ಸಚಿವಾಲಯದಲ್ಲಿ ವೇಗ ಕಂಡ ಕಡತಗಳ ವೀಲೇವಾರಿ

Update: 2018-10-09 17:07 GMT

ಬೆಂಗಳೂರು, ಅ.9 : ರಾಜ್ಯ ಸಚಿವಾಲಯದಲ್ಲಿ ಅಧಿಕಾರಗಳ ಕೆಲಸ ಚುರುಕುಗೊಂಡಂತೆ ಕಾಣುತ್ತಿದ್ದು, ಕಳೆದ ಮೂರು ತಿಂಗಳಲ್ಲಿ ಸಚಿವಾಲಯದಲ್ಲಿ ಅತ್ಯಧಿಕ ಕಡತಗಳು ವೀಲೇವಾರಿಗೊಂಡಿರುವುದು ವರದಿಯಾಗಿದೆ.

ರಾಜ್ಯ ಸಚಿವಾಲಯದ ಕಚೇರಿಯಲ್ಲಿ ಕಳೆದ ಮೂರು ತಿಂಗಳಲ್ಲಿ 41 ಸಾವಿರ ಕಡತಗಳು ವೀಲೇವಾರಿ ಮಾಡಿದ್ದು, ಎಲ್ಲವೂ ಇತ್ಯರ್ಥಗೊಂಡಿವೆ. ಇನ್ನುಳಿದಂತೆ ಕಂದಾಯ ಇಲಾಖೆಯಲ್ಲಿ 15 ಸಾವಿರ ಕಡತಗಳು ಮತ್ತು ನಗರಾಭಿವೃದ್ಧಿ ಇಲಾಖೆಯಲ್ಲಿನ 13 ಸಾವಿರ ಕಡಗಳು ಬಾಕಿ ಉಳಿದಿದ್ದು, ಇವುಗಳನ್ನು ಶೀಘ್ರವೇ ವೀಲೇವಾರಿ ಮಾಡಲಾಗುತ್ತದೆ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

ಸಚಿವಾಲಯದಲ್ಲೂ ಕಡತ ವಿಲೇವಾರಿ ನಿರೀಕ್ಷಿತ ಪ್ರಮಾಣದಲ್ಲಿರಲಿಲ್ಲ. ಆ ಹಿನ್ನೆಲೆಯಲ್ಲಿ ಹಿಂದೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿದ್ದ ಟಿ.ಎಂ.ವಿಜಯ ಭಾಸ್ಕರ್ ದೈನಂದಿನ ಕಡತ ಬಾಕಿ ಕುರಿತು ಸಂದೇಶ ರವಾನಿಸುವ ವ್ಯವಸ್ಥೆ ಜಾರಿಗೊಳಿಸಿದ್ದರು. ಅದರ ಪ್ರಕಾರ ಅಧಿಕಾರಿಗಳು ಒಂದು ಕಡತವನ್ನು ಐದು ದಿನದಲ್ಲಿ ವಿಲೇವಾರಿ ಮಾಡಬೇಕಿತ್ತು. ಕಡತ ಪರಿಶೀಲಿಸಿ ಮುಂದಿನ ಕ್ರಮಕ್ಕೆ ಮೇಲಿನ ಅಧಿಕಾರಿಗಾಗಲಿ ಇಲ್ಲವೇ ಅಧೀನ ಅಧಿಕಾರಿಗಾಗಲಿ ರವಾನಿಸಬೇಕಿತ್ತು. ಅದರಂತೆ 15 ದಿನಗಳ ಕಾಲ ವಿಲೇವಾರಿ ಮಾಡದೆ ಉಳಿಸಿಕೊಂಡಿರುವ ಕಡತಗಳ ವಿವರ ಕಳಿಸುವಂತೆ ಸೂಚನೆ ನೀಡಿದ್ದರು. ಕಳೆದ ಆರು ತಿಂಗಳ ಹಿಂದೆ ಸುಮಾರು 1.50 ಲಕ್ಷ ಕಡತಗಳು ಬಾಕಿ ಇದ್ದವು.

ಸಮ್ಮಿಶ್ರ ಸರಕಾರ ಅಸ್ತಿತ್ವಕ್ಕೆ ಬಂದ ನಂತರ ಮುಖ್ಯ ಕಾರ್ಯದರ್ಶಿಯಾಗಿ ನೇಮಕವಾದ ವಿಜಯ ಭಾಸ್ಕರ್ ಕಡತ ವಿಲೇವಾರಿಗೆ ಆದ್ಯತೆ ನೀಡಿ ನಿರಂತರವಾಗಿ ಮೇಲ್ವಿಚಾರಣೆ ನಡೆಸಲಾರಂಭಿಸಿದ್ದಾರೆ. ಪರಿಣಾಮವಾಗಿ 41,000ಕ್ಕೂ ಹೆಚ್ಚು ಕಡತಗಳು ಇತ್ಯರ್ಥಗೊಂಡಿವೆ. ಮುಖ್ಯ ಕಾರ್ಯದರ್ಶಿಗಳೇ ಖುದ್ದಾಗಿ ಇದರ ಮೇಲ್ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಯೋಜನೆಗಳ ತ್ವರಿತ ಅನುಷ್ಠಾನಕ್ಕೆ ಒತ್ತು: ಕಾರ್ಯಾಂಗದ ಸುಗಮ ಕಾರ್ಯ ನಿರ್ವಹಣೆಗೆ ಒತ್ತು ನೀಡಲಾಗಿದ್ದು, ಅದಕ್ಕೆ ಪೂರಕವಾಗಿ ಸಭೆಗಳನ್ನು ನಡೆಸಲಾಗುತ್ತಿದೆ. ಇಲಾಖೆಗಳ ನಡುವೆ ಸಮನ್ವಯಕ್ಕೂ ಒತ್ತು ನೀಡಲಾಗಿದೆ. ನಿತ್ಯ ಕನಿಷ್ಠ ಐದು ಸಭೆಗಳಿರುತ್ತವೆ. ತಿಂಗಳಿಗೆ 125ರಿಂದ 150 ಸಭೆ ನಡೆಸುತ್ತೇನೆ. ಕಡತ ವಿಲೇವಾರಿಗೂ ಆದ್ಯತೆ ನೀಡಲಾಗಿದ್ದು, ವಿಲೇವಾರಿಯಾಗದ ಕಡತಗಳ ಸಂಖ್ಯೆ 1.50 ಲಕ್ಷದಿಂದ 1.09 ಲಕ್ಷಕ್ಕೆ ಇಳಿಕೆಯಾಗಿದೆ ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News