ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ಸ್ಥಳಾಂತರ: ಪರ್ಯಾಯ ವ್ಯವಸ್ಥೆ ಕಲ್ಪಿಸಲು ಹೈಕೋರ್ಟ್ ನಿರ್ದೇಶನ

Update: 2018-10-08 15:28 GMT

ಬೆಂಗಳೂರು, ಅ.8: ತುಮಕೂರಿನ ಎಚ್.ಎಂ.ಟಿ ಕಾರ್ಖಾನೆ ಮುಂದೆ ಇದ್ದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣವನ್ನು ಸ್ಥಳಾಂತರಿಸಿರುವ ಹಿನ್ನೆಲೆಯಲ್ಲಿ ಸ್ಥಳೀಯರಿಗೆ ಅನುಕೂಲವಾಗುವಂತೆ ಶೀಘ್ರ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಸರಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.

ತುಮಕೂರಿನ ಕದರನಹಳ್ಳಿ ತಾಂಡ್ಯದ ವಕೀಲ ರಮೇಶ್ ನಾಯಕ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ನೇತೃತ್ವದ ವಿಭಾಗೀಯ ಪೀಠ, ಈ ನಿರ್ದೇಶನ ನೀಡಿ ವಿಚಾರಣೆಯನ್ನು ಅ.10ಕ್ಕೆ ಮುಂದೂಡಿತು.

ಸರಕಾರಿ ವಕೀಲ ಎಚ್.ಎಸ್. ಪ್ರಶಾಂತ್ ವಾದ ಮಂಡಿಸಿ, ನ್ಯಾಯಾಲಯ ಈ ಹಿಂದೆ ನೀಡಿದ್ದ ನಿರ್ದೇಶನದಂತೆ ಪರ್ಯಾಯ ಬಸ್ ನಿಲ್ದಾಣಕ್ಕೆ ಅನುಮತಿ ಕೋರಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರಕ್ಕೆ (ಎನ್‌ಎಚ್‌ಎಐ) ಪತ್ರ ಬರೆಯಲಾಗಿತ್ತು. ಆದರೆ ಅನುಮತಿ ನೀಡಲು ಪ್ರಾಧಿಕಾರ ನಿರಾಕರಿಸಿದೆ. ಹೀಗಾಗಿ ಬೇರೊಂದು ಜಾಗ ಗುರುತಿಸಿ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಕಾಲಾವಕಾಶ ಬೇಕು ಎಂದು ನ್ಯಾಯಪೀಠಕ್ಕೆ ಕೋರಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಈ ಹಿಂದೆಯೂ ಒಂದು ತಿಂಗಳ ಕಾಲಾವಕಾಶ ನೀಡಲಾಗಿತ್ತು. ಇದೀಗ ಮತ್ತೆ ಕಾಲಾವಕಾಶ ಕೋರಲಾಗುತ್ತಿದೆ. ಆದಷ್ಟು ಬೇಗ ಪರ್ಯಾಯ ಬಸ್ ನಿಲ್ದಾಣ ನಿರ್ಮಿಸಲು ಕ್ರಮ ಕೈಗೊಳ್ಳಿ ಎಂದು ಸೂಚಿಸಿತು.

ಅರ್ಜಿದಾರರ ನಡೆಗೆ ಸಿಜೆ ಅಸಮಾಧಾನ: ಕೋರ್ಟ್ ಆದೇಶವಿದ್ದರೂ ಪರ್ಯಾಯ ವ್ಯವಸ್ಥೆ ಕಲ್ಪಿಸಿಲ್ಲವೇಕೆ ಎಂದು ಅರ್ಜಿದಾರರು ಕೆಎಸ್ಸಾರ್ಟಿಸಿ ಹಾಗೂ ಇತರ ಸಂಬಂಧಿಸಿದ ಇಲಾಖೆಗಳ ಬಳಿ ವಿಚಾರಿಸಿದ್ದ ಬಗ್ಗೆ ತಿಳಿದು ಕೋಪಗೊಂಡ ಸಿಜೆ, ಪಿಐಎಲ್ ಸಲ್ಲಿಸಿದ ಮಾತ್ರಕ್ಕೆ ಅಧಿಕಾರಿಗಳ ಕೆಲಸದಲ್ಲಿ ಹಸ್ತಕ್ಷೇಪ ಮಾಡಲು ನಿಮಗೆ ಹಕ್ಕು ಸಿಗುವುದಿಲ್ಲ. ಅಧಿಕಾರಿಗಳ ಬಳಿ ಹೋಗಿ ಪ್ರಶ್ನಿಸಲು ಯಾರು ಅನುಮತಿ ನೀಡಿದ್ದಾರೆ? ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿರುವಾಗ ನೀವು ಹೇಗೆ ಅಧಿಕಾರಿಗಳ ಬಳಿ ಹೋಗುತ್ತೀರಿ? ನಿಮ್ಮ ಮಿತಿ ನೀವು ಅರಿತುಕೊಳ್ಳಬೇಕು ಎಂದರು. ಇದರಿಂದ ಅರ್ಜಿದಾರರು ನ್ಯಾಯಪೀಠದ ಕ್ಷಮೆ ಯಾಚಿಸಿದರು.

ಪ್ರಕರಣವೇನು: ಎಚ್‌ಎಂಟಿ ಮುಂಭಾಗದ ರಾಷ್ಟ್ರೀಯ ಹೆದ್ದಾರಿಯಲ್ಲಿ 40 ವರ್ಷಗಳ ಹಿಂದೆ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣವನ್ನು ನಿರ್ಮಿಸಲಾಗಿತ್ತು. ಇತ್ತೀಚೆಗೆ ಅದನ್ನು 2 ಕಿಲೋಮೀಟರ್ ದೂರದ ಕ್ಯಾತಸಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಇದರಿಂದ ಈ ಭಾಗದ ಜನರಿಗೆ ತೀವ್ರ ಸಮಸ್ಯೆ ಆಗುತ್ತಿದೆ ಎಂದು ಅರ್ಜಿದಾರರು ಪಿಐಎಲ್ ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News