ಸೌದಿ ಸಂಕಟ: ಕೇರಳದಲ್ಲಾಗುವ ಪ್ರಯತ್ನ ಕರ್ನಾಟಕದಲ್ಲಿ ಏಕೆ ಅಸಾಧ್ಯ?

Update: 2018-10-08 05:33 GMT

► ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಇನ್ನೂ ತೆರೆಯದ ನೋಂದಣಿ ಕೇಂದ್ರ

► ಧೂಳು ತಿನ್ನುತ್ತಿರುವ ವಿಧಾನ ಮಂಡಲ ಸಮಿತಿಯ ವರದಿ

ಭಾಗ-3

ನಿತಾಕತ್ ಸಮಸ್ಯೆಗೆ ಸಿಲುಕಿ ಸೌದಿಯಿಂದ ಊರಿಗೆ ಮರಳಿ ಬರುವವರ ಸಂಖ್ಯೆ ಹೆಚ್ಚುತ್ತಿದೆ. ನವೆಂಬರ್ 9ರಿಂದ ಇಲೆಕ್ಟ್ರಾನಿಕ್ಸೃ್ ಅಂಗಡಿಗಳು, ಕೈಗಡಿಯಾರ ಮತ್ತು ಗಡಿಯಾರದ ಅಂಗಡಿಗಳು, ಕನ್ನಡಕಗಳ ಅಂಗಡಿಗಳಲ್ಲಿ ವಲಸಿಗರ ನೇಮಕಾತಿಯನ್ನು ನಿರ್ಬಂಧಿಸಿರುವುದು ಅನಿವಾಸಿ ಭಾರತೀಯರ ಆತಂಕವನ್ನು ಇನ್ನಷ್ಟು ಹೆಚ್ಚಿಸಿದೆ.

 ಈ ರೀತಿ ಸಂಕಷ್ಟಕ್ಕೊಳಗಾಗಿ ಮರಳುವವರಿಗೆ ನೆರವು ನೀಡುವ ಮತ್ತು ಮರಳಿ ಬಂದವರ ಸಮಗ್ರ ಮಾಹಿತಿ ಕಲೆ ಹಾಕುವ ಸಲುವಾಗಿ ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ನೋಂದಣಿ ಕೇಂದ್ರ ತೆರೆಯಲಾಗುವುದು ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ತಿಳಿಸಿದ್ದರು. ಸಚಿವರು ಈ ಹೇಳಿಕೆ ನೀಡಿ ಒಂದು ತಿಂಗಳಾದರೂ ಇನ್ನೂ ಆ ಕೇಂದ್ರ ತೆರೆಯಲ್ಪಟ್ಟಿಲ್ಲ. ಈ ನಡುವೆ ಅನಿವಾಸಿ ಕನ್ನಡಿಗರ ಕಲ್ಯಾಣಕ್ಕಾಗಿ ಕರ್ನಾಟಕ ವಿಧಾನ ಮಂಡಲದ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ ರಾಜ್ಯ ಸರಕಾರಕ್ಕೆ ಸಲ್ಲಿಸಿದ ವರದಿ 20 ತಿಂಗಳಾದರೂ ಧೂಳು ತಿನ್ನುತ್ತಿವೆ. ಆ ಹಿನ್ನೆಲೆಯಲ್ಲಿ ‘ವಾರ್ತಾಭಾರತಿ’ ಸಿದ್ಧಪಡಿಸಿದ ಸೌದಿ ಸಂಕಟದ ಮೂರನೇ ಕಂತಿನ ವರದಿ ಇಲ್ಲಿದೆ.

ಕೇರಳ ಅನಿವಾಸಿ ಭಾರತೀಯ ಸಮಿತಿ (ನೊರ್ಕಾ): ಕೇರಳ ಸರಕಾರವು ಅನಿವಾಸಿ ಕೇರಳಿಗರ ಕಲ್ಯಾಣಕ್ಕಾಗಿ ಅವರ ಕುಂದು ಕೊರತೆಗಳಿಗೆ ಸ್ಪಂದಿಸಲು, ಸ್ವದೇಶಕ್ಕೆ ಹಿಂದಿರುಗುವ ವಲಸೆಗಾರರಿಗೆ ಪುನರ್ವಸತಿ ಕಲ್ಪಿಸಲು, ಉದ್ಯೋಗ ಸೃಷ್ಟಿಸಲು ನಾನ್ ರೆಸಿಡೆಂಟ್ ಕೇರಳಿಟ್ಸ್ ಅಫೈರ್ಸ್‌ (ನೊರ್ಕಾ)ವನ್ನು 1996ರಲ್ಲಿ ಸ್ಥಾಪಿಸಿದೆ. ಇದನ್ನು ಆರಂಭದಲ್ಲಿ ಸಾಮಾನ್ಯ ಆಡಳಿತ ವಿಭಾಗ ನಿರ್ವಹಿಸುತ್ತಿತ್ತು. ಇದರ ಅಧೀನದಲ್ಲಿ ನೊರ್ಕಾ ರೂಟ್ಸ್ ಮತ್ತು ದಿ ಕೇರಳ ನಾನ್ ರೆಸಿಡೆಂಟ್ ಕೇರಳಿಟ್ಸ್ ವೆಲ್ಫೇರ್ ಬೋರ್ಡ್ ಎಂಬ ಎರಡು ಸರಕಾರಿ ಸಾರ್ವಜನಿಕ/ಸ್ವಾಮ್ಯದ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಕಳೆದ ವರ್ಷದ ಬಜೆಟ್‌ನಲ್ಲಿ ಕೇರಳ ಸರಕಾರವು ಇದಕ್ಕೆ 148.85 ಕೋ.ರೂ. ಮೀಸಲಿಟ್ಟಿತ್ತು.

‘ನೊರ್ಕಾ ರೂಟ್ಸ್’ನ್ನು 2002ರಲ್ಲಿ ಸ್ಥಾಪಿಸಲಾಗಿದೆ. 2008ರಲ್ಲಿ ಇದನ್ನು ಸರಕಾರಿ ಕಂಪೆನಿಯಾಗಿ ಪರಿವರ್ತಿಸಲಾಯಿತು. ಈ ಸಂಸ್ಥೆಯಲ್ಲಿ ಶೇ.51.03ರಷ್ಟು ಶೇರು ಬಂಡವಾಳವನ್ನು ಕೇರಳ ಸರಕಾರ ಹೊಂದಿದ್ದು, ಉಳಿದ 48.97ರಷ್ಟು ಶೇರನ್ನು ಅನಿವಾಸಿ ಕೇರಳಿಗರು ಹೊಂದಿರುತ್ತಾರೆ. ಈ ಸಂಸ್ಥೆಗೆ ಬರುವ ಆದಾಯದಲ್ಲಿ ಆಡಳಿತಾತ್ಮಕ ವೆಚ್ಚಗಳನ್ನು ಭರಿಸಲಾಗುತ್ತದೆ. ಸರಕಾರವು ಕೇವಲ ಕಲ್ಯಾಣ ಕಾರ್ಯಕ್ರಮಗಳಿಗೆ ಮಾತ್ರ ಅನುದಾನ ಒದಗಿಸುತ್ತದೆ.

ತಿರುವನಂತಪುರಂನಲ್ಲಿ ಕೇಂದ್ರ ಕಚೇರಿ ಹೊಂದಿರುವ ‘ನೊರ್ಕಾ’ವು ತಿರುವನಂತಪುರಂ, ಕಲ್ಲಿಕೋಟೆ, ಎರ್ನಾಕುಲಂನಲ್ಲಿ ಸರ್ಟಿಫಿಕೇಟ್ ಅಟೆಸ್ಟೇಶನ್ ಸೆಂಟರ್‌ಗಳನ್ನು ಹೊಂದಿದೆ. ಹೊಸದಿಲ್ಲಿ ಮತ್ತು ಮುಂಬೈ ಯಲ್ಲಿ ಅನಿವಾಸಿ ಕೇರಳಿಗರ ಅಭಿವೃದ್ಧಿ ಕಚೇರಿಗಳಿವೆ. ಚೆನ್ನೈ, ಬೆಂಗಳೂರು, ಬರೋಡಾ, ಹೈದರಾಬಾದ್‌ನಲ್ಲಿ ಉಪ ಕಚೇರಿಯನ್ನೂ ಹೊಂದಿದೆ.

ಕೇರಳದ ಯಾವೊಬ್ಬ ವ್ಯಕ್ತಿಯು ವಿದೇಶದಲ್ಲಿ 2 ವರ್ಷಗಳಿಗಿಂತ ಹೆಚ್ಚು ಕಾಲ ನೆಲೆಸಿದ್ದರೆ ಅವರನ್ನು ಅನಿವಾಸಿ ಕೇರಳಿಗರ ಕಲ್ಯಾಣ ಕಾರ್ಯ ಕ್ರಮಗಳ ಫಲಾನುಭವಿ ಎಂದು ಪರಿಗಣಿಸಲಾಗುತ್ತದೆ. ಈ ಸಂಸ್ಥೆಯ ಅಧ್ಯಕ್ಷರಾಗಿ ಕೇರಳದ ಮುಖ್ಯಮಂತ್ರಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಲ್ಲದೆ ಇಬ್ಬರು ಉಪಾಧ್ಯಕ್ಷರು ಮತ್ತು 7 ನಿರ್ದೇಶಕರನ್ನು ಒಳಗೊಂಡ ಮಂಡಳಿಯೂ ಇದೆ. ಈ ಸಂಸ್ಥೆಯು ಅನಿವಾಸಿ ಕೇರಳಿಗರು ವಿದೇಶಗಳಲ್ಲಿ ಎದುರಿಸುವ ಸಮಸ್ಯೆಗಳ ನಿವಾರಣೆ, ಅವರ ಹಕ್ಕುಗಳ ಸಂರಕ್ಷಣೆ, ವಿದೇಶದಿಂದ ಹಿಂದಿರುಗುವ ಕೇರಳಿಗರಿಗೆ ಪುನರ್ವಸತಿ ಕಲ್ಪಿಸಲು ಮತ್ತು ಬಂಡವಾಳ ಹೂಡಿಕೆಗೆ ಹಾಗೂ ಕೇರಳ ಸರಕಾರ ನೀಡಿರುವ ಅವಕಾಶಗಳನ್ನು ಉಪಯೋಗಿಸಿಕೊಳ್ಳಲು ಅನುಕೂಲ ಕಲ್ಪಿಸುವ ದಿಶೆಯಲ್ಲಿ ಇಲಾಖೆಯು ಸರಕಾರದ ನೋಡಲ್ ಏಜೆನ್ಸಿಯಾಗಿ ಕಾರ್ಯನಿರ್ವಹಿಸುತ್ತಿವೆ.

ವಿದೇಶಗಳಲ್ಲಿ ಕಾನೂನಾತ್ಮಕವಾಗಿ ಲಾಭದಾಯಕ ಹುದ್ದೆಗಳನ್ನು ಪಡೆಯಲು ಮತ್ತು ಕ್ರಮಬದ್ಧ ವಲಸೆಗೆ ಅನುಕೂಲ ಕಲ್ಪಿಸುವುದು, ವಿದೇಶಗಳಿಂದ ಹಿಂದಿರುಗುವ ಪ್ರಜೆಗಳಿಗೆ ಪುನರ್ವಸತಿ ಮತ್ತು ಏಕೀಕರಣಕ್ಕೆ ಅವಕಾಶ ಕಲ್ಪಿಸುವುದು, ವಲಸೆಗಾರರಿಗೆ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ಆಯೋಜಿಸುವುದು, ಅನಾರೋಗ್ಯದಿಂದ ವಿದೇಶಗಳಿಂದ ಹಿಂದಿರುಗುವ ವಲಸೆಗಾರರಿಗೆ ಆರ್ಥಿಕ ಸಹಾಯ ನೀಡುವುದು, ವಿದೇಶಗಳಿಂದ ಹಿಂದಿರುಗುವ ವಲಸೆಗಾರರಿಗೆ ವ್ಯಾಪಾರದಲ್ಲಿ ಬಂಡವಾಳ ಹೂಡಿಕೆಗೆ ರಿಯಾಯಿತಿ ಒದಗಿಸುವುದು, ವಲಸೆಗಾರರ ಡೇಟಾಬೇಸ್ ಸಿದ್ಧಪಡಿಸುವುದು ಇತ್ಯಾದಿ ನೊರ್ಕಾದ ಉದ್ದೇಶಗಳಾಗಿವೆ.

ನೊರ್ಕಾ ಈಗಾಗಲೇ ಹಲವು ಕಲ್ಯಾಣ ಕಾರ್ಯಗಳನ್ನು ಅನುಷ್ಠಾನ ಗೊಳಿಸಿವೆ. ಅವುಗಳಲ್ಲಿ ಪ್ರಮುಖವಾದವುಗಳು ಈ ಕೆಳಗಿನಂತಿವೆ.

ಸಾಂತ್ವನ: ನೊರ್ಕಾ ಈಗಾಗಲೇ ಹಲವು ಕಲ್ಯಾಣ ಕಾರ್ಯ ಗಳನ್ನು ಅನುಷ್ಠಾನಗೊಳಿಸಿವೆ. ಅವುಗಳಲ್ಲಿ ‘ಸಾಂತ್ವನ’ ಯೋಜನೆಯಡಿ ವಿದೇಶದಿಂದ ಮರಳಿದ ಆರ್ಥಿಕ ಸಂಕಷ್ಟದಲ್ಲಿರುವ ವಾರ್ಷಿಕ ಆದಾಯ 1 ಲಕ್ಷ ರೂ.ಗಿಂತ ಕಡಿಮೆ ಇರುವವರಿಗೆ ಆರ್ಥಿಕ ನೆರವು, ಮರಣ ಹೊಂದಿದವರಿಗೆ 1 ಲಕ್ಷ ರೂ., ಗಂಭೀರ ಖಾಯಿಲೆಗಳಿಗೆ ಸಂಬಂಧಿಸಿ ವೈದ್ಯಕೀಯ ಚಿಕಿತ್ಸೆ ವೆಚ್ಚ 50 ಸಾವಿರ ರೂ., ಇತರ ಖಾಯಿಲೆಗೆ 20 ಸಾವಿರ ರೂ., ಮದುವೆಗೆ 15 ಸಾವಿರ ರೂ., ಕೃತಕ ಕಾಲುಗಳು, ವ್ಹೀಲ್ ಚೇರ್, ಸ್ಟ್ರೆಕ್ಚರ್ಸ್‌ ಖರೀದಿಗೆ 10 ಸಾವಿರ ರೂ. ನೀಡಲಾಗುತ್ತದೆ. ಈ ಸೌಲಭ್ಯ ಪಡೆಯುವಾಗ ಫಲಾನುಭವಿ ಉದ್ಯೋಗಿಯಾಗಿರಬಾರದು ಎಂಬ ಷರತ್ತನ್ನು ವಿಧಿಸಿದೆ. ಅರ್ಹ ಫಲಾನುಭವಿಗಳು ಈ ಯೋಜನೆಯಡಿ ಆರ್ಥಿಕ ಸಹಾಯ ಪಡೆಯಲು ಸಾಧ್ಯವಾಗದ ಸಂದರ್ಭ ಮಂಡಳಿಯ ಅನುಮೋದನೆಯೊಂದಿಗೆ ಅಧ್ಯಕ್ಷರ ನಿಧಿಯಿಂದ ಹಣಕಾಸಿನ ಸಹಾಯವನ್ನೂ ಒದಗಿಸಲಾಗುತ್ತದೆ.

ಕಾರುಣ್ಯಂ: ಅದಲ್ಲದೆ ‘ಕಾರುಣ್ಯಂ’ ಯೋಜನೆಯಡಿ ಕೇರಳಿಗರ ಮೃತದೇಹವನ್ನು ತಾಯ್ನಡಿಗೆ ತರಲು ಪ್ರತ್ಯೇಕ ಹಣಕಾಸು ಒದಗಿಸುವುದು, ಅನಿವಾಸಿ ಕೇರಳಿಗರು ಮೃತಪಟ್ಟ ಪ್ರಕರಣಗಳಲ್ಲಿ ಕಾನೂನಾತ್ಮಕ ಉತ್ತರಾಧಿಕಾರಿಗಳಿಗೆ ಹಣ ಮಂಜೂರಾತಿ (ವಿಮಾನ ಅಥವಾ ರೈಲುಮೂಲಕ), ಕುಟುಂಬಸ್ಥರು ಈ ವೆಚ್ಚ ಭರಿಸಿದರೆ ಅದನ್ನು ಮರುಪಾವತಿಸುವುದು, ವಿದೇಶದಲ್ಲಿ ಮರಣ ಹೊಂದಿದ ಪ್ರಕರಣಗಳಲ್ಲಿ ಗರಿಷ್ಠ 50 ಸಾವಿರ ರೂ. ಮತ್ತು ದೇಶದಲ್ಲಿ ಮರಣ ಹೊಂದಿದ ಸಂದರ್ಭ 15 ಸಾವಿರ ರೂ. ಸಹಾಯ ನೀಡುವುದು ಇದರಲ್ಲಿ ಸೇರಿದೆ.

ಈ ಸಂಸ್ಥೆಯು ಪ್ರಮಾಣಪತ್ರಗಳ ದೃಢೀಕರಣ ಸೇವೆ ನೀಡುವ ಕೇಂದ್ರ ಸರಕಾರದ ಅಧಿಕೃತ ಏಜೆನ್ಸಿಯಾಗಿಯೂ ರೂಪುಗೊಂಡಿವೆ. ಸಾಮಾಜಿಕ ಭದ್ರತೆ/ವಿಮೆ ಯೋಜನೆಗೆ ನೆರವು ಅಲ್ಲದೆ ಪ್ರವಾಸಿ ಗುರುತಿನ ಚೀಟಿ ಮತ್ತು ಎನ್‌ಆರ್‌ಕೆ ಇನ್ಸೂರೆನ್ಸ್ ಕಾರ್ಡ್ ಹೊಂದಿದವರು 3 ವರ್ಷಗಳ ಅವಧಿಗೆ ಪ್ರತೀ ತಿಂಗಳು 300 ರೂ. ಪಾವತಿಸಬೇಕಾಗುತ್ತದೆ. ಶಾಶ್ವತ ಅಶಕ್ತತೆ, ಅಪಘಾತ-ಮರಣ ಹೊಂದಿದ ಸಂದರ್ಭ 2 ಲಕ್ಷ ರೂ. ಮೊತ್ತದ ವಿಮಾ ಸೌಲಭ್ಯ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಅದಲ್ಲದೆ ಪುನರ್ವಸತಿ ಕಾರ್ಯಕ್ರಮದಡಿ ಯೋಜನಾ ವೆಚ್ಚಕ್ಕೆ ಅನುಗುಣವಾಗಿ 20 ಲಕ್ಷ ರೂ.ವರೆಗೆ ಸಾಲ, ಯೋಜನಾ ವೆಚ್ಚದ ಶೇ.15ರಷ್ಟು ರಿಯಾಯಿತಿ ಮತ್ತು ಸಾಲದ ಮೇಲಿನ ಬಡ್ಡಿಗೆ 4 ವರ್ಷದವರೆಗೆ ಶೇ.3ರಷ್ಟು ರಿಯಾಯಿತಿ ನೀಡಲಾಗುತ್ತದೆ. ಈ ಯೋಜನೆಯ ಅನುಷ್ಠಾನಕ್ಕಾಗಿ 4 ರಾಷ್ಟ್ರೀಕೃತ ಬ್ಯಾಂಕ್‌ನೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ.

ಪ್ರವಾಸಿ ಲೀಗಲ್ ಏಡ್ ಸೆಲ್: ವಿದೇಶಗಳಲ್ಲಿ ಸಣ್ಣಪುಟ್ಟ ಅಪರಾಧಗಳಿಗೆ ಅಥವಾ ನಿರಪರಾಧಿಗಳಿಗೆ ಸೆರೆವಾಸ ವಿಧಿಸಿದ ಸಂದರ್ಭ ಅಗತ್ಯ ಕಾನೂನು ನೆರವಾಗುವ ಉದ್ದೇಶದಿಂದ ಪ್ರವಾಸಿ ಲೀಗಲ್ ಏಡ್ ಸೆಲ್ ಸ್ಥಾಪಿಸಲಾಗಿದೆ. ಈ ಯೋಜನೆಯಲ್ಲಿ ಕೇರಳದ ಮಹಿಳೆಯರು ರಾಯಭಾರಿ ಕಚೇರಿ ಆಶ್ರಯಿಸಲು ಪ್ರಯಾಣ ಸೌಕರ್ಯ ಕಲ್ಪಿಸಲಾಗುತ್ತದೆ.

ಸ್ವಪ್ನ ಸಾಫಲ್ಯಂ: ಈ ಯೋಜನೆಯಲ್ಲಿ ಗಲ್ಫ್ ರಾಷ್ಟ್ರಗಳಲ್ಲಿ ಕೆಳಹಂತದ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುವ ಅನಿವಾಸಿ ಕೇರಳಿಗರು ಆ ದೇಶಗಳ ಕಾನೂನು ನಿಯಮಗಳು, ಭಾಷೆ, ಸಂಸ್ಕೃತಿ, ಇತರ ವಿಧಾನಗಳ ಅರಿವಿಲ್ಲದೆ ತೊಂದರೆಗೆ ಸಿಲುಕಿದಾಗ ಅಥವಾ ಸೆರೆವಾಸ ಅನುಭವಿಸಿ ಬಿಡುಗಡೆ ಹೊಂದಿ ಆರ್ಥಿಕವಾಗಿ ದುಸ್ಥಿತಿಯಲ್ಲಿರುವ ಅನಿವಾಸಿ ಕೇರಳಿಗರಿಗೆ ಉಚಿತ ವಿಮಾನ ಪ್ರಯಾಣ ಸೌಲಭ್ಯ ನೀಡಲಾಗುತ್ತದೆ.

ಅರಿವು: ವಿದೇಶದಲ್ಲಿ ಉದ್ಯೋಗ ಬಯಸುವವರಿಗೆ ಪಾಸ್‌ಪೋರ್ಟ್, ವೀಸಾ, ಎಮಿಗ್ರೇಶನ್ ನಿಯಮಗಳು, ಉದ್ಯೋಗ ಒಪ್ಪಂದ, ಪ್ರಯಾಣದ ರೀತಿ-ನೀತಿ, ಆರ್ಥಿಕ ಜ್ಞಾನ, ಕಾನೂನಾತ್ಮಕ ಹಣ ವರ್ಗಾವಣೆ, ವಿದೇಶಗಳ ಭಾಷೆ, ಸಂಸ್ಕೃತಿ ಮತ್ತು ಪದ್ಧತಿಗಳ ಬಗ್ಗೆ ತರಬೇತಿ ಕಾರ್ಯಕ್ರಮ ಆಯೋಜಿಸಲಾಗುತ್ತದೆ.

ಜಾಬ್ ಪೋರ್ಟಲ್: ಉದ್ಯೋಗದ ಹುಡುಕಾಟ ಅಥವಾ ಪ್ರತಿಭಾವಂತರ ಆಯ್ಕೆಗಾಗಿ ಜಾಬ್ ಪೋರ್ಟಲ್ ತೆರೆಯಲಾಗಿದ್ದು, ಆನ್‌ಲೈನ್ ಮೂಲಕ ಮಾಹಿತಿ ವಿನಿಮಯ ಮಾಡಲಾಗುತ್ತದೆ.ಅದಲ್ಲದೆ ಕೌಶಲ್ಯ ಅಭಿವೃದ್ಧಿ ತರಬೇತಿ ಕಾರ್ಯಕ್ರಮಗಳಲ್ಲದೆ ಕುಂದುಕೊರೆತಗಳ ಆಲಿಕೆಗಾಗಿ ಪ್ರತ್ಯೇಕ ಕಾಲ್ ಸೆಂಟರ್/ಹೆಲ್ಪ್‌ಲೈನ್ ತೆರೆಯಲಾಗಿದೆ.

ಅನಿವಾಸಿ ಕೇರಳಿಗರಿಗೆ ವಿವಾಹ ದೃಢೀಕರಣ ಪತ್ರ, ಶೈಕ್ಷಣಿಕ ಪ್ರಮಾಣ ಪತ್ರಗಳ ದೃಢೀಕರಣ ಮತ್ತು ವೀಸಾ ತಪಾಸಣೆಯ ಸೌಲಭ್ಯ ಇತ್ಯಾದಿಯು ಒಂದೇ ಕಡೆ ಸಿಗುವಂತೆ ವ್ಯವಸ್ಥೆ ಮಾಡಲಾಗಿದೆ.

► ದಿ ಕೇರಳ ನಾನ್ ರೆಸಿಡೆಂಟ್ ಕೇರಳಿಟ್ಸ್ ವೆಲ್ಫೇರ್ ಬೋರ್ಡ್

ಇದನ್ನು ದೇಶದಲ್ಲೇ ಪ್ರಥಮವಾಗಿ ಕೇರಳ ಸರಕಾರವು 2008ರಲ್ಲಿ ಸ್ಥಾಪಿಸಿದೆ. ಇದಕ್ಕಾಗಿ ಕಲ್ಯಾಣ ಕಾಯ್ದೆಯನ್ನು ರೂಪಿ ಸಲಾಗಿದ್ದು, ಈ ನಿಯಮದಡಿ ದೇಶ ಮತ್ತು ವಿದೇಶ ದಲ್ಲಿ ಕೇರಳಿಗರ ಕಲ್ಯಾಣ ಕಾರ್ಯಕ್ರಮಗಳಿಗೆ ನಿಧಿಯನ್ನು ಸಂಗ್ರಹಿಸಲಾಗುತ್ತದೆ. ಇದರ ಸದಸ್ಯತ್ವ ಪಡೆಯಲು 18ರಿಂದ 55 ವರ್ಷದೊಳಗಿನ ಪ್ರತೀ ಅನಿವಾಸಿ ಕೇರಳಿಗರು ಅರ್ಹರಿರುತ್ತಾರೆ. ವಿದೇಶದಲ್ಲಿ ಕನಿಷ್ಠ 2 ವರ್ಷಗಳ ಕಾಲ ಸೇವೆ ಸಲ್ಲಿಸಿ ಶಾಶ್ವತವಾಗಿ ಸ್ವದೇಶದಲ್ಲಿ ನೆಲೆಸಲು ಹಿಂದಿರುಗುವ ಅನಿವಾಸಿ ಕೇರಳಿಗರು ಸಹ ಮಂಡಳಿಯ ಸದಸ್ಯತ್ವ ಹೊಂದ ಬಹುದು. ಆ ಮೂಲಕ ನಿವೃತ್ತಿ ವೇತನ ಯೋಜನೆ, ಕುಟುಂಬ ನಿವೃತ್ತಿ ವೇತನ ಯೋಜನೆ, ಅಶಕ್ತತಾ ನಿವೃತ್ತಿ ವೇತನ ಯೋಜನೆ, ಮರಣ ಹೊಂದಿದ ಅನಿವಾಸಿ ಕೇರಳಿಗರ ಅವಲಂಬಿತರಿಗೆ ಆರ್ಥಿಕ ಸಹಾಯ ಯೋಜನೆ, ವೈದ್ಯಕೀಯ ಚಿಕಿತ್ಸೆಗೆ ಆರ್ಥಿಕ ಸಹಾಯ ಯೋಜನೆ, ಅಪಘಾತ-ಮರಣ ಮತ್ತ ಆರೋಗ್ಯ ವಿಮಾ ಯೋಜನೆ, ಉನ್ನತ ಶಿಕ್ಷಣಕ್ಕಾಗಿ ಸಹಾಯಧನ ಯೋಜನೆ, ಸ್ವ ಉದ್ಯೋಗ ಮತ್ತು ಗೃಹ ಸಾಲದ ಪಾವತಿ ಯೋಜನೆ, ವೃದ್ಧ್ದಾಪ್ಯ ನೆರವು ಹೀಗೆ ಹತ್ತು ಹಲವು ಯೋಜನೆಗಳನ್ನು ರೂಪಿಸಲಾಗಿದೆ.

ಕಲ್ಯಾಣ ಸಮಿತಿಯ ಶಿಫಾರಸು

ಕರ್ನಾಟಕ ವಿಧಾನ ಮಂಡಲದ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿಗೆ ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಅಂದಿನ ಶಾಸಕ ಜೆ.ಆರ್.ಲೋಬೊ ಅಧ್ಯಕ್ಷರಾಗಿದ್ದ ವೇಳೆ ಅನಿವಾಸಿ ಭಾರತೀಯ ಕನ್ನಡಿಗರ ಶ್ರೇಯೋಭಿವೃದ್ಧಿಗೆ ಪೂರಕವಾದ ಕೆಲವೊಂದು ಶಿಫಾರಸುಗಳನ್ನು ಸರಕಾರಕ್ಕೆ ಮುಂದಿರಿಸಿತ್ತು.

 ಕೇರಳದಂತೆ ಕರ್ನಾಟಕದಲ್ಲೂ ‘ನೊರ್ಕಾ’ ಎಂಬ ಪ್ರತ್ಯೇಕ ಇಲಾಖೆ ಸ್ಥಾಪಿಸಿ ‘ನೊರ್ಕಾ ರೂಟ್ಸ್’ ಎಂಬ ಸರಕಾರಿ ಸ್ವಾಮ್ಯದ ಸಂಸ್ಥೆಯನ್ನು ತೆರೆಯಬೇಕು. ಇದಕ್ಕೆ ಶೇ.51ರಷ್ಟು ಸರಕಾರ ಮತ್ತು ಶೇ.49ರಷ್ಟು ಅನಿವಾಸಿ ಭಾರತೀಯ ಕನ್ನಡಿಗರು ಪಾಲು ಹೊಂದಿರಬೇಕು. ಅಲ್ಲದೆ ಅನಿವಾಸಿ ಕನ್ನಡಿಗರ ವಿವಾಹ ದೃಢೀಕರಣ ಪತ್ರ, ಶೈಕ್ಷಣಿಕ ಪ್ರಮಾಣ ಪತ್ರಗಳ ದೃಢೀಕರಣ, ವೀಸಾ ತಪಾಸಣೆ ಇತ್ಯಾದಿ ಸೌಲಭ್ಯ ಪಡೆಯಲು ರಾಜ್ಯದ ಪ್ರಮುಖ ನಗರಗಳಲ್ಲಿ ಪ್ರಮಾಣ ಪತ್ರಗಳ ದೃಢೀಕರಣ ಕೇಂದ್ರಗಳನ್ನು ತೆರೆಯಬೇಕು, ಜಿಲ್ಲಾ ಮಟ್ಟದಲ್ಲಿ ಕಲ್ಯಾಣ ಸಮಿತಿ ರಚಿಸಿ, ಅನಿವಾಸಿ ಕನ್ನಡಿಗರ ದತ್ತಾಂಶ ಸಂಗ್ರಹಿಸಲು ತುರ್ತು ಕ್ರಮ ಜರುಗಿಸಬೇಕು, ಅನಿವಾಸಿ ಭಾರತೀಯ ಸಮಿತಿಯ ಮೂಲಕ ‘ಜಾಬ್ ಪೋರ್ಟಲ್’ ತೆರೆಯಬೇಕು. ಶೇರು ಬಂಡವಾಳ ಹೂಡಿಕೆಗೆ ಪ್ರತ್ಯೇಕ ಸಂಸ್ಥೆ ಪ್ರಾರಂಭಿಸಬೇಕು. ಮಂಗಳೂರಿನಲ್ಲಿ ಅನಿವಾಸಿ ಭಾರತೀಯ ಭವನ ಸ್ಥಾಪಿಸಬೇಕು ಮತ್ತು ಈ ಭವನದ ಮೂಲಕ ಎಲ್ಲಾ ಸೌಲಭ್ಯ ಕಲ್ಪಿಸಬೇಕು, ಬಂಡವಾಳ ಹರಿದು ಬರಲು ಏಕಗವಾಕ್ಷಿ ಪದ್ಧತಿ ಜಾರಿಗೊಳಿಸಬೇಕು...

 ವಿದೇಶದಲ್ಲಿ ಕೆಲಸ ಕಳಕೊಂಡವರು, ವ್ಯಾಪಾರದಲ್ಲಿ ನಷ್ಟ ಅನುಭವಿಸಿದವರು ತಾಯ್ನಾಡಿಗೆ ಬಂದು ಬದುಕು ಕಟ್ಟಿಕೊಳ್ಳಲು ಮುಂದಾದಾಗ ನೆರವು ನೀಡುವ ಸಲುವಾಗಿ ಉದ್ಯೋಗ-ಕೆಲಸ-ವ್ಯಾಪಾರ ಮಾಡುತ್ತಿರುವಾಗಲೇ ಮಾಸಿಕ ಕನಿಷ್ಠ ಮೊತ್ತವನ್ನು ಕಂತಿನ ರೂಪದಲ್ಲಿ ಸಂಗ್ರಹಿಸಿ ಅವರು ನಿವೃತ್ತಿಯ ನಂತರ ನಿವೃತ್ತಿ ವೇತನ ಅಥವಾ ಮರಣಾ ನಂತರ ಕುಟುಂಬ ನಿವೃತ್ತಿ ವೇತನ ನೀಡುವ ಯೋಜನೆಯನ್ನು ಜಾರಿಗೊಳಿಸಬೇಕು, ವಿದೇಶಗಳಲ್ಲಿ ನೆಲೆಸಿರುವ ಅಥವಾ ವಿದೇಶಗಳಿಗೆ ವಲಸೆ ಹೋಗಬಯಸುವ ಕನ್ನಡಿಗರು ಕಡ್ಡಾಯವಾಗಿ ನೋಂದಣಿ ಮಾಡಿಸಿ ಗುರುತಿನ ಚೀಟಿ ಪಡೆಯಲು ಸಂಬಂಧಪಟ್ಟ ಜಿಲ್ಲಾ ಕಚೇರಿಗಳಲ್ಲಿ ಕ್ರಮ ಜರುಗಿಸಬೇಕು, ಅನಿವಾಸಿ ಕನ್ನಡಿಗರ ಕಲ್ಯಾಣಕ್ಕೆ ಬಜೆಟ್‌ನಲ್ಲಿ ಅನುದಾನ ಘೋಷಿಸಬೇಕು... ಹೀಗೆ ಈ ಸಮಿತಿಯು ಕೇರಳ ಪ್ರವಾಸ ಕೈಗೊಂಡು ಸಿದ್ಧಪಡಿ ಸಲಾದ ವರದಿಯನ್ನು 2017ರ ಫೆಬ್ರವರಿ 8ರಂದು ವಿಧಾನಸಭೆಯಲ್ಲಿ ಮಂಡಿಸಿದೆ. ವರದಿ ಮಂಡಿಸಿ 20 ತಿಂಗಳಾದರೂ ಕೂಡಾ ಯಾವುದೇ ಪ್ರಗತಿ ಕಂಡುಬಂದಿಲ್ಲ. ಈ ವರದಿಯತ್ತ ಸರಕಾರ ತುರ್ತು ಕಣ್ಣುಹಾಯಿಸಬೇಕಾಗಿದೆ.

ಸೌದಿಯಿಂದ ಮರಳಿ ಬರುವವರಿಗೆ ಆದ್ಯತೆ ನೆಲೆಯಲ್ಲಿ ಸೂಕ್ತ ಸೌಲಭ್ಯ ಕಲ್ಪಿಸಲು ಸೌದಿ ಅರೇಬಿಯಾದ ಪೂರ್ವ ಪ್ರಾಂತ್ಯ ಇಂಡಿಯನ್ ಸೋಶಿಯಲ್ ಫೋರಂ ವಿಸ್ತೃತ ಅಧ್ಯಯನ ವರದಿ ಸಿದ್ಧಪಡಿಸಿ ಆಗ್ರಹವನ್ನೂ ಮಾಡಿದೆ. ಅಲ್ಲದೆ, ರಾಜ್ಯ ಸರಕಾರಕ್ಕೆ ಮಹತ್ವದ ಬೇಡಿಕೆಗಳ ಪಟ್ಟಿಯನ್ನೂ ಮುಂದಿಟ್ಟಿವೆ.

ಐಎಸ್‌ಎಫ್ ಸಿದ್ಧಪಡಿಸಿದ ವರದಿ ಪ್ರಕಾರ ಸೌದಿ ಅರೇಬಿಯಾವೊಂದರಲ್ಲೇ 25 ಲಕ್ಷ ಅನಿವಾಸಿ ಕನ್ನಡಿಗರಿದ್ದಾರೆ. ಆ ಪೈಕಿ ನಿತಾಕತ್ ಸಮಸ್ಯೆಗೆ ಸಿಲುಕಿ ಲಕ್ಷಾಂತರ ಮಂದಿ ತಾಯ್ನಾಡಿಗೆ ಮರಳಿ ಬಂದಿದ್ದಾರೆ. 2017-18ನೆ ಸಾಲಿ ನಲ್ಲಿ ಕರ್ನಾಟಕದ ಆರ್ಥಿಕತೆಗೆ ಸುಮಾರು 100 ಕೋಟಿ ಅಮೆರಿಕನ್ ಡಾಲರ್ ಹರಿದುಬಂದಿತ್ತು. ಆದರೆ ರಾಜ್ಯದ ಜನಪ್ರತಿನಿಧಿಗಳಿಗೆ ಅದರಲ್ಲೂ ಅವಿಭಜಿತ ದ.ಕ.ಜಿಲ್ಲೆಯ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ‘ಸೌದಿ ಸಂಕಟ’ ಅರ್ಥವಾದಂತಿಲ್ಲ.

ಅಂದಿನ ಸರಕಾರ ವಹಿಸಿದ ಜವಾಬ್ದಾರಿಯನ್ನು ನಾವು ಸಮರ್ಥ ವಾಗಿ ನಿಭಾಯಿಸಿದ ತೃಪ್ತಿ ಇದೆ. ಕೇರಳಕ್ಕೆ ತೆರಳಿ ಅಲ್ಲಿನ ಅಧಿಕಾರಿಗಳು, ಜನಪ್ರತಿನಿಧಿಗಳ ಜೊತೆ ಮಾತನಾಡಿ ಅದೇ ಮಾದರಿಯಂತೆ ರಾಜ್ಯದಲ್ಲೂ ಅನಿವಾಸಿ ಕನ್ನಡಿಗರ ಕಲ್ಯಾಣಕ್ಕೆ ಯೋಜನೆಗಳನ್ನು ರೂಪಿಸಬೇಕು ಎಂದು ಶಿಫಾರಸು ಮಾಡಿದ್ದೆವು. ನಾವು ಸುಮಾರು 80 ಕೋ.ರೂ. ಅನುದಾನ ಬಜೆಟ್‌ನಲ್ಲಿ ಘೋಷಿಸಬೇಕು ಎಂದು ಮನವಿ ಮಾಡಿದ್ದೆವು. ಆದರೆ ಬಜೆಟ್‌ನಲ್ಲಿ ಅಷ್ಟು ಅನುದಾನ ಮೀಸಲಿಟ್ಟಿಲ್ಲ. ನಮ್ಮ ವರದಿಯನ್ನು ಮುಂದುವರಿಸಿಕೊಂಡು ಹೋಗುವ ಜವಾಬ್ದಾರಿ ಅನಿವಾಸಿ ಭಾರತೀಯ ಕನ್ನಡಿಗರ ಸಮಿತಿಯದ್ದಾಗಿದೆ. ಸದ್ಯ ಸಮಿತಿಗೆ ಅಧ್ಯಕ್ಷರಿಲ್ಲ. ಆದರೆ, ಅಧಿಕಾರಿಗಳು ರೂಪುರೇಷ ಸಿದ್ಧಪಡಿಸಿಕೊಂಡು ಮುಂದು ವರಿಯಬೇಕಿದೆ.

 ಜೆ.ಆರ್.ಲೋಬೊ

 ಮಾಜಿ ಅಧ್ಯಕ್ಷ, ಕರ್ನಾಟಕ ವಿಧಾನ ಮಂಡಲದ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ

Writer - ವರದಿ: ಹಂಝ ಮಲಾರ್

contributor

Editor - ವರದಿ: ಹಂಝ ಮಲಾರ್

contributor

Similar News