×
Ad

ಸಮಾನತೆ ಇಲ್ಲದ ಧರ್ಮಕ್ಕೆ ನಮ್ಮ ವಿರೋಧ: ಮಾಜಿ ಸಿಎಂ ಸಿದ್ದರಾಮಯ್ಯ

Update: 2018-10-07 20:57 IST

ಬೆಂಗಳೂರು, ಅ.7: ನನಗೆ ಯಾವ ಧರ್ಮದ ಬಗ್ಗೆಯೂ ವಿರೋಧವಿಲ್ಲ. ಆದರೆ, ಸಮಾನತೆಯಿಲ್ಲದ, ಮನುಷ್ಯ ಮನುಷ್ಯರನ್ನಾಗಿ ಗೌರವಿಸದ ಧರ್ಮಗಳ ಬಗ್ಗೆ ಭಿನ್ನಾಭಿಪ್ರಾಯವಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ರವಿವಾರ ನಗರದ ಮಹೇಶ್ವರಿ ಭವನದಲ್ಲಿ ಓಕಳೀಪುರಂ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದಿಂದ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ನಮ್ಮ ಸರಕಾರ ಎಲ್ಲ ಧರ್ಮಗಳ ಜನರಿಗೂ ಸಮಾನವಾದ ಯೋಜನೆಗಳನ್ನು ಜಾರಿ ಮಾಡಲಾಗಿದೆ. ನನಗೆ ಯಾವುದೇ ಧರ್ಮದ ವಿರುದ್ಧ ಅಸೂಯೆ ಇಲ್ಲ ಎಂದು ಹೇಳಿದರು.

ಹಿಂದಿನ ಸರಕಾರದ ಅವಧಿಯಲ್ಲಿ ಟಿಪ್ಪು ಸುಲ್ತಾನ್ ಜನ್ಮದಿನಾಚರಣೆ ಮಾಡಿದ್ದಕ್ಕೆ ಬಿಜೆಪಿಯವರು ಸಿದ್ದರಾಮಯ್ಯ ಹಿಂದೂ ಧರ್ಮದ ವಿರೋಧಿ ಎಂದೆಲ್ಲಾ ಅಪಪ್ರಚಾರ ನಡೆಸಿದ್ದರು. ಆದರೆ, ಇದೇ ಸಂದರ್ಭದಲ್ಲಿ ವಿಶ್ವಕರ್ಮ, ಕೃಷ್ಣ, ಹಡಪದ ಅಪ್ಪಣ್ಣ, ಕಿತ್ತೂರು ರಾಣಿ ಚೆನ್ನಮ್ಮ, ದೇವರ ದಾಸಿಮಯ್ಯ ಸೇರಿ 13 ಜನರ ಜಯಂತಿಯನ್ನು ಸರಕಾರ ಆಚರಣೆ ಮಾಡಿತು. ಇದು ಧರ್ಮ ವಿರೋಧಿಯಾ ಎಂದು ಪ್ರಶ್ನಿಸಿದರು.

ಪ್ರಜಾಪ್ರಭುತ್ವದಲ್ಲಿರುವ ಪ್ರತಿಯೊಬ್ಬರಿಗೂ ಮಾನವೀಯತೆ ಮುಖ್ಯವಾಗಬೇಕು ಹೊರತು ಧರ್ಮವಲ್ಲ ಎಂದ ಅವರು, ನಮ್ಮ ನಾಡಗೀತೆಯಲ್ಲಿ ಸರ್ವ ಜನಾಂಗದ ಶಾಂತಿಯ ತೋಟ ಎಂದು ಕುವೆಂಪು ಹೇಳಿದ್ದಾರೆ. ಅದೇ ರೀತಿಯಲ್ಲಿ ನನ್ನ ನೇತೃತ್ವದ ಸರಕಾರ ಎಲ್ಲರಿಗೂ ಅನ್ವಯವಾಗುವ ಹಲವಾರು ಜನಪರ ಕಾರ್ಯಕ್ರಮಗಳನ್ನು ಜಾರಿ ಮಾಡಿದೆ. ಅದನ್ನು ಒಂದು ಧರ್ಮ, ಜಾತಿಯವರಿಗೆ ಮಾತ್ರ ಸೀಮಿತವಾಗಿಲ್ಲ ಎಂದು ಹೇಳಿದರು.

ನಮ್ಮ ಅಧಿಕಾರದ ಅವಧಿಯಲ್ಲಿ ನೀಡಿದ ಎಲ್ಲ ಭರವಸೆಗಳನ್ನು ಈಡೇರಿಸಿದ್ದೇವೆ. ಅಲ್ಲದೆ, ದೇಶದ ಎಲ್ಲ ರಾಜ್ಯಗಳ ಅಭಿವೃದ್ಧಿ ಪಟ್ಟಿಯನ್ನು ತರಿಸಿಕೊಂಡು ನಮ್ಮಲ್ಲಿ ವಿಶಿಷ್ಟವಾದ ರೀತಿಯಲ್ಲಿ ಅಭಿವೃದ್ಧಿಯನ್ನು ಮಾಡಲಾಗಿದೆ. ಇದನ್ನು ನಾನು ಎಲ್ಲಿ ಬೇಕಾದರೂ ಸಾಬೀತು ಮಾಡಬಲ್ಲೆ ಎಂದು ಸವಾಲು ಹಾಕಿದ ಸಿದ್ದರಾಮಯ್ಯ, ಎಸ್‌ಟಿಪಿ ಹಾಗೂ ಟಿಎಸ್‌ಪಿ ಕಾಯ್ದೆ ನಮ್ಮಲ್ಲಿ ಇರಲಿಲ್ಲ. ಅದನ್ನು ಜಾರಿ ಮಾಡಿದ್ದು, ನಮ್ಮ ಸರಕಾರ. ಈ ರೀತಿಯ ಅನೇಕ ಉದಾಹರಣೆಗಳಿಗೆ ನಮ್ಮಲ್ಲಿ ಎಂದು ನುಡಿದರು.

ಹಿಂದಿನ ಕಾಂಗ್ರೆಸ್ ಸರಕಾರ ಮಾಡಿದ ಜನಪರ ಕಾರ್ಯಕ್ರಮಗಳನ್ನು ಜನರಿಗೆ ಮನವರಿಕೆ ಮಾಡಿಕೊಡುವಲ್ಲಿ ಪಕ್ಷದ ಕಾರ್ಯಕರ್ತರು ಸೋತಿದ್ದಾರೆ. ಆದರೆ, ಪ್ರತಿಪಕ್ಷಗಳು ನಿಮ್ಮ ಗೋವುಗಳು ದನದ ದೊಡ್ಡಿಗೆ ಸೇರಬೇಕಾದರೆ, ನೀವು ದೇವಸ್ಥಾನಗಳಲ್ಲಿ ಸ್ವತಂತ್ರವಾಗಿ ಪೂಜೆ ಮಾಡಬೇಕಾದರೆ ಬಿಜೆಪಿ ಮತ ಹಾಕಿ ಎನ್ನುವ ಮೂಲಕ ಮತಗಳನ್ನು ಪಡೆದಿದ್ದಾರೆ ಅವರು ದೂರಿದರು.

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿ, ರಾಜ್ಯದ ಇತಿಹಾಸದಲ್ಲಿಯೇ ಹಿಂದಿನ ಸಿದ್ದರಾಮಯ್ಯ ನೇತೃತ್ವದ ಸರಕಾರ ಮಾಡಿರುವಷ್ಟು ಅಭಿವೃದ್ಧಿ ಬೇರೆ ಯಾವುದೇ ಸರಕಾರಗಳಿಂದಲೂ ನಡೆದಿಲ್ಲ. ದಲಿತ, ಹಿಂದುಳಿದ, ಅಲ್ಪಸಂಖ್ಯಾತ, ವಿದ್ಯಾರ್ಥಿ, ಯುವಜನರ ಪರವಾಗಿ ಅನೇಕ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ ಎಂದು ಹೇಳಿದರು.

ನಮಗೆ ಚುನಾವಣೆಯ ಫಲಿತಾಂಶ ಮುಖ್ಯವಲ್ಲ. ಅಲ್ಲದೆ, ಜನರು ಸರಕಾರದ ಆಡಳಿತ ವೈಪಲ್ಯದಿಂದಾಗಿ ಅಥವಾ ಅವರ ಯೋಜನೆ ಸರಿಯಾಗಿಲ್ಲ ಎಂದು ಮತ ಹಾಕಿಲ್ಲವೆಂದು ಯಾರು ಹೇಳುವುದಿಲ್ಲ. ನಮ್ಮ ವಿರುದ್ಧ ನಡೆದ ಅಪಪ್ರಚಾರದಿಂದಲೇ ನಮಗೆ ಸೋಲಾಗಿರಬಹುದು. ಜನರ ತೀರ್ಮಾನಕ್ಕೆ ತಲೆಬಾಗಲೇಬೇಕು ಎಂದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ರಾಜಕಾರಣದಲ್ಲಿ ಇಂದಿಗೂ ಪ್ರಸ್ತುತವಾಗಿದ್ದಾರೆ. ಅವರ ಮೇಲೆ ಇಂದಿಗೂ ಜನರಿಗೆ ನಂಬಿಕೆ ಇದೆ. ಅಲ್ಲದೆ, ಅವರಿಗೆ ಪಕ್ಷ ಕಟ್ಟುವ ಜವಾಬ್ದಾರಿಯನ್ನು ನೀಡಲಾಗಿದೆ. ಪಕ್ಷದ ಕಾರ್ಯಕರ್ತರಲ್ಲಿ ಹೊಸ ಶಕ್ತಿ ತುಂಬುವ ಸಲುವಾಗಿ ಅವರ ನಾಯಕತ್ವ ಪಕ್ಷಕ್ಕೆ ಅತ್ಯಗತ್ಯವಿದೆ ಎಂದು ದಿನೇಶ್ ಗುಂಡೂರಾವ್ ನುಡಿದರು.

ಕಾರ್ಯಕ್ರಮದಲ್ಲಿ ಆನಂದ ಗುರೂಜಿ, ಪರಿಷತ್‌ನ ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟೆ, ಆರ್.ಗುಂಡೂರಾವ್ ಫೌಂಡೇಷನ್ ಅಧ್ಯಕ್ಷ ತಬು ದಿನೇಶ್ ರಾವ್, ಸಂಘದ ಅಧ್ಯಕ್ಷ ಮಹದೇವ ನಾಯಕ್, ಕಾಂಗ್ರೆಸ್ ಮುಖಂಡ ಜಿ.ಸಂಪತ್, ರಾಜ್ ಕಾರ್ತಿಕ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಸಮಸಮಾಜ ನಿರ್ಮಾಣವಾಗಬೇಕು ಎಂಬುದು ಸಂವಿಧಾನದ ಆಶಯವಾಗಿದೆ. ಸಾಮಾಜಿಕ ನ್ಯಾಯ ಹಾಗೂ ಸಮಾನ ಅವಕಾಶಗಳನ್ನು ಕಲ್ಪಿಸಲಾಗಿದೆ. ಈ ನಿಟ್ಟಿನಲ್ಲಿ ಸಂಪತ್ತು ಮತ್ತು ಅಧಿಕಾರ ಎಲ್ಲರಿಗೂ ಸಮಾನವಾಗಿ ಹಂಚಿಕೆಯಾಗಬೇಕು. ಆಗ ಮಾತ್ರ ಸಮ ಸಮಾಜ ನಿರ್ಮಾಣ ಸಾಧ್ಯ.
-ಸಿದ್ದರಾಮಯ್ಯ ಮಾಜಿ ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News