ಲಿಂಗಾಧಾರಿತ ನ್ಯಾಯ ಮತ್ತು ತೊಡಕುಗಳು

Update: 2018-10-09 18:33 GMT

ಕ್ರೈಸ್ತ ಸನ್ಯಾಸಿನಿಯರು ಪ್ರಾರಂಭಿಸಿದ ಅನಿರ್ದಿಷ್ಟಾವಧಿ ಹೋರಾಟಕ್ಕೆ ಕ್ರೈಸ್ತ ಭಿನ್ನಮತೀಯರು, ಕ್ರೈಸ್ತ ಸಮುದಾಯದ ಇತರ ಗುಂಪುಗಳ ಸದಸ್ಯರು, ನಾಗರಿಕ ಸಮಾಜದ ಸಂಘಟನೆಗಳು, ಮಹಿಳಾ ಗುಂಪುಗಳು, ಕಲಾವಿದರು ಮತ್ತು ಮಾಧ್ಯಮಗಳು ಅಸಾಧಾರಣ ಬೆಂಬಲವನ್ನು ವ್ಯಕ್ತಪಡಿಸುತ್ತಿದ್ದಾರೆ. ಪ್ರಜ್ಞಾವಂತ ಜನಸಮೂಹವು ಸಂತ್ರಸ್ತ ಕ್ರೈಸ್ತ ಸನ್ಯಾಸಿನಿಯ ಪರವಾಗಿ ದೃಢವಾಗಿ ನಿಂತಿದ್ದರಿಂದಲೇ ವಾತಾವರಣವು ನಿಧಾನವಾಗಿ ಪ್ರತಿಭಟನಾಕಾರರ ಪರವಾಗಿ ಬದಲಾಯಿತು.


ಪಂಜಾಬಿನ ಜಲಂಧರಿನ ಮಾಜಿ ಬಿಷಪ್ ಒಬ್ಬರು ಎರಡು ವರ್ಷಗಳ ಕಾಲ ತನ್ನನ್ನು ಪದೇಪದೇ ಲೈಂಗಿಕವಾಗಿ ಶೋಷಿಸಿದ್ದರೆಂಬ ಆರೋಪವನ್ನು ಮಾಡಿದ ಕ್ರೈಸ್ತ ಸನ್ಯಾಸಿನಿ (ನನ್)ಯ ಪರವಾಗಿ ಮಿಷನರೀಸ್ ಆಫ್ ಜೀಸಸ್ ಕಾಂಗ್ರಿಗೇಷನ್‌ಗೆ ಸೇರಿದ ಇತರ ಐವರು ಕ್ರೈಸ್ತ ಸನ್ಯಾಸಿನಿಯರು ಇತ್ತೀಚೆಗೆ ನಡೆಸಿದ ಪ್ರತಿಭಟನೆಗಳು ಕೇರಳದ ಕೆಥೊಲಿಕ್ ಚರ್ಚನ್ನು ಒಂದು ಗಂಭೀರ ನೈತಿಕ ಪರಿಶೀಲನೆಗೆ ಗುರಿಪಡಿಸಿದೆ. ಈ ಪ್ರಕರಣವು ಲಿಂಗನ್ಯಾಯದ ಬಗ್ಗೆ ಚರ್ಚುಗಳ ಆಕ್ಷೇಪಣಾರ್ಹ ಧೋರಣೆಗಳನ್ನು ಮತ್ತು ಈ ವಿಷಯದ ಬಗ್ಗೆ ಸರಕಾರವು ಪ್ರದರ್ಶಿಸುತ್ತಿರುವ ಸಂದೇಹಶೀಲ ನಡಾವಳಿಗಳನ್ನು ಬಯಲಿಗೆಳೆದಿದೆ. ಹೀಗಾಗಿ ಈ ಸಂದರ್ಭವು ಈ ಪ್ರತಿರೋಧದಲ್ಲಿರುವ ಎರಡು ಪ್ರಖರವಾದ ಅಂಶಗಳನ್ನು ಪರಿಗಣಿಸುವಂತೆ ಒತ್ತಾಯಿಸುತ್ತದೆ. ಮೊದಲನೆಯದಾಗಿ ಯಾವ ಧಾರ್ಮಿಕ ಸಂಸ್ಥೆಯ ಶ್ರದ್ಧೆ ಮತ್ತು ಆಚರಣೆಗಳಿಗೆ ತಾವೂ ಭಾಗವಾಗಿದ್ದಾರೋ ಅಂತಹ ಸಂಸ್ಥೆಯ ವಿರುದ್ಧವೇ ಧ್ವನಿ ಎತ್ತುವ ಧೈರ್ಯವನ್ನು ಪ್ರದರ್ಶಿಸಿರುವುದು. ಎರಡನೆಯದಾಗಿ ಈ ಕ್ರೈಸ್ತ ಸನ್ಯಾಸಿನಿಯರ ಆಗ್ರಹಗಳಲ್ಲಿರುವ ನ್ಯಾಯದ ಧ್ವನಿಗೆ ಕ್ರೈಸ್ತ ಸಮುದಾಯಗಳ ವಿಶಾಲ ಜನಸಮೂಹದಿಂದಲೂ ಬೆಂಬಲವು ಹರಿದುಬರುತ್ತಿರುವುದು.

ಪ್ರಖ್ಯಾತರಿಂದ ಮತ್ತು ಪ್ರತಿಷ್ಠಿತರಿಂದ ಲೈಂಗಿಕ ದೌರ್ಜನ್ಯಕ್ಕೆ ತುತ್ತಾದ ಮಹಿಳೆಯರಿಗೆ ತಡವಾಗಿಯಾದರೂ ತಮ್ಮ ಸತ್ಯಕಥೆಯನ್ನು ಹೇಳಲು ಅವಕಾಶ ಮಾಡಿಕೊಟ್ಟಿರುವ ‘ಮೀ ಟೂ’ (ನಾನೂ ಕೂಡಾ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದೆ) ಚಳವಳಿ ಎಲ್ಲೆಡೆ ಬಲಗೊಳ್ಳುತ್ತಿರುವಾಗ ಮತ್ತು ವಿಶ್ವದೆಲ್ಲೆಡೆ ಪಾದ್ರಿಗಳಿಂದ ಲೈಂಗಿಕ ಶೋಷಣೆಗೆ ಒಳಗಾಗುತ್ತಿರುವ ಮಕ್ಕಳ ಪ್ರಕರಣಗಳು ಹಾಗೂ ಅದನ್ನು ಉನ್ನತ ಹಂತದಲ್ಲಿ ಮುಚ್ಚಿಹಾಕಲು ನಡೆಯುತ್ತಿರುವ ಹಗರಣಗಳು ಬಯಲುಗೊಳ್ಳುತ್ತಿರುವ ಸಂದರ್ಭದಲ್ಲಿ ಹುಟ್ಟಿಕೊಂಡಿರುವ ‘ಚರ್ಚ್ ಟೂ’ (ಚರ್ಚಿನಿಂದಲೂ ಲೈಂಗಿಕ ಶೋಷಣೆ ನಡೆಯುತ್ತಿದೆ) ಚಳವಳಿಯು ಕೆಥೊಲಿಕ್ ಚರ್ಚ್ ಅನ್ನು ಅತ್ಯಂತ ತೀವ್ರವಾದ ಬಿಕ್ಕಟ್ಟಿಗೆ ಗುರಿಮಾಡಿದೆ. ಆದರೆ ಈ ಎಲ್ಲಾ ಚಳವಳಿಗಳ ಕೇಂದ್ರಸ್ಥಾನದಲ್ಲಿರುವುದು ನ್ಯಾಯದ ಪ್ರಶ್ನೆ ಮತ್ತು ಲಿಂಗಾಧಾರಿತ ಶೋಷಣೆಯ ವಿರುದ್ಧ ನ್ಯಾಯವು ಸಿಗದಂತೆ ಮಾಡುವ ತೊಡಕುಗಳು. ದೈವಾಧಾರಿತ ಮತ್ತು ಪರಮ ಪವಿತ್ರ ಎಂದು ಭಾವಿಸಲಾಗುವ ಕ್ಷೇತ್ರವು ಒಬ್ಬ ವ್ಯಕ್ತಿಯಲ್ಲಿರಬಹುದಾದ ವಿನಾಶಕಾರಿ ದೈಹಿಕ ಮತ್ತು ಮಾನಸಿಕ ಕಾಮನೆಗಳನ್ನು ದೂರಗೊಳಿಸುತ್ತದೆ ಎಂದೇ ನಂಬಲಾಗುತ್ತದೆ. ಸಹಜವಾಗಿ ಹೇಳುವುದಾದರೆ ಒಂದು ಚರ್ಚು ಒಬ್ಬ ವ್ಯಕ್ತಿಯ ನೈತಿಕ ಮತ್ತು ದೈಹಿಕ ಘನತೆಯನ್ನು ಕಾಪಾಡಬೇಕು. ಮತ್ತು ಹಾಲಿ ಸಂದರ್ಭದಲ್ಲಿ ಆ ವ್ಯಕ್ತಿ ಶೋಷಣೆಗೊಳಗಾದ ಕ್ರೈಸ್ತ ಸನ್ಯಾಸಿನಿಯಾಗಿದ್ದಾರೆ.

ಪ್ರಾಯಶಃ ಈ ನಿರೀಕ್ಷೆಯನ್ನಿಟ್ಟುಕೊಂಡೇ ಆ ಸಂತ್ರಸ್ತ ಕ್ರೈಸ್ತ ಸನ್ಯಾಸಿನಿಯು ಚರ್ಚಿನ ವಿವಿಧ ಅಧಿಕಾರ ರಚನೆಗಳಾದ ಸೈರೋ-ಮಲಬಾರ್ ಕೆಥೊಲಿಕ್ ಚರ್ಚಿನ ಮುಖ್ಯಸ್ಥರಿಗೂ, ಭಾರತದಲ್ಲಿನ ಅಪೋಸ್ಟಲಿಕ್ ನುನ್ಸಿಯೋ (ಧಾರ್ಮಿಕ ರಾಯಭಾರಿ) ಅವರಿಗೂ ಮತ್ತು ವ್ಯಾಟಿಕನ್‌ನ ಕಾರ್ಯದರ್ಶಿಗಳಿಗೂ ಹಾಗೂ ಪೋಪ್‌ಗೂ (ಕ್ರೈಸ್ತರ ವಿಶ್ವ ಧರ್ಮಗುರು) ದೂರನ್ನು ನೀಡಿದ್ದರು. ಚರ್ಚ್ ಅಧಿಕಾರಿಗಳು ಇದಕ್ಕೆ ಒಂದಷ್ಟು ಪ್ರತಿಕ್ರಿಯೆಯನ್ನು ನೀಡಿದ್ದು ನಿಜ. ಆದರೆ ಅದು ಸಂಪೂರ್ಣವಾಗಿ ಆರೋಪಿ ಬಿಷಪ್‌ರ ಪರವಾಗಿಯೂ ಹಾಗೂ ಸಂತ್ರಸ್ತಳಾದ ಕ್ರೈಸ್ತ ಸನ್ಯಾಸಿನಿಯ ವಿರುದ್ಧವೂ ಇತ್ತು. ಚರ್ಚಿನ ಮಧ್ಯಪ್ರವೇಶದಲ್ಲಿ ಆದ ವಿಳಂಬದಿಂದಾಗಿ ಈ ಅನ್ಯಾಯವು ನೈತಿಕವಾಗಿ ಹೆಚ್ಚು ಆಕ್ರಮಣಕಾರಿಯಾಯಿತು. ಇದು ಆ ನಂತರದಲ್ಲಿ ಪ್ರಾರಂಭವಾದ ಸಂತ್ರಸ್ತ ಕ್ರೈಸ್ತ ಸನ್ಯಾಸಿನಿಯ ಚ್ರಾರಿತ್ರ್ಯ ಹನನದಲ್ಲಿ ಸ್ಪಷ್ಟವಾಗತೊಡಗಿತಲ್ಲದೆ ನ್ಯಾಯಪ್ರಕ್ರಿಯೆಯನ್ನು ದಾರಿ ತಪ್ಪಿಸುವಲ್ಲಿ ಚರ್ಚ್ ಅನುಸರಿಸಿದ ಪಕ್ಷಪಾತಿ ಪಾತ್ರವನ್ನೂ ಬಯಲುಮಾಡಿತು. ಇದೀಗ ಈ ಪ್ರಕರಣದಲ್ಲಿ ಆರೋಪಿಯ ಅಪರಾಧದ ಬಗ್ಗೆ ಮೇಲ್ನೋಟಕ್ಕೆ ಪುರಾವೆಗಳಿದೆಯೆಂದು ಕಂಡುಬರುತ್ತಿರುವುದರಿಂದ ಆರೋಪಿ ಬಿಷಪ್‌ರ ಜಾಮೀನು ಅರ್ಜಿಯನ್ನು ಕೇರಳ ಹೈಕೋರ್ಟು ನಿರಾಕರಿಸಿದೆ ಮತ್ತು ಚರ್ಚಿನ ಆಂತರಿಕ ವಿಚಾರಣೆಯ ಸ್ವರೂಪದ ಬಗ್ಗೆಯೂ ಸಂದೇಹಗಳನ್ನೂ ವ್ಯಕ್ತಪಡಿಸಿದೆ. ಚರ್ಚು ತನ್ನ ಪಿತೃಸ್ವಾಮ್ಯ ನೈತಿಕತೆಯನ್ನು ಹೇರುವ ಉದ್ದೇಶದಿಂದ ಲಿಂಗನ್ಯಾಯಕ್ಕೆ ಸಂಬಂಧ ಪಟ್ಟ ಈ ಪ್ರಕರಣವನ್ನು ಸಮುದಾಯದ ಒಳಗೆ ಬಗೆಹರಿಸಿಕೊಳ್ಳಬೇಕಾದ ಆಂತರಿಕ ವಿಷಯವನ್ನಾಗಿ ಪರಿಗಣಿಸುತ್ತಿದೆ.

ನ್ಯಾಯ ಕೋರಿ ಬಹಿರಂಗವಾಗಿ ಮಾಡುತ್ತಿರುವ ಕ್ರೈಸ್ತ ಸನ್ಯಾಸಿನಿಯ ಮನವಿಗಳು ಕ್ರೈಸ್ತ ಸಮುದಾಯದ ಪ್ರತಿಷ್ಠೆಗೆ ಭಂಗ ತರುತ್ತದೆಂದು ಚರ್ಚು ಕ್ರೈಸ್ತ ಸಮುದಾಯಕ್ಕೆ ಎಚ್ಚರಿಕೆಯನ್ನು ನೀಡಿದೆ. ಈ ಸಾಮುದಾಯಿಕ ಹಿತಾಸಕ್ತಿಯೆಂಬ ತರ್ಕವು ನ್ಯಾಯ ಪಡೆಯುವುದಕ್ಕಾಗಿ ನಡೆಸುತ್ತಿರುವ ಹೋರಾಟವನ್ನು ಹತ್ತಿಕ್ಕುವ ಕ್ರಮವೇ ಆಗಿದೆ. ಪಿತೃಸ್ವಾಮ್ಯ ನೈತಿಕತೆಯನ್ನು ಬಳಸಿ ಅತ್ಯಾಚಾರಕ್ಕೆ ಗುರಿಯಾದವರ ಧ್ವನಿಯನ್ನು ಅಡಗಿಸುತ್ತಿರುವುದು ಒಂದು ವಿಶ್ವವ್ಯಾಪಿ ಅನುಭವವೇ ಆಗಿದೆ. ವಿವಿಧ ಒತ್ತಡತಂತ್ರಗಳ ಮೂಲಕ ಸುಮ್ಮನಾಗಿಸುವ ತಂತ್ರಗಳು ಹೊಸದೇನಲ್ಲವಾದರೂ ಹಾಲಿ ಪ್ರಕರಣವು ಚರ್ಚಿನ ಒಳಗೆ ಪುರುಷ ಮತ್ತು ಮಹಿಳೆಯರಿಗೆ ನೀಡಲಾಗುವ ಪಾತ್ರಗಳಲ್ಲಿರುವ ತೀವ್ರ ಲಿಂಗ ಅಸಮಾನತೆಯ ಪ್ರಶ್ನೆಯನ್ನು ಬಯಲಿಗೆಳೆದಿದೆ. ಧಾರ್ಮಿಕ ಜೀವನಕ್ಕೆ ತಮ್ಮನ್ನೂ ತಾವೇ ತೆತ್ತುಕೊಂಡಿರುವ ಕ್ರೈಸ್ತ ಸನ್ಯಾಸಿನಿಗಳು ಕಂಡುಬರುವುದು ಚರ್ಚಿನ ಅಧಿಕಾರ ರಚನೆಯ ಕೆಳ ಹಂತಗಳಲ್ಲಿ ಮಾತ್ರ. ಅದರೆ ಚರ್ಚಿನ ಧರ್ಮಾಧಿಪತ್ಯವು ಬಿಷಪ್‌ಗೆ ಹೆಚ್ಚಿನ ಅಧಿಕಾರವನ್ನು ನೀಡುತ್ತದೆ ಮತ್ತು ತನ್ನ ಧರ್ಮಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ವಿವಿಧ ಧರ್ಮಸಭೆಗಳ ಮೇಲೆ ಮೇಲ್ವಿಚಾರಣೆ ಮಾಡುವ ವಿಶೇಷ ಅಧಿಕಾರವನ್ನು ಸಹ ದಯಪಾಲಿಸುತ್ತದೆ. ಹೀಗಾಗಿ ಆಡಳಿತದ ಒಳಗಡೆ ಪುರುಷ- ಮಹಿಳೆಯರ ಅಧಿಕಾರ ಸಂಬಂಧಗಳು ಮಹಿಳಾ ಸನ್ಯಾಸಿನಿಗಳಿಗೆ ವ್ಯತಿರಿಕ್ತವಾಗಿದ್ದು ಬಿಷಪ್‌ರ ವಿರುದ್ಧ ವ್ಯಕ್ತವಾಗುವ ಯಾವುದೇ ಭಿನ್ನಮತವನ್ನು ಚರ್ಚಿನ ವಿರುದ್ಧದ ಧ್ವನಿಯೆಂದೇ ಪರಿಗಣಿಸಲಾಗುತ್ತದೆ.

ಈ ಧೋರಣೆಯು ಕ್ರೈಸ್ತ ಸನ್ಯಾಸಿನಿಯರನ್ನು ದಮನಕ್ಕೆ ಸುಲಭದ ತುತ್ತುಗಳನ್ನಾಗಿಸುತ್ತಿದೆ, ಬಾಯಿ ಬಿಚ್ಚದಂತೆ ಮಾಡುತ್ತದೆ ಮತ್ತು ನ್ಯಾಯದ ಎಲ್ಲಾ ದಾರಿಗಳನ್ನು ತುಂಡರಿಸುತ್ತದೆ. ಚರ್ಚಿನ ಸಾಂಸ್ಥಿಕ ಆಧಿಪತ್ಯದ ಒಳಗಡೆ ನ್ಯಾಯಪ್ರಕ್ರಿಯೆಯು ಬುಡಮೇಲಾಗುತ್ತಿರುವಾಗ ನ್ಯಾಯವನ್ನು ಒದಗಿಸುವ ಸಂಸ್ಥೆಯಾಗಿ ಪ್ರಭುತ್ವವು ಮಧ್ಯಪ್ರವೇಶ ಮಾಡಲೇ ಬೇಕಿರುತ್ತದೆ. ಆದರೆ ಕೇರಳದಲ್ಲಿ, ಅದರಲ್ಲೂ ಮಧ್ಯ ಕೇರಳದ ಕ್ರಿಶ್ಚಿಯನ್ನರ ಓಟು ಬ್ಯಾಂಕಿನ ಮೇಲೆ ಹಿಂದಿನಿಂದಲೂ ಚರ್ಚುಗಳು ವಿಶೇಷ ಪ್ರಭಾವ ಹೊಂದಿವೆ. ಕೇರಳದ ಜನಸಂಖ್ಯೆಯ ಶೇ.18.ರಷ್ಟು ಕ್ರೈಸ್ತಮತೀಯರಿದ್ದು ಅದರ ಶೇ. 60 ಭಾಗದಷ್ಟು ಕೆಥೊಲಿಕರಾಗಿದ್ದಾರೆ. ಈ ಸಮುದಾಯದ ಭೌತಿಕ ಅಭಿವೃದ್ಧಿ ಮತ್ತು ಪ್ರಭಾವಗಳಿಂದಾಗಿ ರಾಜಕೀಯ ಕ್ಷೇತ್ರದಲ್ಲಿ ಚರ್ಚುಗಳು ನಿರಂತರವಾಗಿ ತಮ್ಮ ಪ್ರಭಾವ ಬೀರುವಷ್ಟು ಸಶಕ್ತಗೊಂಡಿವೆ. ಆಳುವ ಎಡರಂಗವಾಗಲಿ (ಇತ್ತೀಚೆಗೆ ಕೇರಳದಲ್ಲಿ ಬಿಜೆಪಿಯು ನೆಲೆಕಂಡುಕೊಳ್ಳುವುದು ಪ್ರಾರಂಭವಾದಂತೆ ಕ್ರೈಸ್ತಮತೀಯರು ಅದರ ವಿರುದ್ಧ ಸದೃಢೀಕರಣಗೊಳ್ಳುತ್ತಿದ್ದಾರೆ.) ಅಥವಾ ಕ್ರೈಸ್ತರ ಪಾರಂಪರಿಕ ಬೆಂಬಲವನ್ನು ಅನುಭವಿಸಿಕೊಂಡು ಬಂದಿರುವ ವಿರೋಧಪಕ್ಷವಾಗಲಿ ಈ ಸಂತ್ರಸ್ತ ಕ್ರೈಸ್ತ ಸನ್ಯಾಸಿನಿಯ ಪರವಾಗಿ ಧ್ವನಿ ಎತ್ತಲಿಲ್ಲ.

ರಾಜಕೀಯ ಪಕ್ಷಗಳ ಈ ಮೌನವು ವೋಟ್‌ಬ್ಯಾಂಕ್ ರಾಜಕೀಯದ ಎದಿರು ನ್ಯಾಯಪ್ರತಿಪಾದನೆಯ ಅಂಶಗಳೆಲ್ಲಾ ಗೌಣಗೊಳ್ಳುತ್ತಿರುವುದನ್ನೇ ಸೂಚಿಸುತ್ತದೆ. ಚರ್ಚುಗಳು ಮತ್ತು ರಾಜಕೀಯ ಪಕ್ಷಗಳು ಲಿಂಗ ನ್ಯಾಯದ ವಿಷಯದಲ್ಲಿ ಮಾಡುತ್ತಿರುವ ದ್ರೋಹದಿಂದ ಜನತೆಯ ಸ್ಫೂರ್ತಿಯೇನೂ ಕುಗ್ಗಿಲ್ಲ. ಕ್ರೈಸ್ತ ಸನ್ಯಾಸಿನಿಯರು ಪ್ರಾರಂಭಿಸಿದ ಅನಿರ್ದಿಷ್ಟಾವಧಿ ಹೋರಾಟಕ್ಕೆ ಕ್ರೈಸ್ತ ಭಿನ್ನಮತೀಯರು, ಕ್ರೈಸ್ತ ಸಮುದಾಯದ ಇತರ ಗುಂಪುಗಳ ಸದಸ್ಯರು, ನಾಗರಿಕ ಸಮಾಜದ ಸಂಘಟನೆಗಳು, ಮಹಿಳಾ ಗುಂಪುಗಳು, ಕಲಾವಿದರು ಮತ್ತು ಮಾಧ್ಯಮಗಳು ಅಸಾಧಾರಣ ಬೆಂಬಲವನ್ನು ವ್ಯಕ್ತಪಡಿಸುತ್ತಿದ್ದಾರೆ. ಪ್ರಜ್ಞಾವಂತ ಜನಸಮೂಹವು ಸಂತ್ರಸ್ತ ಕ್ರೈಸ್ತ ಸನ್ಯಾಸಿನಿಯ ಪರವಾಗಿ ದೃಢವಾಗಿ ನಿಂತಿದ್ದರಿಂದಲೇ ವಾತಾವರಣವು ನಿಧಾನವಾಗಿ ಪ್ರತಿಭಟನಾಕಾರರ ಪರವಾಗಿ ಬದಲಾಯಿತು. ಪ್ರತಿಭಟನಾನಿರತ ಕ್ರೈಸ್ತ ಸನ್ಯಾಸಿನಿಯರ ಪರವಾಗಿ ಹರಿದುಬಂದ ಈ ಜನಬೆಂಬಲವು ಲಿಂಗನ್ಯಾಯದ ಪರವಾದ ಹೋರಾಟಗಳಿಗೆ ಹೊಸ ಕಸುವು ಮತ್ತು ಭರವಸೆಯನ್ನು ತುಂಬಿರುವುದು ಉತ್ಸಾಹದಾಯಕವಾಗಿದೆ. ಈ ಹೊಸ ಬೆಳವಣಿಗೆಯು ನ್ಯಾಯವನ್ನು ಗಳಿಸುವಲ್ಲಿ ಎದುರಾಗುವ ಆಳವಾದ ತೊಡಕುಗಳನ್ನು ನಿವಾರಣೆ ಮಾಡುವ ಭರವಸೆಯನ್ನು ನೀಡುತ್ತಿವೆ.


ಕೃಪೆ: Economic and Political Weekly

Writer - ಅನು: ಶಿವಸುಂದರ್

contributor

Editor - ಅನು: ಶಿವಸುಂದರ್

contributor

Similar News