ಸುಲ್ತಾನ್ ಜೊಹೊರ್ ಕಪ್: ಭಾರತಕ್ಕೆ ಹ್ಯಾಟ್ರಿಕ್ ಜಯ

Update: 2018-10-09 18:47 GMT

ಜೊಹೊರ್ ಬಾಹ್ರು(ಮಲೇಶ್ಯಾ), ಅ.9: ನಾಯಕ ಮನ್‌ದೀಪ್ ಮೊರ್ 42ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಮೂಲಕ ದಾಖಲಿಸಿದ ಆಕರ್ಷಕ ಗೋಲು ನೆರವಿನಿಂದ ಭಾರತದ ಜೂನಿಯರ್ ಪುರುಷರ ಹಾಕಿ ತಂಡ ಸುಲ್ತಾನ್ ಜೊಹೊರ್ ಕಪ್‌ನಲ್ಲಿ ಮಂಗಳವಾರ ಜಪಾನ್ ವಿರುದ್ಧ 1-0 ಅಂತರದ ರೋಚಕ ಜಯ ಸಾಧಿಸಿದೆ. ಈ ಮೂಲಕ 8ನೇ ಆವೃತ್ತಿಯ ಟೂರ್ನಿಯಲ್ಲಿ ಹ್ಯಾಟ್ರಿಕ್ ಗೆಲುವು ದಾಖಲಿಸಿದೆ.

 ಮಳೆಯಿಂದಾಗಿ ಭಾರತ-ಜಪಾನ್ ಪಂದ್ಯದಲ್ಲಿ ಮೊದಲ ಕ್ವಾರ್ಟರ್‌ನಲ್ಲಿ ಕೆಲವು ನಿಮಿಷ ಆಟವನ್ನು ನಿಲ್ಲಿಸಲಾಯಿತು. ಭಾರತದ ದಾಳಿ ಶಿಸ್ತುಬದ್ಧವಾಗಿತ್ತು. ಮೊದಲ ಕ್ವಾರ್ಟರ್‌ನಲ್ಲಿ ಭಾರತ ಪೆನಾಲ್ಟಿ ಅವಕಾಶ ಪಡೆದಿದ್ದರೂ ಜಪಾನ್ ಗೋಲು ನಿರಾಕರಿಸಿತು.

2ನೇ ಕ್ವಾರ್ಟರ್‌ನಲ್ಲಿ ಗೋಲು ಬರಲಿಲ್ಲ. 3ನೇ ಕ್ವಾರ್ಟರ್‌ನಲ್ಲಿ ಲಭಿಸಿದ 2 ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ನಾಯಕ ಮನ್‌ದೀಪ್ 42ನೇ ನಿಮಿಷದಲ್ಲಿ ಗೋಲು ಬಾರಿಸಿದರು. 1-0 ಮುನ್ನಡೆಯೊಂದಿಗೆ ಕೊನೆ ತನಕ ಹೋರಾಡಿದ ಭಾರತದ ಪರ ಗೋಲ್‌ಕೀಪರ್ ಪಂಕಜ್ ರಜತ್ ಟೂರ್ನಿಯಲ್ಲಿ ಮತ್ತೊಮ್ಮೆ ಉತ್ತಮ ಪ್ರದರ್ಶನದಿಂದ ಗಮನ ಸೆಳೆದರು. ಭಾರತ ಟೂರ್ನಿಯಲ್ಲಿ ಮಲೇಶ್ಯಾ ವಿರುದ್ಧ 2-1 ಹಾಗೂ ನ್ಯೂಝಿಲೆಂಡ್ ವಿರುದ್ಧ 7-1 ಅಂತರದಿಂದ ಜಯ ಸಾಧಿಸಿದೆ.

ಭಾರತ ಅ.10 ರಂದು ನಡೆಯುವ ತನ್ನ 4ನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯವನ್ನು ಎದುರಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News