ಎಸಿಬಿ ದಾಳಿ ಪ್ರಕರಣ: ವಿಚಾರಣೆಗೆ ಹಾಜರಾದ ಬಿಡಿಎ ಇಂಜಿನಿಯರ್ ಗೌಡಯ್ಯ
Update: 2018-10-09 20:35 IST
ಬೆಂಗಳೂರು, ಅ.9: ಆದಾಯಕ್ಕಿಂತ ಅಧಿಕ ಆಸ್ತಿ ಹೊಂದಿದ ಆರೋಪದಲ್ಲಿ ಎಸಿಬಿ ಅಧಿಕಾರಿಗಳಿಂದ ದಾಳಿಗೊಳಗಾದ ಬಿಡಿಎ ಇಂಜಿನಿಯರ್ ಎನ್.ಜಿ. ಗೌಡಯ್ಯ ಮಂಗಳವಾರ ವಿಚಾರಣೆಗೆ ಹಾಜರಾದರು.
ನಗರದ ರೇಸ್‌ಕೋರ್ಸ್ ರಸ್ತೆಯ ಖನಿಜ ಭವನದಲ್ಲಿರುವ ಎಸಿಬಿ ಕಚೇರಿಗೆ ತಮ್ಮ ಪತ್ನಿಯೊಂದಿಗೆ ಹಾಜರಾದ ಗೌಡಯ್ಯ, ಅಧಿಕಾರಿಗಳ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.
ವಿಚಾರಣೆ ಪೂರ್ಣಗೊಳಿಸಿದ ಬಳಿಕ ಅವರನ್ನು ಬಿಡಿಎ ಕಚೇರಿಗೆ ಕರೆದೊಯ್ದ ಅಧಿಕಾರಿಗಳು, ಕೆಲವೊಂದು ದಾಖಲೆ ಪತ್ರಗಳನ್ನು ಜಪ್ತಿ ಮಾಡಿದ್ದಾರೆ. ಇನ್ನೂ, ಇದೇ ಪ್ರಕರಣ ಸಂಬಂಧ ಕೆಐಎಡಿಬಿ ಮುಖ್ಯ ಅಭಿವೃದ್ಧಿ ಅಧಿಕಾರಿ ಟಿ.ಆರ್.ಸ್ವಾಮಿ ಅನಾರೋಗ್ಯದ ಕಾರಣದಿಂದ ಹಾಜರಾಗಿರಲಿಲ್ಲ. ಆರೋಪಿಗಳಿಬ್ಬರ ಆಸ್ತಿ ಪಾಸ್ತಿಗಳ ಬಗ್ಗೆ ಆದಾಯ ತೆರಿಗೆ ಇಲಾಖೆ ಮತ್ತು ಜಾರಿ ನಿರ್ದೇಶನಾಲಯಕ್ಕೆ ಪತ್ರ ಬರೆಯಲಾಗುವುದು ಎಂದು ಎಸಿಬಿ ಮೂಲಗಳು ತಿಳಿಸಿವೆ.