ಸೌದಿ ಹಂತಕರ ತಂಡದಿಂದ ಪತ್ರಕರ್ತನ ಹತ್ಯೆ: ಟರ್ಕಿ ಸ್ಪಷ್ಟನೆ

Update: 2018-10-07 04:07 GMT

ಇಸ್ತಾಂಬುಲ್, ಅ. 7: ಸೌದಿ ಅರೇಬಿಯಾದ ಖ್ಯಾತ ಪತ್ರಕರ್ತ ಜಮಾಲ್ ಖಶೊಗ್ಗಿಯವರ ನಿಗೂಢ ಕಣ್ಮರೆ ಪ್ರಕರಣವನ್ನು ಬೇಧಿಸುವಲ್ಲಿ ಟರ್ಕಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಇಸ್ತಾಂಬುಲ್‌ನಲ್ಲಿರುವ ಸೌದಿ ರಾಯಭಾರ ಕಚೇರಿಯಲ್ಲಿ ಕಳೆದ ವಾರ, ಸೌದಿ ಅರೇಬಿಯಾದಿಂದ ಬಂದ 15 ಮಂದಿಯ ತಂಡ ಜಮಾಲ್ ಅವರನ್ನು ಹತ್ಯೆ ಮಾಡಿದೆ ಎಂದು ತನಿಖಾ ತಂಡ ಬಹಿರಂಗಪಡಿಸಿದೆ. ಇದು ಪೂರ್ವನಿಯೋಜಿತ ಕೃತ್ಯವಾಗಿದ್ದು, ಪತ್ರಕರ್ತನ ಹತ್ಯೆಗಾಗಿಯೇ ಈ ತಂಡವನ್ನು ಸೌದಿಯಿಂದ ಕಳುಹಿಸಲಾಗಿತ್ತು ಎಂದು ತನಿಖೆಯಿಂದ ತಿಳಿದುಬಂದಿದೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ತನಿಖಾ ತಂಡದ ಇಬ್ಬರು ಅಧಿಕಾರಿಗಳು ಹೇಳಿದ್ದಾರೆ.

ವಾಷಿಂಗ್ಟನ್ ಪೋಸ್ಟ್‌ನ ಜಾಗತಿಕ ಅಭಿಪ್ರಾಯ ವಿಭಾಗಕ್ಕೆ ಲೇಖನ ಬರೆದಿದ್ದ ಜಮಾಲ್ ಅವರನ್ನು ಸೌದಿ ರಾಯಭಾರ ಕಚೇರಿ ಪ್ರವೇಶಿಸಿದ ತಕ್ಷಣ ಬಂಧಿಸಲಾಗಿತ್ತು ಎಂಬ ಆರೋಪಗಳನ್ನು ಸೌದಿ ಅರೇಬಿಯಾ ಬಲವಾಗಿ ತಳ್ಳಿಹಾಕಿದೆ. ಮಂಗಳವಾರ ಕಚೇರಿಗೆ ಆಗಮಿಸಿದ ಸ್ವಲ್ಪ ಹೊತ್ತಲ್ಲೇ ಜಮಾಲ್ ಹೊರಹೋಗಿದ್ದರು ಎಂದು ಸೌದಿ ಅರೇಬಿಯಾದ ರಾಜ ಮುಹಮ್ಮದ್ ಬಿನ್ ಸಲ್ಮಾನ್ ಸ್ಪಷ್ಟಪಡಿಸಿದ್ದರು. ಆದರೆ ಜಮಾಲ್ ರಾಯಭಾರ ಕಚೇರಿಯಿಂದ ಹೊರಹೋಗಿಲ್ಲ ಎನ್ನುವುದು ಟರ್ಕಿ ಅಧಿಕಾರಿಗಳ ವಾದ.

ಜಮಾಲ್ ಕಾನ್ಸುಲೇಟ್ ಕಚೇರಿಯಲ್ಲೂ ಇಲ್ಲ ಅಥವಾ ಸೌದಿ ಅರೇಬಿಯಾದಲ್ಲೂ ಇಲ್ಲ ಎಂದು ಇಸ್ತಾಂಬುಲ್‌ನಲ್ಲಿರುವ ಸೌದಿ ಕಾನ್ಸುಲೇಟ್ ಜನರಲ್ ಮುಹಮ್ಮದ್ ಅಲ್ ಒಟೈಬಿ ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News