ನಟನೆಗಿಂತ ಸಾಹಿತ್ಯವೇ ಅಚ್ಚುಮೆಚ್ಚು: ಶ್ವೇತಾ ಬಚ್ಚನ್
ಬೆಂಗಳೂರು, ಅ.7:ನನಗೆ ನಟನೆಯಲ್ಲಿ ಹೆಚ್ಚಿನ ಆಸಕ್ತಿ ಇಲ್ಲ. ಚಿಕ್ಕ ವಯಸ್ಸಿನಲ್ಲಿ ಎಲ್ಲೋ ಸಣ್ಣ ನಾಟಕ ಮಾಡಿದ್ದೆ ಅಷ್ಟೆ. ಆದರೆ, ಸಾಹಿತ್ಯದಲ್ಲಿ ಹೆಚ್ಚಿನ ಆಸಕ್ತಿ ಇದೆ ಎಂದು ಬಾಲಿವುಡ್‌ನ ಖ್ಯಾತ ನಟ ಬಿಗ್ ಬಿ ಅಮಿತಾಬ್ ಬಚ್ಚನ್ ಪುತ್ರಿ ಶ್ವೇತಾ ಬಚ್ಚನ್ ಹೇಳಿದರು.
ರವಿವಾರ ಕುಮಾರಕೃಪಾದ ಖಾಸಗಿ ಹೋಟೆಲ್‌ನಲ್ಲಿ ಫೇಸ್‌ಬುಕ್ ಮತ್ತು ಯುನೈಟೆಡ್ ನೇಷನ್ಸ್ ವುಮೆನ್ ಸಂಘಟನೆಗಳು ಒಗ್ಗೂಡಿ ಏರ್ಪಡಿಸಿದ್ದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಮಹಿಳಾ ಸಾಧಕಿಯರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ನನ್ನ ತಂದೆ ಹೆಸರಿನಲ್ಲಿ ಎಲ್ಲರೂ ಗುರುತಿಸುವ ಜತೆಗೆ ನಾನೇ ನನ್ನ ಸ್ವತಂತ್ರ್ಯ ಗುರುತು ರೂಢಿಸಿಕೊಳ್ಳಬೇಕೆಂದು ಸಾಹಿತ್ಯ ಕ್ಷೇತ್ರದ ಕಡೆ ಹೆಚ್ಚಿನ ಗಮನ ನೀಡಲು ಆರಂಭಿಸಿದೆ. ನನಗೆ 23 ವರ್ಷಕ್ಕೆ ಮದುವೆ ಆಗಿತ್ತು. ಪತಿ ಉದ್ಯೋಗದಲ್ಲಿದ್ದಾಗ ನನಗೆ ಹೆಚ್ಚಿನ ಕೆಲಸ ಇರುತ್ತಿರಲಿಲ್ಲ. ಹೀಗಾಗಿ ಓದುವ ಹವ್ಯಾಸ ರೂಢಿಸಿಕೊಂಡಿದ್ದೇ. ಇದರಿಂದಾಗಿ ನನ್ನ ಮೊದಲ ಕಾದಂಬರಿ ಇತ್ತೀಚಿಗಷ್ಟೇ ಬಿಡುಗಡೆ ಮಾಡುತ್ತಿದ್ದೇನೆ. ಅಪ್ಪನ ಹೆಸರು ಫೇಮಸ್ ಆಗಿದೆ ಎಂದು ನಾನು ಅವರ ಗುರುತು ಬಳಸಿಕೊಳ್ಳುವುದಕ್ಕಿಂತ ನನ್ನ ಸ್ವಂತಿಕೆ ಉಳಿಸಿಕೊಳ್ಳುವ ಪ್ರಯತ್ನದಲ್ಲಿದ್ದೇನೆ ಎಂದು ನುಡಿದರು.
ಮಹಿಳೆಯರ ಕುರಿತು ಸಮಾಜದಲ್ಲಿ ಇನ್ನೂ ಹಳೆಯ ಸಂಪ್ರದಾಯದ ಹೆಸರಿನಲ್ಲಿ ಕಿರುಕುಳ, ಕೀಳರಿಮೆ ನೀಡಲಾಗುತ್ತಿದೆ. ತಪ್ಪು ಭಾವನೆ ಹಾಗೂ ಮೌಢ್ಯದ ಹೆಸರಿನಲ್ಲಿಯೂ ಸಮಸ್ಯೆ ಗಳನ್ನು ಜೀವಂತ ಇಡಲಾಗಿದೆ. ಕೆಲವೊಮ್ಮೆ ಮಹಿಳೆಯರೇ ಶೋಷಿಸುವ ಜಾಗದಲ್ಲಿ ಇರುತ್ತಾರೆ. 21ನೇ ಶತಮಾನದಲ್ಲಿದ್ದೇವೆ ಎಂಬ ಭಾವನೆಯೂ ಇಲ್ಲದೆ ಕಟ್ಟುಪಾಡುಗಳನ್ನು ಹೇರಲಾಗಿತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಜಾಗತಿಕ ಮತ್ತು ರಾಷ್ಟ್ರೀಯ ವಿಷಯಗಳ ಪ್ರತಿಬಿಂಬವಾಗಿತ್ತು. ಧಾರ್ಮಿಕ ಅಂಧಾನುಕರಣಿಗಳ ವಿರುದ್ಧ ಮಹಿಳೆಯರ ಹೋರಾಟ, ಲಿಂಗ ಪರಿವರ್ತಿತ ಮಹಿಳೆಯರು ಎದುರಿಸುತ್ತಿರುವ ಸವಾಲುಗಳು, 377ನೇ ಕಲಂ ಕೊನೆಗೊಂಡ ಬಳಿಕ ಸಮಯ ಮತ್ತು ಸಮವಸದಲ್ಲಿರುವ ಮಹಿಳೆಯರ ಬದುಕು ಮತ್ತು ಸಾಧನೆಗಳ ಕುರಿತು ಚರ್ಚಿಸಲಾಯಿತು.
ಹಿರಿಯ ಪತ್ರಕರ್ತೆ ಬರ್ಕಾ ದತ್, ನಟಿಯರಾದ ಸೋನಂ ಕೆ.ಅಹುಜಾ, ತನುಶ್ರೀ ದತ್ತ, ತಾಸ್ಸಿ ಪನ್ನು, ನಟ ವಿಕಿ ಕೌಶಲ್, ಕ್ರಿಕೆಟ್ ಆಟಗಾರ್ಥಿ ಮಿಥಾಲಿ ರಾಜ್, ಸ್ಯಾಕ್ಸೋನ್ ವಾದಕಿ ಸುಬ್ಬಲಕ್ಷ್ಮಿ, ನಾಸ್‌ಕಾಮ್‌ನ ದೇಬ್ಜಾನಿ ಘೋಷಸ್, ಡಾ.ಅಕೈ ಪದ್ಮಶಾಲಿ, ಅನಿದ್ಯ ಹಜ್ರಾ, ಅನುಭೂತಿ ಬ್ಯಾನರ್ಜಿ ಪರಮೇಶ್ ಶಹಾನಿ ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು.