ವಿದ್ಯಾರ್ಥಿ ವೇತನ ನೀಡಲು ವಿಳಂಬ: ವಿದ್ಯಾರ್ಥಿಗಳ ಪರದಾಟ

Update: 2018-10-09 16:46 GMT

ಬೆಂಗಳೂರು, ಅ.9: ನಗರದ ಸರಕಾರಿ ಆಯುರ್ವೇದ ಕಾಲೇಜಿನಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ತಿಂಗಳುಗಟ್ಟಲೇ ವಿದ್ಯಾರ್ಥಿ ವೇತನ ನೀಡದೇ ಸತಾಯಿಸುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

ಸರಕಾರಿ ಆಯುರ್ವೇದ ಕಾಲೇಜಿನ ಬಸವೇಶ್ವರ ಹೋಮಿಯೋಪತಿ ಮೆಡಿಕಲ್ ಮತ್ತು ಆಸ್ಪತ್ರೆಯಲ್ಲಿ ಸುಮಾರು  ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರುವ 84 ವಿದ್ಯಾರ್ಥಿಗಳು ಹಾಗೂ ತರಬೇತಿ ಪಡೆಯುತ್ತಿರುವ 30 ವಿದ್ಯಾರ್ಥಿಗಳಿದ್ದಾರೆ. ಸ್ನಾತಕೋತ್ತರ ಮಾಡುವವರಿಗೆ ಸರಕಾರದಿಂದ ಮಾಸಿಕ 25 ಸಾವಿರ ಹಾಗೂ ತರಬೇತಿ ಪಡೆಯುತ್ತಿರುವವರಿಗೆ 15 ಸಾವಿರ ವಿದ್ಯಾರ್ಥಿ ವೇತನ ನೀಡಲಾಗುತ್ತದೆ. ಅದಕ್ಕಾಗಿ ಸರಕಾರ ವಾರ್ಷಿಕ ಬಜೆಟ್‌ನಲ್ಲಿ ಅನುದಾನ ಮೀಸಲಿಡಲಾಗುತ್ತದೆ. ಆದರೂ, ಕಾಲೇಜಿನಿಂದ ಕಳೆದ ಎಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗೂ ವಿದ್ಯಾರ್ಥಿ ವೇತನ ನೀಡಿಲ್ಲ. ಇದರಿಂದಾಗಿ, ವಿದ್ಯಾರ್ಥಿಗಳು ಕಳೆದ ಮೂರು ತಿಂಗಳಿನಿಂದ ಅಗತ್ಯವಸ್ತುಗಳನ್ನು ಪಡೆಯುವ ಸಲುವಾಗಿ ಸಾಲವನ್ನು ಪಡೆಯಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

ವಿದ್ಯಾರ್ಥಿ ವೇತನ ನೀಡುವ ಸಲುವಾಗಿ ಸರಕಾರದಿಂದ 70-80 ಲಕ್ಷ ವಾರ್ಷಿಕವಾಗಿ ಅನುದಾನ ಬಿಡುಗಡೆಯಾಗುತ್ತದೆ. ಆದರೆ, ಅದು ವಿದ್ಯಾರ್ಥಿಗಳಿಗೆ ತಲುಪಲು ತಡವಾಗುತ್ತಿದೆ. ಅಲ್ಲದೆ, ಅಧಿಕಾರಿಗಳು ಬಂದ ಹಣವನ್ನು ನೀಡಲು ಸತಾಯಿಸುತ್ತಿದ್ದಾರೆ. ಈ ಸಂಬಂಧ ಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವರಿಗೆ ಪತ್ರ ಬರೆದಿದ್ದರಿಂದ ಎಚ್ಚೆತ್ತುಕೊಂಡಿರುವ ಕಾಲೇಜಿನ ಪ್ರಾಂಶುಪಾಲರು ಒಂದು ತಿಂಗಳದ್ದು ನೀಡುತ್ತೇವೆ ಎಂದು ಭರವಸೆ ನೀಡಿದ್ದಾರೆ ಎಂದು ವಿದ್ಯಾರ್ಥಿಗಳು ತಮ್ಮ ಅಳಲನ್ನು ವಾರ್ತಾಭಾರತಿಯೊಂದಿಗೆ ತೋಡಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News