ಮೌಲ್ಯವುಳ್ಳ ವಿಚಾರಗಳು ಪಠ್ಯಗಳಲ್ಲಿಲ್ಲದಿರುವುದು ಬೇಸರ: ನ್ಯಾ.ಎನ್.ಸಂತೋಷ್ ಹೆಗ್ಡೆ

Update: 2018-10-07 12:46 GMT

ಬೆಂಗಳೂರು, ಅ. 7: ಯುವ ಜನತೆಯನ್ನು ಉತ್ತಮ ನಾಗರಿಕರನ್ನಾಗಿ ಉತ್ತೇಜಿಸುವಂತಹ ಸಾಮಾಜಿಕ ಮೌಲ್ಯವುಳ್ಳ ವಿಚಾರಗಳು ಯಾವುದೇ ಪಠ್ಯಗಳಲ್ಲಿ ಇಲ್ಲದಿರುವುದು ಬೇಸರದ ಸಂಗತಿ ಎಂದು ಲೋಕಾಯುಕ್ತ ನಿವೃತ್ತ ನ್ಯಾ.ಸಂತೋಷ್ ಹೆಗ್ಡೆ ಅಭಿಪ್ರಾಯಪಟ್ಟಿದ್ದಾರೆ.

ರವಿವಾರ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಕಾರ್ಮಿಕರ ಒಕ್ಕೂಟ ಏರ್ಪಡಿಸಿದ್ದ, ಕಾರ್ಮಿಕರ ಸಮಾವೇಶ ಹಾಗೂ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ವ್ಯವಸ್ಥೆ ಹಾಳಾಗಿರುವುದಕ್ಕೆ ವ್ಯಕ್ತಿಗಳನ್ನು ಹೊಣೆ ಮಾಡುವುದು ಸರಿಯಲ್ಲ, ಇದರ ಹೊಣೆಯನ್ನು ಸಮಾಜ ಹೊರಬೇಕಾಗುತ್ತದೆ. ಸಮಾಜದಲ್ಲಿ ಮೌಲ್ಯಗಳನ್ನು ಬೆಳಸದೇ ಇರುವುದೆ ಇದಕ್ಕೆಲ್ಲ ಮೂಲ ಎಂದು ಹೇಳಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನೈತಿಕ ಮೌಲ್ಯದ ಕುಸಿತ ವ್ಯಾಪಕವಾಗಿರುವುದೇ ಭ್ರಷ್ಟಾಚಾರ ಹೆಚ್ಚಳಕ್ಕೆ ಕಾರಣ. ಸಮಾಜದಲ್ಲಿ ಮಾನವೀಯತೆಯೂ ಕಡಿಮೆಯಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಭಾರತವು ವಿವಿಧ ಧರ್ಮ, ಜನಾಂಗ, ಭಾಷೆ ಇರುವಂತಹ ಬಹುಸಂಸ್ಕೃತಿಯ ದೇಶ.ಆದರೆ, ಸ್ವಾತಂತ್ರ ಬಂದ ಮೇಲೆ ಹಲವು ಮೌಲ್ಯಗಳು ಯಕ್ಷ ಪ್ರಶ್ನೆಯಾಗಿವೆ. ನಮ್ಮಂತ ವಯಸ್ಸಿನವರಿಂದ ಸಮಾಜ ಕೆಟ್ಟಿದೆ ಎಂದು ಹೇಳಿದರೆ, ತಪ್ಪಾಗದು. ಆದರೆ, ಭವಿಷ್ಯದಲ್ಲಿ ಯುವಕರಿಂದ ಸಾಮಾಜಿಕ ವ್ಯವಸ್ಥೆ ಬದಲಾಗಬೇಕು ಎಂದು ಸಲಹೆ ನೀಡಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಮಾತನಾಡಿ, ಆಧುನಿಕ ಭಾರತದ ನಿರ್ಮಾಣಕ್ಕೆ ಕಟ್ಟಡ ಕಾರ್ಮಿಕರ ಕೊಡುಗೆ ಅಪಾರ. ಸರಕಾರಗಳು ಕಟ್ಟಡ ಕಾರ್ಮಿಕರ ಕ್ಷೇಮಾಭಿವೃದ್ಧಿಗಾಗಿ ಹತ್ತು ಹಲವು ಯೋಜನೆ, ಕಾರ್ಯಕ್ರಮಗಳನ್ನು ರೂಪಿಸಿದೆ. ಇದರ ಲಾಭ ಪಡೆದು, ಸ್ವಾವಲಂಬಿ ಜೀವನ ಹಾಗೂ ಆರ್ಥಿಕವಾಗಿ ಸಬಲರಾಗಬೇಕು ಎಂದು ತಿಳಿಸಿದರು.

ಇಂದಿನ ವ್ಯವಸ್ಥೆ ಸರಿಯಿಲ್ಲ ಎಂದು ಎಲ್ಲರೂ ದೂರುತ್ತೇವೆ.ಆದರೆ, ಇದಕ್ಕೆ, ಪಕ್ಷ, ಸಂಸ್ಥೆ, ಸಂಘಟನೆಗಳು ಕಾರಣವಲ್ಲ. ಎಲ್ಲರ ತಪ್ಪು ಇದೆ. ಕೆಲಸ ಕಾರ್ಯಗಳನ್ನು ಮಾಡುವಾಗ ಟೀಕೆಗಳು ಕೇಳಿ ಬರುತ್ತದೆ.ಆದರೆ, ನಾವು ಅದನ್ನು ದಾಟಿ ಸಾಗಬೇಕು ಎಂದು ನುಡಿದರು.

ಎಲ್ಲಿ ಕಪ್ಪು ಹಣ: 2014ರ ಲೋಕಾಸಭಾ ಚುನಾವಣೆ ಸಂದರ್ಭದಲ್ಲಿ ಅಪಪ್ರಚಾರ, ಸುಳ್ಳು ಭರವಸೆ ನೀಡಿದ್ದು, ಮಾತ್ರವಲ್ಲದೆ, ಕಪ್ಪುಹಣವನ್ನು ವಿದೇಶದಿಂದ ತರುತ್ತೇವೆ ಎಂದಿದ್ದರು. ಆದರೆ, ಇದುವರೆಗೂ ಒಂದು ಪೈಸೆಯೂ ಬರಲಿಲ್ಲ. ಅಷ್ಟೇ ಅಲ್ಲದೆ, ರಫೇಲ್ ಯುದ್ಧ ವಿಮಾನ ಖರೀದಿ ಬಹುಕೋಟಿ ಹಗರಣ ಆರೋಪ ಕೇಳಿಬಂದಿದೆ ಎಂದು ಈಶ್ವರ್ ಖಂಡ್ರೆ ಹೇಳಿದರು.

ಕಾರ್ಮಿಕರಿಗೆ ವೇತನ ಹೆಚ್ಚಳ, ಸಮಾನ ಕೆಲಸಕ್ಕೆ ಸಮಾನ ವೇತನ, ಸಂಬಳ ನೀಡದೆ ನೇರವಾಗಿ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡುವುದು ಸೇರಿದಂತೆ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಸರಕಾರ ಈಡೇರಿಸಬೇಕು ಎಂದು ಕಾರ್ಮಿಕರು ಮನವಿ ಮಾಡಿದರು. ಐಎನ್‌ಟಿಯುಸಿ ರಾಷ್ಟ್ರೀಯ ಅಧ್ಯಕ್ಷ ಸಂಜಯ್ ಗಾಬಾ, ಅಧ್ಯಕ್ಷ ರಾಜೇಶ್ ಮಲ್ಲಿ ಸೇರಿ ಒಕ್ಕೂಟದ ಪದಾಧಿಕಾರಿಗಳು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News