×
Ad

ಹಮೀದ್ ಶಾ ದರ್ಗಾ ಆವರಣದಲ್ಲಿ ಸಮುದಾಯ ಭವನಕ್ಕೆ 2 ಕೋಟಿ ಅನುದಾನ: ಸಿದ್ದರಾಮಯ್ಯ

Update: 2018-10-06 20:20 IST

ಬೆಂಗಳೂರು, ಅ.6: ಹಝ್ರತ್ ಹಮೀದ್ ಶಾ ಹಾಗೂ ಹಝ್ರತ್ ಮುಹೀಬ್ ದರ್ಗಾ ಆವರಣದಲ್ಲಿ ನೂತನವಾಗಿ ನಿರ್ಮಿಸಲು ಉದ್ದೇಶಿಸಿರುವ ಸಮುದಾಯ ಭವನಕ್ಕೆ ಎರಡು ಕೋಟಿ ರೂ.ಗಳ ಅನುದಾನ ಕೊಡಿಸುವುದಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.

ಶನಿವಾರ ನಗರದ ಕಬ್ಬನ್‌ಪೇಟೆ ಮುಖ್ಯರಸ್ತೆಯಲ್ಲಿರುವ ಹಝ್ರತ್ ಹಮೀದ್ ಶಾ ಹಾಗೂ ಹಝ್ರತ್ ಮುಹೀಬ್ ಶಾ ದರ್ಗಾ ಆವರಣದಲ್ಲಿ ಉದ್ಯಮಿ ಝಿಯಾಉಲ್ಲಾ ಶರೀಫ್ ನಾಲ್ಕು ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಿಕೊಟ್ಟಿರುವ ಎಚ್‌ಎಚ್‌ಎಸ್ ಹಾಗೂ ಎಚ್‌ಎಂಎಸ್ ಮುಸ್ಲಿಮ್ ಬಾಲಕಿಯರ ವಸತಿ ನಿಲಯವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಮುದಾಯ ಭವನಕ್ಕೆ ಎರಡು ಕೋಟಿ ರೂ.ಗಳನ್ನು ಒದಗಿಸುವಂತೆ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಝಮೀರ್‌ಅಹ್ಮದ್‌ಗೆ ಶಿಫಾರಸ್ಸು ಮಾಡಿದ್ದೇನೆ. ಅವರು ಅನುದಾನ ಒದಗಿಸುವುದಾಗಿ ಒಪ್ಪಿಗೆ ನೀಡಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.

ಎರಡು ವರ್ಷಗಳ ಹಿಂದೆ ನಾನು ಈ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿದ್ದೆ. ಇಂದು ಆ ಕಟ್ಟಡವನ್ನು ಉದ್ಘಾಟನೆ ಮಾಡಲು ನನಗೆ ಅವಕಾಶ ಸಿಕ್ಕಿದೆ. ಹೆಣ್ಣುಮಕ್ಕಳ ವಸತಿ ನಿಲಯ, ಐಟಿಐ ಕಟ್ಟಡ, ನಗರ ಆರೋಗ್ಯ ಕೇಂದ್ರ ಇಂದೇ ಲೋಕಾರ್ಪಣೆಗೊಳ್ಳುತ್ತಿರುವುದು ಸಂತಸ ತಂದಿದೆ ಎಂದು ಅವರು ಹೇಳಿದರು.

ಹೆಣ್ಣುಮಕ್ಕಳಿಗೆ ಉಚಿತ ಊಟ ಮತ್ತು ವಸತಿ ಸೌಲಭ್ಯ ಕಲ್ಪಿಸಲಾಗುತ್ತದೆ. ಅಲ್ಪಸಂಖ್ಯಾತರು ಶಿಕ್ಷಣದಲ್ಲಿ ಹಿಂದೆ ಇದ್ದಾರೆ. ಹೆಣ್ಣು ಮಕ್ಕಳಲ್ಲಿನ ಶಿಕ್ಷಣ ಪ್ರಮಾಣ ಇನ್ನೂ ಕಡಿಮೆ. ಯಾವುದೇ ಧರ್ಮ, ಜಾತಿಯ ಹೆಣ್ಣುಮಕ್ಕಳು ಇರಲಿ ಶೇ.100ರಷ್ಟು ಶಿಕ್ಷಣ ಪಡೆಯಲೇಬೇಕು ಎಂದು ಸಿದ್ದರಾಮಯ್ಯ ತಿಳಿಸಿದರು.

ಸಮಾಜದಲ್ಲಿ ಸ್ವಾಭಿಮಾನ, ಗೌರವದಿಂದ ಬದುಕುವಂತಹ ವ್ಯವಸ್ಥೆ ನಿರ್ಮಾಣವಾಗಬೇಕಾದರೆ, ಜ್ಞಾನ, ತಿಳುವಳಿಕೆ ಬರಬೇಕಾದರೆ ಶಿಕ್ಷಣ ಇರಲೇಬೇಕು. ಎಲ್ಲಿ ಶಿಕ್ಷಣ ಇರುವುದಿಲ್ಲ ಅಲ್ಲಿ ಮೌಢ್ಯಗಳು, ಕಂದಾಚಾರಗಳು ಮನೆ ಮಾಡುತ್ತವೆ. ಅವರ ಬದುಕು ಕತ್ತಲೆಯಿಂದ ಕೂಡುತ್ತದೆ. ಸ್ವಾಭಿಮಾನಿಗಳಾಗಲು ಸಾಧ್ಯವಾಗುವುದಿಲ್ಲ. ಎಲ್ಲಿ ಸ್ವಾಭಿಮಾನ ಇರುವುದಿಲ್ಲ, ಅಲ್ಲಿ ದಾಸ್ಯ ಮನೆ ಮಾಡುತ್ತದೆ ಎಂದು ಅವರು ಹೇಳಿದರು.

ನಾನು ಮುಖ್ಯಮಂತ್ರಿಯಾಗಿದ್ದಾಗ ಈ ಕಟ್ಟಡಕ್ಕೆ ಒಂದು ಕೋಟಿ ರೂ., ದಾರುಲ್ ಉಲೂಮ್ ಸಬೀಲುರ್ರಶಾದ್(ಅರೇಬಿಕ್ ಕಾಲೇಜು)ಗೆ 10 ಕೋಟಿ ರೂ.ಗಳನ್ನು ನೀಡಿದೆ. ನಾವೆಲ್ಲ ಶಿಕ್ಷಣದಿಂದ ವಂಚಿತರಾದ ಸಮುದಾಯದಿಂದ ಬಂದವರು. ಆದುದರಿಂದ, ಶಿಕ್ಷಣಕ್ಕೆ ನೆರವು ನೀಡುವ ವಿಚಾರದಲ್ಲಿ ಹಿಂದೆ ಮುಂದೆ ನೋಡಬಾರದು ಎಂದು ಅವರು ಹೇಳಿದರು.

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಬಜೆಟ್ 400 ಕೋಟಿ ರೂ.ಇತ್ತು. ಅದನ್ನು 3150 ಕೋಟಿ ರೂ.ಗಳಿಗೆ ಹೆಚ್ಚಳ ಮಾಡಿದೆ. ಮತ್ತೆ ನಾನು ಮುಖ್ಯಮಂತ್ರಿಯಾಗಿ ಬಂದಿದ್ದರೆ ಈ ಅನುದಾನ ಪ್ರಮಾಣವನ್ನು 10 ಸಾವಿರ ಕೋಟಿ ರೂ.ಗಳನ್ನಾಗಿ ಮಾಡುತ್ತಿದ್ದೆ. ರಾಜ್ಯದಲ್ಲಿ ಶೇ.14ರಷ್ಟು ಅಲ್ಪಸಂಖ್ಯಾತರು ಇದ್ದಾರೆ. ದೇಶದ ಸಂಪತ್ತು ಎಲ್ಲರಿಗೂ ಸಮಾನವಾಗಿ ಹಂಚಿಕೆಯಾಗಬೇಕು ಎಂದು ನಾವು ಭಾಷಣ ಮಾಡಿದರೆ ಸಾಲದು, ಅದನ್ನು ಅನುಷ್ಠಾನಕ್ಕೆ ತರುವ ಕೆಲಸ ಮಾಡಬೇಕು ಎಂದು ಅವರು ಹೇಳಿದರು.

ಐಟಿಐ ಕೋರ್ಸುಗಳಿಂದ ಸ್ವಯಂ ಉದ್ಯೋಗ ಸೃಷ್ಟಿ ಮಾಡಿಕೊಳ್ಳಲು ಅನುಕೂಲವಾಗುತ್ತದೆ. ಅಲ್ಪಸಂಖ್ಯಾತರಿಗೆ 135 ವಸತಿ ಶಾಲೆಗಳನ್ನು ನೀಡಿದೆ. ಅಲ್ಪಸಂಖ್ಯಾತರ ಕಾಲನಿಗಳಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ 800 ಕೋಟಿ ರೂ.ಗಳನ್ನು ಒದಗಿಸಿದ್ದೆ. ಇದು ಅಲ್ಪಸಂಖ್ಯಾತರ ಓಲೈಕೆ ಅಲ್ಲ, ಸಾಮಾಜಿಕ ನ್ಯಾಯ. ಎಸ್ಸಿ-ಎಸ್ಟಿಯವರಿಗೆ ಜನಸಂಖ್ಯೆಗೆ ಅನುಗುಣವಾಗಿ ಅನುದಾನ ನೀಡುವ ಕಾನೂನನ್ನೆ ಮಾಡಿದ್ದೇನೆ ಎಂದು ಸಿದ್ದರಾಮಯ್ಯ ತಿಳಿಸಿದರು.

ನಮ್ಮ ಸರಕಾರವಿದ್ದಾಗ ಇಲ್ಲಿ ಡಯಾಲಿಸ್ ಕೇಂದ್ರ ಮಾಡಿಕೊಡಲಾಗಿದೆ. ಬಡವರು ಡಯಾಲಿಸ್‌ಗೆ ಹಣ ಖರ್ಚು ಮಾಡಲು ಸಾಧ್ಯವಿಲ್ಲ. ಆದುದರಿಂದ, ಪ್ರತಿಯೊಂದು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಒಂದು ಡಯಾಲಿಸಿಸ್ ಕೇಂದ್ರ ಆರಂಭಿಸುವಂತೆ ಸೂಚನೆ ನೀಡಲಾಗಿತ್ತು ಎಂದು ಅವರು ಹೇಳಿದರು. ಝಿಯಾಉಲ್ಲಾ ಶರೀಫ್ ಇಂತಹ ಕೆಲಸಗಳಿಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಆರ್ಥಿಕವಾಗಿ ಶಕ್ತಿ ಇರುವವರು ಈ ರೀತಿಯ ಕೆಲಸಗಳಿಗೆ ಮುಂದಾಗಬೇಕು. ಅವರ ಶ್ರೀಮತಿ ಹುಸ್ನಾ ಶರೀಫ್ ಪ್ರತಿ ವರ್ಷ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಒಂದು ಕೋಟಿ ರೂ.ಗಳ ವಿದ್ಯಾರ್ಥಿವೇತನ ನೀಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಮೆಚ್ಚುಗೆ ವ್ಯಕ್ತಪಡಿಸಿದರು.

ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಸಚಿವ ಝಮೀರ್‌ ಅಹ್ಮದ್‌ ಖಾನ್ ನೂತನ ಐಟಿಐ ಕಟ್ಟಡ, ಕೇಂದ್ರದ ಮಾಜಿ ಸಚಿವ ಡಾ.ಕೆ.ರಹ್ಮಾನ್‌ಖಾನ್ ನಗರ ಆರೋಗ್ಯ ಕೇಂದ್ರ ಹಾಗೂ ಔಷಧಾಲಯ(ಫಾರ್ಮಸಿ), ರಾಜ್ಯಸಭಾ ಸದಸ್ಯ ಡಾ.ಸೈಯ್ಯದ್ ನಸೀರ್ ಹುಸೇನ್ ದರ್ಗಾ ಸಮಿತಿಯ ವೆಬ್‌ಸೈಟ್‌ಗೆ ಚಾಲನೆ ನೀಡಿದರು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಉದಯ್ ಬಿ ಗರುಡಾಚಾರ್, ದರ್ಗಾ ಸಮಿತಿಗೆ ತಮ್ಮ ಶಾಸಕರ ಅನದಾನದಿಂದ 25 ಲಕ್ಷ ರೂ. ನೀಡುವುದಾಗಿ ಘೋಷಿಸಿದರು.

ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯರಾದ ನಸೀರ್‌ ಅಹ್ಮದ್, ಅಬ್ದುಲ್ ಜಬ್ಬಾರ್, ರಿಝ್ವಾನ್ ಅರ್ಶದ್, ಹಝ್ರತ್ ಹಮೀದ್ ಶಾ ದರ್ಗಾ ಸಮಿತಿಯ ಅಧ್ಯಕ್ಷ ಜಿ.ಎ.ಬಾವಾ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಕಾರ್ಯದರ್ಶಿ ಮುಹಮ್ಮದ್ ಮೊಹ್ಸಿನ್, ಅಲ್ಪಸಂಖ್ಯಾತರ ನಿರ್ದೇಶನಾಲಯದ ನಿರ್ದೇಶಕ ಅಕ್ರಮ್ ಪಾಷ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ವಿಧಾನಪರಿಷತ್ತಿನ ಸದಸ್ಯರಾಗಿದ್ದ ಮುದೀರ್ ಆಗಾ ಹಾಗೂ ಬಿಬಿಎಂಪಿ ಉಪಮೇಯರ್ ರಮೀಳಾ ಉಮಾಶಂಕರ್ ನಿಧನಕ್ಕೆ ಕಾರ್ಯಕ್ರಮದ ಆರಂಭದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News