×
Ad

12ನೆ ಶತಮಾನದ ಕ್ರಾಂತಿ ಇದೀಗ ಮುಖಾಮುಖಿ ಆಗಬೇಕು: ರಮಾನಂದ ಸ್ವಾಮೀಜಿ

Update: 2018-10-07 22:10 IST

ಬೆಂಗಳೂರು, ಅ. 7: ಹನ್ನೆರಡನೆ ಶತಮಾನದ ಕ್ರಾಂತಿ ಇಪ್ಪತ್ತೊಂದನೆ ಶತಮಾನದಲ್ಲಿ ಮತ್ತೆ ಮುಖಾಮುಖಿಯಾಗುವ ಮೂಲಕ ಸಾಮಾಜಿಕ ಕ್ರಾಂತಿಯಾಗಬೇಕು ಎಂದು ವನಕಲ್ಲು ಮಲ್ಲೇಶ್ವರ ಮಠದ ರಮಾನಂದ ಸ್ವಾಮೀಜಿ ಕರೆ ನೀಡಿದರು.

ರವಿವಾರ ಗಾಂಧಿನಗರದ ಕಾನಿಷ್ಕ ಹೋಟೆಲ್‌ನಲ್ಲಿ ನಗರದ ಬಸವಕೇಂದ್ರ ಆಯೋಜಿಸಿದ್ದ, ಸಂಪೂರ್ಣ ಕ್ರಾಂತಿ ಸಮೂಹ ಪ್ರೀತಿ ಎಂಬ ಶರಣರ ಸಂಗಮ ಸಮಾರಂಭದಲ್ಲಿ ಮಾತನಾಡಿದ ಅವರು, ಅಂಬಿಗರ ಚೌಡಯ್ಯ, ಡೋಹಾರ ಕಕ್ಕಯ್ಯ, ಮಾದಾರ ಚೆನ್ನಯ್ಯ ಸೇರಿದಂತೆ 720 ಮಹಾ ಗಣ ವಚನಕಾರರು ಬಸವಕಲ್ಯಾಣದಲ್ಲಿ ಸೇರುವ ಮೂಲಕ ರಾಜ್ಯದಲ್ಲಿ ಸಾಮಾಜಿಕ ಕ್ರಾಂತಿಯನ್ನು ಮಾಡಿದ್ದು, ಈಗ, ಈ ಶತಮಾನದಲ್ಲಿ ಮತ್ತೆ ಪುನರ್ ವರ್ತನೆಯಾಗಬೇಕೆಂದು ಹೇಳಿದರು.

ಬಸವ ಚಳುವಳಿ ಜಾಗತಿಕ ಮಟ್ಟದ ಹೋರಾಟವಾದದ್ದು ಕಾಯಕ ಪ್ರಜ್ಞೆಯನ್ನು ಬೆಳೆಸಿ ಹುಸಿ, ಪ್ರತಿಷ್ಠೆಗಳನ್ನು ಅಳಿಸಿ, ಮಾನವೀಯತೆ ಮರೆತು ಭ್ರಮಾಲೋಕದಲ್ಲಿ ಅಲೆದಾಡುವ ಮನಸ್ಸಿಗೆ ವಾಸ್ತವ ಪ್ರಜ್ಞೆಯನ್ನು ತಂದು ಕೊಟ್ಟಿದೆ. ಅಲ್ಲದೆ, ಸಾಮಾನ್ಯನಿಂದ ಸಿರಿವಂತನವರೆಗೂ ವಚನಕಾರರ ಕೂಗು ಕೇಳಿಸಿದೆ ಎಂದರು.

ನಡೆ-ನುಡಿಗಳು ಒಂದಾಗಿ ನಡೆಸಿದ ಕ್ರಾಂತಿಯೇ ವಚನಕ್ರಾಂತಿ. ಮನ ಶುದ್ಧಿ, ಚಿತ್ತ ಶುದ್ಧಿ ಮಾಡಿಕೊಂಡು, ತತ್ವದ ಉತ್ತರಾಧಿಕಾರಿಯಾಗಬೇಕೆ ಹೊರತು ಮಠ-ಮಾನ್ಯ, ಮನೆಗಲ್ಲ ಎಂದ ಅವರು, ಕ್ರಾಂತಿಯೆಂದರೆ ನಿಂತ ನೀರಲ್ಲ, ಅದು ನಿರಂತರ ಪ್ರಕ್ರಿಯೆ, ಹಾಗೂ ವಚನಕಾರರ ಇತಿಹಾಸವೆಂದರೆ ಸತ್ಯವನ್ನು ಬೆಳಗುವ ಜ್ಯೋತಿ ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಗಚ್ಚಿನಮಠದ ಶಿವಬಸವ ಸ್ವಾಮಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News