿಯಾಗಿ ಪಾಲಿಸುವುದಿಲ್ಲ. ಶಿಸ್ತಿಲ್ಲ, ಕ್ರಮವಿಲ್ಲ ಎಂದೆಲ್ಲಾ ಮಗುವನ್ನು ಬೈಯುತ್ತಿದ್ದರೆ ಮತ್ತು ಅದನ್ನು ದಂಡಿಸುತ್ತಿದ್ದರೆ ಅದು ಮಗುವಿನ ವ್ಯಕ್ತಿತ್ವದ ಮತ್ತು ಭವಿಷ್ಯದ ನಾಶಕ್ಕೆ ಕಾರಣವಾಗುತ್ತದೆ. ಆದರೆ, ಅವರನ್ನು ಕಲಿಕೆಯ ವಿವಿಧ ಪ್ರಯೋಗಗಳಿಗೆ ಒಳಪಡಿಸಿದರೆ ಅವರು ತಮ್ಮದೇ ಛಾಪು ಮೂಡಿಸುತ್ತಾ ತಮ್ಮದ್ಯಾವುದಾದರೂ ಕ್ಷೇತ್ರದಲ್ಲಿ ಯಶಸ್ವಿಯಾಗುತ್ತಾರೆ.

ನನ್ನ ನಿರ್ಗಲಿಕೆ

ನಾನೂ ಕೂಡ ನನ್ನ ಬಾಲ್ಯದಲ್ಲಿ ಡಿಸ್ಲೆಕ್ಸಿಯಾ ಅಥವಾ ನಿರ್ಗಲಿಕೆಯಿಂದ ಬಳಲುತ್ತಿದ್ದ ವಿದ್ಯಾರ್ಥಿಯೇ ಆಗಿದ್ದೆ. ಪಠ್ಯದ ವಿಷಯದಲ್ಲಿ ಅತ್ಯಂತ ಕಡಿಮೆ ಅಂಕಗಳು, ಕೆಲವೊಮ್ಮೆ ಸೊನ್ನೆಯನ್ನೇ ತೆಗೆದುಕೊಳ್ಳುತ್ತಿದ್ದೆ. ಗಣಿತವೆಂದಿಗೂ ತಲೆಗೆ ಹತ್ತಿರಲೇ ಇಲ್ಲ. ಈಗಲೂ ನಾನು ಸಂಖ್ಯೆಗಳ ವಿಷಯದಲ್ಲಿ ಭಯಂಕರ ಗೊಂದಲಕ್ಕೆ ಒಳಗಾಗುತ್ತೇನೆ. ಹೆಸರುಗಳನ್ನು, ದಿನಾಂಕಗಳನ್ನು ಕ್ರಮವಾಗಿ ನೆನಪಿನಲ್ಲಿಟ್ಟುಕೊಳ್ಳಲಾಗುವುದಿಲ್ಲ. ಅಕಾಡಮಿಕ್ ಶಿಸ್ತು ಮತ್ತು ಕ್ರಮಗಳು ಎಂದಿಗೂ ರೂಢಿಯಾಗಲೇ ಇಲ್ಲ. ಪ್ರೌಢಶಾಲೆಯಲ್ಲಿ ಕನ್ನಡದ ವ್ಯಾಕರಣ ಎಂದಿಗೂ ತಲೆಗೆ ಹತ್ತುತ್ತಿರಲಿಲ್ಲ. ಆದರೆ ಯಾವುದಾದರೊಂದು ವಿಷಯವನ್ನು ಕೊಟ್ಟರೆ ನಿರರ್ಗಳವಾಗಿ ಅನೇಕಾನೇಕ ಉಪಮೆ, ಕೊಂಡಿ, ಪ್ರಸ್ತಾಪಗಳನ್ನು ಕೊಟ್ಟುಕೊಂಡು ಉದ್ದುದ್ದ ಪ್ರಬಂಧಗಳನ್ನು ಬರೆಯುತ್ತಿದ್ದೆ. ಹೇಳಿಕೊಳ್ಳಲು ಸಂಕೋಚವಾದರೂ ಸತ್ಯ, ನಮ್ಮ ಉಪಾಧ್ಯಾಯರಿಗೆ ಹಾಗೆ ಬರೆಯಲು ಅಥವಾ ವಿವರಿಸಲು ಬರುತ್ತಿರಲಿಲ್ಲ. ಅವರೋ ಒಳ್ಳೆಯ ಗುಣಗ್ರಾಹಿಯಾಗಿದ್ದರು. ಅವರು ಅದನ್ನು ಗುರುತಿಸಿ ಎಲ್ಲರಿಗೂ ಹೇಳುತ್ತಿದ್ದರು ‘‘ನನಗೆ ವ್ಯಾಕರಣ ಗೊತ್ತು. ಆದರೆ ಬರೆಯುವ ಕಲೆ ಗೊತ್ತಿಲ್ಲ. ನೀನು ನನಗೆ ಪ್ರೇರಣೆ’’ ಎಂದು. ಹಾಗೆಯೇ ನನ್ನ ಮೊದಲನೆಯ ಕವನ ಸಂಕಲನ ‘ಭಗ್ನ ಹೃದಯ’’ ಹತ್ತನೆಯ ತರಗತಿಯಲ್ಲಿದ್ದಾಗಲೇ ಬಿಡುಗಡೆಯಾಯಿತು. ಆಗವರು ಹೀಗೆ ಹೇಳಿದ್ದರು, ‘‘ಗಣಿತ, ವಿಜ್ಞ್ಞಾನ, ವ್ಯಾಕರಣ ಎಲ್ಲಾ ಹುಡುಗರು ಚೆನ್ನಾಗಿ ಕಲಿಯುವಾಗ ಇವನು ಕಲಿಯಲಾಗದವನಾಗಿದ್ದನು. ಹಾಗೆಯೇ ಆ ಹುಡುಗರೆಲ್ಲಾ ಏನೋ ಒಂದು ಒಳ್ಳೆಯ ಕೆಲಸ ಕಾರ್ಯ ನೋಡಿಕೊಳ್ಳುವವರಾಗಿ ಬದುಕು ಕಟ್ಟಿಕೊಳ್ಳುತ್ತಾರೆ. ಆದರೆ, ಇವನು ಅವರಂತೆ ಹೊಟ್ಟೆಬಟ್ಟೆಗೆ ದಾರಿ ಮಾಡಿಕೊಳ್ಳುವವನು ಆಗುತ್ತಾನೋ ಇಲ್ಲವೋ. ಆದರೆ ಅವರೆಲ್ಲರಿಗಿಂತ ಭಿನ್ನವಾಗಿ ಬೆಳೆಯುತ್ತಾನೆ’’ ಎಂದಿದ್ದರು. ನನಗೇನೂ ಡಿಸ್ಲೆಕ್ಸಿಯಾ ಇದ್ದ ಹುಡುಗ ನಾನೆಂದು ಈಗಲೂ ಬೇಸರವೇನೂ ಇಲ್ಲ. ನನ್ನ ಜೊತೆಗೆ ಬೇಕಾದಷ್ಟು ಸಾಧಕರು ಪ್ರೇರಕರಾಗಿದ್ದಾರೆ. ಹಾಲಿವುಡ್‌ನ ನಿರ್ದೇಶಕ ಸ್ಟೀವನ್ ಸ್ಪೀಲ್ಬರ್ಗ್, ಬಾಕ್ಸರ್ ಮುಹಮ್ಮದ್ ಅಲಿ, ಹಾಲಿವುಡ್ ನಟ ಟಾಂ ಕ್ರೂಸ್, ಚಿತ್ರಕಾರ ಲಿನಾರ್ಡೋ ಡಾ ವಿಂಚಿ, ಕಾರ್ಟೂನ್ ಜಾದೂಗಾರ ವಾಲ್ಟ್ ಡಿಸ್ನಿ, ನಟ ಜಿಮ್ ಕ್ಯಾರಿ, ವಿಜ್ಞಾನಿ ಆಲ್ಬರ್ಟ್ ಐನ್‌ಸ್ಟೀನ್, ಅಮೆರಿಕದ ಮಾಜಿ ಅಧ್ಯಕ್ಷರಾದ ಜಾನ್ ಎಫ್ ಕೆನಡಿ, ಜಾರ್ಜ್ ವಾಷಿಂಗ್ಟನ್, ಜಾರ್ಜ್ ಬುಶ್, ನಮ್ಮ ದೇಶದ ನಟರಾದ ಹೃತಿಕ್ ರೋಶನ್, ಅಭಿಷೇಕ್ ಬಚ್ಚನ್ ಹೀಗೆ ಪಟ್ಟಿ ಬಹುದೊಡ್ಡದಿವೆ. ಹಾಗಾಗಿ ಡಿಸ್ಲೆಕ್ಸಿಯಾ ಇರುವ ಮಕ್ಕಳನ್ನು ಗುರುತಿಸೋಣ ಮತ್ತು ಅವರ ಸಾಮರ್ಥ್ಯ ಮತ್ತು ಪ್ರತಿಭೆಯನ್ನು ಬೆಳಕಿಗೆ ತರುವ ಪ್ರಯೋಗಶೀಲತೆಯನ್ನು ಕಂಡುಕೊಳ್ಳೋಣ. ಅವರನ್ನು ಗುರುತಿಸುವ ಮತ್ತು ಭಿನ್ನ ಪ್ರಯೋಗಗಳ ಬಗ್ಗೆ ಮುಂದೆ ತಿಳಿಯೋಣ.

Writer - ಯೋಗೇಶ್ ಮಾಸ್ಟರ್

contributor

Editor - ಯೋಗೇಶ್ ಮಾಸ್ಟರ್

contributor

Similar News