ಜಾಹೀರಾತು ಅಳವಡಿಕೆ ವಿಚಾರ: ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ಪ್ರಕರಣ ದಾಖಲು

Update: 2018-10-08 15:09 GMT

ಬೆಂಗಳೂರು, ಅ.8: ಜಾಹೀರಾತು ಫಲಕ ಅಳವಡಿಕೆಗೆ ಬಳಸಿದ್ದ ಲೋಹದ ಚೌಕಟ್ಟು ತೆರವುಗೊಳಿಸದ ಆರೋಪ ಸಂಬಂಧ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಗರದ ಪಂತರಪಾಳ್ಯದ ಬಳಿ ಸಚಿವ ಶಿವಕುಮಾರ್ ಅವರಿಗೆ ಸೇರಿದ ಜಾಗದಲ್ಲಿರುವ ಲೋಹದ ಚೌಕಟ್ಟು ತೆರವುಗೊಳಿಸದ ಬಗ್ಗೆ ಸೆ.24ರಂದು ಆರ್.ಆರ್.ನಗರ ಉಪವಿಭಾಗ ಸಹಾಯಕ ಕಂದಾಯ ಅಧಿಕಾರಿ ಮುತ್ತುರಾಜ್ ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಬಿಬಿಎಂಪಿ ಆಯುಕ್ತರು ಎಲ್ಲ ಫ್ಲೆಕ್ಸ್, ಬ್ಯಾನರ್, ಬಂಟಿಂಗ್‌ಗಳನ್ನು ತೆರವುಗೊಳಿಸುವಂತೆ ಆ.12ರಂದು ಸಾರ್ವಜನಿಕ ಪ್ರಕಟಣೆ ನೀಡಿದ್ದರು. ಇದರ ಬೆನ್ನಲ್ಲೇ ಪಾಲಿಕೆ ಅಧಿಕಾರಿಗಳು ಜಾಹೀರಾತು ಫಲಕ, ಹೋರ್ಡಿಂಗ್ ಹಾಗೂ ಫ್ಲೆಕ್ಸ್‌ಗಳನ್ನು ತೆರವುಗೊಳಿಸಲು ಕ್ರಮ ಕೈಗೊಂಡಿದ್ದರು. ತದನಂತರವು ಕೆಲವೆಡೆ ಲೋಹದ ಚೌಕಟ್ಟುಗಳು ಹಾಗೆಯೇ ಉಳಿದಿದ್ದವು. ಇವುಗಳನ್ನು ಸಂಬಂಧಪಟ್ಟ ಮಾಲಕರೇ ಆ.30ರ ಒಳಗೆ ತೆಗೆಸಬೇಕು ಎಂದು ಆಯುಕ್ತರು ಆ. 13 ರಂದು ಹಾಗೂ 15ರಂದು ಸಾರ್ವಜನಿಕ ಪ್ರಕಟಣೆ ನೀಡಿದ್ದರು. ಈ ಅವಧಿ ಮುಗಿದ ಬಳಿಕವೂ ಕೆಲವರು ಲೋಹದ ಚೌಕಟ್ಟು ತೆಗೆಸಿರಲಿಲ್ಲ.

(ಸ್ವತ್ತು ಸಂಖ್ಯೆ 219/20 ಎ/23) ಜಾಗದ ಮಾಲಕ ಶಿವಕುಮಾರ್ ಅವರಿಗೆ ನೋಟಿಸ್ ನೀಡಿದ ಬಳಿಕವೂ ಜಾಹೀರಾತು ಫಲಕ ಅಳವಡಿಸಿದ್ದ ಲೋಹದ ಚೌಕಟ್ಟು ತೆರವುಗೊಳಿಸದ ಕಾರಣ ದೂರು ನೀಡಿರುವುದಾಗಿ ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News