ಸಿಬಿಐ ಅಧಿಕಾರಿಗಳ ಆಂತರಿಕ ಕಚ್ಚಾಟದಲ್ಲಿ ಮೂಲೆಸೇರಿತೇ ಮೋದಿ ಆಪ್ತನ ವಿರುದ್ಧದ ಕಲ್ಲಿದ್ದಲು ಹಗರಣದ ತನಿಖೆ?

Update: 2018-10-09 10:31 GMT

ದೇಶದ ಅತ್ಯುನ್ನತ ತನಿಖಾ ಸಂಸ್ಥೆಯಾದ ಸಿಬಿಐನಲ್ಲಿ ನಡೆದಿರುವ ಆಂತರಿಕ ಕಲಹದ ಬೆಂಕಿಗೆ ಪ್ರಧಾನಿ ಕಚೇರಿಯ ಅಧಿಕಾರಿಗಳು, ಕಾರ್ಪೊರೇಟ್ ಸಂಸ್ಥೆಗಳು ತುಪ್ಪ ಸುರಿದಿದ್ದಾರೆ ಎಂದು ಅತ್ಯುನ್ನತ ಸರ್ಕಾರಿ ಅಧಿಕಾರಿಗಳು thewire.inಗೆ ತಿಳಿಸಿದ್ದಾರೆ.

ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಹಾಗೂ ಅವರ ನಂತರ ಅತ್ಯುನ್ನತ ಹುದ್ದೆಯಲ್ಲಿರುವ ವಿಶೇಷ ನಿರ್ದೇಶಕ ರಾಕೇಶ್ ಆಸ್ಥಾನಾ ಅವರ ನಡುವೆ ಎರಡು ವಾರಗಳಿಂದ ಬೂದಿಮುಚ್ಚಿದ ಕೆಂಡದಂತಿದ್ದ ಕಲಹ ಬೀದಿಗೆ ಬಂದಿದೆ. ಈ ಬಗ್ಗೆ ಕೇಂದ್ರ ವಿಚಕ್ಷಣಾ ಆಯೋಗಕ್ಕೆ ಪತ್ರ ಬರೆಯಲಾಗಿದ್ದು, ಅದು ಸೋರಿಕೆಯೂ ಆಗಿದೆ. ರಾಷ್ಟ್ರೀಯ ಜನತಾ ದಳ ಮುಖಂಡ ಲಾಲೂ ಪ್ರಸಾದ್ ಯಾದವ್ ವಿರುದ್ಧ ಅಪರಾಧ ತನಿಖೆ ಕೈಗೊಳ್ಳಲು ವರ್ಮಾ ಅವಕಾಶ ನೀಡುತ್ತಿಲ್ಲ ಎಂದು ಆಸ್ಥಾನಾ ದೂರಿದ್ದಾರೆ. ಆದರೆ ಪ್ರತಿದಾಳಿ ನಡೆಸಿರುವ ವರ್ಮಾ, ಆರು ಪ್ರಕರಣಗಳಲ್ಲಿ ವಿಚಾರಣೆ ಎದುರಿಸುತ್ತಿರುವ ರಾಕೇಶ್ ಅವರ ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸಿದ್ದಾರೆ. ಇದಕ್ಕೂ ಮುನ್ನ ಈ ವರ್ಷದ ಜುಲೈನಲ್ಲಿ, ಕೇಂದ್ರ ವಿಚಕ್ಷಣಾ ಆಯೋಗಕ್ಕೆ ಪತ್ರ ಬರೆದ ಸಿಬಿಐ, "ವರ್ಮಾ ಅವರ ಗೈರುಹಾಜರಿಯಲ್ಲಿ ಅಧಿಕಾರಿಗಳನ್ನು ಸೇರಿಸಿಕೊಳ್ಳುವ ಅಧಿಕಾರ ಆಸ್ಥಾನಾ ಅವರಿಗೆ ಇಲ್ಲ" ಎಂದು ಸ್ಪಷ್ಟಪಡಿಸಿತ್ತು.

ಆದರೆ ಇದನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ, ಈ ಸಿಬಿಐ ಆಂತರಿಕ ಕಲಹ ಕೇವಲ ವ್ಯಕ್ತಿಗಳ ನಡುವಿನ ಅಥವಾ ಪ್ರತಿಷ್ಠೆಗಳ ನಡುವಿನ ಸಮರವಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ವರ್ಮಾ ಮತ್ತು ಆಸ್ಥಾನ ನಡುವಿನ ಸಂಘರ್ಷದ ಬೇರುಗಳು ಇನ್ನೂ ಅಳಕ್ಕೆ ಇಳಿದಿದ್ದು, ಇದರ ಪರಿಣಾಮಗಳು ಈ ಇಬ್ಬರು ವ್ಯಕ್ತಿಗಳ ವೃತ್ತಿಯ ಮೇಲೆ ಬೀರುವ ಪರಿಣಾಮಕ್ಕಿಂತ ಹೆಚ್ಚಿನದ್ದಾಗಿವೆ.

ಆಸ್ಥಾನಾ ಬಗ್ಗೆ ಸದಾ ಅಸಮಾಧಾನ ಹೊಂದಿರುವ ವರ್ಮಾ, ವಿಶೇಷ ನಿರ್ದೇಶಕರಾಗಿ ಆಸ್ಥಾನಾ ಅವರ ನೇಮಕಾತಿಯನ್ನು ತಡೆಯಲು ಹರಸಾಹಸ ಮಾಡಿದ್ದರು. ಆದರೆ ಇದೀಗ ಹೊಸದಾಗಿ ಬಹಿರಂಗವಾಗಿರುವ ಅಂಶವೆಂದರೆ ಇದಕ್ಕೂ ಕಲ್ಲಿದ್ದಲು ಹಗರಣದ ತನಿಖೆಗೂ ಸಂಬಂಧ ಇದೆ ಎನ್ನುವುದು.

ಆರೋಪಪಟ್ಟಿಯಲ್ಲಿ ಸೇರಿಸಬೇಕೇ?, ಬೇಡವೇ?

ಪಶ್ಚಿಮ ಬಂಗಾಳ ಮೂಲದ ರಾಮ್‍ಸರೂಪ್ ಲೋಹ್ ಉದ್ಯೋಗ್ ಲಿಮಿಟೆಡ್‍ಗೆ ರಾಜ್ಯದ ಮೊಯಿರಾ- ಮಧುಜೋರ್ ಕಲ್ಲಿದ್ದಲು ಬ್ಲಾಕ್‍ನಲ್ಲಿ ಕಲ್ಲಿದ್ದಲು ನಿಕ್ಷೇಪ ಹಂಚಿಕೆಯಲ್ಲಿ ಪಶ್ಚಿಮ ಬಂಗಾಳ ಕೇಡರ್‍ ನ ಐಎಎಸ್ ಅಧಿಕಾರಿ ಭಾಸ್ಕರ್ ಖುಲ್ಬೆಯವರ ಪಾತ್ರದ ಬಗ್ಗೆ ತನಿಖೆ ನಡೆಸಬೇಕೇ ಬೇಡವೇ ಎಂಬ ದ್ವಂದ್ವ ಸಿಬಿಐನಲ್ಲಿದೆ. ಈ ಹಗರಣ ನಡೆದ ವೇಳೆ ಖುಲ್ಬೆ, ಪಶ್ಚಿಮ ಬಂಗಾಳ ಸರ್ಕಾರಕ್ಕೆ ಕೈಗಾರಿಕಾ ಸಲಹೆಗಾರರಾಗಿದ್ದರು.

ಖುಲ್ಬೆ ಸಾಮಾನ್ಯ ಅಧಿಕಾರಿಯಲ್ಲ. ಪ್ರಧಾನಿ ಕಚೇರಿಯ ಕಾರ್ಯದರ್ಶಿಯಾಗಿ, ಮೋದಿಯವರ ಅತ್ಯಂತ ವಿಶ್ವಾಸಾರ್ಹರಲ್ಲಿ ಒಬ್ಬರು. ಎಲ್ಲ ಕೇಂದ್ರ ಸರ್ಕಾರಿ ಅಧಿಕಾರಿಗಳ ವರ್ಗಾವಣೆ ಮತ್ತು ನಿಯೋಜನೆಯನ್ನು ನಿಭಾಯಿಸುವವರು. ಪ್ರಧಾನಿಯವರ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಪಿ.ಕೆ.ಮಿಶ್ರಾ ಅವರ ಜತೆ ನಿಕಟವಾಗಿ ಕೆಲಸ ಮಾಡುವವರು.

ಸಿಬಿಐ ಅಧಿಕಾರಿಗಳು ಹೇಳುವಂತೆ, ಜಾರ್ಖಂಡ್ ಕಲ್ಲಿದ್ದಲು ಬ್ಲಾಕ್ ಹಂಚಿಕೆ ಪ್ರಕರಣದಲ್ಲಿ ಕೇಂದ್ರದ ಮಾಜಿ ಕಲ್ಲಿದ್ದಲು ಕಾರ್ಯದರ್ಶಿ ಎಚ್.ಸಿ.ಗುಪ್ತ ಅವರನ್ನು ಆರೋಪಿಯನ್ನಾಗಿ ಮಾಡಿದಂತೆ ಖುಲ್ಬೆಯವರನ್ನು ಕೂಡಾ ಆರೋಪಿಗಳ ಪಟ್ಟಿಯಲ್ಲಿ ಸೇರಿಸಬೇಕು ಎಂದು ತನಿಖಾ ತಂಡ ಶಿಫಾರಸ್ಸು ಮಾಡಿದೆ. ಗುಪ್ತಾಗೆ 2017ರ ಡಿಸೆಂಬರ್‍ನಲ್ಲಿ ಶಿಕ್ಷೆಯಾಗಿದ್ದು, ಮೂರು ವರ್ಷಗಳ ಜೈಲುಶಿಕ್ಷೆ ವಿಧಿಸಲಾಗಿದೆ. "ತನಿಖಾಧಿಕಾರಿಯಿಂದ ಹಿಡಿದು, ತನಿಖೆಯ ಮೇಲ್ವಿಚಾರಣೆ ನಡೆಸುತ್ತಿರುವ ಅತ್ಯುನ್ನತ ಅಧಿಕಾರಿಯವರೆಗೆ, ಈ ಬಗ್ಗೆ ಒಮ್ಮತದ ಅಭಿಪ್ರಾಯವಿದೆ. ಖುಲ್ಬೆಯವರನ್ನು ಕೂಡಾ ಆರೋಪಿಯನ್ನಾಗಿ ಹೆಸರಿಸಬೇಕು ಎಂದು ಕಡತದಲ್ಲಿ ಕೂಡಾ ದಾಖಲಿಸಲಾಗಿದೆ" ಎಂದು ಏಜೆನ್ಸಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಆದರೆ, ಖುಲ್ಬೆಯವರನ್ನು ಸಾಕ್ಷಿಯಾಗಿ ಪರಿಗಣಿಸಬೇಕೇ ವಿನಃ ಆರೋಪಿಯನ್ನಾಗಿ ಅಲ್ಲ ಎನ್ನುವುದು ಆಸ್ಥಾನಾ ಅವರ ಪ್ರತಿಪಾದನೆ. ಈ ಮೂಲಕ ಹಗರಣದಲ್ಲಿ ಖುಲ್ಬೆ ಪಾತ್ರದ ಆರೋಪಗಳ ಬಗ್ಗೆ ಅವರ ವಿರುದ್ಧ ವಿಚಾರಣೆ  ನಡೆಯದಂತೆ ತಡೆಯುವ ಪ್ರಯತ್ನ ಎಂದು ಅಧಿಕಾರಿ ವಿವರಿಸುತ್ತಾರೆ. ಪ್ರಧಾನಿ ಕಚೇರಿಯ ಮಿಶ್ರಾ ಅವರ ಜತೆಗಿನ ನಿಕಟ ಸಂಬಂಧದ ಹಿನ್ನೆಲೆಯಲ್ಲಿ ಆಸ್ಥಾನಾ ನಿರ್ಧಾರ ಏಜೆನ್ಸಿಯಲ್ಲಿ ಯಾರಿಗೂ ಅಚ್ಚರಿ ತಂದಿಲ್ಲ.

ಗುಜರಾತ್ ಕೇಡರ್ ಅಧಿಕಾರಿಯಾಗಿರುವ ಮಿಶ್ರಾ, ಮೋದಿ ಸರ್ಕಾರದಲ್ಲಿ ಅತ್ಯಂತ ಪ್ರಭಾವಿ ವ್ಯಕ್ತಿ. ಕೆಲ ತಿಂಗಳ ಹಿಂದೆ, ಆಸ್ಥಾನಾ ಅವರನ್ನು ಸಿಬಿಐ ವಿಶೇಷ ನಿರ್ದೇಶಕ ಹುದ್ದೆಗೆ ನೇಮಕ ಮಾಡುವ ಹಂತದಲ್ಲಿ ಸೃಷ್ಟಿಯಾದ ವಿವಾದದಲ್ಲಿ, ಅಲೋಕ್ ವರ್ಮಾ ಅವರು, ಆಸ್ಥಾನಾ ಆಯ್ಕೆಗೆ ಲಿಖಿತವಾಗಿ ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ ಮಿಶ್ರಾ, ಕೇಂದ್ರ ವಿಚಕ್ಷಣಾ ಆಯುಕ್ತ ಕೆ.ವಿ.ಚೌಧ್ರಿಯವರನ್ನು ಕರೆಸಿ, ಆಸ್ಥಾನಾ ಅವರ ನೇಮಕ ಖಾತ್ರಿಗೊಳಿಸುವಂತೆ ಸೂಚಿಸಿದ್ದರು ಎಂದು ಅಧಿಕಾರಿಗಳು ಹೇಳುತ್ತಾರೆ.

"ಮಿಶ್ರಾ ಕೆಲ ಸಂಪುಟ ದರ್ಜೆ ಸಚಿವರಿಗೂ ವಿವಿಧ ವಿಚಾರಗಳಲ್ಲಿ ನಿರ್ದೇಶನ ನೀಡುತ್ತಾರೆ. ಅವರನ್ನು ಸೂಪರ್ ಪ್ರೈಮ್‍ ಮಿನಿಸ್ಟರ್ ಎಂದೇ ಪರಿಗಣಿಸಲಾಗುತ್ತದೆ. ಆದ್ದರಿಂದ ಅವರ ನಿರ್ದೇಶನವನ್ನು ಎಂದೂ ನಿರ್ಲಕ್ಷಿಸುವುದಿಲ್ಲ" ಎಂದು ಸಿಬಿಐ ಅಧಿಕಾರಿಯೊಬ್ಬರು ವಿವರಿಸುತ್ತಾರೆ. ಆಸ್ಥಾನಾ ನೇಮಕಾತಿ ವಿಚಾರದಲ್ಲಿ ಅವರ ಹಸ್ತಕ್ಷೇಪದ ಬಗೆಗಿನ ಆರೋಪದ ಬಗ್ಗೆ "ದ ವೈರ್" ಕಳುಹಿಸಿದ ಪ್ರಶ್ನಾವಳಿಗೆ ಮಿಶ್ರಾ ಉತ್ತರಿಸಿಲ್ಲ.

ಸಿಬಿಐನ ಆಂತರಿಕ ಕಚ್ಚಾಟವನ್ನು ಉಕ್ಕಿನಿಂದ ಹಿಡಿದು ದೂರಸಂಪರ್ಕ ಕ್ಷೇತ್ರದ ಕಾರ್ಪೊರೇಟ್ ಸಂಸ್ಥೆಗಳು ಕೂಡಾ ಕುತೂಹಲದಿಂದ ವೀಕ್ಷಿಸುತ್ತಿವೆ ಎನ್ನುವುದು ಸಿಬಿಐ ಅಧಿಕಾರಿಗಳ ಹೇಳಿಕೆ. "ಪ್ರಧಾನಿ ಕಚೇರಿಯ ಅತ್ಯುನ್ನತ ಅಧಿಕಾರಿಗಳಿಗೆ ನಿಕಟವಾಗಿರುವ ಕಾರ್ಪೊರೇಟ್ ಸಂಸ್ಥೆಗಳು ಮತ್ತು ಸಿಬಿಐ ವಿಚಾರಣೆ ಎದುರಿಸುತ್ತಿರುವ ಕೆಲ ಕಾರ್ಪೊರೇಟ್ ಸಂಸ್ಥೆಗಳು" ಈ ಆಂತರಿಕ ಕಚ್ಚಾಟವನ್ನು ವಿಶೇಷ ಆಸಕ್ತಿಯಿಂದ ನೋಡುತ್ತಿವೆ ಎಂದು ಅಧಿಕಾರಿ ವಿವರಿಸುತ್ತಾರೆ.

ಉದಾಹರಣೆಗೆ ಪಿಎನ್ ಬಿ ಬ್ಯಾಂಕ್ ಹಗರಣದ ಬಗ್ಗೆ ತನಿಖೆ ನಡೆಸುತ್ತಿದ್ದ ಸಿಬಿಐ ಜಂಟಿ ನಿರ್ದೇಶಕ ರಾಜೀವ್ ಸಿಂಗ್ ಅವರನ್ನು ತನಿಖೆ ಮಧ್ಯದಲ್ಲೇ ದಿಢೀರನೇ ವರ್ಗಾಯಿಸಿದ ಪ್ರಕರಣ ಸಿಬಿಐ ತನಿಖೆಯಲ್ಲಿ ಕಾರ್ಪೊರೇಟ್ ಸಂಸ್ಥೆಗಳೂ ಪ್ರಭಾವ ಬೀರುತ್ತಿವೆ ಎನ್ನುವ ಆರೋಪ ಮುನ್ನಲೆಗೆ ಬರಲು ಕಾರಣವಾಗಿತ್ತು. ಏಜೆನ್ಸಿ ಅಧಿಕಾರಿಗಳು ಹೇಳುವಂತೆ, ಸಿಂಗ್ ಅವರ ಜತೆ ಆಸ್ಥಾನ ಒಳ್ಳೆಯ ಸಂಬಂಧ ಹೊಂದಿರಲಿಲ್ಲ.

ಇದೀಗ ವಿವಾದಗಳ ಸುಳಿಯಲ್ಲಿ ಸಿಲುಕಿರುವ ವರ್ಮಾ ವಿರುದ್ಧ ಆಸ್ಥಾನಾ ಮಾಡಿರುವ ಆರೋಪಗಳ ಬಗ್ಗೆ ತನಿಖೆ ನಡೆಸುವ ಹೊಣೆಯನ್ನು ಕೇಂದ್ರ ವಿಚಕ್ಷಣಾ ಆಯೋಗಕ್ಕೆ ವಹಿಸಲಾಗಿದೆ. ಸಿಬಿಐನ ಮಾಜಿ ಮುಖ್ಯಸ್ಥ ರಂಜಿತ್ ಸಿನ್ಹಾ ಅವರ ಸಂದರ್ಶಕರ ದಿನಚರಿ ಹಗರಣದಲ್ಲಿ ಕೂಡಾ ವರ್ಮಾ ಹೆಸರು ಕೇಳಿಬರುತ್ತಿದೆ. ಚೌಧರಿಯವರನ್ನು ಕೇಂದ್ರ ವಿಚಕ್ಷಣಾ ಆಯುಕ್ತರನ್ನಾಗಿ ನೇಮಕ ಮಾಡಿದ ಬಳಿಕ, ಪ್ರಧಾನಿಯವರಿಗೆ ಆಪ್ತರೆನಿಸಿದ ಉದ್ಯಮಿ ನಿಖಿಲ್ ಮರ್ಚೆಂಟ್ ಅವರ ಕಚೇರಿಯಲ್ಲಿ ಚೌಧರಿ ಕಾಣಿಸಿಕೊಂಡಿದ್ದರು.

"ಕಾಮನ್ ಕಾಸ್" ಎಂಬ ಸ್ವಯಂಸೇವಾ ಸಂಸ್ಥೆ, ಈ ನೇಮಕಾತಿ ವಿರುದ್ಧ ಸುಪ್ರೀಂಕೋರ್ಟ್‍ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದೆ. ಹಿಂದೆ ಬಿರ್ಲಾ ಮತ್ತು ಸಹಾರ ಉದ್ಯಮ ಸಂಸ್ಥೆಗಳ ಕಾರ್ಪೊರೇಟ್ ಕಚೇರಿಗಳಿಂದ ಆದಾಯ ತೆರಿಗೆ ಅಧಿಕಾರಿಗಳು ವಶಪಡಿಸಿಕೊಂಡ ಪೂರಕ ದಾಖಲೆಗಳ ಅಂಶವನ್ನು ವಿಚಾರಣೆಗೆ ಗುರಿಪಡಿಸಲು ಆದಾಯ ತೆರಿಗೆ ಕಚೇರಿಯ ಉನ್ನತ ಅಧಿಕಾರಿಯಾಗಿ ನಿರಾಕರಿಸಿದ ವ್ಯಕ್ತಿಯನ್ನು ಭ್ರಷ್ಟಾಚಾರ ವಿರೋಧಿ ಹುದ್ದೆಗೆ ನೇಮಕ ಮಾಡಿರುವ ಕ್ರಮವನ್ನು ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ.

Writer - ರೋಹಿಣಿ ಸಿಂಗ್, thewire.in

contributor

Editor - ರೋಹಿಣಿ ಸಿಂಗ್, thewire.in

contributor

Similar News