ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: ಸ್ಮಾರ್ಟ್ ಸೆಕ್ಯೂರಿಟಿ ಲೇನ್ ಅಳವಡಿಕೆ

Update: 2018-10-09 16:53 GMT

ಬೆಂಗಳೂರು, ಅ.9: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಸ್ಮಾರ್ಟ್ ಸೆಕ್ಯುರಿಟಿ ಲೇನ್ ಮತ್ತು ಸ್ವಯಂಚಾಲಿತ ಟ್ರೇ ರಿಟ್ರೈವಲ್ ವ್ಯವಸ್ಥೆ (ಎಟಿಆರ್‌ಎಸ್) ಅಳವಡಿಸಲಾಗಿದೆ.

ಇಂತಹ ನೂತನ ವ್ಯವಸ್ಥೆಯಿಂದ ಪ್ರಯಾಣಿಕರ ಭದ್ರತಾ ತಪಾಸಣಾ ಸಮಯ ಸಾಕಷ್ಟು ಉಳಿತಾಯ ಆಗಲಿದೆ. ಜತೆಗೆ ಏಕಕಾಲದಲ್ಲಿ ಇಡೀ ಕುಟುಂಬದ ತಪಾಸಣೆ ಒಮ್ಮೆಲೆ ನಡೆಸಲು ಅನುಕೂಲ ಆಗಲಿದೆ. ಮಾನವ ಹಸ್ತಕ್ಷೇಪವೂ ತಗ್ಗಲಿದ್ದು, ಇದರಿಂದ ಕಾರ್ಯಕ್ಷಮತೆ ಮತ್ತಷ್ಟು ಸುಧಾರಣೆ ಆಗಲಿದೆ. ಈ ಸಂಬಂಧ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತ (ಬಿಐಎಎಲ್) ತಂತ್ರಜ್ಞಾನ ಅಭಿವೃದ್ಧಿ ಸಂಸ್ಥೆ ಎಲ್-3 ಮೆಕ್ಡೊನಾಲ್ಡ್ ಹಂಫ್ರಿ (ಆಟೋಮೇಷನ್) ಇಂಡಿಯಾ ಪ್ರ.ಲಿ., ಜತೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ.

ಮೊದಲಿನಿಂದಲೂ ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕವಾಗಿ ಭದ್ರತಾ ತಪಾಸಣೆ ನಡೆಯುತ್ತಿತ್ತು. ಈಗ ಒಟ್ಟಿಗೆ ಅಲ್ಪಾವಧಿಯಲ್ಲಿ ಈ ಪ್ರಕ್ರಿಯೆ ನಡೆಸಬಹುದು. ಭಾರತದಲ್ಲಿ ಮೊದಲ ಬಾರಿಗೆ ಇಂತಹ ವ್ಯವಸ್ಥೆ ಹೊಂದಿದ ಹೆಗ್ಗಳಿಕೆಗೆ ಬೆಂಗಳೂರು ವಿಮಾನ ನಿಲ್ದಾಣ ಪಾತ್ರವಾಗಿದೆ. 2017ರ ಆರಂಭದಲ್ಲಿ ಇದನ್ನು ಪರೀಕ್ಷಾರ್ಥ ಪರಿಚಯಿಸಲಾಗಿತ್ತು. ಇದು ಯಶಸ್ವಿಯಾದ ಹಿನ್ನೆಲೆಯಲ್ಲಿ ಒಡಂಬಡಿಕೆಗೆ ಸಹಿ ಹಾಕಲಾಗಿದೆ.

ಅನುಮಾನ ಬಂದರೆ ಅಧಿಕಾರಿಗಳ ತಪಾಸಣೆ: ಅನುಮಾನಾಸ್ಪದ ವಸ್ತುಗಳನ್ನು ಟಚ್‌ಸ್ಕೀನ್‌ನಲ್ಲಿ ಗುರುತು ಮಾಡಿ, ತ್ವರಿತವಾಗಿ ಪತ್ತೆಹಚ್ಚಲಿಕ್ಕೂ ಈ ವ್ಯವಸ್ಥೆ ನೆರವಾಗಲಿದೆ. ತಪಾಸಣೆಗೆ ಲಗೇಜುಗಳನ್ನು ಸಾಗಿಸುವ ಟ್ರೇಗಳ ಫೋಟೋ ಮತ್ತು ಎಕ್ಸ್‌ರೇ ಇಮೇಜ್‌ಗಳನ್ನು ಸೆರೆಹಿಡಿಯಲಾಗುತ್ತದೆ. ಹೀಗೆ ಗುರುತು ಮಾಡಿದ ಚಿತ್ರಗಳು ಭೌತಿಕ ಪರೀಕ್ಷೆ ನಡೆಸುವ ಅಧಿಕಾರಿಗಳಿಗೆ ರವಾನೆ ಆಗುತ್ತದೆ. ಅಲ್ಲಿ ಅವರು ಈ ವಸ್ತುಗಳನ್ನು ಸುಲಭವಾಗಿ ಪತ್ತೆಹಚ್ಚಿ, ಅಗತ್ಯಬಿದ್ದರೆ ಪ್ರತ್ಯೇಕಿಸಬಹುದು ಎಂದು ಬಿಐಎಎಲ್ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News