ರಾಜ್ಯದಲ್ಲಿ ಗುಂಪು ಹತ್ಯೆ ತಡೆಗೆ ಪೊಲೀಸ್ ಇಲಾಖೆಯಿಂದ ಮುಂಜಾಗ್ರತಾ ಕ್ರಮ

Update: 2018-10-06 15:39 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಅ.6: ರಾಜ್ಯದಲ್ಲಿ ಸಂಭವಿಸಬಹುದಾದ ಗುಂಪು ಹಲ್ಲೆ ಹಾಗೂ ಗುಂಪು ಹತ್ಯೆಗಳನ್ನು ತಡೆಯುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಮುಂಜಾಗ್ರತಾ ಕ್ರಮವನ್ನು ಕೈಗೊಂಡಿದೆ.

ದೇಶದ ಕೆಲವು ಭಾಗಗಳಲ್ಲಿ ಇತ್ತೀಚೆಗೆ ಮಕ್ಕಳ ಕಳ್ಳರೆಂದು ಅಥವಾ ಗೋ ಹಂತಕರೆಂದು ಅನುಮಾನಗೊಂಡು ಅಮಾಯಕರ ಮೇಲೆ ಕೆಲವರಿಂದ ಕಾನೂನು ಬಾಹಿರವಾಗಿ ಗುಂಪು ಹಲ್ಲೆ ನಡೆಸಿರುವುದು ಅಥವಾ ಗುಂಪು ಹತ್ಯೆ ಮಾಡಿರುವ ಪ್ರಕರಣಗಳು ಸಂಭವಿಸಿವೆ. ಈ ರೀತಿ ಅಮಾನುಷ ಅಥವಾ ಬರ್ಬರ ಹತ್ಯೆ ಪ್ರಕರಣಗಳು ಕರ್ನಾಟಕ ರಾಜ್ಯದಲ್ಲಿ ಮರುಕಳಿಸದಂತೆ ರಾಜ್ಯ ಪೊಲೀಸ್ ಇಲಾಖೆ ಹಲವಾರು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ.

ಪ್ರಧಾನವಾಗಿ ಪ್ರತಿ ಜಿಲ್ಲೆಯಲ್ಲಿ ಉನ್ನತ ಪೊಲೀಸ್ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ಮತ್ತು ಅವರಿಗೆ ನೆರವಾಗಲು ಮೇಲ್ದರ್ಜೆಯ ಪೊಲೀಸ್ ಅಧಿಕಾರಿಗಳನ್ನು ಸಹಾಯಕ ನೋಡೆಲ್ ಅಧಿಕಾರಿಗಳಾಗಿ ನೇಮಿಸಲಾಗಿದೆ. ವಿಶೇಷ ಗಸ್ತುದಳ ರಚನೆ ಆ ಮೂಲಕ ದ್ವೇಷಭಾಷಣ, ಪ್ರಚೋದನಕಾರಿ ಹೇಳಿಕೆ ಆಥವಾ ಸುಳ್ಳು ಸುದ್ದಿ ಹರಡುವವರ ಕುರಿತು ಗುಪ್ತ ವರದಿ ಸಂಗ್ರಹಿಸುವುದು ಮತ್ತು ನಿಗಾ ವಹಿಸುವುದು, ಗಲಭೆಗೀಡಾಗಬಹುದಾದ ಸೂಕ್ಷ್ಮ ಪ್ರದೇಶಗಳ ಗುರುತಿಸುವಿಕೆ, ಪ್ರತಿ ತಿಂಗಳುನೋಡೆಲ್ ಅಧಿಕಾರಿಗಳಿಂದ ತಮ್ಮ ಪ್ರದೇಶ ವ್ಯಾಪ್ತಿಯ ಗುಪ್ತದಳದೊಂದಿಗೆ ಸಭೆ ಮತ್ತು ಸೂಕ್ತ ಕ್ರಮಕೈಗೊಳ್ಳಲು ಸೂಚಿಸಲಾಗಿದೆ.

ಪ್ರತಿ 3 ತಿಂಗಳಿಗೊಮ್ಮೆ ರಾಜ್ಯ ಮಟ್ಟದಲ್ಲಿ ನೋಡೆಲ್ ಅಧಿಕಾರಿಗಳು, ಗುಪ್ತದಳ ಹಾಗೂ ಕಾನೂನು ಮತ್ತು ಶಿಸ್ತುಪಾಲನೆ ವಿಭಾಗದ ಉನ್ನತ ಪೊಲೀಸ್ ಅಧಿಕಾರಿಗಳು, ಪೊಲೀಸ್ ಮಹಾ ನಿರ್ದೇಶಕರ ಸಭೆ ನಡೆಸಿ ಸೂಕ್ತಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News