ಮೆಟ್ರೋ ಎರಡನೇ ಹಂತದ ಕಾಮಗಾರಿ: ಗುತ್ತಿಗೆ ನೀಡಲು ಗೊಂದಲದಲ್ಲಿರುವ ಬಿಎಂಆರ್‌ಸಿಎಲ್

Update: 2018-10-09 16:07 GMT

ಬೆಂಗಳೂರು, ಅ.9 : ನಮ್ಮ ಮೆಟ್ರೊ ಎರಡನೇ ಹಂತದ ಸಿಲ್ಕ್ ಬೋರ್ಡ್ ನಿಂದ ಕೆ.ಆರ್.ಪುರ ಯೋಜನೆಯ ಕಾಮಗಾರಿಗೆ ಹೊಸ ಅಡ್ಡಿ ಎದುರಾಗಿದ್ದು, ಈ ಮಾರ್ಗದ ನಿರ್ಮಾಣಕ್ಕೆ ಅತಿ ಕಡಿಮೆ ಮೊತ್ತದ ಬಿಡ್ ಸಲ್ಲಿಸಿರುವ ಐಎಲ್ ಅಂಡ್ ಎಫ್‌ಎಸ್ ಕಂಪನಿಯನ್ನು ಆರಿಸಬೇಕೇ ಅಥವಾ ಬೇಡವೇ ಎಂದು ಬಿಎಂಆರ್‌ಸಿಎಲ್ ಗೊಂದಲದಲ್ಲಿ ಮುಳುಗಿದೆ.

ಈಗಾಗಲೇ ಮೈಸೂರು ರಸ್ತೆಯ ನಾಯಂಡಹಳ್ಳಿಯಿಂದ ಕೆಂಗೇರಿವರೆಗೆ ನಿರ್ಮಾಣವಾಗುತ್ತಿರುವ 6 ಕಿ.ಮೀ. ಉದ್ದದ ಮಾರ್ಗದ ಪೈಕಿ 3 ಕಿ.ಮೀ. ಮಾರ್ಗವನ್ನು ಐಎಲ್ ಅಂಡ್ ಎಫ್‌ಎಸ್ ಕಂಪನಿ ನಿರ್ಮಾಣ ಮಾಡುತ್ತಿದೆ. ಇತ್ತೀಚಿಗೆ ಗಡುವು ಮೀರಿದ್ದರಿಂದ 1.5 ಕೋಟಿ ದಂಡವನ್ನೂ ವಿಧಿಸಲಾಗಿತ್ತು. ಈ ಕಂಪನಿಯ ಮೂಲ ಕಂಪನಿಯು ನಷ್ಟದಲ್ಲಿರುವುದರಿಂದ ಕೇಂದ್ರ ಸರಕಾರವು ವಶಕ್ಕೆ ಪಡೆದು ಹೊಸ ಆಡಳಿತ ಮಂಡಳಿ ರಚಿಸಿದೆ. ಇಂತಹ ಕಂಪನಿಗೆ ಗುತ್ತಿಗೆ ಕೊಡುವುದು ಸರಿಯೇ ಎಂದು ಅಧಿಕಾರಿಗಳು ಚಿಂತಿಸುತ್ತಿದ್ದಾರೆ. ಹೀಗಾಗಿ ಟೆಂಡರ್ ಪ್ರಕ್ರಿಯೆ ಮುಗಿದಿದ್ದರೂ ಕಾರ್ಯಾದೇಶ ನೀಡಿಲ್ಲ. ನಗರದ ಸಿಲ್ಕ್‌ಬೋರ್ಡ್‌ನಿಂದ ಕೆ.ಆರ್.ಪುರಕ್ಕೆ ಸುಮಾರು 17 ಕಿ.ಮೀ. ಉದ್ದದ ಮಾರ್ಗ ನಿರ್ಮಾಣಕ್ಕೆ ಮೂರು ಪ್ಯಾಕೇಜ್‌ಗಳಲ್ಲಿ ಟೆಂಡರ್ ಕರೆಯಲಾಗಿದೆ. ಸಿಲ್ಕ್ ಬೋರ್ಡ್-ಬೆಳ್ಳಂದೂರು, ಬೆಳ್ಳಂದೂರು-ದೊಡ್ಡನೆಕ್ಕುಂದಿ, ದೊಡ್ಡನೆಕ್ಕುಂದಿ- ಕೆ.ಆರ್.ಪುರ ಎಂದು ಮೂರು ಭಾಗಗಳಾಗಿ ವಿಂಗಡನೆ ಮಾಡಿ ಟೆಂಡರ್ ಕರೆಯಲಾಗಿದೆ.

ಇದರಲ್ಲಿ ಸಿಲ್ಕ್ ಬೋರ್ಡ್-ಬೆಳ್ಳಂದೂರು 7 ಕಿ.ಮೀ. ಉದ್ದದ ಮಾರ್ಗ ನಿರ್ಮಿಸಲು ಐಎಲ್ ಅಂಡ್ ಎಫ್‌ಎಸ್ ಕಂಪನಿ ಅರ್ಜಿ ಸಲ್ಲಿಸಿದೆ. ಈ ಮಾರ್ಗದ ನಿರ್ಮಾಣ ವೆಚ್ಚ 427.29 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಈ ಕಂಪನಿ 433.26 ಕೋಟಿ ರೂ. ಮೊತ್ತವನ್ನು ಉಲ್ಲೇಖಿಸಿದೆ. ಉಳಿದ ಕಂಪನಿಗಳು ಇದಕ್ಕಿಂತ ಹೆಚ್ಚು ಮೊತ್ತವನ್ನು ಉಲ್ಲೆಖಿಸಿವೆ. ಹೀಗಾಗಿ, ನಿಯಮಗಳ ಪ್ರಕಾರ, ಈ ಕಂಪನಿಗೇ ಅವಕಾಶ ನೀಡಬೇಕಾಗುತ್ತದೆ. ಬೇರೆ ಕಂಪನಿಗೆ ಅವಕಾಶ ನೀಡಬೇಕೆಂದರೂ ನಿಯಮಬಾಹಿರವಾಗುತ್ತದೆ. ಮರು ಟೆಂಡರ್ ಕರೆಯುವ ತೀರ್ಮಾನ ಕೈಗೊಂಡರೆ ಯೋಜನೆಯ ಕಾಮಗಾರಿ ಮತ್ತಷ್ಟು ವಿಳಂಬವಾಗುವ ಸಾಧ್ಯತೆಯಿದೆ.

ಸಿಲ್ಕ್ ಬೋರ್ಡ್-ಕೆ.ಆರ್.ಪುರ ಮಾರ್ಗದ ಗುತ್ತಿಗೆ ವಿಚಾರದಲ್ಲಿ ಇನ್ನೂ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಐಎಲ್ ಅಂಡ್ ಎಫ್‌ಎಸ್ ಕಂಪನಿಯನ್ನೂ ಅಂತಿಮಗೊಳಿಸಿಲ್ಲ ಎಂದು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಜಯ್ ಸೇಠ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News