×
Ad

ಪ್ರಾಕೃತ ಭಾಷಾ ಕೇಂದ್ರವಾಗಿಟ್ಟು ಪರ್ಯಾಯ ಸಾಹಿತ್ಯ-ಸಂಸ್ಕೃತಿ ಕಟ್ಟಬೇಕಿದೆ: ನರಹಳ್ಳಿ ಬಾಲಸುಬ್ರಹ್ಮಣ್ಯ

Update: 2018-10-07 22:55 IST

ಬೆಂಗಳೂರು, ಅ.7: ಪ್ರಾಕೃತ ಭಾಷಾ ಕೇಂದ್ರವಾಗಿಟ್ಟುಕೊಂಡು ದೇಶದ ಸಾಹಿತ್ಯ ಹಾಗೂ ಸಂಸ್ಕೃತಿಯನ್ನು ಪರ್ಯಾಯವಾಗಿ ಕಟ್ಟಬೇಕಾದ ಅಗತ್ಯವಿದೆ ಎಂದು ವಿಮರ್ಶಕ ಪ್ರೊ.ನರಹಳ್ಳಿ ಬಾಲಸುಬ್ರಹ್ಮಣ್ಯ ತಿಳಿಸಿದ್ದಾರೆ.

ರವಿವಾರ ಕನ್ನಡ ಜನಶಕ್ತಿ ಕೇಂದ್ರ ನಗರದ ಎಚ್.ಎನ್.ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ನಾಡೋಜ ಪ್ರೊ.ಹಂಪ ನಾಗರಾಜಯ್ಯ-83 ಅಂತಾರಾಷ್ಟ್ರೀಯ ಶುಭಾಶಯ ಸಮಾರಂಭ ಹಾಗೂ ‘ಗಿಫ್ಟ್ ಆಫ್ ನಾಲೆಡ್ಜ್’ ಕೃತಿಯ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಭಾರತದಲ್ಲಿ ಕ್ರಿ.ಪೂ 3ನೆ ಶತಮಾನದಿಂದ ಕ್ರಿ.ಶ 3ನೆ ಶತಮಾನದವರೆಗೆ ಪ್ರಾಕೃತ ಭಾಷೆ ಪ್ರಧಾನವಾಗಿತ್ತು. ಬೌದ್ಧ ಹಾಗೂ ಜೈನರು ಪ್ರಾಕೃತ ಭಾಷೆಯಲ್ಲಿ ಸಾಹಿತ್ಯ ರಚನೆ ಮಾಡಿದ್ದಾರೆ. ಆದರೆ, ಕ್ರಿ.ಶ 4ನೆ ಶತಮಾನದ ನಂತರ ಸಂಸ್ಕೃತ ಭಾಷೆ ಪ್ರಧಾನ ಸ್ಥಾನಕ್ಕೆ ಬರುತ್ತಿದ್ದಂತೆ ಪ್ರಾಕೃತ ಭಾಷೆ ಮೂಲೆಗೆ ಸರಿಯಿತು. ಹೀಗಾಗಿ ನಮ್ಮ ಮೂಲ ಭಾಷಾ ಪ್ರಕಾರವಾದ ಪ್ರಾಕೃತದಲ್ಲಿ ವಿಫುಲವಾದ ಸಾಹಿತ್ಯ-ಸಂಸ್ಕೃತಿ ಅಡಕವಾಗಿದ್ದು, ಅದನ್ನು ಮತ್ತೊಮ್ಮೆ ಮುನ್ನೆಲೆಗೆ ತರಬೇಕಿದೆ ಎಂದು ಅವರು ಆಶಿಸಿದರು.

ನಾಡೋಜ ಪ್ರೊ.ಹಂಪ ನಾಗರಾಜಯ್ಯ ಪ್ರಾಕೃತ ಭಾಷಾ ಕೇಂದ್ರವಾಗಿಟ್ಟು ನಮ್ಮ ಸಂಸ್ಕೃತಿ, ಸಾಹಿತ್ಯವನ್ನು ಪರ್ಯಾಯವಾಗಿ ಕಟ್ಟಲು ಪ್ರಯತ್ನಿಸುತ್ತಿದ್ದಾರೆ. ಪ್ರಧಾನ ನೆಲೆಯಲ್ಲಿರುವ ರಾಮಾಯಣ, ಮಹಾಭಾರತ ಮಹಾಕಾವ್ಯಗಳಲ್ಲಿ ಹಲವಾರು ಸಮಸ್ಯೆಗಳಿವೆ. ಈ ಹಿನ್ನೆಲೆಯಲ್ಲಿ ಪ್ರಾಕೃತ ಭಾಷಾ ಪರಂಪರೆಯ ಹಿನ್ನೆಲೆಯಲ್ಲಿ ಈ ಮಹಾಕಾವ್ಯಗಳನ್ನು ಗ್ರಹಿಸಬೇಕಾದ ಅಗತ್ಯವಿದೆ ಎಂದು ಅವರು ಹೇಳಿದರು.

ಕನ್ನಡ ಸಾಹಿತ್ಯ ಪರಂಪರೆ, ಅದರಲ್ಲೂ ಜೈನ ಸಾಹಿತ್ಯವನ್ನು ನಾಡೋಜ ಹಂಪ ನಾಗರಾಜಯ್ಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೊಂಡೊಯ್ಯುತ್ತಿದ್ದಾರೆ. ಕನ್ನಡ ಸಾಹಿತ್ಯದ ರಾಯಭಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದರ ಭಾಗವಾಗಿ ವಿದೇಶಿ ವಿದ್ವಾಂಸರು ಕನ್ನಡ ಸಾಹಿತ್ಯ ಕುರಿತು ಆಸಕ್ತಿ ತಾಳುತ್ತಿದ್ದಾರೆ. ಹೀಗಾಗಿ ರಾಜ್ಯ ಸರಕಾರ ರಾಜ್ಯದಲ್ಲಿ ಜೈನ ಸಾಹಿತ್ಯ ಸಂಬಂಧಿಸಿದ ಅಂತಾರಾಷ್ಟ್ರೀಯ ವಿಚಾರ ಸಂಕಿರಣವನ್ನು ಆಯೋಜಿಸಬೇಕೆಂದು ಅವರು ಸಲಹೆ ನೀಡಿದರು.

ನಾಡೋಜ ಪ್ರೊ.ಹಂಪ ನಾಗರಾಜಯ್ಯ ಮಾತನಾಡಿ, ನಾಡಿಗೆ ಜಲಕ್ಷಾಮ, ಬಡತನ, ನಿರುದ್ಯೋಗ ಬಂದರೆ ಸರಿಪಡಿಸಲು ಹೆಚ್ಚಿನ ಅವಕಾಶವಿರುತ್ತದೆ. ಆದರೆ, ಸಾಹಿತ್ಯ ವಿದ್ವತ್‌ಗೆ ಕ್ಷಾಮ ಬಂದರೆ ಅದನ್ನು ಸರಿ ಪಡಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ವಿದ್ವತ್‌ನ್ನು ಯಾವಾಗಲು ಹಸಿರಾಗಿಟ್ಟುಕೊಳ್ಳುವಂತೆ ನಮ್ಮ ಯುವ ಜನತೆ ಜಾಗ್ರತೆ ವಹಿಸಬೇಕೆಂದು ತಿಳಿಸಿದರು.

ಕನ್ನಡದ ಸಾಹಿತ್ಯ ಪರಂಪರೆ ಜಗತ್ತಿನಲ್ಲಿಯೆ ಪುರಾತನವಾದದ್ದು. ಆದರೆ, ಅದನ್ನು ವಿಶ್ವಕ್ಕೆ ಪರಿಚಿಯಿಸಲು ನಾವು ವಿಫಲರಾಗಿದ್ದೇವೆ. ಹೀಗಾಗಿ ನನಗೆ ಅವಕಾಶ ಸಿಕ್ಕಾಗಲೆಲ್ಲ ವಿಶ್ವದ ಇತರೆ ವಿಶ್ವವಿದ್ಯಾಲಯಗಳಿಗೆ ಭೇಟಿ ಕೊಟ್ಟು ಕನ್ನಡ ಕಾರ್ಯಕರ್ತನಂತೆ ನಮ್ಮ ಸಾಹಿತ್ಯ, ಸಂಸ್ಕೃತಿಯನ್ನು ಪರಿಚಯಿಸುತ್ತಾ ಬಂದಿದ್ದೇನೆಂದು ಅವರು ಅಭಿಮಾನಪಟ್ಟರು.

ಮಾಜಿ ಪ್ರಧಾನಿ ದೇವೇಗೌಡ ಮಾತನಾಡಿ, ನಾಡೋಜ ಹಂಪ ನಾಗರಾಜಯ್ಯನವರು ಕನ್ನಡ ನಾಡಿನ ಸಾಹಿತ್ಯ-ಸಂಸ್ಕೃತಿಯ ಕಂಪನ್ನು ವಿಶ್ವಕ್ಕೆ ಪರಿಚಯಿಸುತ್ತಿರುವುದು ಸಂತಸ ತಂದಿದೆ. ಇದಕ್ಕೆ ಪೂರಕವಾಗಿ ರಾಜ್ಯ ಸರಕಾರದ ವತಿಯಿಂದ ಮುಂದಿನ ದಿನಗಳಲ್ಲಿ ಕನ್ನಡದ ಸಾಹಿತ್ಯ ಪರಂಪರೆಯಲ್ಲಿ ವಿಶ್ವಕ್ಕೆ ಪರಿಚಯಿಸುವ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ವಿಷಾರ ಸಂಕಿರಣಗಳನ್ನು ಆಯೋಜಿಸಬೇಕು ಎಂದು ತಿಳಿಸಿದರು.

ದೇಶದಲ್ಲಿ ಇಂದಿಗೂ ಕಾಡುತ್ತಿರುವ ಜಾತಿಯತೆ, ಅಸ್ಪಷ್ಯತೆ ಕಾಡುತ್ತಿದೆ. ಆದರೆ, ಹಂಪ ನಾಗರಾಜಯ್ಯ ದಂಪತಿ ಹಲವು ದಶಕಗಳ ಹಿಂದೆಯೆ ಜಾತಿ ಚೌಕಟ್ಟುಗಳನ್ನು ಮೀರಿ ಅಂತರ್‌ಜಾತಿ ವಿವಾಹವಾಗಿ ಮಾದರಿಯಾಗಿದ್ದಾರೆ ಎಂದು ಅವರು ಅಭಿಮಾನ ಪಟ್ಟರು.
ಈ ವೇಳೆ ಅಂತಾರಾಷ್ಟ್ರೀಯ ವಿದ್ವಾಂಸರಾದ ಪ್ರೊ.ನಟಾಲಿಯ ಜೆಲಜ್‌ನೋವ, ಪ್ರೊ. ಕ್ರಿಸ್ಟಿನ್ ಚೊಜನಕಿ, ಡಾ.ಜೊಸೆಪ್ ಬರ್ತೊಸಕ್, ಪ್ರೊ.ಪೂಜಿ ನಾಗಶಿನ್, ಡಾ.ಪೀಟರ್ ಫ್ಲೂಗೆಲ್, ಡಾ.ಕೇಟ್ ಕ್ರೋ, ಡಾ.ಬಸಿಲ್ ಲೆಕ್ಲೆರ್, ನಾಡೋಜ ಕಮಲಾ ಹಂಪನಾ, ಕನ್ನಡ ಜನ ಶಕ್ತಿ ಕೇಂದ್ರದ ಸಿ.ಕೆ.ರಾಮೇಗೌಡ ಮತ್ತಿತರರಿದ್ದರು.

‘ಇವತ್ತಿನ ಆಧುನಿಕ-ಜಾಗತಿಕ ಕಾಲದಲ್ಲಿ ಸರಕಾರಿ ಶಾಲೆಗಳು ಉಳಿಯಬೇಕಾದರೆ ಕನ್ನಡ ಜತೆಗೆ ಇಂಗ್ಲಿಷ್ ಕಲಿಸುವುದು ಅಗತ್ಯವಿದೆ. ಇವತ್ತಿನ ಸಾಮಾಜಿಕ ಸಂದರ್ಭ ಕನ್ನಡ-ಇಂಗ್ಲಿಷ್ ಜತೆ-ಜತೆಗೆ ಸಾಗಬೇಕಾದ ಅನಿವಾರ್ಯತೆ ಇದೆ. ಹೀಗಾಗಿ ಸಿಎಂ ಕುಮಾರಸ್ವಾಮಿ ಸರಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಕಲಿಸಲಾಗುವುದೆಂದು ಹೇಳಿದ್ದು, ಇದನ್ನು ನಾನು ಬೆಂಬಲಿಸುತ್ತೇನೆ’
-ಪ್ರೊ.ಹಂಪ ನಾಗರಾಜಯ್ಯ ನಾಡೋಜ, ಹಿರಿಯ ಸಾಹಿತಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News