ಏಶ್ಯನ್ ಪ್ಯಾರಾ ಗೇಮ್ಸ್: ಭಾರತಕ್ಕೆ 3 ಚಿನ್ನ ಸಹಿತ 11 ಪದಕ

Update: 2018-10-09 18:42 GMT

ಜಕಾರ್ತ, ಅ.9: ಏಶ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಉತ್ತಮ ಪ್ರದರ್ಶನ ಮುಂದುವರಿಸಿದ ಭಾರತ ತಂಡದ ಸ್ಪರ್ಧೆಯ ಮೂರನೇ ದಿನವಾದ ಮಂಗಳವಾರ ಮೂರು ಚಿನ್ನ ಸಹಿತ ಒಟ್ಟು 11 ಪದಕಗಳನ್ನು ಬಾಚಿಕೊಂಡಿದೆ. ಈ ಮೂಲಕ ಪದಕಪಟ್ಟಿಯಲ್ಲಿ 8ನೇ ಸ್ಥಾನ ಕಾಯ್ದುಕೊಂಡಿದೆ.

  ಏಕ್ತಾ ಬಯಾನ್ ಹಾಗೂ ನಾರಾಯಣ ಥಾಕೂರ್ ಕ್ರಮವಾಗಿ ಮಹಿಳೆಯರ ಕ್ಲಬ್ ಥ್ರೋ ಸ್ಪರ್ಧೆ ಹಾಗೂ ಪುರುಷರ ಟಿ35 ಡ್ಯಾಶ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಜಯಿಸಿದ್ದಾರೆ. ಪ್ಯಾರಾ-ಶೂಟರ್ ಮನೀಶ್ ನರ್ವಾಲ್ ಪುರುಷರ ಎಸ್‌ಎಚ್1 10 ಮೀ. ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಭಾರತಕ್ಕೆ ಮೂರನೇ ಚಿನ್ನ ಗೆದ್ದುಕೊಟ್ಟರು.

ಬಯಾನ್ ತನ್ನ ನಾಲ್ಕನೇ ಪ್ರಯತ್ನದಲ್ಲಿ 16.02 ಮೀ.ದೂರಕ್ಕೆ ಕ್ಲಬ್ ಥ್ರೋ ಮಾಡಿ ಶ್ರೇಷ್ಠ ಪ್ರದರ್ಶನ ನೀಡಿದರು. ಯುಎಇಯ ಅಲ್ಕಾಬಿ ಥೆಕ್ರಾ(15.75 ಮೀ.)ಎರಡನೇ ಸ್ಥಾನ ಪಡೆದರು.

ಬಯಾನ್ ಈ ವರ್ಷಾರಂಭದಲ್ಲಿ ಇಂಡಿಯನ್ ಓಪನ್ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಜಯಿಸಿದ್ದರು.

ಥಾಕೂರ್ ಟಿ35 100 ಮೀ. ಫೈನಲ್ ರೇಸ್‌ನಲ್ಲಿ 14.02 ಸೆಕೆಂಡ್‌ನಲ್ಲಿ ಗುರಿ ತಲುಪಿ ಚಿನ್ನ ಜಯಿಸಿದರು. ಸೌದಿ ಅರೇಬಿಯದ ಅಹ್ಮದ್(14.40) ಹಾಗೂ ಹಾಂಕಾಂಗ್‌ನ ಯಿಯು ಚುಯ್ ಬಾವೊ(14.62)ಕ್ರಮವಾಗಿ ಎರಡನೇ, ಮೂರನೇ ಸ್ಥಾನ ಪಡೆದರು. ಥಾಕೂರ್ ಪ್ಯಾರಾ-ಅಥ್ಲೆಟಿಕ್ಸ್‌ನಲ್ಲಿ 4ನೇ ಚಿನ್ನ ಗೆದ್ದುಕೊಟ್ಟರು.

ಸುರೇಂದ್ರ ಅನೀಶ್ ಕುಮಾರ್(ಪುರುಷರ ಎಫ್43/44, ಡಿಸ್ಕಸ್)ರಾಮ್ ಪಾಲ್(ಪುರುಷರ ಟಿ45/47, ಹೈಜಂಪ್) ಹಾಗೂ ವೀರೇಂದ್ರ(ಪುರುಷರ ಎಫ್56/57 ಶಾಟ್‌ಪುಟ್)ಬೆಳ್ಳಿ ಪದಕವನ್ನು ಗೆದ್ದುಕೊಂಡರು. ಭಾರತ ಮಂಗಳವಾರ ಐದು ಕಂಚಿನ ಪದಕಗಳನ್ನು ಗೆದ್ದುಕೊಂಡಿದೆ. ಪ್ಯಾರಾ ಅಥ್ಲೀಟ್‌ಗಳಾದ ಜಯಂತಿ ಬೆಹೆರಾ, ಆನಂದನ್ ಗುಣಶೇಕರನ್, ಮೋನು ಘಂಗಾಸ್, ಸುಂದರ್ ಸಿಂಗ್ ಹಾಗೂ ಪ್ರದೀಪ್ ಕಂಚು ಜಯಿಸಿದರು. ಮೋನು ಪುರುಷರ ಶಾಟ್‌ಪುಟ್ ಎಫ್-11ರಲ್ಲಿ ಮೂರನೇ ಸ್ಥಾನ ಪಡೆದರು. ಗುಣಶೇಕರನ್ ಪುರುಷರ 200 ಮೀ. ಟಿ44-62-64 ವಿಭಾಗದಲ್ಲಿ ಹಾಗೂ ಬೆಹರಾ ಮಹಿಳೆಯರ 200 ಮೀ. ಟಿ45/46/47 ವಿಭಾಗದಲ್ಲಿ ಕಂಚು ಜಯಿಸಿದರು. ಸುಂದರ್ ಸಿಂಗ್ ಪುರುಷರ ಎಫ್-46 ಡಿಸ್ಕಸ್ ಎಸೆತದಲ್ಲಿ ಕಂಚು ಗೆದ್ದರು.

ಭಾರತ ಮಂಗಳವಾರ ಒಟ್ಟು 11 ಪದಕಗಳನ್ನು ಗೆದ್ದುಕೊಂಡಿದೆ. 6 ಚಿನ್ನ, 9 ಬೆಳ್ಳಿ ಹಾಗೂ 13 ಕಂಚು ಸಹಿತ ಒಟ್ಟು 28 ಪದಕಗಳನ್ನು ಗೆದ್ದುಕೊಳ್ಳುವುದರೊಂದಿಗೆ ಪದಕಪಟ್ಟಿಯಲ್ಲಿ 8ನೇ ಸ್ಥಾನ ಉಳಿಸಿಕೊಂಡಿದೆ. ಭಾರತ ಗೆದ್ದ 28 ಪದಕಗಳಲ್ಲಿ 15 ಪದಕಗಳನ್ನು(4 ಚಿನ್ನ, 5 ಬೆಳ್ಳಿ, 6 ಕಂಚು)ಪ್ಯಾರಾ-ಅಥ್ಲೀಟ್‌ಗಳು ಗೆದ್ದುಕೊಂಡಿದ್ದಾರೆ.

 ಚೀನಾ ಗೇಮ್ಸ್‌ನಲ್ಲಿ ತನ್ನ ಪ್ರಾಬಲ್ಯ ಮುಂದುವರಿಸಿದ್ದು 73 ಚಿನ್ನ, 32 ಬೆಳ್ಳಿ ಹಾಗೂ 29 ಕಂಚು ಜಯಿಸಿ ಮೊದಲ ಸ್ಥಾನದಲ್ಲಿದೆ. ದಕ್ಷಿಣ ಕೊರಿಯಾ(23 ಚಿನ್ನ, 20 ಬೆಳ್ಳಿ, 11 ಕಂಚು)ಎರಡನೇ ಸ್ಥಾನದಲ್ಲಿದೆ. ಸೋಮವಾರ ಜಾವೆಲಿನ್ ಎಸೆತಗಾರ ಸಂದೀಪ್ ಚೌಧರಿ ವಿಶ್ವ ದಾಖಲೆ ಸಾಧನೆಯೊಂದಿಗೆ ಚಿನ್ನದ ಪದಕ ಜಯಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News