ಪಂಚರಾಜ್ಯಗಳ ಚುನಾವಣೆ: ಭಾಜಪಕ್ಕಿದು ಸತ್ವಪರೀಕ್ಷೆ!

Update: 2018-10-08 18:32 GMT

ಮೇಲ್ನೋಟಕ್ಕೆ ಎಲ್ಲವೂ ಸಹಜವಾಗಿರುವಂತೆ ಕಂಡರೂ ಆಳದಲ್ಲಿ ಭಾಜಪದೊಳಗೆ ತಳಮಳವೊಂದು ಶುರುವಾಗಿರುವುದಂತೂ ಸತ್ಯ! ಈ ಹಿಂದೆ ಅಂದರೆ ಸುಮಾರು 2013ರ ನಂತರದಲ್ಲಿ ತಾವು ನಡೆಸಿದ ಹಲವು ಚುನಾವಣಾಪೂರ್ವ ಸಮೀಕ್ಷೆಗಳಲ್ಲಿ ಭಾಜಪದ ಗೆಲುವಿನ ನಾಗಾಲೋಟವನ್ನು ಮುಂದಾಗಿಯೇ ಭವಿಷ್ಯ ನುಡಿದಿದ್ದ ಸೀವೋಟರ್ ಸಂಸ್ಥೆಯೇ ಇದೀಗ ಬರಲಿರುವ ಐದು ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ಭಾಜಪ ಮೂರು ರಾಜ್ಯಗಳಲ್ಲಿ ಅದರಲ್ಲೂ ಅದೀಗ ಅಧಿಕಾರದಲ್ಲಿ ಇರುವ ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌ಗಡ ರಾಜ್ಯಗಳಲ್ಲಿ ಸೋತು ಕಾಂಗ್ರೆಸ್‌ಗೆ ಅಧಿಕಾರ ಒಪ್ಪಿಸಬೇಕಾಗಬಹುದೆಂದು ಭವಿಷ್ಯ ನುಡಿದಿರುವುದು ಭಾಜಪದ ಆಂತರಿಕ ತಳಮಳಕ್ಕೆ ಮುಖ್ಯ ಕಾರಣವಾಗಿದೆ.

2019ರ ಸಾರ್ವತ್ರಿಕ ಚುನಾವಣೆಗಳಲ್ಲಿ ಗೆಲುವು ಸಾಧಿಸಿ ಮತ್ತೊಮ್ಮೆ ಅಧಿಕಾರದ ಗದ್ದುಗೆ ಏರುವ ಉತ್ಸಾಹದಲ್ಲಿರುವ ಭಾಜಪಕ್ಕೆ ಈ ವರ್ಷಾಂತ್ಯದ ಐದು ರಾಜ್ಯಗಳ ಚುನಾವಣೆಗಳನ್ನು ಗೆಲ್ಲಲೇಬೇಕಾದ ಅನಿವಾರ್ಯ ಇದೆ. ಈ ಐದು ರಾಜ್ಯಗಳಲ್ಲಿನ ಗೆಲುವು ಕಾಂಗ್ರೆಸ್‌ಗೆ ಎಷ್ಟರ ಮಟ್ಟಿಗೆ ‘ಮಾಡು ಇಲ್ಲವೇ ಮಡಿ’ ಎನ್ನುವ ಹಾಗಿದೆಯೋ ಹಾಗೆಯೇ ಭಾಜಪಕ್ಕೂ ಈ ಗೆಲುವು ಅಗತ್ಯವಾಗಿದೆ. ಯಾಕೆಂದು ಒಂದಿಷ್ಟು ನೋಡೋಣ. ಸರಳವಾಗಿ ಹೇಳಬೇಕಾದರೆ 2019ರ ಮೇ ತಿಂಗಳ ಅಂತಿಮ ಹಣಾಹಣಿಗೆ ಮೊದಲಿನ ಈ ಚುನಾವಣೆಗಳು ಭಾಜಪಕ್ಕೆ ಬೇಕಾದ ಆತ್ಮವಿಶ್ವಾಸದ ಬಲವರ್ಧನೆಯ ಟಾನಿಕ್ ಅನ್ನು ಒದಗಿಸಲಿವೆ. ಈ ಚುನಾವಣೆಗಳನ್ನು ಗೆದ್ದರೆ ಮುಂದಿನ ಮೇ ಹೊತ್ತಿಗೆ ಭಾಜಪದ ಗೆಲುವಿನ ಹಾದಿ ಸುಗಮವಾಗಲಿದೆ. ಆಗ ಅದಕ್ಕೆ ಮಿತ್ರಪಕ್ಷಗಳ ಮರ್ಜಿ ಹಿಡಿಯುವ ಅಗತ್ಯ ಇರುವುದಿಲ್ಲ. ಈಗೇನು ಎನ್‌ಡಿಎ ಮೈತ್ರಿಕೂಟದ ಪುಡಿಪಕ್ಷಗಳ ಒಂದಿಷ್ಟಾದರೂ ಮುಲಾಜಿನಲ್ಲಿರುವ ಭಾಜಪ ಸ್ವಂತಬಲದಿಂದಲೇ ಅಧಿಕಾರ ಹಿಡಿಯುವ ಅತೀವ ಆತ್ಮವಿಶ್ವಾಸದಿಂದ 2019ರ ಮೇ ಚುನಾವಣೆಗಳಲ್ಲಿ ಕಾಂಗ್ರೆಸ್ ಮತ್ತಿತರ ಪ್ರಾದೇಶಿಕ ಪಕ್ಷಗಳನ್ನು ಸುಲಭವಾಗಿ ಮಣಿಸುವ ದಿಸೆಯಲ್ಲಿ ತನ್ನ ತಂತ್ರಗಳನ್ನು ಹೆಣೆಯಬಲ್ಲದು. ಆಗ ಅದಕ್ಕೆ ತನ್ನ ಮಿತ್ರ ಪಕ್ಷಗಳ ಜೊತೆ ಸ್ಥಾನ ಹಂಚಿಕೆಯ ಕಸರತ್ತಿನ ಅನಿವಾರ್ಯ, ಅಗತ್ಯ ಇರುವುದಿಲ್ಲ. ಒಂದೊಮ್ಮೆ ಈ ಐದು ರಾಜ್ಯಗಳಲ್ಲಿ ಒಂದೆರಡು ರಾಜ್ಯಗಳಲ್ಲಿ ಭಾಜಪ ಏನಾದರೂ ಸೋತರೆ ಮತ್ತದು ತನ್ನ ಎನ್‌ಡಿಎ ಮೈತ್ರಿಕೂಟದ ಮಿತ್ರಪಕ್ಷಗಳ ದಾಕ್ಷಿಣ್ಯದಲ್ಲಿ ಬಿದ್ದು ಸ್ಥಾನಗಳ ಹಂಚಿಕೆಯಲ್ಲಿ ರಾಜಿಯಾಗಬೇಕಾಗುತ್ತದೆ.

ಇನ್ನು ವ್ಯಕ್ತಿಗತವಾಗಿ ನೋಡಿದರೆ ಪ್ರಧಾನ ಮಂತ್ರಿ ನರೇಂದ್ರಮೋದಿಯವರ ವರ್ಚಸ್ಸಿಗೆ ಈ ಚುನಾವಣೆಗಳ ಸೋಲು ಒಂದಿಷ್ಟಾದರೂ ಕುಂದುಂಟು ಮಾಡುತ್ತದೆ. ಈಗೇನು ಮೋದಿ ಮತ್ತು ಅಮಿತ್ ಶಾ ಜೋಡಿ ಭಾಜಪದೊಳಗೆ ಎರಡನೇ ಸಾಲಿನ ಯಾವ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆಯೇ ಟಿಕೆಟ್ ಹಂಚಿಕೆ ಮಾಡುವ ಮತ್ತು ತಮಗೆ ಬೇಕಾದ ಅನಾಮಿಕರನ್ನು ಮುಖ್ಯಮಂತ್ರಿ ಕುರ್ಚಿಯಲ್ಲಿ ಕೂರಿಸುವ ಸ್ವಾತಂತ್ರ ಹೊಂದಿದ್ದಾರೋ ಆ ಸ್ವಾತಂತ್ರ ಮತ್ತು ಪಕ್ಷದೊಳಗಿನ ಅವರ ಹಿಡಿತ ತತ್‌ಕ್ಷಣಕ್ಕಾದರೂ ಸ್ವಲ್ಪಮಟ್ಟಿಗೆ ಕಡಿಮೆಯಾಗುತ್ತ ಹೋಗುತ್ತದೆ.

ಹಿಂದಿ ಹೃದಯಭಾಗದ ಈ ಚುನಾವಣೆಗಳಲ್ಲಿ ಭಾಜಪದ ಹಿನ್ನ್ನಡೆ ಸಹಜವಾಗಿಯೇ ಅಕ್ಕಪಕ್ಕದ ಉತ್ತರ ಪ್ರದೇಶ, ಬಿಹಾರ, ಗುಜರಾತ್ ರಾಜ್ಯಗಳಲ್ಲಿಯೂ ಪ್ರಭಾವ ಬೀರುವ ಸಾಧ್ಯತೆ ಇದ್ದು, ಲೋಕಸಭಾ ಚುನಾವಣೆಗಳಲ್ಲಿ, ಈ ರಾಜ್ಯಗಳಿಂದ ಗೆಲ್ಲಬಹುದಾದ ಲೋಕಸಭಾ ಸ್ಥಾನಗಳ ಸಂಖ್ಯೆ ಕಡಿಮೆಯಾಗುತ್ತ ಹೋಗುತ್ತದೆ.

ಈ ವರ್ಷಾಂತ್ಯದಲ್ಲಿ ಚುನಾವಣೆ ನಡೆಯಲಿರುವ ಐದು ರಾಜ್ಯಗಳ ಒಟ್ಟು 67 ಲೋಕಸಭಾ ಸ್ಥಾನಗಳ ಪೈಕಿ 2014ರಲ್ಲಿ ಭಾಜಪ 62 ಸ್ಥಾನಗಳನ್ನು, ಕಾಂಗ್ರೆಸ್ 4 ಸ್ಥಾನಗಳನ್ನು, ಟಿಆರ್‌ಎಸ್ 1 ಸ್ಥಾನವನ್ನು ಗೆದ್ದಿದ್ದವು. 2014ರಲ್ಲಿ ಭಾಜಪ ಗೆದ್ದ 282 ಸ್ಥಾನಗಳ ಹತ್ತಿರಕ್ಕಾದರೂ ಭಾಜಪ ಈ ಬಾರಿ ಹೋಗಬೇಕೆಂದರೆ ಕಳೆದ ಬಾರಿ ಈ ರಾಜ್ಯಗಳಲ್ಲಿ ಗೆದ್ದ ಸ್ಥಾನಗಳನ್ನು ಉಳಿಸಿಕೊಂಡೇ ಹೋಗಬೇಕಾಗುತ್ತದೆ. ಹಾಗೆ ಉಳಿಸಿಕೊಳ್ಳುವ ಹಾದಿಯಲ್ಲಿ ಮೊದಲ ಹಂತವಾಗಿ ಸದ್ಯದ ವಿಧಾನಸಭಾ ಚುನಾವಣೆಗಳನ್ನು ಅದು ಗೆಲ್ಲಲೇ ಬೇಕಾದ ಅನಿವಾರ್ಯ ಇದೆ.

ಹೀಗೆ ಯಾವುದೇ ಕೋನದಿಂದ ನೋಡಿದರೂ 2019ರಲ್ಲಿ ಭಾಜಪ ಮತ್ತೆ ದಿಲ್ಲಿಯ ಗದ್ದುಗೆಯನ್ನು ಹಿಡಿಯಲೇಬೇಕೆಂದರೆ ಈ ಐದು ರಾಜ್ಯಗಳ ಚುನಾವಣೆಯನ್ನು ಗೆಲ್ಲುವುದು ಅನಿವಾರ್ಯವಾಗಿದೆ.

ಇಷ್ಟಲ್ಲದೆ ಈ ರಾಜ್ಯಗಳಲ್ಲಿ ಸೋಲು ಸಹಜವಾಗಿಯೇ ಮೋದಿ ಮತ್ತು ಶಾ ಜೋಡಿಯ ಪಕ್ಷದೊಳಗಿನ ಸರ್ವಾಧಿಕಾರಿ ನಡೆಯನ್ನು ಮೊಟಕುಗೊಳಿಸಲು ಪಕ್ಷದೊಳಗೆ ಇರುವ ಭಿನ್ನಮತೀಯರ ಶಕ್ತಿಗಳು ಮುಂಚೂಣಿಗೆ ಬರಲೂ ಒಂದು ನೆಪವಾಗಿ ಬಿಡಬಹುದು. ಈಗಾಗಲೇ ಈ ಜೋಡಿಯ ಆಕ್ರಮಣಕಾರಿ ನೀತಿಯಿಂದ ಬೇಸತ್ತಿರುವ ಹಿರಿಯ ನಾಯಕರ ಗುಂಪು ಮತ್ತೆ ಸಕ್ರಿಯವಾಗಿ ತಲೆಯೆತ್ತಬಹುದು.

ಅಚ್ಚರಿಯ ವಿಷಯವೆಂದರೆ ಈ ರಾಜ್ಯದಲ್ಲಿ ಭಾಜಪದ ಸೋಲು ಗೆಲುವುಗಳು ಬಹುತೇಕ ನಿರ್ಧಾರವಾಗಲಿರುವುದು ಕಾಂಗ್ರೆಸ್ ಮತ್ತದರ ಮಿತ್ರ ಪಕ್ಷಗಳು ಈ ಚುನಾವಣೆಯನ್ನು ಹೇಗೆ ನಡೆಸುತ್ತವೆ ಎಂಬುದರ ಮೇಲೆಯೇ ಹೆಚ್ಚು ಅವಲಂಬಿತವಾಗಿದೆ.

ಸದ್ಯಕ್ಕಂತೂ ಇಷ್ಟು ಹೇಳಬಹುದು: ಈ ಪಂಚರಾಜ್ಯಗಳ ಚುನಾವಣೆಗಳು ಕಾಂಗ್ರೆಸ್‌ಗೆ ಮಾಡು ಇಲ್ಲವೇ ಮಡಿ ಎನ್ನುವುದಾಗಿದ್ದರೆ, ಭಾಜಪಕ್ಕೆ ಹೇಗಾದರೂ ಮಾಡಿ ಗೆಲ್ಲು ಎನ್ನುವ ರೀತಿಯಲ್ಲಿ ಬಂದು ನಿಂತಿವೆ.

Similar News