ಲೋಕಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ಬಗ್ಗೆ ಭಾರತೀಯ ಚುನಾವಣಾ ಆಯೋಗ ಸ್ಪಷ್ಟಣೆ
ಬೆಂಗಳೂರು/ಹೊಸದಿಲ್ಲಿ, ಅ.9: ಒಂದೆಡೆ ಚುನಾವಣಾ ಆಯೋಗವು ರಾಜ್ಯದಲ್ಲಿ ಖಾಲಿಯಿರುವ ಮೂರು ಲೋಕಸಭಾ ಸ್ಥಾನಗಳನ್ನು ತುಂಬಲು ಉಪಚುನಾವಣೆ ಯನ್ನು ಘೋಷಣೆ ಮಾಡಿದೆಯಾದರೂ ಇನ್ನೊಂದೆಡೆ ಆಂಧ್ರಪ್ರದೇಶದಲ್ಲಿ ಖಾಲಿಯಿರುವ ಐದು ಲೋಕಸಭಾ ಕ್ಷೇತ್ರಗಳಿಗೆ ಆಯೋಗ ಚುನಾವಣೆಯನ್ನು ಘೋಷಣೆ ಮಾಡಲಿಲ್ಲ ಎಂದು ಕೆಲವು ಮಾಧ್ಯಮಗಳಲ್ಲಿ ವರದಿಯಾಗಿರುವ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ಸ್ಪಷ್ಟಣೆ ನೀಡಿದೆ.
ಕರ್ನಾಟಕದ ಲೋಕಸಭಾ ಕ್ಷೇತ್ರಗಳಾದ ಬಳ್ಳಾರಿ(ಎಸ್ಟಿ), ಶಿವಮೊಗ್ಗ ಮತ್ತು ಮಂಡ್ಯ ಕ್ಷೇತ್ರಗಳು ಅನುಕ್ರಮವಾಗಿ ಮೇ 18 ಮತ್ತು ಮೇ 21ರಿಂದ ಪ್ರತಿನಿಧಿತ್ವ ಖಾಲಿಯಿದೆ. ಆದರೆ, ಆಂಧ್ರಪ್ರದೇಶದ ಐದು ಲೋಕಸಭಾ ಕ್ಷೇತ್ರಗಳು ಜೂ.20ರಂದು ತೆರವಾಗಿವೆ.
ಲೋಕಸಭೆ ಮತ್ತು ರಾಜ್ಯ ವಿಧಾನಸಭೆಯಲ್ಲಿ ಸ್ಥಾನಗಳು ತೆರವಾದ ಕೂಡಲೇ ಕಾರ್ಯಾವಧಿ ಇನ್ನೂ ಒಂದು ವರ್ಷ ಅಥವಾ ಅದಕ್ಕಿಂತ ಅಧಿಕವಿದ್ದಲ್ಲಿ ಮಾತ್ರ ಉಪಚುನಾವಣೆ ಮೂಲಕ ಸ್ಥಾನಗಳನ್ನು ತುಂಬಲು ಜನಪ್ರತಿನಿಧಿ ಕಾಯ್ದೆ 1951ರ ಪರಿಚ್ಛೇಧ 151-ಎ ಚುನಾವಣಾ ಆಯೋಗಕ್ಕೆ ಆಧ್ಯಾದೇಶ ನೀಡಿದೆ. 16ನೆ ಲೋಕಸಭೆಯ ಅವಧಿಯು 2019ರ ಜೂನ್ 3ರಂದು ಕೊನೆಗೊಳ್ಳುತ್ತದೆ. ಲೋಕಸಭೆ ಮತ್ತು ರಾಜ್ಯಸಭೆಗಳ ಅವಧಿ ಪೂರ್ಣಗೊಳ್ಳುವ ಒಂದು ವರ್ಷ ಮುಂಚಿತವಾಗಿ ಸ್ಥಾನಗಳು ತೆರವಾಗಿರುವುದರಿಂದ ಜನಪ್ರತಿನಿಧಿ ಕಾಯ್ದೆ 1951ರ ಪರಿಚ್ಛೇಧ 151-ಎ ಪ್ರಕಾರ ಖಾಲಿ ಸ್ಥಾನಗಳನ್ನು ತೆರವಾದ ದಿನದಿಂದ ಅಂದರೆ ಮೇ 18 ಹಾಗೂ 20ರ ಆರು ತಿಂಗಳ ಒಳಗಾಗಿ ತುಂಬಬೇಕಾಗಿದೆ.
ಆದರೆ, ಆಂಧ್ರಪ್ರದೇಶದಲ್ಲಿರುವ ಸ್ಥಾನಗಳು ಜೂನ್ 20ರಿಂದಷ್ಟೇ ಖಾಲಿ ಇವೆ. ಮುಂದಿರುವ ಲೋಕಸಭಾ ಅವಧಿಯು ಒಂದು ವರ್ಷಕ್ಕಿಂತ ಕಡಿಮೆ ಇರುವುದರಿಂದ ಉಪಚುನಾವಣೆ ನಡೆಸುವ ಅಗತ್ಯವಿಲ್ಲ ಎಂದು ಚುನಾವಣಾ ಆಯೋಗ ತಿಳಿಸಿದೆ.