ವಾರಕ್ಕೆ 5 ದಿನ ಕಲಾಪ ನಡೆಸಲು ವಕೀಲರ ಸಂಘದಿಂದ ಮನವಿ

Update: 2018-10-07 17:04 GMT

ಬೆಂಗಳೂರು, ಅ.7: ರಾಜ್ಯ ಎಲ್ಲ ಅಧೀನ ನ್ಯಾಯಾಲಯಗಳು ವಾರದಲ್ಲಿ ಐದು ದಿನ ಕಲಾಪ ನಡೆಸುವ ಸಂಬಂಧ ಸೂಕ್ತ ಆದೇಶ ಹೊರಡಿಸುವಂತೆ ರಾಜ್ಯ ಸರಕಾರಕ್ಕೆ ಮನವಿ ಮಾಡಲು ಬೆಂಗಳೂರು ವಕೀಲರ ಸಂಘ ತೀರ್ಮಾನಿಸಿದೆ.

ಸಂಘದ ಅಧ್ಯಕ್ಷ ಎ.ಪಿ. ರಂಗನಾಥ್ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸರ್ವ ಸದಸ್ಯರ ಸಭೆಯಲ್ಲಿ ಈ ನಿರ್ಣಯ ಅಂಗೀಕರಿಸಲಾಗಿದೆ. ವಕೀಲರ ಕೆಲಸ ಒತ್ತಡದ ವೃತ್ತಿಯಾಗಿದ್ದು, ಕೆಳ ನ್ಯಾಯಾಲಯಗಳಲ್ಲಿ ವಕೀಲರು ವಾರದಲ್ಲಿ ಆರು ದಿನ ಬೆಳಿಗ್ಗೆ 8ರಿಂದ ರಾತ್ರಿ 10 ಗಂಟೆವರೆಗೆ ಕೆಲಸ ಮಾಡಬೇಕಾಗಿದ್ದು, ವಕೀಲರಿಗೆ ಮಾನಸಿಕ ಮತ್ತು ದೈಹಿಕ ಒತ್ತಡದಿಂದ ಆರೋಗ್ಯದಲ್ಲಿ ವ್ಯತ್ಯಾಸ ಉಂಟಾಗುತ್ತಿದೆ. ಇದೇ ಕಾರಣಕ್ಕೆ ಇತ್ತೀಚಿನ ದಿನಗಳಲ್ಲಿ ವಕೀಲರು ಅಕಾಲಿಕ ಹೃದಯಾಘಾತ ಹಾಗೂ ಇತರೆ ಗಂಭೀರ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ.

ಹೀಗಾಗಿ, ಪ್ರಸ್ತುತ ಕರ್ನಾಟಕ ಹೈಕೋರ್ಟ್ ವಾರದಲ್ಲಿ 5 ದಿವಸ ಮಾತ್ರ ಕೆಲಸ ನಿರ್ವಹಿಸುತ್ತಿದ್ದು, ಈಗಾಗಲೇ ಆಂಧ್ರಪ್ರದೇಶ ಹಾಗೂ ತಮಿಳುನಾಡಿನಲ್ಲಿ ಎಲ್ಲ ಅಧೀನ ನ್ಯಾಯಾಲಯಗಳು ವಾರದಲ್ಲಿ ಐದು ದಿನ ಕೆಲಸ ನಿರ್ವಹಿಸುತ್ತಿವೆ. ಇದೇ ಮಾದರಿಯಲ್ಲಿ ಕರ್ನಾಟಕ ರಾಜ್ಯದಲ್ಲಿರುವ ಎಲ್ಲ ಅಧೀನ ನ್ಯಾಯಾಲಯಗಳು ಪ್ರಸ್ತುತ ಇರುವ ಕೆಲಸಕ್ಕೆ ಸಮಯದ ಕೊರತೆ ಆಗದಂತೆ ವಾರದಲ್ಲಿ 5 ದಿನ ಕೋರ್ಟ್ ಕಲಾಪಗಳು ನಡೆಯುವಂತೆ ಸೂಕ್ತ ಆದೇಶ ನೀಡುವಂತೆ ರಾಜ್ಯ ಸರಕಾರಕ್ಕೆ ಮನವಿ ಮಾಡಿಕೊಳ್ಳಲು ಸಭೆಯಲ್ಲಿ ನಿರ್ಣಯಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News