ಬೆಳ್ಳಂದೂರು ಕೆರೆಯಲ್ಲಿ ಮನುಕುಲಕ್ಕೆ ಮಾರಕವಾಗುವ ಬ್ಯಾಕ್ಟೀರಿಯಾ ಸೃಷ್ಟಿ: ಪರಿಸರ ತಜ್ಞ ಯಲ್ಲಪ್ಪ ರೆಡ್ಡಿ
ಬೆಂಗಳೂರು, ಅ.6: ಮನುಕುಲಕ್ಕೆ ಮಾರಕವಾಗುವಂತಹ ಬ್ಯಾಕ್ಟೀರಿಯಾಗಳು ಬೆಳ್ಳಂದೂರು ಕೆರೆಯಲ್ಲಿ ಸೃಷ್ಟಿಯಾಗುತ್ತಿವೆ. ಕ್ಷಣಿಕ ಸುಖಕ್ಕಾಗಿ ನಮ್ಮ ಸುತ್ತಲ ಪರಿಸರವನ್ನು ಸರ್ವನಾಶ ಮಾಡಲು ಹೊರಟಿದ್ದೇವೆ ಎಂದು ಪರಿಸರ ತಜ್ಞ ಎ.ಎನ್.ಯಲ್ಲಪ್ಪ ರೆಡ್ಡಿ ಆತಂಕ ವ್ಯಕ್ತಪಡಿಸಿದರು.
ಶನಿವಾರ ಯಲಹಂಕದ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳ ತಂಡ ’ಚಿಗುರು’ ಏರ್ಪಡಿಸಿದ್ದ ’ನಮ್ಮ ನೆಲ ನಮ್ಮ ಜಲ’ ಶೀರ್ಷಿಕೆಯಡಿಯ ಪರಿಸರ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪರಿಸರದ ಮಾಲಿನ್ಯದಿಂದಾಗಿ ಯಾವ ಔಷಧಕ್ಕೂ ಜಗ್ಗದ ಮಾರಕ ರೋಗಗಳನ್ನು ಹರಡುವ ಬ್ಯಾಕ್ಟೀರಿಯಾಗಳು ನಮ್ಮ ಸುತ್ತ ಮುತ್ತಣ ಕೆರೆಗಳಲ್ಲಿ ಸೃಷ್ಟಿಯಾಗಿವೆ ಎಂದು ತಿಳಿಸಿದರು. ಅವೈಜ್ಞಾನಿಕವಾದ ನಗರೀಕರಣ ಹಾಗೂ ಕೈಗಾರಿಕೀಕರಣದಿಂದಾಗಿ ಕೆರೆಗಳನ್ನು ಮಾಲಿನ್ಯ ಮಾಡುತ್ತಿದ್ದೇವೆ. ನಾವು ಪರಿಸರದ ಬಗ್ಗೆ ಸ್ಪಷ್ಟವಾದ ಹಾಗೂ ಪವಿತ್ರವಾದ ಧೋರಣೆಗಳನ್ನು ಬೆಳೆಸಿಕೊಳ್ಳದಿದ್ದರೆ ಮಾನವ ನಾಶ ಹೊಂದುವುದರಲ್ಲಿ ಯಾವುದೆ ಅನುಮಾನವಿಲ್ಲವೆಂದು ಅವರು ಎಚ್ಚರಿಕೆ ನೀಡಿದರು.
ಪರಿಸರದಲ್ಲಿರುವ ಪ್ರತಿಯೊಂದು ಜೀವಿಯೂ ನಮ್ಮಷ್ಟೇ ಜಾಣತನ, ಬುದ್ಧಿವಂತಿಕೆ ಹಾಗೂ ಚಾಕಚಕ್ಯತೆಗಳನ್ನು ಹೊಂದಿರುತ್ತದೆ ಎಂಬುದನ್ನು ಅರಿಯಬೇಕು. ನಾನು ಅರಣ್ಯಾಧಿಕಾರಿಯಾಗಿದ್ದಾಗ ಕಾಡಿನ ಚಿರತೆಯೊಂದು ಮನೆಯೊಂದರಲ್ಲಿ ಫ್ರಿಡ್ಜ್ ಬಾಗಿಲು ತೆಗೆದು ಅಲ್ಲಿಟ್ಟಿದ್ದ ಕೋಳಿಮಾಂಸವನ್ನು ಸದ್ದಿಲ್ಲದೆ ಕದ್ದು ತಿಂದು ಹೋಗಿದ್ದನ್ನು ನೋಡಿದ್ದೇನೆ. ಜಾಣತನವೆಂಬುದು ಕೇವಲ ಮನುಷ್ಯನಲ್ಲಿ ಮಾತ್ರ ಇರುವುದಿಲ್ಲ. ಹೀಗಾಗಿ ಇತರೆ ಜೀವಿಗಳಂತೆ ನಾವು ಪರಿಸರಕ್ಕೆ ಪೂರಕವಾಗಿ ಜೀವಿಸಬೇಕೆಂದು ಅವರು ಆಶಿಸಿದರು.
ಪರಿಸರ ತಜ್ಞ ಎ.ಎಸ್. ಚಂದ್ರಮೌಳಿ ಮಾತನಾಡಿ, ನಮ್ಮ ಮಾಧ್ಯಮಗಳು ಪರಿಸರ ಸಂರಕ್ಷಣೆಯ ವಿಚಾರದಲ್ಲಿ ವಿಶೇಷ ಕಾಳಜಿ ತೋರಬೇಕು, ಕ್ಷುಲ್ಲಕ ರಾಜಕಾರಣದ ಸಂಗತಿಗಳನ್ನು ಹಾಗೂ ಚಿತ್ರ ನಟ ನಟಿಯರ ಕುಟುಂಬದ ಕಾದಾಟಗಳನ್ನು ಪ್ರಸಾರ ಮಾಡುತ್ತ ವೀಕ್ಷಕರ ಸಮಯ ವ್ಯರ್ಥಮಾಡುವ ಬದಲಿಗೆ ಯುವ ಜನತೆಯಲ್ಲಿ ಪರಿಸರ ಪ್ರಜ್ಞೆ ಹಾಗೂ ಮಾಲಿನ್ಯದ ವಿರುದ್ಧ ಅರಿವು ಮೂಡಿಸುವತ್ತ ಗಮನ ಹರಿಸಬೇಕೆಂದು ಆಶಿಸಿದರು.
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಾಧಿಪತಿ ಪ್ರೊ. ಎನ್.ಆರ್. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಎಚ್.ಸಿ. ನಾಗರಾಜ್, ಚಿಗುರು ತಂಡದ ಶಿಕ್ಷಕ ಸಂಯೋಜಕಿ ಡಾ.ಎನ್. ನಳಿನಿ ಉಪಸ್ಥಿತರಿದ್ದರು.