‘ಗಾಂಧಿ-ಖಾದಿ’ ಉಳಿಸಿಕೊಳ್ಳಲು ಉಪವಾಸ ಸತ್ಯಾಗ್ರಹ

Update: 2018-10-06 15:00 GMT

ಬೆಂಗಳೂರು, ಅ.6: ರಾಷ್ಟ್ರಪಿತ ಮಹಾತ್ಮ ಗಾಂಧಿ ತತ್ವಗಳು, ಖಾದಿ ಮತ್ತು ದೇಶದ ಏಕತೆ ಉಳಿಸುವ ಆಶಯದಿಂದಾಗಿ ಸ್ವಯಂ ಪ್ರೇರಿತ ಹಮ್ಮಿಕೊಂಡಿದ್ದ ವಿವಿಧ ಕ್ಷೇತ್ರದ ಕಲಾವಿದರು, ಯುವಕರು ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಿದರು.

ಶನಿವಾರ ನಗರದ ರವೀಂದ್ರ ಕಲಾಕ್ಷೇತ್ರ ಆವರಣದ ಸಂಸ ಬಯಲು ರಂಗಮಂದಿರದಲ್ಲಿ ಗ್ರಾಮಸೇವಾ ಸಂಘದ ನೇತೃತ್ವದಲ್ಲಿ ನೂರಾರು ಯುವಕರು, ಕಲಾವಿದರು, ಗುಡಿಕೈಗಾರಿಕೆ ಕಾರ್ಮಿಕರು, ಖಾದಿ ಉತ್ಪನ್ನ ಮಾರಾಟಗಾರರು ಸೇರಿದಂತೆ ಪ್ರಮುಖರು, ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡು, ಸಾಮಾಜಿಕ ಹೋರಾಟಗಳಿಗೆ ಬೆಂಬಲ ವ್ಯಕ್ತಪಡಿಸಿದರು.

ಉಪವಾಸ ಸತ್ಯಾಗ್ರಹದಲ್ಲಿ ಮೌನ, ಘೋಷಣೆಗಳಿಗೆ ಸೀಮಿತವಾಗದೆ, ಜನಪದ ಗೀತೆಗಳು, ವಚನ, ಗಾಂಧಿಯ ಆಶಯ, ಖಾದಿ ಬಟ್ಟೆಗಳ ಮೂಲಕ ಫ್ಯಾಷನ್ ಷೋ, ಗಾಂಧೀಜಿ ಅವರ ಆಶಯಗಳನ್ನು ಧ್ವನಿಸುವ ಹಾಡುಗಳು, ನಾಟಕಗಳು ನಡೆದವು. ಸತ್ಯಾಗ್ರಹ ಸ್ಥಳದಲ್ಲೇ ಖಾದಿ ಬಟ್ಟೆಗಾಗಿ ಹತ್ತಿಯಿಂದ ನೂಲು ತೆಗೆಯುವ ಮೂಲಕ ಖಾದಿ ಉತ್ಪನ್ನಗಳಿಗೆ ತೆರಿಗೆ ವಿಧಿಸಬೇಡಿ ಎಂದು ಮನವಿ ಮಾಡಿದರು.

ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಮಾತನಾಡಿದ ಮಾಜಿ ಸಭಾಪತಿ ಬಿ.ಎಲ್.ಶಂಕರ್, ಪ್ರತಿಯೊಬ್ಬರು ಖಾದಿ ಮತ್ತು ಕೈಮಗ್ಗದಿಂದ ತಯಾರಿಸಿದ ಉಡುಗೆಗಳನ್ನು ಬಳಸುವ ಮೂಲಕ ಮಹಾತ್ಮಗಾಂಧಿ ಅವರ ಕನಸು ನನಸುಗೊಳಿಸಬೇಕು ಎಂದು ಅಭಿಪ್ರಾಯಪಟ್ಟರು.

ಲೇಖಕಿ ದು.ಸರಸ್ಪತಿ ಮಾತನಾಡಿ, ಹೆಣ್ಣುಮಕ್ಕಳ ಮೇಲೆ ಹಿಂಸೆ ಹೆಚ್ಚುತ್ತಿದೆ. ಹಿಂಸೆಯನ್ನು ತಡೆಯಲು ಪ್ರತಿಹಿಂಸೆ ನಡೆಸಬೇಕಾಗಿಲ್ಲ. ಎದುರಾಳಿಯ ಒಳಗಿರುವ ಮಾನವೀಯ ಗುಣ, ತಾಯ್ತನದ ಗುಣವನ್ನು ಎಚ್ಚರಿಸುವುದೇ ನಮಗಿರುವ ದಾರಿ ಎಂದು ನುಡಿದರು.

ಗಾಯಕ ವಾಸು ದೀಕ್ಷಿತ್, ಖಾದಿ ಮತ್ತು ಹತ್ತಿಯ ಉಡುಪುಗಳು ನಮ್ಮ ಸ್ವದೇಶಿ ವಾತಾವರಣಕ್ಕೆ ಪೂರಕವಾಗಿವೆ. ನಾನು ವಿದೇಶಿ ಬ್ರಾಂಡ್‌ನ ಉಡುಪುಗಳನ್ನು ಬಳಸುವುದಿಲ್ಲ. ನನ್ನ ಹಣ ನನ್ನ ದೇಶದ ಕಂಪನಿಗೇ ಸೇರಬೇಕು. ದೇಶದಲ್ಲಿ ಏನಾಗುತ್ತಿದೆ. ನಮ್ಮ ಸುತ್ತಮುತ್ತ ಸಂಭವಿಸುತ್ತಿರುವ ಸಾಮಾಜಿಕ ಸ್ಥಿತ್ಯಂತರಗಳ ಬಗ್ಗೆಯೂ ಯುವಜನರು ಆಸಕ್ತರಾಗಿದ್ದಾರೆ. ಅದಕ್ಕೆ ಈ ಕಾರ್ಯಕ್ರಮವೇ ಸಾಕ್ಷಿ ಎಂದು ಹೇಳಿದರು.

ವಸ್ತ್ರವಿನ್ಯಾಸಕ ಪ್ರಸಾದ್ ಬಿದಪ್ಪ ಅವರಿಂದ ಫ್ಯಾಷನ್ ಐಕಾನ್ ಗಾಂಧಿ ಪ್ರಾತ್ಯಕ್ಷಿಕೆಯಲ್ಲಿ ನೂರಾರು ಯುವಕ-ಯುವತಿಯರು ಪಾಲ್ಗೊಂಡು, ಖಾದಿ ಬಟ್ಟೆಗಳನ್ನು ತೊಟ್ಟು, ಫ್ಯಾಷನ್ ಷೋ ನಡೆಸಿದರು. ರಂಗಾಯಣ ಮೈಸೂರು ನಿರ್ದೇಶಕಿ ಭಾಗೀರಥಿ ಬಾಯಿ ಕದಂ ಅವರಿಂದ ಕಮಲಾದೇವಿ ಚಟ್ಟೋಪಾಧ್ಯಾಯ ನಾಟಕ, ಲೇಖಕಿ ಸರಸ್ವತಿ ಅವರಿಂದ ಎಲ್ಲಿ ಹೋದವೋ, ಎದೆಯ ಗೂಡಿನ ಹಕ್ಕಿಗಳು ಸ್ತ್ರೀಪರ ಏಕವ್ಯಕ್ತಿ ಪ್ರದರ್ಶನ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲರ ಗಮನ ಸೆಳೆದವು.

ಈ ಸಂದರ್ಭದಲ್ಲಿ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ಡಾ.ವೂಡೇ ಪಿ.ಕೃಷ್ಣ, ಮಾಜಿ ಶಾಸಕ ವೈ.ಎಸ್.ವಿ.ದತ್ತ, ರಂಗಕರ್ಮಿ ಪ್ರಸನ್ನ, ಕಲಾವಿದ ನಾಗರಾಜು ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News