ಬಿಬಿಎಂಪಿ ಜಂಟಿ ಆಯುಕ್ತರಿಗೆ ಪ್ರಾಣ ಬೆದರಿಕೆ: ಆರೋಪಿಯ ಬಂಧನ

Update: 2018-10-07 12:50 GMT

ಬೆಂಗಳೂರು, ಅ.7: ಅಕ್ರಮ ಬಿಲ್ ಹಣ ಬಿಡುಗಡೆ ಮಾಡುವಂತೆ ಬಿಬಿಎಂಪಿಯ ರಾಜರಾಜೇಶ್ವರಿ ನಗರ ವಲಯ ಜಂಟಿ ಆಯುಕ್ತ ಬಾಲಶೇಖರ ಅವರಿಗೆ ಪ್ರಾಣ ಬೆದರಿಕೆ ಹಾಕಿದ ಆರೋಪದಡಿ ಗುತ್ತಿಗೆದಾರರನ್ನು ಇಲ್ಲಿನ ಆರ್.ಆರ್.ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಘನ ತ್ಯಾಜ್ಯ ನಿರ್ವಹಣೆ ಗುತ್ತಿಗೆದಾರ ವೆಂಕಟೇಶ್, ಸುನಿಲ್‌ಗೌಡ ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣದ ವಿವರ: ಗುತ್ತಿಗೆದಾರ ವೆಂಕಟೇಶ್ ಅವರು ಬಾಲಶೇಖರ್ ಕಚೇರಿಗೆ ಭೇಟಿ ಮಾಡಿ ತಮಗೆ ಬರಬೇಕಾಗಿದ್ದ 51.65 ಲಕ್ಷ ರೂ., 12.23 ಲಕ್ಷ ರೂ. ಹಾಗೂ 63.88 ಲಕ್ಷ ರೂ.ಗಳ ಬಿಲ್ ಬಿಡುಗಡೆ ಮಾಡುವಂತೆ ಕೋರಿದ್ದಾರೆ.

ವೆಂಕಟೇಶ್ ಅವರ ಬಿಲ್ ಬಿಡುಗಡೆ ಕುರಿತಂತೆ ಜಂಟಿ ಆಯುಕ್ತರು ಎರಡು ಕಡತಗಳನ್ನು ಪರಿಶೀಲಿಸಿದಾಗ ಕಡತಕ್ಕೆ ನಿವೃತ್ತ ಅಧಿಕಾರಿಯೊಬ್ಬರು ಸಹಿ ಮಾಡಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಪರಿಶೀಲನೆ ನಡೆಸಿದಾಗ ವೆಂಕಟೇಶ್ ಅವರು ತಮ್ಮ ಆರು ಮಂದಿ ಸಂಗಡಿಗರು ಬಿಲ್ ಪಾವತಿ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಒತ್ತಡ ಹಾಕಿರುವ ಅಂಶ ತಿಳಿದಿದೆ.

ಈ ಕುರಿತಂತೆ ಬಾಲಶೇಖರ್ ವೆಂಕಟೇಶ್ ಅವರ ಗಮನಕ್ಕೆ ತಂದಾಗ ಕೂಡಲೇ ತಮ್ಮ ಕಡತಗಳನ್ನು ವಾಪಸ್ ನೀಡುವಂತೆ ನನ್ನ ಕರ್ತವ್ಯಕ್ಕೆ ಅಡ್ಡಿಪಡಿಸಿದರು.ಆದರೆ, ಕಾನೂನಿನ ಪ್ರಕಾರ ಕಡತ ಹಿಂದಿರುಗಿಸಲು ಸಾಧ್ಯವಿಲ್ಲ ಎಂದು ಬಾಲಶೇಖರ್ ತಿಳಿಸಿದಾಗ ವೆಂಕಟೇಶ್ ಮತ್ತು ಆತನ ಸಹಚರರು ಆಯುಕ್ತರಿಗೆ ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ.

ಜಂಟಿ ಆಯುಕ್ತ ಬಾಲಶೇಖರ್ ಅವರು ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಗೆ ಪ್ರಾಣ ಬೆದರಿಕೆ ದೂರು ನೀಡಿ ನನಗೆ ರಕ್ಷಣೆ ನೀಡಬೇಕು ಹಾಗೂ ಸರಕಾರದ ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಸಲು ಅವಕಾಶ ಮಾಡಿಕೊಡಬೇಕು ಎಂದು ಪೊಲೀಸರಿಗೆ ಕೋರಿದ್ದ ಹಿನ್ನಲೆ, ಪೊಲೀಸರು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News