ಭಾರತದ ನಂ.1 ವೃತ್ತಿಪರ ಬಾಕ್ಸರ್ ರಾಜೇಶ್‌ಗೆ ಟೀ-ಅಂಗಡಿಯೇ ಆದಾಯದ ಮೂಲ!

Update: 2018-10-09 12:45 GMT

ಹೊಸದಿಲ್ಲಿ, ಅ.9: ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ವಿಜೇತ ಬಾಕ್ಸರ್ ವಿಜೇಂದರ್ ಸಿಂಗ್ ಅವರ ತವರು ಹರ್ಯಾಣದ ಭಿವಾನಿ ಎಂಬ ಹಳ್ಳಿಯ ನಿವಾಸಿ ರಾಜೇಶ್ ಕುಮಾರ್ ಕಸಾನ ಈಗಾಗಲೇ ವೃತ್ತಿಪರ ಬಾಕ್ಸಿಂಗ್‌ನಲ್ಲಿ ತನ್ನ ಕರಾಮತ್ತು ತೋರಿದ್ದಾರೆ. ರಾಜೇಶ್ ಇದೀಗ ಭಾರತದ ನಂ.1 ವೃತ್ತಿಪರ ಲೈಟ್‌ವೇಟ್ ಬಾಕ್ಸರ್ ಆಗಿದ್ದಾರೆ. ಆದಾಗ್ಯೂ, ಜೀವನ ನಿರ್ವಹಣೆಗೆ ತನ್ನ ಸಹೋದರನೊಂದಿಗೆ ಟೀ ಅಂಗಡಿ ನಡೆಸುತ್ತಿದ್ದಾರೆ. ಇದುವೇ ಅವರ ಆದಾಯದ ಮೂಲವಾಗಿದೆ.

ರಾಜೇಶ್ ಅವರ ದಿನಚರಿ ಸರಳವಾಗಿದೆ. ಬೆಳಗ್ಗೆ 5 ಗಂಟೆಗೆ ಟೀ ಅಂಗಡಿ ತೆರೆಯುವ ರಾಜೇಶ್ ಮಧ್ಯಾಹ್ನ 1ರ ತನಕ ಅಂಗಡಿ ನಡೆಸುತ್ತಿದ್ದಾರೆ. ಆ ಬಳಿಕ ಸಹೋದರ ಅಂಗಡಿಯಲ್ಲಿರುತ್ತಾರೆ. ಮಧ್ಯಾಹ್ನ ಊಟದ ಬಳಿಕ ಸಂಜೆ ಆರು ಗಂಟೆಯ ತನಕ ಬಾಕ್ಸಿಂಗ್ ಪ್ರಾಕ್ಟೀಸ್ ನಡೆಸುತ್ತಾರೆ.

‘‘ನಾನು ಅಂಗಡಿಯಲ್ಲಿ 10 ರೂಪಾಯಿಗೆ ಚಹಾ, ಕೆಲವು ತಿನಿಸಗಳ ಸಾಮಾನು ಮಾರಾಟ ಮಾಡುತ್ತೇನೆ. ಇದರಿಂದಲೇ ನನ್ನ ಜೀವನ ಸಾಗುತ್ತಿದೆ’’ ಎಂದು ಆಂಗ್ಲಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ರಾಜೇಶ್ ಹೇಳಿದ್ದಾರೆ.

ತಂದೆಯ ಕನಸು ಈಡೇರಿಸಲು ಶ್ರಮಿಸುತ್ತಿರುವ ರಾಜೇಶ್ ಬಿಡುವಿಲ್ಲದ ವೇಳಾಪಟ್ಟಿಯ ಬಗ್ಗೆ ತಲೆಕೆಡಿಸಿಕೊಂಡಿಲ್ಲ.

 ‘‘ನನ್ನ ತಂದೆಗೆ ನಾನು ಬಾಕ್ಸರ್ ಆಗಬೇಕೆಂಬ ಬಯಕೆಯಿತ್ತು. ಯಾವುದೇ ಬೆಲೆ ತೆತ್ತಾದರೂ ಅವರ ಕನಸನ್ನು ಈಡೇರಿಸುವೆ’’ ಎಂದು ರಾಜೇಶ್ ಹೇಳಿದ್ದಾರೆ.

ರಾಜೇಶ್ 2015ರಲ್ಲಿ ಮೊದಲ ಬಾರಿ ವೃತ್ತಿಪರ ಬಾಕ್ಸಿಂಗ್‌ನಲ್ಲಿ ಹೋರಾಟ ನಡೆಸಿದ್ದರು. ಆ ಪಂದ್ಯದಲ್ಲಿ ತನ್ನ ಸಹಪಾಠಿ ಮನ್‌ಪ್ರೀತ್ ಸಿಂಗ್‌ರನ್ನು ಸೋಲಿಸಿದ್ದರು. ಆ ಬಳಿಕ ರಾಜೇಶ್ 10 ಬಾಕ್ಸಿಂಗ್ ಪಂದ್ಯಗಳಲ್ಲಿ ಭಾಗವಹಿಸಿದ್ದು ಈ ಪೈಕಿ 9ರಲ್ಲಿ ಜಯ ಹಾಗೂ 1ರಲ್ಲಿ ಡ್ರಾ ಸಾಧಿಸಿದ್ದಾರೆ. ಈ ಮೂಲಕ ಅಜೇಯ ದಾಖಲೆ ಕಾಯ್ದುಕೊಂಡಿದ್ದಾರೆ. ಪ್ರಸ್ತುತ ಅವರು ಭಾರತ ನಂ.1 ಲೈಟ್‌ವೇಟ್ ಬಾಕ್ಸರ್ ಆಗಿದ್ದಾರೆ. ವಿಶ್ವ ವೃತ್ತಿಪರ ಬಾಕ್ಸಿಂಗ್ ರ್ಯಾಂಕಿಂಗ್‌ನಲ್ಲಿ 221ನೇ ಸ್ಥಾನದಲ್ಲಿದ್ದಾರೆ.

ಬಾಕ್ಸಿಂಗ್ ರಿಂಗ್‌ನ ಹೊರಗೆ ರಾಜೇಶ್ ಅವರದ್ದು ಹೋರಾಟದ ಬದುಕು. 24ರ ಹರೆಯದ ರಾಜೇಶ್ ತಂದೆ, ತಾಯಿ, ಸಹೋದರಿ ಇರುವ ಕೂಡು ಕುಟುಂಬದಲ್ಲಿ ಬೆಳೆದವರು. ತಂದೆ ವೃತ್ತಿಯಲ್ಲಿ ಚಾಲಕರಾಗಿದ್ದರು. ಆದರೆ, ಅವರು ರಾಜೇಶ್ ಶಾಲೆಗೆ ಹೋಗುತ್ತಿದ್ದ ಸಮಯದಲ್ಲೇ ಕ್ಯಾನ್ಸರ್‌ನಿಂದ ತೀರಿಕೊಂಡರು.

ಸಹೋದರಿ ಕೂಡ 2011ರಲ್ಲಿ ಕ್ಯಾನ್ಸರ್‌ಗೆ ತುತ್ತಾದಾಗ ಆಕೆಯ ಚಿಕಿತ್ಸೆಯ ವೆಚ್ಚಕ್ಕಾಗಿ ಹಳ್ಳಿಯ ಆಸ್ತಿಯನ್ನು ಮಾರಾಟ ಮಾಡಿದರು. ಆದರೆ, ಸಹೋದರಿ 2013ರಲ್ಲಿ ಮೃತಪಟ್ಟರು.

‘‘ನಾನು ತಂದೆಯನ್ನು ಚಿಕ್ಕಂದಿನಲ್ಲೇ ಕಳೆದುಕೊಂಡೆ. ಅವರು ನಮ್ಮ ಕುಟುಂಬದ ಆಧಾರಸ್ತಂಭವಾಗಿದ್ದರು. ಅವರ ನಿಧನದ ಬಳಿಕ ನಾನು ಶಿಕ್ಷಣವನ್ನು ತೊರೆದು ಚಾಲಕನಾಗಿ ದುಡಿಯಲಾರಂಭಿಸಿದೆ. ಆಗ ಜೀವನ ನಿರ್ವಹಣೆ ಕಷ್ಟವಾದಾಗ ಸ್ನೇಹಿತರ ಸಲಹೆಯ ಮೇರೆಗೆ ಟೀ ಸ್ಟಾಲ್ ಆರಂಭಿಸಿದೆ’’ ಎಂದು ರಾಜೇಶ್ ಹೇಳಿದರು. ರಾಜೇಶ್‌ಗೆ ರಾಯಲ್ ಸ್ಪೋರ್ಟ್ಸ್ ಪ್ರೊಮೊಶನ್ಸ್ ಪ್ರೊಮೊಟರ್ ಆಗಿ ಬೆಂಬಲಕ್ಕೆ ನಿಂತಿದೆ. ‘‘ನಾನು ರಾಯಲ್ ಸ್ಪೋರ್ಟ್ಸ್ ಪ್ರೊಮೊಶನ್ಸ್ ಬ್ಯಾನರ್‌ನಲ್ಲೇ ಹಲವು ಬಾಕ್ಸಿಂಗ್‌ನಲ್ಲಿ ಭಾಗಿಯಾಗಿದ್ದೆ. ಈ ಸಂಸ್ಥೆ ನನಗೆ ಆರ್ಥಿಕವಾಗಿ ಸಾಕಷ್ಟು ಸಹಾಯ ಮಾಡಿದೆ. ನನ್ನ ಬಾಕ್ಸಿಂಗ್ ಗ್ಲೌವ್ಸ್‌ಗಳು, ಆಹಾರ ಕ್ರಮದ ಅಗತ್ಯಗಳು, ದಿನನಿತ್ಯದ ಖರ್ಚುವೆಚ್ಚಗಳನ್ನೆಲ್ಲಾ ಈ ಸಂಸ್ಥೆ ಭರಿಸುತ್ತಿದೆ’’ ಎಂದು ರಾಜೇಶ್ ಹೇಳಿದ್ದಾರೆ.

‘‘ವಿಜೇಂದರ್ ಸಿಂಗ್ ನನ್ನ ರೋಲ್ ಮಾಡಲ್. ನಾನು ಒಮ್ಮೆ ಅವರನ್ನು ಭೇಟಿಯಾಗಲು ತೆರಳಿದ್ದೆ. ಅವರಿಂದ ಸಹಾಯ ಪಡೆಯುವಂತೆ ನನ್ನ ಸ್ನೇಹಿತನೊಬ್ಬ ನನ್ನನ್ನು ಹುರಿದುಂಬಿಸಿದ್ದ. ಆಗ ಅವರು ಕೆಲವು ಟೂರ್ನಿಗಳಲ್ಲಿ ವ್ಯಸ್ತರಾಗಿದ್ದರು. ಹಾಗಾಗಿ ಅವರನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ. 2016ರ ಡಿಸೆಂಬರ್‌ನಲ್ಲಿ ದಿಲ್ಲಿಯ ತ್ಯಾಗರಾಜ್ ಸ್ಟೇಡಿಯಂನಲ್ಲಿ ತಾಂಜಾನಿಯದ ಫ್ರಾನ್ಸಿಸ್ ಚೆಕಾ ವಿರುದ್ಧ 8ನೇ ವೃತ್ತಿಪರ ಪ್ರಶಸ್ತಿ ಜಯಿಸಿದಾಗ ರಾಜೇಶ್ ಅದೇ ದಿನ ಉಗಾಂಡದ ಮುಬಾರಕಾ ವಿರುದ್ಧ ಆಡಿದ್ದರು. ‘‘ನಾನು ವಿಜೇಂದರ್ ಅವರ ಬಾಕ್ಸಿಂಗ್‌ನ್ನು ಹತ್ತಿರದಿಂದ ನೋಡಿದ್ದೆ. ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದಕ್ಕೆ ತುಂಬಾ ಖುಷಿಯಾಯಿತು. ನಾನು ಆಗ ಲೈಟ್‌ವೇಟ್ ವಿಭಾಗದಲ್ಲಿದ್ದೆ’’ ಎಂದು ರಾಜೇಶ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News