ರಸ್ತೆ ಅಭಿವೃದ್ಧಿ ಕಾಮಗಾರಿ ಪೂರ್ಣಗೊಳಿಸಲು ಆಗ್ರಹಿಸಿ ಪ್ರತಿಭಟನೆ

Update: 2018-10-06 16:42 GMT

ಬೆಂಗಳೂರು, ಅ.6: ಯಲಹಂಕ ದೊಡ್ಡಬಳ್ಳಾಪುರ ಮಾರ್ಗವಾಗಿ ಆಂಧ್ರಪ್ರದೇಶದ ಗಡಿವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿ ಪೂರ್ಣಗೊಳಿಸಬೇಕೆಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ (ಕೆಂಪು ಸೇನೆ) ಪ್ರತಿಭಟನೆ ನಡೆಸಿತು.

ಯಲಹಂಕ ಉಪನಗರದ ಸಂದೀಪ್ ಉನ್ನಿಕೃಷ್ಣನ್ ರಸ್ತೆಯಿಂದ ಯಲಹಂಕದ ಮಿನಿ ವಿಧಾನಸೌಧದವರೆ ಮೆರವಣಿಗೆ ಜಾಥಾ ನಡೆಸಿದ ದಲಿತ ಸಂಘರ್ಷ ಸಮಿತಿ ಸದಸ್ಯರು ಮಿನಿ ವಿಧಾನಸೌದಕ್ಕೆ ಮುತ್ತಿಗೆ ಹಾಕಿ ಬೃಹತ್ ಪ್ರತಿಭಟನೆ ನಡೆಸಿದರು.

ಈ ವೇಳೆ ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ಡಿ.ರಾಜಣ್ಣ ಮಾತನಾಡಿ, ಸರಕಾರ ಈ ಮಾರ್ಗದ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ರಾಮಲಿಂಗಂ ಎಂಬ ಖಾಸಗಿ ಕಂಪನಿಗೆ ಗುತ್ತಿಗೆ ನೀಡಿದೆ. ಆದರೆ, ಆ ಕಂಪನಿಯವರು ಕಾಮಗಾರಿ ವೇಳೆ ಸರಕಾರದ ನಿಯಮಗಳನ್ನು ಗಾಳಿಗೆ ತೂರಿದ್ದಾರೆ. ಹೀಗಾಗಿ, ಕಾಮಗಾರಿ ಪೂರ್ಣಗೊಳ್ಳದೆ ರಸ್ತೆ ಅಪಘಾತಗಳು ಸಂಭವಿಸುತ್ತಿದ್ದು, ವಾಹನ ಸವಾರರು ಅಪಘಾತಕ್ಕೆ ಈಡಾಗುತ್ತಿದ್ದಾರೆ ಎಂದು ದೂರಿದರು.

ರಸ್ತೆ ಕಾಮಗಾರಿ ಪೂರ್ಣಗೊಳಿಸದೆ ಅಕ್ರಮವಾಗಿ ಟೋಲ್ ಸಂಗ್ರಹ ಮಾಡಲಾಗುತ್ತಿದೆ. ಕಾಮಗಾರಿ ಪೂರ್ಣಗೊಳಿಸಿದ ಬಳಿಕ ಟೋಲ್ ಸಂಗ್ರಹ ಮಾಡಬೇಕು. ಜೊತೆಗೆ, ರಸ್ತೆ ಅಕ್ಕ ಪಕ್ಕದ ಗ್ರಾಮಗಳಿಗೆ ಸಂಪರ್ಕ ಕಲ್ಪಿಸಲು ಸ್ಕೈವಾಕ್, ಸರ್ವಿಸ್ ರಸ್ತೆ ನಿರ್ಮಿಸಬೇಕು. ಸ್ಥಳಿಯ ಗ್ರಾಮಸ್ಥರ ವಾಹನಗಳಿಗೆ ಉಚಿತ ಟೋಲ್ ಪಾಸ್ ನೀಡಬೇಕೆಂದು ಆಗ್ರಹಿಸಿದರು.

ರಸ್ತೆ ಅಭಿವೃದ್ಧಿಗಾಗಿ ಭೂಸ್ವಾಧೀನ ಮಾಡಿಕೊಂಡಿರುವ ಜಮೀನಿನ ರೈತರಿಗೆ ಸರಕಾರ ಈ ಕೂಡಲೇ ಪರಿಹಾರ ನೀಡಬೇಕು. ಜೊತೆಗೆ ಅಪೂರ್ಣ ಕಾಮಗಾರಿಯಿಂದ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವವರ ಸಾವಿಗೆ ರಾಮಲಿಂಗಂ ಕಂಪನಿಯ ಗುತ್ತಿಗೆದಾರರೇ ನೇರ ಹೊಣೆ. ಹೀಗಾಗಿ, ಕಂಪನಿ ವಿರುದ್ಧ ಕಾನೂನು ಕ್ರಮ ಕೈಗೊಂಡು, ಮೃತರ ಕುಟುಂಬಗಳಿಗೆ ಪರಿಹಾರ ಒದಗಿಸುವ ಕಾರ್ಯಕ್ಕೆ ಮುಂದಾಗಬೇಕು. ನಮ್ಮ ಬೇಡಿಕೆಗಳನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಅವರು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ದಲಿತ ಸಂಘರ್ಷ ಸಮಿತಿ(ಕೆಂಪುಸೇನೆ)ಯ ರಾಜ್ಯ ಉಪಾಧ್ಯಕ್ಷರಾದ ಜಿ.ಗುರುಸ್ವಾಮಿ, ಸಿ.ಕೆ.ರವೀಂದ್ರನಾಥ್, ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ಬಿ.ಶ್ರೀನಿವಾಸ್, ಖಜಾಂಚಿ ಸುಬ್ಬಣ್ಣ, ರಾಜ್ಯ ಕಾರ್ಯದರ್ಶಿ ಡಿ.ವಿ.ವೀರಭದ್ರೇಗೌಡ ಸೇರಿ ಸಮಿತಿಯ ಸದಸ್ಯರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News