ಜಿದ್ದಾ: ಮುಚ್ಚುಗಡೆ ಭೀತಿಯಲ್ಲಿ ಇಂಟರ್ ನ್ಯಾಷನಲ್ ಇಂಡಿಯನ್ ಸ್ಕೂಲ್

Update: 2018-10-08 12:45 GMT

ಜಿದ್ದಾ, ಅ.10: ಸೌದಿ ಅರೇಬಿಯಾದ ಜಿದ್ದಾದಲ್ಲಿರುವ ಇಂಟರ್ ನ್ಯಾಷನಲ್ ಇಂಡಿಯನ್ ಸ್ಕೂಲ್ ಎಂಬ ಹೆಸರಿನ ಸಿಬಿಎಸ್ ‍ಇ ಶಾಲೆಯಲ್ಲಿ ಕಲಿಯುತ್ತಿರುವ ಭಾರತದ ಸುಮಾರು 11,000 ವಿದ್ಯಾರ್ಥಿಗಳ ಭವಿಷ್ಯ ತೂಗುಯ್ಯಾಲೆಯಲ್ಲಿದೆ. ಶಾಲಾ ಕಟ್ಟಡವಿರುವ ಭೂಮಿಯನ್ನು ತೆರವುಗೊಳಿಸಬೇಕೆಂಬ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಶಾಲೆಯನ್ನು ಸದ್ಯದಲ್ಲಿಯೇ ಮುಚ್ಚಲಾಗುವುದು ಎಂದು  ಹೆಸರು ಹೇಳಲಿಚ್ಛಿಸದ ಶಾಲೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ ಎಂದು indiatoday.in ವರದಿ ಮಾಡಿದೆ.

ಶಾಲೆಯ ಮುಖ್ಯ ಕಟ್ಟಡ ಅಲ್-ರೆಹಾಬ್ ನಲ್ಲಿದ್ದು, ಅಲ್ಲಿ ಬಾಲಕರ ವಿಭಾಗದ ತರಗತಿಗಳನ್ನು ನಡೆಸಲಾಗುತ್ತದೆ. ಕೋರ್ಟ್ ನೋಟಿಸಿನ ಪ್ರಕಾರ ಅಕ್ಟೋಬರ್ 9ರೊಳಗಾಗಿ ಅವರು ಜಾಗ ತೆರವುಗೊಳಿಸಬೇಕಿದೆ. ಸದ್ಯ ಈ ಕಟ್ಟಡದಲ್ಲಿ ನಡೆಯಬೇಕಿದ್ದ ಪರೀಕ್ಷೆಗಳನ್ನು ಶಾಲೆಯ ಬಾಲಕಿಯರ ವಿಭಾಗದಲ್ಲಿ ನಡೆಸಲಾಗುತ್ತಿದೆಯೆಂಬ ಮಾಹಿತಿಯಿದೆ.

ಶಾಲಾ ಕಟ್ಟಡವಿರುವ ಜಮೀನಿನ ಮಾಲಕನೊಂದಿಗೆ ದೀರ್ಘಕಾಲಿಕ ವಿವಾದವಿದ್ದು ಆತ ಹೊಸ ಲೀಸ್ ಒಪ್ಪಂದಕ್ಕೆ ಬೇಡಿಕೆಯಿಡುತ್ತಿದ್ದಾರಲ್ಲದೆ, ಮಾಸಿಕ ದೊಡ್ಡ ಮೊತ್ತದ ಬಾಡಿಗೆ ನೀಡಬೇಕೆಂದೂ ಹೇಳುತ್ತಿರುವುದರಿಂದ ಶಾಲೆಗೆ ಇದು ಸಾಧ್ಯವಾಗುತ್ತಿಲ್ಲ ಎಂದು ಶಾಲೆ ಬಿಡುಗಡೆಗೊಳಿಸಿದ ಹೇಳಿಕೆ ತಿಳಿಸಿದೆ.

ನ್ಯಾಯಾಲಯದ ತೀರ್ಪು ಕೂಡ ಮಾಲಕನ ಪರವಾಗಿ ಬಂದಿರುವುದರಿಂದ ಶಾಲಾ  ಕಟ್ಟಡ ತೆರವುಗೊಳಿಸುವುದು ಅನಿವಾರ್ಯವಾಗಿದೆ. ಈ ಶಾಲೆಯಲ್ಲಿ ಕಲಿಯುತ್ತಿರುವ ಭಾರತೀಯ ಮೂಲದ ಸಾವಿರಾರು ಮಕ್ಕಳು ಹಾಗೂ ಅವರ ಹೆತ್ತವರು ಆತಂಕಕ್ಕೀಡಾಗಿದ್ದು, ಭಾರತ ಸರಕಾರ ಈ ನಿಟ್ಟಿನಲ್ಲಿ ಮಧ್ಯ ಪ್ರವೇಶಿಸಬೇಕೆಂದು ಅವರು ಆಗ್ರಹಿಸುತ್ತಿದ್ದಾರೆ.

ಮಕ್ಕಳು ಸಾಮಾಜಿಕ ಜಾಲತಾಣಗಳಿಗೂ ಮೊರೆ ಹೋಗಿ ಈ ನಿಟ್ಟಿನಲ್ಲಿ ಅಪೀಲು ಸಲ್ಲಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News