ಮಕ್ಕಳಿಗಾಗಿ ಪ್ರತ್ಯೇಕ ವಿಜ್ಞಾನ ಗ್ಯಾಲರಿ: ಕೆ.ಮದನ್ ಗೋಪಾಲ್
ಬೆಂಗಳೂರು, ಅ.7 : ಪ್ರತಿಷ್ಠಿತ ವಿಶ್ವೇಶ್ವರಯ್ಯ ಕೈಗಾರಿಕೆ ಮತ್ತು ತಾಂತ್ರಿಕ ವಸ್ತು ಸಂಗ್ರಹಾಲಯದಲ್ಲಿ ಶೀಘ್ರದಲ್ಲೇ ಹತ್ತು ವರ್ಷದ ಒಳಗಿನ ಮಕ್ಕಳಿಗಾಗಿಯೇ ಪ್ರತ್ಯೇಕ ವಿಜ್ಞಾನ ಗ್ಯಾಲರಿ’ ಆರಂಭವಾಗಲಿದೆ.
ನಗರದ ಕಸ್ತೂರು ಬಾ ರಸ್ತೆಯಲ್ಲಿರುವ ವಸ್ತು ಸಂಗ್ರಹಾಲಯದಲ್ಲಿ 2ರಿಂದ 5ನೇ ತರಗತಿವರೆಗಿನ ಮಕ್ಕಳಿಗೆ ಪೂರಕವಾದ ವಿಜ್ಞಾನ ವಸ್ತುಗಳ ಪ್ರದರ್ಶನ ಕಡಿಮೆ ಪ್ರಮಾಣದಲ್ಲಿದೆ. ಹೀಗಾಗಿ, ಈ ಹಂತದ ಮಕ್ಕಳಲ್ಲಿ ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸುವ ಸಲುವಾಗಿ ಪ್ರತ್ಯೇಕ ಗ್ಯಾಲರಿ ನಿರ್ಮಿಸಲಾಗುತ್ತಿದೆ. ಮುಂದಿನ ವರ್ಷದ ಮಾರ್ಚ್ ಅಂತ್ಯಕ್ಕೆ ಕಾಮಗಾರಿ ಮುಕ್ತಾಯವಾಗಲಿದೆ ಎಂದು ವಸ್ತುಸಂಗ್ರಹಾಲಯದ ನಿರ್ದೇಶಕ ಕೆ. ಮದನ್ ಗೋಪಾಲ್ ಹೇಳಿದ್ದಾರೆ.
ನಗರದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ವಿಜ್ಞಾನಗೋಷ್ಠಿಯಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಮಾರು 80 ಲಕ್ಷ ವೆಚ್ಚದಲ್ಲಿ 300 ಚದರಡಿ ಜಾಗದಲ್ಲಿ ಈ ವಿಜ್ಞಾನ ಗ್ಯಾಲರಿ ತಯಾರಾಗುತ್ತಿದೆ ಎಂದು ಮಾಹಿತಿ ನೀಡಿದರು.
ಅನ್ವೇಷಣೆ ಮನೋಭಾವ ಬೆಳೆಸುವುದು, ಬಣ್ಣಗಳು, ವಿಜ್ಞಾನದ ವಿಸ್ಮಯಗಳು ಸೇರಿದಂತೆ ಆಯಾ ವಯಸ್ಸಿಗೆ ತಕ್ಕಂತೆ ವಿಜ್ಞಾನದ ಬಗ್ಗೆ ತಿಳಿವಳಿಕೆ ನೀಡುವುದು ಇದರ ಉದ್ದೇಶವಾಗಿದೆ. ಇಂತಹ ವ್ಯವಸ್ಥೆ ಕೊಲ್ಕತ್ತಾ ಹೊರತುಪಡಿಸಿ ಬೇರೆ ಎಲ್ಲಿಯೂ ಇಲ್ಲ ಎಂದು ತಿಳಿಸಿದರು.
ಬಯೋಟೆಕ್ನಾಲಜಿ ಗ್ಯಾಲರಿ: ಬೆಂಗಳೂರು ನಗರ ಮಾಹಿತಿ ತಂತ್ರಜ್ಞಾನದಲ್ಲಿ ಅಷ್ಟೇ ಅಲ್ಲದೆ, ಜೈವಿಕ ತಂತ್ರಜ್ಞಾನದಲ್ಲಿಯೂ ಮುಂದುವರಿದಿದೆ. ಈ ನಿಟ್ಟಿನಲ್ಲಿ ಮುಂಧಿನ ತಲೆಮಾರಿಗೆ ಜೈವಿಕ ತಂತ್ರಜ್ಞಾನ ಕುರಿತ ಅನ್ವೇಷಣೆಗಳನ್ನು ಪರಿಚಯಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಮುಂದಿನ ವರ್ಷದ ಜೂನ್‌ನಿಂದ ಜೈವಿಕ ತಂತ್ರಜ್ಞಾನ ಗ್ಯಾಲರಿಯನ್ನು ಆರಂಭ ಮಾಡಲಾಗುತ್ತದೆ ಎಂದರು.
ಜೈವಿಕ ತಂತ್ರಜ್ಞಾನ ಗ್ಯಾಲರಿ ನಗರ ಕೇಂದ್ರೀತ ಮಕ್ಕಳಿಗೆ ಸೀಮಿತವಾಗದೇ ಗ್ರಾಮೀಣ ಭಾಗಕ್ಕೂ ವಿಸ್ತರಣೆಯಾಗಬೇಕು ಎಂಬ ಉದ್ದೇಶದಿಂದ ಸಂಚಾರಿ ವಾಹನದಲ್ಲಿ ವಿಜ್ಞಾನಲೋಕವನ್ನು ಪರಿಚಯಿಸುವ ಕೆಲಸ ನಡೆಯುತ್ತಿದೆ ಎಂದು ಅವರು ಹೇಳಿದರು.