ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಕೆಗೆ ಅ.31 ಕೊನೆ ದಿನ: ಶೇ.24 ರಷ್ಟು ಮಕ್ಕಳಿಂದ ಅರ್ಜಿ ಸಲ್ಲಿಕೆ

Update: 2018-10-09 16:59 GMT

ಬೆಂಗಳೂರು, ಅ.9: ಪ್ರಸಕ್ತ ವರ್ಷದ ವಿದ್ಯಾರ್ಥಿ ವೇತನಕ್ಕೆ ಇದುವರೆಗೂ ಬೆಂಗಳೂರು ನಗರದಲ್ಲಿ ಶೇ.24 ರಷ್ಟು ಮಕ್ಕಳು ಅರ್ಜಿ ಸಲ್ಲಿಸಿದ್ದು, ಅ.31 ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕವಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆಗೆ ಆಧಾರ್ ಸಂಖ್ಯೆ, ಬ್ಯಾಂಕ್ ಖಾತೆ ವಿವರ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಸಲ್ಲಿಕೆಯನ್ನು ಕಡ್ಡಾಯಗೊಳಿಸಿರುವುದು ಸೇರಿದಂತೆ ಹಲವು ರೀತಿಯ ಸಮಸ್ಯೆಗಳಿಂದಾಗಿ ಶೇ.40ರಷ್ಟು ಅರ್ಹ ಬಡ ಮಕ್ಕಳು ವಿದ್ಯಾರ್ಥಿ ವೇತನದಿಂದ ವಂಚಿತರಾಗುವ ಆತಂಕ ಮೂಡಿದೆ.

ಮಕ್ಕಳು ವಿದ್ಯಾರ್ಥಿ ವೇತನದಿಂದ ವಂಚಿತರಾಗದಿರಲಿ ಎಂಬ ಸದುದ್ದೇಶದಿಂದ ಸರಕಾರ ಪ್ರಸಕ್ತ ಸಾಲಿನಿಂದ ಸುಧಾರಿತ ಸ್ಕಾಲರ್‌ಶಿಫ್ ಪೋರ್ಟಲ್ ಯೋಜನೆ ಜಾರಿಗೊಳಿಸಿದೆ. ಇದರ ಪರಿಣಾಮಕಾರಿ ಅನುಷ್ಠಾನಕ್ಕಾಗಿ ನಗರ ಜಿಲ್ಲಾಡಳಿತ ಕ್ರಿಯಾ ಯೋಜನೆ ರೂಪಿಸಿದೆ. ಆದರೆ ಇದಕ್ಕೆ ಈಗ ಹಲವು ವಿಘ್ನಗಳು ಎದುರಾಗಿದ್ದು, ನಿರೀಕ್ಷಿತ ಪ್ರಮಾಣದಲ್ಲಿ ಗುರಿ ತಲುಪಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ.

ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಅಂದಾಜು ಎರಡು ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನ ಪಡೆಯಲು ಸ್ಕಾಲರ್‌ಶಿಫ್ ಅರ್ಹರಿದ್ದಾರೆ. ಆದರೆ, ಇದರಲ್ಲಿ ನಾಲ್ಕನೇ ಒಂದು ಭಾಗದಷ್ಟು ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿಲ್ಲ. ಸಮರ್ಪಕವಾಗಿ ಜಾತಿ ಪ್ರಮಾಣ ಮತ್ತು ಆದಾಯ ಪತ್ರ ಸಿಗದಿರುವುದು, ಆಧಾರ್ ಕಾರ್ಡ್ ಹೊಂದಾಣಿಕೆಯಾಗದಿರುವುದು ಸೇರಿದಂತೆ ಹಲವು ತಾಂತ್ರಿಕ ಕಾರಣಗಳಿಂದ ಯೋಜನೆ ಅನುಷ್ಠಾನ ಮಾಡಲು ಕಷ್ಟವಾಗಿದೆ.

ಶೇ.60 ಗುರಿಯೂ ಅಸಾಧ್ಯ: ಕಳೆದ ಬಾರಿ ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಶೇ.75ರಷ್ಟು ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲಾಗಿತ್ತು. ಈ ಬಾರಿ ಅಷ್ಟು ಪ್ರಮಾಣದಲ್ಲೂ ವಿದ್ಯಾರ್ಥಿ ವೇತನ ನೀಡುವ ಲಕ್ಷಣ ಕಾಣುತ್ತಿಲ್ಲ. ಅ.31 ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿದ್ದು, ಇದೇ ಪ್ರಮಾಣದಲ್ಲಿ ಅರ್ಜಿ ಸಲ್ಲಿಕೆಯಾದರೆ ಶೇ.60ರಷ್ಟು ಗುರಿ ತಲುಪುವುದೂ ಕಷ್ಟಸಾಧ್ಯ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶಿಕ್ಷಕರ ನೆರವು ವ್ಯರ್ಥ: ಆನ್‌ಲೈನ್ ಅರ್ಜಿ ಸಲ್ಲಿಕೆ ವ್ಯವಸ್ಥೆ ಬಗ್ಗೆ ಪೋಷಕರು ಹಾಗೂ ವಿದ್ಯಾರ್ಥಿಗಳಲ್ಲಿ ಸಾಕಷ್ಟು ಗೊಂದಲವಿದೆ. ಇದೇ ಮೊದಲ ಬಾರಿಗೆ ಈ ಸುಧಾರಿತ ವ್ಯವಸ್ಥೆಯನ್ನು ಪರಿಚಯಿಸಿದ್ದು, ಅರ್ಜಿ ಸಲ್ಲಿಕೆ ಸಂಬಂಧ ಪೋಷಕರು ಮತ್ತು ವಿದ್ಯಾರ್ಥಿಗಳಿಗೆ ಶಿಕ್ಷಕರು ನೆರವಾಗುತ್ತಿದ್ದಾರೆ. ಆದರೆ, ತಾಂತ್ರಿಕ ಕಾರಣಗಳಿಂದಾಗಿ ಶ್ರಮ ವ್ಯರ್ಥವಾಗುತ್ತಿದೆ ಎಂಬ ಆರೋಪ ಶಿಕ್ಷಕ ವಲಯದಿಂದ ಕೇಳಿಬರುತ್ತಿದೆ.

ನಗರ ಪ್ರದೇಶದಲ್ಲಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ವಿತರಣೆ ಪ್ರಕ್ರಿಯೆ ಬೇಗ ಮುಗಿಯುವುದಿಲ್ಲ. ಹೀಗಾಗಿ, ಪ್ರಮಾಣ ಪತ್ರಗಳ ವಿಳಂಬವಾಗುತ್ತಿದೆ. ಇದರಿಂದಾಗಿ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿದ್ದು, ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ವಿದ್ಯಾರ್ಥಿಗಳ ಪ್ರಮಾಣ ಪತ್ರಗಳಿಗೆ ಪ್ರಥಮ ಆದ್ಯತೆ ನೀಡುವಂತೆ ಸೂಚನೆ ನೀಡಲಾಗಿದೆ. ಎಲ್ಲರಿಗೂ ಸರಿಯಾದ ಸಮಯಕ್ಕೆ ಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗುತ್ತದೆ.

-ಎಂ.ಎಸ್.ಅರ್ಚನಾ, ಬೆಂಗಳೂರು ನಗರ ಜಿ.ಪಂ ಸಿಇಒ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News