×
Ad

ಬೆಂಗಳೂರು ನಗರ ಜಿಲ್ಲೆಯಲ್ಲಿ 46 ಎಚ್1 ಎನ್1 ಪ್ರಕರಣಗಳು ವರದಿ: ಅಪರ ಜಿಲ್ಲಾಧಿಕಾರಿ ರೂಪಾ

Update: 2018-10-06 22:17 IST

ಬೆಂಗಳೂರು, ಅ. 6: ಬೆಂಗಳೂರು ನಗರ ಜಿಲ್ಲೆಯಲ್ಲಿ ಸೆಪ್ಟೆಂಬರ್ 29ರಿಂದ ಈವರೆಗೆ 46 ಎಚ್1 ಎನ್1 ಪ್ರಕರಣಗಳು ವರದಿಯಾಗಿದ್ದು, ಯಾವುದೇ ಸಾವು- ನೋವು ಸಂಭವಿಸಿಲ್ಲ ಎಂದು ಅಪರ ಜಿಲ್ಲಾಧಿಕಾರಿ ರೂಪಾ ಇಂದಿಲ್ಲಿ ತಿಳಿಸಿದ್ದಾರೆ.

ಶನಿವಾರ ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ಪ್ರಕರಣಗಳು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಈ ಆಸ್ಪತ್ರೆಗಳಿಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದರು.

ಜಿಲ್ಲಾ ಸರ್ವೇಕ್ಷಣಾಧಿಕಾರಿಗಳು, ಕಚೇರಿಯ ಮೇಲ್ವಿಚಾರಕರು ಮತ್ತು ಕ್ಷೇತ್ರ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತೆಯರ ಐದು ತಂಡಗಳನ್ನು ರಚಿಸಿ ಶಂಕಿತ ಎಚ್1 ಎನ್1 ಪ್ರಕರಣಗಳ ಬಗ್ಗೆ ಜ್ವರ ಸಮೀಕ್ಷೆ ನಡೆಸಿ, ಸಾರ್ವಜನಿಕರಿಗೆ ಈ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾದ ಪ್ರಕರಣಗಳ ಕುರಿತು ದೈನಂದಿನ ವರದಿಯನ್ನು ಪ್ರತಿದಿನ 4 ಗಂಟೆಗೆ ಇ-ಮೇಲ್ ಮೂಲಕ ಜಿಲ್ಲಾ ಸರ್ವೇಕ್ಷಣಾ ಘಟಕಕ್ಕೆ ಮಾಹಿತಿ ನೀಡಲು ಸೂಚಿಸಲಾಗಿದೆ ಎಂದ ಅವರು, ಎಚ್1 ಎನ್1 ಬಗ್ಗೆ ಮುನ್ನೆಚ್ಚರಿಕೆ ಅಗತ್ಯ ಎಂದು ಸೂಚಿಸಿದರು.

ಔಷಧಿಯ ಕೊರತೆ ಇಲ್ಲ: ಎಚ್1 ಎನ್1 ತಡೆಗೆ ಪ್ರತಿಯೊಬ್ಬರು ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು. ಆಗ ಮಾತ್ರ ಈ ರೋಗದಿಂದ ದೂರವಿರಬಹುದು. ಪೌಷ್ಠಿಕಾಂಶವುಳ್ಳ ಆಹಾರ ಸೇವನೆ, ಹಿತವಾದ ನಿದ್ರೆ ಕಡ್ಡಾಯವಾಗಿ ಮಾಡಬೇಕು. ಪ್ರತಿಯೊಂದು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲೂ ಎಚ್1 ಎನ್1ಗೆ ಸಂಬಂಧಿಸಿದ ಔಷಧಿಗಳು ದೊರೆಯುತ್ತಿದ್ದು, ಎಲ್ಲೂ ಔಷಧಿಯ ಕೊರತೆಯಿಲ್ಲ ಎಂದು ವೈದ್ಯೆ ಡಾ.ಸುನಂದಾ ತಿಳಿಸಿದರು.

ಅಕ್ಟೋಬರ್ 22ರಿಂದ ನವೆಂಬರ್ 4ರ ವರೆಗೆ ಕುಷ್ಟರೋಗ ಕುರಿತು ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಸಾರ್ವಜನಿಕರು ಸಹಕರಿಸಬೇಕು. ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು ಎಂದು ವೈದ್ಯ ಡಾ.ನದೀಮ್ ಅಹ್ಮದ್ ಸಲಹೆ ಮಾಡಿದರು. ಗೋಷ್ಠಿಯಲ್ಲಿ ಶ್ರೀನಿವಾಸ, ಡಾ.ಮಹೇಶ, ಡಾ.ಆಶಾ ಸೇರಿ ಜಿಲ್ಲಾ ಆರೋಗ್ಯಾಧಿಕಾರಿಗಳು ಹಾಜರಿದ್ದರು.

‘ಮಹದೇವಪುರ, ಮಾರತಹಳ್ಳಿ, ಕಾಡುಗೋಡಿ ಸೇರಿದಂತೆ ನಗರದ ವಿವಿಧೆಡೆ ಎಚ್1ಎನ್1 ಪ್ರಕರಣಗಳು ಪತ್ತೆಯಾಗಿವೆ. 20 ಡೆಂಗ್ ಪ್ರಕರಣಗಳು, 23 ಚಿಕುನ್ ಗುನ್ಯಾ ಪ್ರಕರಣಗಳು ಹಾಗೂ 46 ಎಚ್1 ಎನ್1 ಪ್ರಕರಣಗಳು ದಾಖಲಾಗಿವೆ. ವಿಶೇಷವಾಗಿ ಕೇರಳಕ್ಕೆ ಹೋಗಿ ಬಂದವರಲ್ಲಿ ಎಚ್1 ಎನ್1 ಪತ್ತೆಯಾಗಿದೆ. ಇದರಿಂದ ರಾಜ್ಯಾದ್ಯಂತ ಅಗತ್ಯ ಮುನ್ನಚ್ಚರಿಕೆ ಕೈಗೊಳ್ಳಲಾಗಿದೆ’

-ರೂಪಾ, ಅಪರ ಜಿಲ್ಲಾಧಿಕಾರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News