ಎಲ್ಲ ಜಿಲ್ಲೆಗಳಲ್ಲಿ ಆದ್ಯತೆ ಮೇರೆಗೆ ಗಾಂಧಿಭವನ ನಿರ್ಮಾಣ: ಮುಖ್ಯಮಂತ್ರಿ ಕುಮಾರಸ್ವಾಮಿ
ಬೆಂಗಳೂರು, ಅ.9: ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಗಾಂಧಿಭವನಗಳನ್ನು ಆದ್ಯತೆಯ ಮೇರೆಗೆ ನಿರ್ಮಿಸುವಂತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೂಚನೆ ನೀಡಿದರು.
ಮಂಗಳವಾರ ಗೃಹ ಕಚೇರಿ ಕೃಷ್ಣಾದಲ್ಲಿ ಮಹಾತ್ಮಾ ಗಾಂಧೀಜಿಯವರ 150ನೆ ಜನ್ಮ ವರ್ಷಾಚರಣೆ ಕುರಿತು ಚರ್ಚಿಸಲು ಕರೆದಿದ್ದ ಉನ್ನತ ಮಟ್ಟದ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗಾಂಧಿ ಭವನಕ್ಕೆ 21 ಜಿಲ್ಲೆಗಳಲ್ಲಿ ನಿವೇಶನ ಲಭ್ಯವಿದೆ. ಉಳಿದ ಜಿಲ್ಲೆಗಳಲ್ಲಿ ನಿವೇಶನ ಒದಗಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಆದ್ದರಿಂದ ಈ ಕಾರ್ಯಕ್ರಮವನ್ನು ಆದ್ಯತೆ ಮೇರೆಗೆ ಕೈಗೆತ್ತಿಕೊಳ್ಳುವಂತೆ ಅಧಿಕಾರಿಗಳಿಗೆ ಅವರು ನಿರ್ದೇಶನ ನೀಡಿದರು.
ಗಾಂಧಿಭವನ ನಿರ್ಮಿಸಿದ ನಂತರ ಅಲ್ಲಿ ಹಮ್ಮಿಕೊಳ್ಳ ಬಹುದಾದ ಕಾರ್ಯಕ್ರಮಗಳ ಕುರಿತು ಸಮಿತಿ ಸದಸ್ಯರ ಸಲಹೆಗಳನ್ನು ಆಲಿಸಿದ ಮುಖ್ಯಮಂತ್ರಿ, ಗಾಂಧಿ ಚಿಂತನೆ, ಆಶಯಗಳಿಗೆ ಅನುಗುಣವಾಗಿ ನಿರಂತರ ಕಾರ್ಯಕ್ರಮವನ್ನು ಏರ್ಪಡಿಸುವಂತೆ ಹಾಗೂ ಗಾಂಧಿ ಭವನ ನಿರ್ವಹಣೆಗೆ ಅಗತ್ಯ ಕ್ರಮ ವಹಿಸುವಂತೆಯೂ ಮುಖ್ಯಮಂತ್ರಿ ಸೂಚನೆ ನೀಡಿದರು.
ಈ ಬಾರಿ ಮಹಾತ್ಮಾ ಗಾಂಧಿಯವರನ್ನೇ ಪ್ರಮುಖ ವಿಷಯವಾಗಿಟ್ಟುಕೊಂಡು ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಏರ್ಪಡಿಸುವಂತೆ ತಿಳಿಸಿದರು. ಇದಲ್ಲದೆ, ಭಾರತ ಸರಕಾರವು ಗಣರಾಜ್ಯೋತ್ಸವ ಸ್ತಬ್ಧಚಿತ್ರಕ್ಕೆ ಎಲ್ಲ ರಾಜ್ಯಗಳೂ ಗಾಂಧೀಜಿ ಕುರಿತ ಸ್ತಬ್ಧಚಿತ್ರವನ್ನೇ ಪ್ರಸ್ತುತಪಡಿಸುವಂತೆ ಸೂಚಿಸಿದೆ. ಅದರಂತೆ ರಾಜ್ಯದಿಂದ ಗಾಂಧೀಜಿಯವರು ಅಧ್ಯಕ್ಷತೆ ವಹಿಸಿದ್ದ ಏಕೈಕ ಕಾಂಗ್ರೆಸ್ ಅಧಿವೇಶನ ಎಂಬ ಹೆಗ್ಗಳಿಕೆಯ ಬೆಳಗಾವಿ ಕಾಂಗ್ರೆಸ್ ಅಧಿವೇಶನವನ್ನು ವಿಷಯವಾಗಿಟ್ಟುಕೊಂಡು ಸ್ತಬ್ಧಚಿತ್ರ ಸಿದ್ಧಪಡಿಸಲಾಗುವುದು ಎಂದು ಸಭೆಗೆ ತಿಳಿಸಿದರು.
ಅಲ್ಲದೆ ಶಾಲೆ, ಕಾಲೇಜುಗಳಲ್ಲಿ ಗಾಂಧೀಜಿ ಹಾಗೂ ಅವರ ವಿಚಾರಧಾರೆ ಕುರಿತ ವಿವಿಧ ಸ್ಪರ್ಧೆಗಳು, ವಿಶ್ವವಿದ್ಯಾಲಯಗಳಲ್ಲಿ ವಿಚಾರ ಸಂಕಿರಣಗಳು, ಗಾಂಧೀಜಿ, ಅವರ ಹೋರಾಟ, ಅವರ ಒಡನಾಡಿಗಳು, ಸ್ವಾತಂತ್ರ್ಯ ಹೋರಾಟಕ್ಕೆ ಕರ್ನಾಟಕದ ಕೊಡುಗೆ, ಕರ್ನಾಟಕದಲ್ಲಿ ನಡೆದ ಸತ್ಯಾಗ್ರಹಗಳ ದಾಖಲೀಕರಣ ಹೀಗೆ ವಿವಿಧ ವಿಷಯಗಳ ಕುರಿತು ಕಿರುಹೊತ್ತಿಗೆಗಳನ್ನು ಪ್ರಕಟಿಸಲು ಸಮಿತಿಯು ತೀರ್ಮಾನಿಸಿತು. ಸಾರ್ವಜನಿಕರನ್ನು ಸಕ್ರಿಯವಾಗಿ ತೊಡಗಿಸಿಕೊಂಡು ಈ ಕಾರ್ಯಕ್ರಮಗಳನ್ನು ಅರ್ಥಪೂರ್ಣವಾಗಿ ಏರ್ಪಡಿಸುವಂತೆ ಮುಖ್ಯಮಂತ್ರಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಗಾಂಧಿಜಯಂತಿ ಆಚರಣೆಗೆ ನೋಡಲ್ ಇಲಾಖೆಯಾಗಿರುವ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ರಾಜ್ಯಾದ್ಯಂತ ಹಮ್ಮಿಕೊಂಡಿರುವ ರಂಗಪಯಣ ಕಾರ್ಯಕ್ರಮವು ಜನಮೆಚ್ಚುಗೆ ಗಳಿಸಿರುವುದನ್ನು ಸಮಿತಿಯ ಸದಸ್ಯರು ಶ್ಲಾಘಿಸಿದರು.
ಸಭೆಯಲ್ಲಿ ಸಮಿತಿಯ ಸದಸ್ಯರಾಗಿರುವ ಹಿರಿಯ ಸ್ವಾತಂತ್ರ್ಯಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ಚನ್ನಮ್ಮಾ ಹಳ್ಳಿಕೇರಿ, ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ವೂಡೆ ಪಿ.ಕೃಷ್ಣ, ಉಪಾಧ್ಯಕ್ಷ ಶಿವರಾಜ್, ಗ್ರಾಮೀಣಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಎಲ್.ಕೆ.ಅತೀಕ್ ಸೇರಿದಂಥೆ ಮತ್ತಿತರರು ಉಪಸ್ಥಿತರಿದ್ದರು.