ಯೂತ್ ಒಲಿಂಪಿಕ್ ಗೇಮ್ಸ್‌ : ಮೆಹುಲಿ, ತಬಾಬಿಗೆ ಬೆಳ್ಳಿ

Update: 2018-10-09 05:30 GMT

ಬ್ಯುನಸ್‌ಐರಿಸ್, ಅ.9: ಪ್ರತಿಭಾವಂತ ಶೂಟರ್ ಮೆಹುಲಿ ಘೋಷ್ ಯೂತ್ ಒಲಿಂಪಿಕ್ ಗೇಮ್ಸ್‌ನಲ್ಲಿ ಕೆಲವೇ ಅಂತರದಲ್ಲಿ ಐತಿಹಾಸಿಕ ಚಿನ್ನ ಗೆಲ್ಲುವುದರಿಂದ ವಂಚಿತರಾದರು.

ಸೋಮವಾರ ನಡೆದ ಮಹಿಳೆಯರ 10 ಮೀ. ಏರ್-ರೈಫಲ್ ಶೂಟಿಂಗ್ ಸ್ಪರ್ಧೆಯ 24ನೇ ಹಾಗೂ ಅಂತಿಮ ಶಾಟ್‌ನಲ್ಲಿ 9.1 ಅಂಕ ಗಳಿಸಿ ಚಿನ್ನ ವಂಚಿತರಾದರು. ಒಟ್ಟು 248 ಅಂಕ ಗಳಿಸಿದ 18ರ ಹರೆಯದ ಘೋಷ್ ಬೆಳ್ಳಿಗೆ ತೃಪ್ತಿಪಟ್ಟರು. ಭಾರತ ಈ ತನಕ ಗೇಮ್ಸ್‌ನಲ್ಲಿ ಚಿನ್ನ ಜಯಿಸಿಲ್ಲ.

ಡೆನ್ಮಾರ್ಕ್‌ನ ಸ್ಟೇಫನಿ ಗ್ರಂಡ್‌ಸೋಯಿ 248.7 ಅಂಕ ಗಳಿಸಿ ಚಿನ್ನ ಜಯಿಸಿದರು. ಭಾರತ ಗೇಮ್ಸ್‌ನ ಶೂಟಿಂಗ್‌ನಲ್ಲಿ 2ನೇ ಬೆಳ್ಳಿ ಜಯಿಸಿತು. ರವಿವಾರ ತುಷಾರ್ ಮಾನೆ ಬೆಳ್ಳಿ ಜಯಿಸಿದ್ದರು. ಮೆಹುಲಿ ಅರ್ಹತಾ ಸುತ್ತಿನಲ್ಲಿ 628.8 ಅಂಕ ಗಳಿಸಿದರು. ತಬಾಬಿ ದೇವಿ ಜುಡೋದಲ್ಲಿ ಎರಡನೇ ಸ್ಥಾನ ಪಡೆದು ಗೇಮ್ಸ್‌ನ ಮೊದಲ ದಿನ ಭಾರತಕ್ಕೆ ಎರಡು ಪದಕ ಗೆದ್ದುಕೊಟ್ಟರು. ಮಣಿಪುರದ ತಬಾಬಿದೇವಿ ಒಲಿಂಪಿಕ್ಸ್‌ನಲ್ಲಿ (ಜೂನಿಯರ್ ಹಾಗೂ ಸೀನಿಯರ್) ಜುಡೋದಲ್ಲಿ ಪದಕ ಜಯಿಸಿದ ಭಾರತದ ಮೊದಲ ಕ್ರೀಡಾಪಟು ಎನಿಸಿಕೊಂಡರು.

ಮಾನೆ ಪುರುಷರ 10 ಮೀ. ಏರ್ ರೈಫಲ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಜಯಿಸಿದ್ದಾರೆ. ತಬಾಬಿದೇವಿ ಮಹಿಳೆಯರ 44 ಕೆಜಿ ಜುಡೋ ವಿಭಾಗದಲ್ಲಿ ಫೈನಲ್‌ಗೆ ತಲುಪುವುದರೊಂದಿಗೆ ಬೆಳ್ಳಿಪದಕವನ್ನು ಖಚಿತಪಡಿಸಿಕೊಂಡಿದ್ದರು. 2017ರ ಏಶ್ಯನ್ ಕಡೆಟ್ ಚಾಂಪಿಯನ್ ತಬಾಬಿ ದೇವಿ ಫೈನಲ್‌ನಲ್ಲಿ ವೆನೆಝುವೆಲಾದ ಪಾನ್ ಅಮೆರಿಕನ್ ಅಂಡರ್-18 ಚಾಂಪಿಯನ್ ಮರಿಯಾ ಗಿಮೆನೆಝ್ ವಿರುದ್ಧ 0-2 ಅಂತರದಿಂದ ಶರಣಾಗಿ ಬೆಳ್ಳಿಗೆ ತೃಪ್ತಿಪಟ್ಟುಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News