×
Ad

ಭವಿಷ್ಯನಿಧಿ ಕಡಿತಕ್ಕೆ ಮೆಟ್ರೋ ನೌಕರರು ಆಕ್ರೋಶ : ಪ್ರಾದೇಶಿಕ ಭವಿಷ್ಯನಿಧಿ ಆಯುಕ್ತರಿಗೆ ದೂರು

Update: 2018-10-07 23:01 IST

ಬೆಂಗಳೂರು, ಅ.7: ಕಡಿಮೆ ವೇತನ, ಭಡ್ತಿ ಇಲ್ಲದಿರುವುದು ಸೇರಿದಂತೆ ಮೊದಲಾದ ಕಾರಣಗಳಿಗೆ ಬಿಎಂಆರ್‌ಸಿಎಲ್ ವಿರುದ್ಧ ನಿಂತಿದ್ದ ನೌಕರರು ಈಗ ಭವಿಷ್ಯನಿಧಿಯನ್ನು ಕೈಬಿಟ್ಟಿರುವ ಬಗ್ಗೆ ಆಕ್ರೊಶ ವ್ಯಕ್ತಪಡಿಸಿದ್ದಾರೆ. ಅನೇಕ ನೌಕರರು ಪ್ರಾದೇಶಿಕ ಭವಿಷ್ಯನಿಧಿ ಆಯುಕ್ತರಿಗೆ ದೂರು ಸಲ್ಲಿಸಿದ್ದಾರೆ.
ಇಪ್ಪತ್ತಕ್ಕಿಂತ ಅಧಿಕ ನೌಕರರಿರುವ ಸಂಸ್ಥೆಯಲ್ಲಿ ಪಿಎಫ್ ಕಡ್ಡಾಯವಾಗಿ ನೀಡಬೇಕು ಎಂಬ ನಿಯಮವಿದೆ. ಬಿಎಂಆರ್‌ಸಿಎಲ್ ಒಟ್ಟು 1500 ನೌಕರರಿದ್ದು, ಈ ಪೈಕಿ 900 ನೌಕರರು ಗುತ್ತಿಗೆ ಅಡಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಎಲ್ಲ ನೌಕರರೂ ಪಿಎಫ್ ಪಡೆಯಲು ಅರ್ಹರಿದ್ದರೂ, ಕೇವಲ ಹಳೆಯ 200 ನೌಕರರಿಗೆ ಪಿಎಫ್ ಸೌಲಭ್ಯ ನೀಡಲಾಗುತ್ತಿದೆ ಎಂದು ನೌಕರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಖಾಸಗಿ ಬ್ಯಾಂಕ್‌ಗಳ ಸಹಯೋಗದಲ್ಲಿ ಸೂಪರ್ ಆನ್ಯುವೇಶನ್ ಫಂಡ್ ಎಂಬ ಪಿಂಚಣಿ ಯೋಜನೆ ಜಾರಿಗೊಳಿಸಲಾಗಿದ್ದು, ಪಿಎಫ್‌ಗಿಂತ ಈ ಯೋಜನೆಗೆ ಬಿಎಂಆರ್‌ಸಿಎಲ್ ಹೆಚ್ಚು ಖರ್ಚು ಮಾಡಬೇಕಿಲ್ಲ ಎಂದು ನೌಕರರು ಅಪಾದಿಸಿದ್ದಾರೆ.

ವೇತನ ಪರಿಷ್ಕರಣೆಯಾಗದಿರುವುದು, ಬಡ್ತಿ ನೀಡದಿರುವುದು, ಹಿಂದಿ ಭಾಷಿಕ ಅಧಿಕಾರಿಗಳ ದರ್ಪ ಮೊದಲಾದ ಸಮಸ್ಯೆಗಳ ವಿರುದ್ಧ ನಿಂತಿದ್ದ ನೌಕರರು ಹಲವು ಬಾರಿ ಮುಷ್ಕರ ನಡೆಸುವ ತೀರ್ಮಾನಕ್ಕೆ ಬಂದಿದ್ದರು. ಹಲವಾರು ಬಾರಿ ನಡೆಸಿದ ಸಂಧಾನ ಸಭೆಗಳ ನಂತರ ಕೆಲ ಬೇಡಿಕೆಗಳನ್ನು ಈಡೇರಿಸಲಾಗಿದೆ. ಆಗ ನೌಕರರು ಸುಮ್ಮನಾಗಿದ್ದರು. ಈಗ ಪಿಎಫ್ ವಿಷಯ ಬಹಿರಂಗವಾಗಿರುವುದರಿಂದ ನೌಕರರು ಮತ್ತೆ ಕೆರಳಿದ್ದಾರೆ. ಅನೇಕರು ಭವಿಷ್ಯನಿಧಿಯ ಪ್ರಾದೇಶಿಕ ಆಯುಕ್ತರಿಗೆ ದೂರು ನೀಡಿ, ಕ್ರು ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಮಾಹಿತಿ ನೀಡಿಲ್ಲ: ಪಿಎಫ್ ಕೈ ಬಿಟ್ಟು ಸೂಪರ್ ಆನ್ಯುವೇಶನ್ ಫಂಡ್ ನೀಡುತ್ತಿರುವುದರ ಕುರಿತು ನಿಗಮವು ನೌಕರರಿಗೆ ಮಾಹಿತಿ ನೀಡಿಲ್ಲ. ಅನೇಕರು ಈ ಫಂಡ್ ಅನ್ನೇ ಪಿಎಫ್ ಎಂದು ತಿಳಿದಿದ್ದರು. ಇತ್ತಿಚೆಗೆ ನಿವೃತ್ತರಾದ ಎಂ.ಜಿ.ಮಿತ್ರ ಈ ವಿಚಾರವನ್ನು ಬಿಎಂಆರ್ಸಿಎಲ್ ನೌಕರರ ಸಂಘಕ್ಕೆ ತಿಳಿಸಿದ್ದಾರೆ.

ಬಿಎಂಆರ್‌ಟಿಎಲ್ ಬಿಎಂಆರ್‌ಸಿಎಲ್ ಆಗಿ ಬದಲಾವಣೆಗೊಂಡಾಗ ಮಿತ್ರ ಅಲ್ಲಿನ ಉದ್ಯೋಗಿಯಾಗಿ ನೇಮಕವಾಗಿದ್ದರು. ಅದುವರೆಗೂ ಪಿಎಫ್ ಖಾತೆಗೆ ವೇತನದಿಂದ ಹಣ ಕಡಿತವಾಗುತ್ತಿತ್ತು. 2007 ರಲ್ಲಿ ಪಿಎಫ್ ಬದಲು ಸೂಪರ್ ಆನ್ಯುವೇಶನ್ ಫಂಡ್‌ಗಾಗಿ ಹಣ ಕಡಿತಗೊಂಡಿದೆ. ಈ ವೇಳೆ ಅವರು ಆಡಳಿತ ಮಂಡಳಿಗೆ ಪತ್ರ ಬರೆದರೂ, ಯಾವುದೇ ಉತ್ತರ ಸಿಕ್ಕಿರಲಿಲ್ಲ. 2018 ರಲ್ಲಿ ನಿವೃತ್ತಿಯಾದ ಸಂದರ್ಭದಲ್ಲಿ ಹಳೆಯ ಪಿಎಫ್ ಜತೆಗೆ ಸೂಪರ್ ಆನ್ಯುವೇಶನ್ ಮೊತ್ತ ಅಷ್ಟೇ ಪಡೆಯಲು ಸೂಚಿಸಿದ್ದರು ಎಂದು ಅವರು ಹೇಳಿದ್ದಾರೆ.

ಬಿಎಂಆರ್‌ಸಿಎಲ್ ನೌಕರರ ಸಂಘದ ಉಪಾಧ್ಯಕ್ಷ ಸೂರ್ಯನಾರಾಯಣ ಮೂರ್ತಿ ಈ ಕುರಿತು ಪ್ರತಿಕ್ರಿಯಿಸಿ, ಸುಮಾರು 1,300 ನೌಕರರಿಗೆ ಪಿಎಫ್ ನೀಡುತ್ತಿಲ್ಲ. ಮುಷ್ಕರ ಮಾಡುತ್ತೇವೆ ಎಂದಾಗ ನಡೆಸಿದ ಸಂಧಾನ ಸಭೆಗಳಲ್ಲಿ ಈ ಸಮಸ್ಯೆಯನ್ನು ಗಮನಕ್ಕೆ ತರಲಾಗಿತ್ತು. ಆದರೆ ಅಧಿಕಾರಿಗಳು ಈ ಬಗ್ಗೆ ಏನೂ ಹೇಳಿರಲಿಲ್ಲ. ಈಗ ನೌಕರರು ಭವಿಷ್ಯನಿಧಿಗೆ ದೂರು ನೀಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News