ಕಿದ್ವಾಯಿಯಲ್ಲಿ ಉಚಿತ ತಪಾಸಣೆ : ರಾಜ್ಯದಲ್ಲೇ ಹೆಚ್ಚು ಸ್ತನ ಕ್ಯಾನ್ಸರ್ ರೋಗಿಗಳು

Update: 2018-10-07 18:27 GMT

ಬೆಂಗಳೂರು, ಅ. 7: ಬೇರೆ ಕ್ಯಾನ್ಸರ್‌ಗಳಿಗೆ ಹೋಲಿಸಿದರೆ ಸ್ತನ ಕ್ಯಾನ್ಸರ್ ರೋಗಿಗಳೇ ರಾಜ್ಯದಲ್ಲಿ ಹೆಚ್ಚಿದ್ದಾರೆ. ಕಿದ್ವಾಯಿ ಕ್ಯಾನ್ಸರ್ ಸಂಸ್ಥೆಗೆ ವರ್ಷಕ್ಕೆ 10ಸಾವಿರ ಸ್ತನ ಕ್ಯಾನ್ಸರ್ ರೋಗಿಗಳು ಚಿಕಿತ್ಸೆಗಾಗಿ ಬರುತ್ತಿದ್ದಾರೆ ಎಂದು ಕಿದ್ವಾಯಿ ಸಂಸ್ಥೆಯ ಸಹ ನಿರ್ದೇಶಕ ಡಾ.ಸಿ.ರಾಮಚಂದ್ರ ಮಾಹಿತಿ ನೀಡಿದ್ದಾರೆ.
ರಾಜ್ಯದಲ್ಲಿ ವರ್ಷಕ್ಕೆ 1ಲಕ್ಷ ಕ್ಯಾನ್ಸರ್ ರೋಗಿಗಳಲ್ಲಿ 24 ಮಂದಿ ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಅಲ್ಲದೆ, ಬೆಂಗಳೂರಿನಲ್ಲಿ ಈ ಪ್ರಮಾಣ 34ರಷ್ಟಿದೆ ಎಂದು ತಿಳಿಸಿದ್ದಾರೆ.

ಅಕ್ಟೋಬರ್‌ನಲ್ಲಿ ‘ವಿಶ್ವ ಸ್ತನ ಕ್ಯಾನ್ಸರ್ ಜಾಗೃತಿ’ ತಿಂಗಳನ್ನು ಅಚರಿಸಲಾಗುತ್ತದೆ. ಈ ಉದ್ದೇಶದಿಂದ ಕಿದ್ವಾಯಿ ಸಂಸ್ಥೆ ನಗರದ ಕೆಲ ಮಹಿಳೆಯರ ಕಾಲೇಜುಗಳಲ್ಲಿ ಉಪನ್ಯಾಸಕ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಆರಂಭಿಕ ಹಂತದಲ್ಲಿಯೇ ಕ್ಯಾನ್ಸರ್ ಪತ್ತೆಯಾದರೆ ಶೇ.80ಕ್ಕಿಂತ ಹೆಚ್ಚು ರೋಗಿಗಳು ಗುಣಮುಖರಾಗುತ್ತಾರೆ. ಎಲ್ಲರೂ ಸುಲಭವಾಗಿ ಸ್ತನ ಕ್ಯಾನ್ಸರ್ ಲಕ್ಷಣಗಳನ್ನು ಪತ್ತೆ ಹಚ್ಚಬಹುದು ಎಂದು ಹೇಳಿದ್ದಾರೆ.

ಉಚಿತ ತಪಾಸಣೆ ಅಕ್ಟೋಬರ್ ತಿಂಗಳ ಅಂತ್ಯದವರೆಗೂ ನಡೆಯುತ್ತದೆ. 40 ವರ್ಷ ಮೇಲ್ದಟ್ಟ ಮಹಿಳೆಯರಿಗೆ ಸ್ತನ ಕ್ಯಾನ್ಸರ್ ಲಕ್ಷಣಗಳು ಕಂಡುಬಂದರೆ ಅವರು ಆಸ್ಪತ್ರೆಗೆ ಬಂದು ತಪಾಸಣೆ ಮಾಡಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ: 080 26560722 ಅನ್ನು ಸಂಪರ್ಕಿಸಬಹುದು.

ಉಚಿತ ತಪಾಸಣೆ: ಕಿದ್ವಾಯಿ ಕ್ಯಾನ್ಸರ್ ಸಂಸ್ಥೆಯಲ್ಲಿ ಒಂದು ತಿಂಗಳು ಉಚಿತವಾಗಿ ‘ಸ್ತನ ಕ್ಯಾನ್ಸರ್’ ತಪಾಸಣೆ ನಡೆಸಲಾಗುತ್ತದೆ. ಈಗಾಗಲೇ ಉಚಿತವಾಗಿ ಮ್ಯಾಮೋಗ್ರಫಿ ಮಾಡಲು ಆರಂಭಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News