ಮಕ್ಕಳಲ್ಲಿ ಶಿಸ್ತು ಮೂಡಿಸುವಲ್ಲಿ ಸ್ಕೌಟ್ಸ್-ಗೈಡ್ಸ್ ಪಾತ್ರ ಅಪಾರ: ಉಪ ರಾಷ್ಟ್ರಪತಿ ವೆಂಕಯ್ಯನಾಯ್ಡು

Update: 2018-10-09 13:04 GMT

ಬೆಂಗಳೂರು, ಅ.9: ಪ್ರಸ್ತುತ ಜೀವನ ಶೈಲಿಯಲ್ಲಿ ಆರೋಗ್ಯವಂತ ಸಮಾಜವನ್ನು ಕಟ್ಟುವ ನಿಟ್ಟಿನಲ್ಲಿ ಮಕ್ಕಳು ಹಾಗೂ ಯುವಕರಲ್ಲಿ ಶಿಸ್ತನ್ನು ಮೂಡಿಸುವಂತಹ ಸ್ಕೌಟ್ಸ್ - ಗೈಡ್ಸ್, ಎನ್.ಸಿ.ಸಿ. ಹಾಗೂ ಎನ್ನೆಸೆಸ್ಸ್ ಸೇರುವುದನ್ನು ಕಡ್ಡಾಯ ಮಾಡಿ ಪದವಿ ನೀಡುವಂತಹ ವ್ಯವಸ್ಥೆ ಶಿಕ್ಷಣ ಕ್ಷೇತ್ರದಲ್ಲಿ ಜಾರಿಯಾಗಬೇಕು ಎಂದು ಉಪ ರಾಷ್ಟ್ರಪತಿ ವೆಂಕಯ್ಯನಾಯ್ಡು ಅಭಿಪ್ರಾಯ ವ್ಯಕ್ತಪಡಿಸಿದರು.

ಮಂಗಳವಾರ ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಭಾರತ್ ಸ್ಕೌಟ್ಸ್ - ಗೈಡ್ಸ್ ಕರ್ನಾಟಕ, ಬೃಹತ್ ಬೆಂಗಳೂರು ಮಹಾನಗರಪಾಲಿಕೆ ಜಂಟಿಯಾಗಿ ಹಮ್ಮಿಕೊಂಡಿದ್ದ ವಿ.ಪಿ.ದೀನದಯಾಳು ನಾಯ್ಡು ಜನ್ಮ ಶತಮಾನೋತ್ಸವದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.

ಆಧುನಿಕ ಜೀವನ ಶೈಲಿ ಹಾಗೂ ಹಾಳಾಗುತ್ತಿರುವ ಪರಿಸರವು ಜಾಗತಿಕ ಸಮಸ್ಯೆಯಾಗಿದೆ. ಮಕ್ಕಳಲ್ಲಿ ಹಾಗೂ ಯುವಕರಲ್ಲಿ ಶಿಸ್ತನ್ನು ಮೂಡಿಸುವ ಜೊತೆಯಲ್ಲಿ ಪರಿಸರದ ಬಗ್ಗೆ ಅರಿವನ್ನು ಹೆಚ್ಚಿಸುವ ಅಗತ್ಯವಿದೆ ಎಂದು ವೆಂಕಯ್ಯನಾಯ್ಡು ಹೇಳಿದರು.   

ಪಠ್ಯೇತರ ಚಟುವಟಿಕೆಯಾಗಿರುವ ಸ್ಕೌಟ್ಸ್- ಗೈಡ್ಸ್, ಎನ್ನೆಸೆಸ್ಸ್ ನಂತಹ ಚಟುವಟಿಕೆಗಳು ಶಿಕ್ಷಣದ ಕಡ್ಡಾಯ ಭಾಗವಾಗಬೇಕು. ಅಂತರ್ಜಲ, ಪರಿಸರ ನಾಶ, ಬದಲಾಗುತ್ತಿರುವ ಹವಾಮಾನದಂತಹ ಜಾಗತಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ತುರ್ತು ಕ್ರಮಕೈಗೊಳ್ಳಬೇಕಾದ ಅಗತ್ಯವಿದೆ ಎಂದು ಅವರು ತಿಳಿಸಿದರು. ಸರಕಾರಗಳು ಹಮ್ಮಿಕೊಳ್ಳುವ ಪ್ರತಿಯೊಂದು ಅಭಿವೃದ್ಧಿ ಯೋಜನೆಗಳಲ್ಲಿ ಜನಸಾಮಾನ್ಯರು ಜವಾಬ್ದಾರಿಯಿಂದ ಪಾಲ್ಗೊಂಡಲ್ಲಿ ಮಾತ್ರ ಸರಕಾರಿ ಯೋಜನೆಗಳು ಯಶಸ್ಸು ಕಾಣಲು ಸಾಧ್ಯ. ವಿವಿಧತೆಯಲ್ಲಿ ಏಕತೆಯನ್ನು ಕಾಣುವ ದೇಶ ನಮ್ಮದು, ಪ್ರತಿಯೊಬ್ಬರಲ್ಲಿ ನಮ್ಮ ದೇಶದ ಬಗ್ಗೆ ಗೌರವವನ್ನು ಕಾಣುತ್ತೇವೆ. ದೇಶದ ಅಭಿವೃದ್ಧಿಗಾಗಿ ಪ್ರತಿಯೊಬ್ಬರು ತಮ್ಮ ಕೈಲಾದ ಮಟ್ಟಿಗೆ ಸಹಕರಿಸಬೇಕು ಎಂದು ವೆಂಕಯ್ಯ ನಾಯ್ಡು ಕರೆ ನೀಡಿದರು.

ಆರಂಭದಲ್ಲಿ ಕನ್ನಡದಲ್ಲಿ ಭಾಷಣ ಆರಂಭಿಸಿದ ಉಪ ರಾಷ್ಟ್ರಪತಿ, ನಾಲ್ಕು ದಶಕಗಳಿಂದ ಕರ್ನಾಟಕ ರಾಜ್ಯದ ಜನರ ಜತೆ ಬಾಂಧವ್ಯ ಹೊಂದಿದ್ದೇನೆ. ನಾಡಿನ ಜನರನ್ನು ಹೃದಯದಲ್ಲಿರಿಸಿದ್ದೇನೆ. ಈ ನಾಡಿನ ಜನರಿಗೆ ನಾನು ಆಭಾರಿಯಾಗಿದ್ದೇನೆ ಎಂದು ಅವರು ತಿಳಿಸಿದರು.

ದಾರ್ಶನಿಕ, ರಾಷ್ಟ್ರವಾದಿ ದೀನದಯಾಳು ನಾಯ್ಡು ಅವರ ಜನ್ಮ ಶತಮಾನೋತ್ಸವ ಸಮಾರಂಭದಲ್ಲಿ ಭಾಗಿಯಾಗಿರುವುದು ನನಗೆ ಸಂತಸ ತಂದಿದೆ ಎಂದು ಕನ್ನಡದಲ್ಲೇ ವೆಂಕಯ್ಯ ನಾಯ್ಡು ಹೇಳಿದರು.  

ಗೌರವಾನ್ವಿತ ಅತಿಥಿಗಳಾಗಿ ಮಾತನಾಡಿದ ರಾಜ್ಯಪಾಲ ವಾಜುಭಾಯಿ ವಾಲಾ, ಇಂತಹ ಕಾರ್ಯಕ್ರಮಗಳು ಮಕ್ಕಳಲ್ಲಿ ಪ್ರೇರಣೆಯನ್ನು ತುಂಬುತ್ತವೆ. ದೇಶಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ದೀನದಯಾಳು ನಾಯ್ಡು ಅವರು ಮಕ್ಕಳಿಗೆ ಮಾದರಿಯಾಗಿದ್ದಾರೆ. ಇಂತಹ ಬಹುಮುಖ ಪ್ರತಿಭೆಯ ಜೀವನವನ್ನು ಮಕ್ಕಳಿಗೆ ಮನದಟ್ಟು ಮಾಡುವ ಅವಶ್ಯಕತೆ ಇದೆ ಎಂದರು. ದೇಶಕ್ಕಾಗಿ ಬದುಕಿದವರನ್ನು ಜನರು ನೆನಪಿಸಿಕೊಳ್ಳುವ ಮೂಲಕ ಅವರ ಮಾರ್ಗದರ್ಶನವನ್ನು ಮಕ್ಕಳಲ್ಲಿ ಪ್ರೇರೇಪಣೆ ತುಂಬುವ ಮೂಲಕ ಉತ್ತಮ ಸಮಾಜವನ್ನು ಕಟ್ಟಲು ಪಣತೊಡಬೇಕು. ದೇಶಕ್ಕಾಗಿ ದುಡಿದವರು ಅಮರರಾಗುತ್ತಾರೆ ಎಂದು ಹೇಳಿ ದೀನದಯಾಳು ನಾಯ್ಡು ಅವರ ಸಾಧನೆಗಳನ್ನು ನೆರೆದಿದ್ದ ಸ್ಕೌಟ್ಸ್ - ಗೈಡ್ಸ್ ಮಕ್ಕಳಿಗೆ ಅವರು ವಿವರಿಸಿದರು.

ಮುಖ್ಯಮಂತ್ರಿಗಳ ಪರವಾಗಿ ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ್ ಸಂದೇಶವನ್ನು ಓದಿದರು. ಕಾರ್ಯಕ್ರಮದಲ್ಲಿ ಸಚಿವರಾದ ಎನ್.ಮಹೇಶ್, ಯು.ಟಿ. ಖಾದರ್, ಲೋಕಸಭಾ ಸದಸ್ಯ ಪಿ.ಸಿ.ಮೋಹನ್, ರಾಜ್ಯ ಸ್ಕೌಟ್ಸ್ - ಗೈಡ್ಸ್ ಮುಖ್ಯ ಆಯುಕ್ತ ಪಿ.ಜಿ.ಆರ್.ಸಿಂಧ್ಯಾ, ಎಂ.ಎ. ಚಲ್ಲಯ್ಯ. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ರಾಷ್ಟ್ರೀಯ ಆಯುಕ್ತ ಕೆ.ಕೆ.ಖಂಡೇಲ್ವಾಲ್, ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್, ದೀನ್‌ದಯಾಳು ನಾಯ್ಡು ಜನ್ಮ ಶತಮಾನೋತ್ಸವ ಸಮಿತಿ ಅಧ್ಯಕ್ಷ ಡಾ.ಎಂ.ಆರ್.ಜಯರಾಂ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News